ಮುನಿಯಾ ಎಂಬ ಪುಟ್ಟ ಹಕ್ಕಿಗಳ ಕಲರವ...
![](https://saaranga-aws.s3.ap-south-1.amazonaws.com/s3fs-public/styles/article-landing/public/muniya.jpg?itok=LIc_7GjJ)
ದೀಪಾವಳಿಯ ರಜಾದಿನಗಳಲ್ಲಿ ನಮ್ಮ ಮನೆಯ ಹತ್ತಿರದ ಗದ್ದೆಗಳ ಬಳಿ ಸುತ್ತಾಡಿಕೊಂಡು ಬರಲು ಹೋಗಿದ್ದೆ. ಅಲ್ಲೊಂದಿಷ್ಟು ಪುಟಾಣಿ ಹಕ್ಕಿಗಳು ಬೇಲಿಯ ಮೇಲೆ ಕುಳಿತುಕೊಂಡಿದ್ದವು. ಒಂದಲ್ಲ ಎರಡಲ್ಲ ನೂರಾರು.. ಯಾವುದೂ ಕೂತಲ್ಲಿ ಕೂರುತ್ತಿರಲಿಲ್ಲ. ಒಮ್ಮೆ ಆ ಕಡೆ ಗದ್ದೆಗೆ ಹಾರಿ ಹೋಗುತ್ತಿದ್ದವು. ಅಲ್ಲೇ ಬೆಳೆದಿದ್ದ ಜೊಂಡು ಹುಲ್ಲಿನ ಬೀಜವನ್ನು ಬಾಯಿತುಂಬಾ ತಿಂದುಕೊಂಡು ಮತ್ತೆ ಬೇಲಿಯ ಮೇಲೆ ಬಂದು ಕೂರುತ್ತಿದ್ದವು. ನೋಡಲು ಥೇಟ್ ಗುಬ್ಬಚ್ಚಿಗಳದ್ದೇ ಗಾತ್ರ ಆದರೆ ಬಣ್ಣ ಮಾತ್ರ ಬೇರೆ. ನನಗೂ ಬಹಳ ಕುತೂಹಲ ಆಯ್ತು. ಮರುದಿನ ಆ ಕಡೆ ಹೋದಾಗ ನನ್ನ ಕ್ಯಾಮರಾ ಹಿಡಿದುಕೊಂಡೇ ಹೋದೆ. ಮತ್ತೆ ಅದೇ ಬೇಲಿಯಮೇಲೆ ಕುಳಿತಿದ್ದವು. ಅಲ್ಲೇ ಹತ್ತಿರದ ಒಂದು ಮೋರಿಯ ಕಟ್ಟೆಯಲ್ಲಿ ಕುಳಿತು ಅವುಗಳ ಫೋಟೋ ತೆಗೆಯಲಾರಂಭಿಸಿದೆ. ಒಂದೆರಡು ಪುಟ್ಟ ವಿಡಿಯೋ ಸಹಾ ಮಾಡಿಕೊಂಡೆ. ಮತ್ತೆ ಮನೆಗೆ ಹೊರಡಬೇಕು ಎಂದು ರಸ್ತೆಯ ಕಡೆಗೆ ತಿರುಗಿದರೆ ರಸ್ತೆಯ ಮೇಲೆ ಎರಡು ಮುನಿಯಾ ಹಕ್ಕಿಗಳು ಒಣಗಿದ ಸೆಗಣಿಯಲ್ಲಿ ಏನನ್ನೋ ಹುಡುಕುತ್ತಿದ್ದವು.
ಈ ಒಣಗಿದ ಸೆಗಣಿಯಲ್ಲಿ ಇವುಗಳಿಗೆ ಏನು ಸಿಗಬಹುದು, ಎಂದು ಕುತೂಹಲ ಆಯ್ತು. ಕ್ಯಾಮರಾ ಮೂಲಕ ಝೂಮ್ ಮಾಡಿ ನೋಡಲಾರಂಭಿಸಿದೆ. ಒಣಗಿದ ಸೆಗಣಿಯೊಳಗೆ ಯಾವುದೋ ಹುಲ್ಲಿನ ಬೀಜಗಳು ಇದ್ದವು. ಅವುಗಳನ್ನು ಈ ಮುನಿಯಾ ಹಕ್ಕಿಗಳು ಹುಡುಕಿ ತಿನ್ನುತ್ತಿದ್ದವು. ಅರೆ ಅಷ್ಟು ಚಂದ ಬೆಳೆದ ಹಸಿ ಹುಲ್ಲಿನ ಬೀಜಗಳು ಇರುವಾಗ ಇವುಗಳು ಈ ಸೆಗಣಿಯ ಬೀಜಗಳನ್ನು ಏಕೆ ತಿನ್ನುತ್ತಿವೆ ಎಂದು ಪ್ರಶ್ನೆ ಹುಟ್ಟಿತು. ನನ್ನಬಳಿ ಇರುವ ಹಕ್ಕಿಯ ಪುಸ್ತಕಗಳಲ್ಲಿ ಮತ್ತು ಗೂಗಲ್ ನಲ್ಲೂ ಹುಡುಕಾಡಿದೆ.. ಉತ್ತರ ಸಿಕ್ಕಿತು.
ದನ ತಿಂದ ಹುಲ್ಲು ಅದರ ಹೊಟ್ಟೆಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಇರುತ್ತದೆ.. ಜೀರ್ಣವಾಗದ ಬೀಜಗಳು ಸಗಣಿಯ ಜೊತೆ ಹೊರಬೀಳುತ್ತವೆ. ಅಷ್ಟುಹೊತ್ತು ಆಕಳಿನ ದೇಹದ ಉಷ್ಣತೆಗೆ ಹುಲ್ಲಿನ ಬೀಜಗಳು ಒಂದಿಷ್ಟು ಬೆಂದಿರುತ್ತವೆ.. ನಂತರ ಸಗಣಿ ಬಿಸಿಲಿಗೆ ಒಣಗಿದಾಗ ಅದು ಸಂಡಿಗೆಯಂತೆ ಕರುಂ ಕುರುಂ ರುಚಿಯಾಗಿರಬಹುದು.. ಇಂತಹ ರುಚಿಕರವಾದ ಸಂಡಿಗೆ ತಿನ್ನಲು ಹಕ್ಕಿಗಳು ಒಣಗಿದ ಸಗಣಿಯನ್ನು ಹುಡುಕುತ್ತಿವೆ ಎಂದು ತಿಳಿಯಿತು. ಹಕ್ಕಿಗಳ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು.
ಈ ಪುಟಾಣಿ ಹಕ್ಕಿಯನ್ನು ‘ಮುನಿಯಾ’ ಎಂದು ಕರೆಯುತ್ತಾರೆ. ಸುಮಾರು ಆರು ವಿಧದ ಮುನಿಯಾಗಳನ್ನು ಭಾರತದಲ್ಲಿ ನೋಡಬಹುದು. ಈ ಪುಟಾಣಿ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ಗೀಜಗನಿಗೆ ಏನೂ ಕಡಿಮೆ ಇಲ್ಲ. ಮಳೆಗಾಲದ ಜೂನ್ ನಿಂದ ಅಕ್ಟೋಬರ್ ತಿಂಗಳ ನಡುವೆ ಗೋಳಾಕಾರದ ಗೂಡು ಮಾಡಿ ಬದಿಯಿಂದ ಅದಕ್ಕೊಂದು ಪ್ರವೇಶದ್ವಾರ ಮಾಡುತ್ತವೆ. 5-6 ಬಿಳಿ ಬಣ್ಣದ ಮೊಟ್ಟೆ ಇಟ್ಟು ತಂದೆ, ತಾಯಿ ಎರಡೂ ಸಮಾನವಾಗಿ ಮರಿಗಳ ಪಾಲನೆ ಪೋಷಣೆ ಮಾಡುತ್ತವೆ. ಮರಿಗಳು ಬೆಳೆದ ನಂತರವೂ ತಮ್ಮಗೂಡನ್ನು ರಾತ್ರಿಯ ಮಲಗುವ ಕೋಣೆಗಳಾಗಿ ಈ ಹಕ್ಕಿ ಬಳಸುತ್ತದೆಯಂತೆ. ಸಾಮಾನ್ಯವಾಗಿ ಪೊದೆಗಳಲ್ಲಿ ಗೂಡು ಕಟ್ಟುವ ಈ ಹಕ್ಕಿ, ನಮ್ಮ ಗೆಳೆಯರೊಬ್ಬರ ಅಪಾರ್ಟ್ಮೆಂಟ್ ಬಾಲ್ಕನಿಯ ತಾರಸಿ ತೋಟದ ಸಂದಿಯಲ್ಲೂ ಗೂಡು ಮಾಡಿದ್ದನ್ನು ನೋಡಿದ್ದೇನೆ. ಅವರಿಗಂತೂ ಅದು ಪ್ರತಿವರ್ಷ ಬರುವ ನೆಚ್ಚಿನ ಅತಿಥಿ. ಪುಟಾಣಿ ಮುನಿಯಾ ಹಕ್ಕಿ ನಿಮ್ಮ ಸುತ್ತಲೂ ಕಾಣಸಿಗಬಹುದು... ಗಮನಿಸುತ್ತೀರಲ್ಲ...
ಕನ್ನಡ ಹೆಸರು: ಮುನಿಯಾ ಹಕ್ಕಿ, ರಾಟವಾಳ
ಇಂಗ್ಲೀಷ್ ಹೆಸರು: White-rumped Munia
ವೈಜ್ಞಾನಿಕ ಹೆಸರು: Lonchura striata
ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ