ಮುದ್ದಿನ ಗಝಲ್ ಗಳು

ಮುದ್ದಿನ ಗಝಲ್ ಗಳು

ಕವನ

೧.

ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿಯೆ

ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿಯೆ

 

ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ ಹಂಚಲು

ಚಿತ್ರ ಪಟದ ರೂಪದೆದುರು ನಿಂತೆಯಿಂದು ಗೆಳತಿಯೆ

 

ಜೀವದುಸಿರು ನೆಲದ ಮೇಲೆ ಕುಳಿತು ಮಾತು ಸಾಗಲು

ಬಿಟ್ಟು ಹೋದ ಮನೆಯ ಒಳಗೆ ಸೇಲೆಯಿಂದು ಗೆಳತಿಯೆ

 

ಮೌನ ಕಳೆದು ಹೋದ ಸಮಯ ಎಲ್ಲಿಯಿದ್ದೆ ಹೃದಯವೆ

ಮಾತು ಚಿಮ್ಮಿ ಪ್ರೀತಿಯನ್ನು ಸುರಿದೆಯಿಂದು ಗೆಳತಿಯೆ

 

ಹೊಸತು ಭಾವ ಹೊಮ್ಮಿದಾಗ ಕನಸು ಬಂತು ಈಶಾ

ಸ್ನೇಹ ಪುಟಿದ ರೀತಿಯೊಳಗೆ ಸವಿದೆಯಿಂದು ಗೆಳತಿಯೆ

***

೨.

ಮುಂದೊಂದು ದಿನ ಹೀಗೆಯೇ ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ

ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ

 

ಎದೆಯಲ್ಲಿ ನೋವದುವು ಬಂದಿತೆಂದರೇ ಆಸ್ಪತ್ರೆಯೆಡೆಗೆ ಓಡುವ ಜಾಯಮಾನ

ವೈಭೋಗದಲ್ಲಿ ತೇಲುವ ಮನುಷ್ಯನ ಸಾವನ್ನೂ ಉಳಿಸಲಾಗುವುದಿಲ್ಲ ಗೆಳೆಯ

 

ಮೊದಲೆಲ್ಲವು ಹಳ್ಳಿಯಲ್ಲಿರುವ ಮದ್ದಿನಲ್ಲಿಯೇ ಕಡಿಮೆ ಆಗುತ್ತಿತ್ತು ಕಾಯಿಲೆಗಳು

ಏನೂ ಇಲ್ಲದವರಿಗೂ ಈಗೀಗ ಆಸ್ಪತ್ರೆಯ ಸಹವಾಸ ತಪ್ಪಿಸಲಾಗುವುದಿಲ್ಲ ಗೆಳೆಯ

 

ಜನಸಾಮಾನ್ಯರ ನೋವುಗಳು ಉಳ್ಳವರ ಮಹಲಿನ ಒಳಗಿಂದು ತೂರಿಕೊಂಡು ಹೋಗಲಿ

ನಮ್ಮವರ ಬಾಗುವ ಗುಣವನ್ನು ಮತ್ತೆಂದೂ ಹೇಳಿ ಬದಲಾಯಿಸಲಾಗುವುದಿಲ್ಲ ಗೆಳೆಯ

 

ಈಶನ ಎಚ್ಚರಿಸುವ ಗುಣವನ್ನು ಬಡತನದಲಿರುವವರು ಅರಿಯದೆಯೆ ಹೋದರೆಯಿಂದು

ಬಡಪಾಯಿಯ ತಲೆಗೆ ಅವನದೇ ಕೈಯೆಂದರು ಮತ್ತೆಂದೂ ನಿಲ್ಲಿಸಲಾಗುವುದಿಲ್ಲ ಗೆಳೆಯ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್