ಮುದ್ರಾ ಪ್ರವೇಶ
'ಮುದ್ರಾ ಪ್ರವೇಶ' ಎಂಬ ಕೃತಿಯು ಯೋಗಮುದ್ರಾ ವಿಜ್ಞಾನವನ್ನು, ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಬಣ್ಣಿಸಿರುವ ಕೃತಿ. ಸಾಮಾನ್ಯ ಓದುಗನಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ ಕೆ ರಂಗರಾಜ ಅಯ್ಯಂಗಾರ್ ಇವರು. ಈ ಕೃತಿಯಲ್ಲಿ ಅಧ್ಯಾತ್ಮಿಕ ಮುದ್ರೆಗಳು, ಶಾಸ್ತ್ರೀಯ ಹಾಗೂ ಪೂಜಾ ಮುದ್ರೆಗಳು, ಶ್ರೀ ಗಾಯತ್ರೀ ಮುದ್ರೆಗಳು, ಚೈತನ್ಯದಾಯೀ ಮುದ್ರೆಗಳು, ದೇವತಾ ಮುದ್ರೆಗಳು, ಚಿಕಿತ್ಸಾ ಮುದ್ರೆಗಳು, ಹಠಯೋಗ ಮುದ್ರೆಗಳು, ನರ್ತನ ಮುದ್ರೆಗಳು, ತಪ್ತ ಮುದ್ರೆಗಳು ಇತ್ಯಾದಿಗಳ ಬಗ್ಗೆ ಸವಿವರ ಹಾಗೂ ಸಚಿತ್ರವಾದ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಇದರ ಉಪಕುಲಪತಿಗಳಾದ ಡಾ. ಎಚ್ ಆರ್ ನಾಗೇಂದ್ರ ಇವರು ತಮ್ಮ ಶುಭ ಹಾರೈಕೆಯ ನುಡಿಗಳಲ್ಲಿ “ಸ್ವಾಸ್ಥ ರಕ್ಷಣೆಗೆ, ವಿವಿಧ ಆಧುನಿಕ ಖಾಯಿಲೆಗಳಿಗೆ ಮದ್ದಾಗಿದ್ದು, ಆಧುನಿಕ ಔಷಧಿಗಳಿಂದ ಮುಕ್ತಿ ಪಡೆಯುವುದಕ್ಕೆ, ರೋಗರಹಿತ ಆನಂದಪೂರ್ಣ ಜೀವನದತ್ತ ಕೊಂಡೊಯ್ಯುವುದಕ್ಕೆ ಹಾಗೂ ನಮ್ಮನ್ನು ಪ್ರಾಣಿ ಮಟ್ಟದಿಂದ ಮೇಲೆತ್ತಿ ಸಾಮಾನ್ಯ ಮಾನವರನ್ನಾಗಿಸಿ, ಉತ್ತಮ ಗುಣಗಳಿಂದ ಕೂಡಿದ ಭವ್ಯವ್ಯಕ್ತಿಗಳನ್ನಾಗಿ ಮಾಡಿ, ಮಹಾಮಾನವರನ್ನಾಗಿಸಿ, ಅಲ್ಲಿಯ ಅಪಾರ ಜ್ಞಾನ, ಶಕ್ತಿಯನ್ನು, ಸಿದ್ಧಿಗಳನ್ನು, ಸಮಾಜದ ಪ್ರಗತಿಗೆ ಉಪಯೋಗಿಸುವ ದಿವ್ಯಮಾನವರ ಹಂತಕ್ಕೆ ಕೊಂಡೊಯ್ದು ಕಡೆಗೆ ನಮ್ಮೆಲ್ಲರ ಮೂಲ ಸ್ವರೂಪಸ್ಥಾನಕ್ಕೆ ತಲುಪಿಸುವ ಭವ್ಯಮಾರ್ಗವೇ ಯೋಗ. ಇದು ಒಂದು ಜೀವನ ಪದ್ಧತಿ. ಸುಖಜೀವನದ ಜೀವಾಳ. ಸ್ವಸ್ಥ, ಶಾಂತಿಯುತ ಸಮಾಜದ ಸೃಷ್ಟಿಗಿರುವ ಸರ್ವಾಂಗೀಣ ಸುಂದರ ಮಾರ್ಗ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಖ್ಯಾತ ಯೋಗ ಗುರು ಬಿ ಕೆ ಎಸ್ ಅಯ್ಯಂಗಾರ್ ಅವರು ಕೃತಿಕಾರರಿಗೆ ವಂದನೆಗಳನ್ನು ತಿಳಿಸುತ್ತಾ “ಮಾನವನು ಪಂಚಭೂತ, ಪಂಚನ್ಮಾತ್ರ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಅಂತಃಕರಣಗಳೆಂಬ ಕೋಟೆಯಲ್ಲಿ ಅಡಗಿಕೊಂಡು ಅವುಗಳ ಸಂಯೋಗದಿಂದ ಹೇಗೆ ಬಿಡುಗಡೆಯಾಗಬಹುದು ಎಂದು ಸೂಚಿಸುವ ಶಾಸ್ತ್ರವೇ ಯೋಗ ಶಾಸ್ತ್ರ. ಮಾನವನನ್ನು ಪುರುಷ ಎಂದು ಸಂಬೋಧಿಸಲಾಗಿದೆ. ಪುರು ಎಂದರೆ ಶರೀರ, ಶರೀರದ ಒಡೆಯ ಪುರುಷ ಅಥವಾ ಮಾನವ. ಮಾನವ ಸಮಾಜದಲ್ಲಿ ಮಾನದಿಂದಲೂ ಮತ್ತು ಶೀಲದಿಂದಲೂ ಹೇಗೆ ಜೀವಿಸಬಹುದೆಂದು ತೋರಿಸುವ ದಿವ್ಯಮಾರ್ಗವೇ ‘ಯೋಗ ಮಾರ್ಗ'.
ಆರೋಗ್ಯ ಮತ್ತು ಅನಂತಾನಂದವನ್ನು ಅನುಭವಿಸಲು ಯಾವ ರೀತಿ ಆಸನ ಪ್ರಾಣಾಯಾಮ ಕರ್ಮಗಳನ್ನು ಕ್ರಮವಾಗಿ ಪೋಣಿಸಿಕೊಂಡು ಹೋಗುತ್ತೇವೆಯೋ ಹಾಗೆಯೇ ‘ಮುದ್ರಾ’ ಕ್ರಮವನ್ನು ಪೋಣಿಸಿಕೊಂಡು ಹೋಗಬೇಕು. ಕಾರಣ ಯೋಗದಲ್ಲಿ ಆಸನ ಪ್ರಾಣಾಯಾಮ ಕ್ರಮ ಹೇಗೆ ಒಂದು ಭಾಗವೋ ಹಾಗೆಯೇ ‘ಮುದ್ರಾ’ ಕ್ರಮವೂ ಯೋಗದ ಒಂದು ಭಾಗವಾಗಿದೆ.” ಎಂದು ಮುದ್ರೆಯ ಮಹತ್ವವನ್ನು ವರ್ಣಿಸಿದ್ದಾರೆ.
ಪುಸ್ತಕದ ಪರಿವಿಡಿಯಲ್ಲಿ ಮುದ್ರಾ ಇತಿಹಾಸ, ಪಂಚತತ್ವಗಳು, ಮುದ್ರೆಗಳ ರಚನೆ, ಪ್ರಾಣಾಯಾಮ ಮುದ್ರೆಗಳು, ಧ್ಯಾನ ಮುದ್ರೆಗಳು, ಆಧ್ಯಾತ್ಮಿಕ ಮುದ್ರೆಗಳು ಮುಂತಾದ ವಿಷಯಗಳನ್ನು ನೀಡಲಾಗಿದೆ. ಮುದ್ರಾ ಇತಿಹಾಸದಲ್ಲಿ ಇದರ ಹಿನ್ನಲೆ, ಮುದ್ರಾ ಎಂಬ ಪದ ಅರ್ಥ,ವಿದೇಶಗಳಲ್ಲಿ ಮುದ್ರಾಯೋಗ ಬಗ್ಗೆ ತಿಳಿಸಿಕೊಡಲಾಗಿದೆ. ಸುಮಾರು ೨೮೦ ಪುಟಗಳಿರುವ ಈ ಪುಸ್ತಕವು ಸಂಗ್ರಹ ಯೋಗ್ಯ ಜ್ಞಾನದಾಯಕ ಕೃತಿಯಾಗಿದೆ.