ಮುದ್ರಿಸಲು ಗೂಗಲ್ ಸೇವೆ
ಮುದ್ರಿಸಲು ಗೂಗಲ್ ಸೇವೆ
ನಿಮ್ಮ ಪ್ರಿಂಟರ್ ಯಾವುದೇ ಇದ್ದರೂ,ಅದನ್ನು ಅಂತರ್ಜಾಲ ಮೂಲಕವೇ ನಿಯಂತ್ರಿಸಿ,ಅದರಿಂದ ಮುದ್ರಣ ಸೇವೆಯನ್ನು ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡಲು ಗೂಗಲ್ ಮುಂದಾಗಿದೆ.ಸಾಮಾನ್ಯವಾಗಿ,ಮುದ್ರಕದ ಸೇವೆ ಪಡೆಯಲು ಕಂಪ್ಯೂಟರ್ನ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಮತ್ತು ಮುದ್ರಕದ ಡ್ರೈವರ್ ತಂತ್ರಾಂಶದ ನೆರವು ಬೇಕು.ಅಂತರ್ಜಾಲದ ಮೂಲಕ ಇವುಗಳ ನೇರವಾಗಿ ಮುದ್ರಕಕ್ಕೆ ಮುದ್ರಣ ಪ್ರತಿಗಳಿಗೆ ಕೋರಿಕೆ ಸಲ್ಲಿಸುವ ಹೊಸ ತಂತ್ರವನ್ನು ಪ್ರಯೋಗಿಸಲು ಗೂಗಲ್ ಸಜ್ಜಾಗಿದೆ. ನಿಮ್ಮ ಮುದ್ರಕ ಯಾವ ಕಂಪೆನಿಯದ್ದು ಮುಂತಾದ ವಿವರಗಳನ್ನು ನೀವು ನೀಡಿದರೆ ಈ ಸವಲತ್ತ್ತು ನಿಮ್ಮದಾಗುತ್ತದೆ.ಅಂತರ್ಜಾಲ ಮೂಲಕವೇ ಕೆಲಸ ಸಾಧಿಸಿಕೊಳ್ಳುವ ಗೂಗಲ್ ಕ್ರೋಮ್ ಬ್ರೌಸರ್ ಮೂಲಕ ಈ ಸೇವೆ ಪಡೆಯಬಹುದು.
-----------------------------------------
ಐಪ್ಯಾಡ್ ಮೂಲಕ ದೇಶದ ಆಡಳಿತ
ಐಪ್ಯಾಡ್ ಮೂಲಕ ದೇಶದ ಆಡಳಿತದ ಚುಕ್ಕಾಣಿಯನ್ನು ಚಲಾಯಿಸುವ ಪ್ರಸಂಗ ಇತ್ತೀಚೆಗೆ ನಾರ್ವೆಯ ಪ್ರಧಾನಿಗೆ ಬಂತು.ಅಮೆರಿಕಾಗೆ ಭೇಟಿ ನೀಡಲು ಬಂದಿದ್ದ,ನಾರ್ವೆಯ ಪ್ರಧಾನಿಯು,ಸ್ಟೊಲ್ಟೆನ್ಬರ್ಗ್ ಅವರು,ಐಸ್ಲ್ಯಾಂಡಿನ ಜ್ವಾಲಾಮುಖಿಯ ಬೂದಿಯ ಕಾರಣ ವಿಮಾನ ಹಾರಾಟ ಸ್ಥಗಿತವಾಗಿ,ಅಮೆರಿಕಾದಿಂದ ಹಿಂದಿರುಗುವುದು,ನಿಧಾನವಾಯಿತು.ನಾರ್ವೆಯಲ್ಲಿನ ತಮ್ಮ ಕಚೇರಿಯ ತುರ್ತು ಕೆಲಸಗಳನ್ನು ನಿರ್ವಹಿಸಲು,ನಾರ್ವೆಯ ಪ್ರಧಾನಿ ತಮ್ಮ ಬಳಿಯಿದ್ದ ಹೊಸ ಐಪ್ಯಾಡನ್ನು ಬಳಸಿದರು.ನಂತರ ವಿಮಾನ ಸೇವೆ ಲಭ್ಯವಿದ್ದ ಸ್ಪೇನಿಗೆ ತೆರಳಿ,ವಾಹನದ ಮೂಲಕ ಸ್ಪೇನಿನಿಂದ ನಾರ್ವೆಯತ್ತ ಪ್ರಯಾಣ ಬೆಳೆಸಿದ ಕಾರಣ, ಈ ಐಪ್ಯಾಡ್ ಆಡಳಿತ ಹೆಚ್ಚು ಉದ್ದವಾಗುವುದು ತಪ್ಪಿತು!
--------------------------------------------------------
ಮೊಬೈಲಿನಲ್ಲಿ ಮೊಬಿಟಿವಿ
ಮೊಬಿಟಿವಿಯು ಮೊಬೈಲ್ ಮೂಲಕ ಟಿವಿ ಸೇವೆ ಆರಂಭಿಸಿದಾಗ,ಕ್ರೀಡಾ ಚಾನೆಲುಗಳ ಮೂಲಕ ಆರಂಭಿಸಿತು.ಈಗ ಮೊಬಿಟಿವಿಯು ಸುದ್ದಿ ಚಾನೆಲುಗಳ ಜತೆ ಆಯ್ದ ಮನರಂಜನಾ ಚಾನೆಲುಗಳನ್ನು ನೀಡಲಾರಂಭಿಸಿದೆ.ಮಾಸಿಕ ಹತ್ತು ಡಾಲರು ಮತ್ತು ಅರ್ಧವಾರ್ಷಿಕ ನಲುವತ್ತೈದು ಡಾಲರುಗಳಿಗೆ ಲಭ್ಯ.ಸುಮಾರು ಮೂವತ್ತು ಚಾನೆಲುಗಳು ಲಭ್ಯ.ಆದರಿದು ಸದ್ಯ ಭಾರತದ ಮೊಬೈಲ್ ಬಳಕೆದಾರರಿಗೆ ಸಿಗದು.ತ್ರೀಜಿ ಸೇವೆಗಳು ಈಗ ನಮ್ಮಲ್ಲೂ ಆರಂಭವಾಗಿರುವ ಕಾರಣ ಇಲ್ಲೂ ಮೊಬೈಲ್ ಮೂಲಕ ಟಿವಿ ನಿಜವಾಗುವ ದಿನಗಳು ದೂರವಿಲ್ಲ.
-------------------------------------------
ಟ್ವಿಟರ್:ಜಾಹೀರಾತು ಮೂಲಕ ಆದಾಯದತ್ತ
ಟ್ವಿಟರ್ ಅಂತರ್ಜಾಲ ತಾಣವು ಜಗತ್ತಿನ ಅತ್ಯಂತ ಪ್ರಮುಖ ಸಂಪರ್ಕ ಮಾಧ್ಯಮವಾಗಿ ರೂಪುಗೊಂಡಿದೆ.ಆದರೂ ಅಂತರ್ಜಾಲ ತಾಣವಿನ್ನೂ ಆದಾಯ ಗಳಿಸುತ್ತಿಲ್ಲ.ಇನ್ನು ಮುಂದೆ ಟ್ವಿಟರ್ ಸಂದೇಶಗಳನ್ನು ಶೋಧಿಸಿದಾಗ,ಪ್ರದರ್ಶಿತವಾಗುವ ಸಂದೇಶಗಳ ಜತೆ ಜಾಹೀರಾತುಗಳು ಕಾಣಿಸಿಕೊಳ್ಳಬಹುದು ಎನ್ನುವ ಸೂಚನೆಯಿದೆ.ಇವುಗಳ ಮೂಲಕ ಟ್ವಿಟರ್ ಜನಪ್ರಿಯತೆಯನ್ನು ಕ್ಯಾಶ್ ಮಾಡಿಕೊಳ್ಳುವ ಯೋಜನೆ ತಾಣದ ನಿರ್ವಾಹಕರದ್ದು.ಮೊಬೈಲ್ ಮೂಲಕ ಟ್ವಿಟರ್ ಬಳಕೆಯನ್ನು ಹೆಚ್ಚಾಗಿಸಿ,ತನ್ನ ಜನಪ್ರಿಯತೆಯನ್ನು ಕಾಯ್ದುಕೊಳ್ಳುವುದಕ್ಕೆ ಟ್ವಿಟರ್ ಯೋಜನೆ ಹಾಕಿದೆ.ಜನಸಂಖ್ಯೆಯಲ್ಲಿ ಕಂಪ್ಯೂಟರ್ ಒಂದು ಬಿಲಿಯನ್ ಜನರನ್ನು ಮುಟ್ಟಿದ್ದರೆ,ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಇದರ ನಾಲ್ಕು ಪಟ್ಟು ಇರುವುದೇ ಇದಕ್ಕೆ ಕಾರಣ.
-------------------------------------------------------------
ಐಫೋನ್:ಸ್ಪರ್ಶದ ಮೂಲಕ ಬಿಲ್ ಪಾವತಿ
ಪೇಪಾಲ್ ಖಾತೆಯನ್ನು ಹೊಂದಿದ್ದು,ಖಾತೆಯಲ್ಲಿ ನಗದು ಇದ್ದರೆ,ನಿಮ್ಮ ಖರೀದಿಯ ಬಿಲ್ ಪಾವತಿ ಮಾಡುವುದು ಸುಲಭ.ಐಪೋನ್ ಬಳಕೆದಾರರು,ತಮ್ಮ ಪೇಪಾಲ್ ಖಾತೆಯ ಮೂಲಕ ಬಿಲ್ ಪಾವತಿ ಮಾಡಲು ಅಂಗಡಿಯಾತನ ಐಫೋನ್ಗೆ ತಮ್ಮ ಐಫೋನ್ ಅನ್ನು ಸ್ಪರ್ಶಿಸಿದರೆ ಸಾಕು.ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.ಇದು ನಿಜವಾಗಲು,ಐಫೋನ್ ತಂತ್ರಾಂಶವೊಂದನ್ನು ಇಳಿಸಿಕೊಂಡು ಐಫೋನಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕು.
----------------------------------------
ಪಡ್ನೀಸ್ ನಗೆಲಹರಿ
ಶಿವರಾಮ ದತ್ತಾತ್ರೇಯ ಪಡ್ನೀಸ್ ಎಂಬ ಹಿರಿಯ ವ್ಯಂಗ್ಯಚಿತ್ರಕಾರರ ಚಿತ್ರಗಳು ಭಾಷಾ ಸೀಮೆಯನ್ನು ದಾಟಿ,ಎಲ್ಲರ ಮುಖದಲ್ಲೂ ನಗೆಯನ್ನು ಮೂಡಿಸಲು ಸಮರ್ಥವಾಗಿವೆ.ಆಯ್ದ ಕೆಲವನ್ನು ಅಂತರ್ಜಾಲದಲ್ಲಿಯೂ ನೋಡಬಹುದು.http://www.sdphadnis.com/ ಅಂತರ್ಜಾಲ ತಾಣವು ಅವರ ಚಿತ್ರಗಳ ಸಂಗ್ರಹವನ್ನು ನಿಮ್ಮ ಮುಂದೆ ತೆರೆದಿಡುತ್ತದೆ.ಅಡಿಬರಹಗಳಿಲ್ಲದೆ,ಚಿತ್ರಗಳೇ ಮಾತನಾಡುವ ಈ ವ್ಯಂಗ್ಯಚಿತ್ರಗಳು ಹಳೆಯವಾದರೂ,ಈಗಿನ ಕಾಲಕ್ಕೂ ಪ್ರಸ್ತುತವಾಗಿರುವುದು ಅಚ್ಚರಿ ಹುಟ್ಟಿಸುತ್ತವೆ.
------------------------------------------------------------------
ಗೂಗಲ್ ಶೋಧ ಸುಲಭ
ಅಂತರ್ಜಾಲದಲ್ಲಿ ಹುಡುಕಾಟ ನಡೆಸಲು ನೀವು ನೀಡುವ ಪದಗುಚ್ಛದ ಒಂದೆರಡು ಅಕ್ಷರಗಳನ್ನು ಟೈಪಿಸಿದೊಡನೆ,ಇತರರು ಹುಡುಕುತ್ತಿರುವ ಜನಪ್ರಿಯ ಶೋಧ ಪದಗುಚ್ಛಗಳನ್ನು ತೋರಿಸಿ,ನಿಮಗೆ ನೆರವಾಗುವ ಗೂಗಲ್ ಸೇವೆ ಲಭ್ಯವಿರುವುದು ನಿಮ್ಮ ಗಮನಕ್ಕೆ ಬಂದಿದೆಯಲ್ಲಾ?ಅದೇ ರೀತಿ,ನಿಮ್ಮ ಟೈಪಿಂಗಿನಲ್ಲಿ ತಪ್ಪುಗಳು ನುಸುಳಿರುವ ಸಂಶಯ ಬಂದರೆ,ತಾವು ಹುಡುಕುತ್ತಿರುವ ಪದಗುಚ್ಛ ಇದುವೇ ಎಂದು ನಿಮ್ಮ ಗಮನ ಸೆಳೆಯುವ ಗೂಗಲ್ ಸೇವೆಯೂ ಇದೆ.ಇಂತಹ ಸಹಾಯ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಇದೆ.ವ್ಯಕ್ತಿಗಳ ಬಗ್ಗೆ ಹುಡುಕಾಟ ನಡೆಸುವಾಗ,ಅವರ ಕ್ಷೇತ್ರಗಳ ಬಗ್ಗೆ ಸೂಚಿಸುವ ಬಗ್ಗೆ ಜನರ ಅಭ್ಯಾಸಕ್ಕೆ ಗೂಗಲ್ ಸ್ಪಂದಿಸುತ್ತದೆ."ಕಲಾವಿದ ಹುಸೇನ್" ಎಂಬಂತಹ ಪದಗುಚ್ಛಕ್ಕೆ ಗೂಗಲ್ ಶೋಧ ಸರಿಯಾಗಿ ಸ್ಪಂದಿಸಬಲ್ಲುದು.
--------------------------------------------
ಸಮುದ್ರತಳದ ಕೇಬಲ್ ಸಂಪರ್ಕ ಸ್ಥಗಿತ
ಅಲೆಕ್ಸಾಂಡ್ರಿಯಾ ಮತ್ತು ಮಾರ್ಶೆಲೀಸ್ ನಡುವಣ ಸಮುದ್ರತಳದ ಫೈಬರ್ ಕೇಬಲ್ ಸಂಪರ್ಕದಲ್ಲಿ ಸಮಸ್ಯೆ ಉದ್ಭವಿಸಿದ್ದು,ಭಾರತ,ಕೊಲ್ಲಿ ರಾಷ್ಟ್ರಗಳ ಅಂತರ್ಜಾಲ ಸಂಪರ್ಕದಲ್ಲಿ ಕೊರತೆ ಕಾಣಿಸುವ ಸಾಧ್ಯತೆಯ ಬಗ್ಗೆ ಬಳಕೆದಾರರಿಗೆ ಸೂಚನೆ ನೀಡಲಾಗಿದೆ.ಸುಮಾರು ಹದಿನೆಂಟು ಸಾವಿರ ಕಿಲೋಮೀಟರ್ ದೂರದ ಈ ಕೇಬಲ್ ಸಂಪರ್ಕದ ಮೂಲಕ ಏರ್ಟೆಲ್ ಸೇರಿದಂತೆ ಹಲವಾರು ಸೇವಾದಾತೃಗಳು ಬ್ರಾಡ್ಬ್ಯಾಂಡ್ ಸೇವೆ ಒದಗಿಸುತ್ತಿದ್ದಾರೆ.ಸಮಸ್ಯೆ ಸರಿಪಡಿಸುವವ ವರೆಗೆ ಸೇವಾನ್ಯೂನ್ಯತೆ ಬಾಧಿಸಬಹುದು.ಅಂದಹಾಗೆ ಈ ಕೇಬಲ್ ಸಂಪರ್ಕಕ್ಕೆ ಸೀ-ಮಿ-ವಿ-4 ಎಂಬ ಹೆಸರಿದೆ.ಈಜಿಪ್ಟ್,ಸೌದಿ ಅರೇಬಿಯಾ,ಕತಾರ್,ಭಾರತ ಮತ್ತು ಪಾಕಿಸ್ತಾನದ ಅಂತರ್ಜಾಲ ಸಂಪರ್ಕ ಸೇವೆ ಈ ಫೈಬರ್ ಸಂಪರ್ಕ ಮೂಲಕವೂ ನಿರ್ವಹಿಸಲ್ಪಡುವುದರಿಂದ ಸೇವಾನ್ಯೂನ್ಯತೆ ನಿರೀಕ್ಷಿತ.
------------------------------------------------------------
ಐಪ್ಯಾಡಿಗೆ ಇಸ್ರೇಲಿ ನಿಷೇಧ
ಐಪ್ಯಾಡ್ನ್ನು ಇಸ್ರೇಲ್ನಲ್ಲಿ ಬಳಸುವುದಕ್ಕೆ ನಿಷೇಧ ಹೇರಲಾಗಿದೆ.ಇಸ್ರೇಲ್ ಮತ್ತು ಯುರೋಪಿನ ರಾಷ್ಟ್ರಗಳಲ್ಲಿ ನಿಗದಿ ಪಡಿಸಿದ,ನಿಸ್ತಂತು ಸಾಧನಗಳ ಸಂಕೇತಕ್ಕಿಂತ ಐಪ್ಯಾಡ್ ಪ್ರಬಲ ಸಂಕೇತ ಬಳಸುವುದರಿಂದ,ಅದರ ಬಳಕೆ ಇತರ ನಿಸ್ತಂತು ಸಾಧನಗಳ ಬಳಕೆಗೆ ಸಮಸ್ಯೆಯೊಡ್ಡಬಹುದು ಎನ್ನುವ ಕಾರಣವನ್ನು ಇಸ್ರೇಲಿ ಸರಕಾರವು ನೀಡಿದೆಯಾದರೂ,ಅಲ್ಲಿನ ಜನರಿಗೆ,ಈ ಸಾಬೂಬು ಸಮಾಧಾನ ತಂದಿಲ್ಲ.ಹಾಗೆ ನೋಡಿದರೆ,ಅಮೆರಿಕಾದಲ್ಲಿ ನಿಸ್ತಂತು ಸಾಧನಗಳಿಗೆ ನಿಗದಿಪಡಿಸಿದ ಸಂಕೇತದ ಮಟ್ಟ ಅಧಿಕವೇ.ಐಫೋನ್,ಬ್ಲಾಕ್ಬೆರಿ ಮುಂತಾದ ಸಾಧನಗಳೂ ಇದೇ ಕಾರಣದಿಂದ ಇಸ್ರೇಲಿನಲ್ಲಿ ನಿಷೇಧಕ್ಕೀಡಾಗಬೇಕಿತ್ತು.ಹಾಗೇನೂ ಆಗಿಲ್ಲದಿರುವಾಗ,ಐಪ್ಯಾಡಿಗೆ ಮಾತ್ರಾ ನಿಷೇಧ ಯಾಕೆ ಎಂದು ಜನರ ಪ್ರಶ್ನೆ.ಅದಕ್ಕೆ ಉತ್ತರಿಸುವವರಿಲ್ಲ.ಈಗಾಗಲೇ ಸುಮಾರು ಹತ್ತು ಐಪ್ಯಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉದಯವಾಣಿ
*ಅಶೋಕ್ಕುಮಾರ್ ಎ