ಮುನಿವೆಂಕಟಪ್ಪನವರ ತಮಟೆ ಸಂಗೀತ ಮಾಡಿದ ಮೋಡಿ !

ಮುನಿವೆಂಕಟಪ್ಪನವರ ತಮಟೆ ಸಂಗೀತ ಮಾಡಿದ ಮೋಡಿ !

೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗ ಹಲವಾರು ಅಪರೂಪದ, ಒಮ್ಮೆಯೂ ಕೇಳಿರದ ಹೆಸರುಗಳು ಆ ಪಟ್ಟಿಯಲ್ಲಿ ಕಾಣಲು ಸಿಕ್ಕವು. ನಮ್ಮದೇ ರಾಜ್ಯದ ಹೆಮ್ಮೆಯ ತಮಟೆ ಕಲಾವಿದರಾದ ನಾಡೋಜ ಮುನಿವೆಂಕಟಪ್ಪವನರ ಹೆಸರೂ ಅದರಲ್ಲಿ ಒಂದು. ‘ತಮಟೆ’ ಎಂಬ ಸಾಮಾನ್ಯ ವಾದ್ಯವನ್ನು ಬಾರಿಸುತ್ತಾ ಮುನಿವೆಂಕಟಪ್ಪನವರು ಏರಿದ ಎತ್ತರ ಬಹಳ. ಅವರ ಈ ಅಪರೂಪದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಅರ್ಹವಾಗಿಯೇ ಒಲಿದು ಬಂದಿತು. 

ಸಣ್ಣ ವಯಸ್ಸಿನಲ್ಲಿಯೇ ತಮ್ಮ ಅಪ್ಪನಿಂದ ಬಳುವಳಿಯಾಗಿ ಬಂದ ಕಲಾ ನೈಪುಣ್ಯದಿಂದ ತಮಟೆ ಬಾರಿಸಲು ಆರಂಭಿಸಿದ ಮುನಿವೆಂಕಟಪ್ಪನವರು ನಂತರದ ದಿನಗಳಲ್ಲಿ ಗಳಿಸಿದ ಖ್ಯಾತಿ ಅಪಾರ. ಪ್ರಾರಂಭಿಕ ದಿನಗಳಲ್ಲಿ ಅನುಭವಿಸಿದ ಅವಮಾನವೂ ಏನೂ ಕಮ್ಮಿಯದ್ದಲ್ಲ. ತಮಟೆ ಹಿಡಿದುಕೊಂಡು ಬಸ್ ಹತ್ತಿದಾಗ ಅದರ ನಿರ್ವಾಹಕ ತಮಟೆಯ ಜೊತೆ ಪ್ರಯಾಣ ಮಾಡಲು ಅವರನ್ನು ಬಿಡದೇ ಬಸ್ಸಿನಿಂದ ಇಳಿಸಿಯೇ ಬಿಟ್ಟಿದ್ದರಂತೆ. ಆದರೆ ಈ ಅವಮಾನವನ್ನು ಸವಾಲಾಗಿ ಸ್ವೀಕರಿಸಿದ ಮುನಿವೆಂಕಟಪ್ಪನವರು ತಮಟೆ ಬಾರಿಸುವ ಮೂಲಕವೇ ನಮ್ಮ ನಾಡಿನ ಹೆಮ್ಮೆಯ ಜನಪದ ಕಲೆಯನ್ನು ದಿಲ್ಲಿಯ ಅಂಗಳಕ್ಕೆ ತಲುಪಿಸಿಯೇ ಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿಯ ಬಡ ಕುಟುಂಬವೊಂದರಲ್ಲಿ ಜನ್ಮ ತಾಳಿದವರು ಮುನಿವೆಂಕಟಪ್ಪನವರು. ಇವರ ತಂದೆ ಪಾಪಣ್ಣ ಹಾಗೂ ತಾಯಿ ಮುನಿಗಂಗಮ್ಮ. ಬಾಲ್ಯದಿಂದಲೇ ಬಡತನದ ಬೇಗೆಯಲ್ಲಿ ದಿನಗಳನ್ನು ಕಳೆದ ವೆಂಕಟಪ್ಪವನರು ನಾಲ್ಕನೇ ತರಗತಿಗೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದರು. ಅಪ್ಪ ಬಾರಿಸುತ್ತಿದ್ದ ತಮಟೆಯನ್ನು ಗಮನಿಸುತ್ತಾ ಬೆಳೆದ ವೆಂಕಟಪ್ಪನವರಿಗೆ ಅದೇ ಭವಿಷ್ಯದ ದಾರಿಯನ್ನು ತೋರಿಸಿತು. ಅಪ್ಪನೇ ಗುರು, ಹೊಟ್ಟೆಯೊಳಗಿನ ಹಸಿವೇ ಕಲಿಯಲು ಪ್ರೇರಣೆಯಾಗಿಸಿಕೊಂಡ ವೆಂಕಟಪ್ಪನವರು ಮತ್ತೆ ಹಿಂದಿರುಗಿನೋಡಲಿಲ್ಲ. 

ವೆಂಕಟಪ್ಪನವರು ತಮ್ಮ ಭುಜಕ್ಕೆ ತಮಟೆಯನ್ನು ಏರಿಸಿ, ಹಲ್ಲು ಬಿಗಿದು ಅವಡುಗಚ್ಚಿ ತಮಟೆ ಬಾರಿಸಲು ಮುಂದಾದರೆ ಅದು ಯಾವ ವೇದಿಕೆಯೇ ಇರಲಿ, ಯಾವುದೇ ಸಮಾರಂಭವೇ ಇರಲಿ ನೆರೆದ ಜನರ ನರನಾಡಿಗಳು ಎದ್ದು ಕುಣಿಯುವಂತೆ ಮಾಡಿಬಿಡುತ್ತವೆ. ಇಂತಹ ಒಂದು ಅದ್ಭುತ ದೇಸೀ ಕಲೆಯನ್ನು ಕರಗತ ಮಾಡಿಕೊಂಡ ವೆಂಕಟಪ್ಪವನರು ತಮಟೆ ಬಾರಿಸುವುದು ಮಾತ್ರವಲ್ಲದೇ ಅದರಲ್ಲಿ ಇನ್ನೂ ಅನೇಕ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದಾರೆ. 

ವೆಂಕಟಪ್ಪನವರು ತಮಟೆಯನ್ನು ಬಾರಿಸುವಾಗ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ರಂಗಕ್ಕೆ ಇಳಿದರೆ ಅವರಿಗೆ ಅವರೇ ಸಾಟಿ. ಎಷ್ಟು ಹೊತ್ತು ತಮಟೆ ಬಾರಿಸಿದರೂ ಸುಸ್ತಾಗದ ಇವರು ತಮಟೆ ಬಾರಿಸುವುದರಲ್ಲೂ ವಿವಿಧ ಆಯಾಮಗಳನ್ನು ಅಳವಡಿಸಿಕೊಂಡಿದ್ದಾರೆ. ತಮಟೆಯ ಬಾರಿಸುತ್ತಾ ಕುಣಿಯುವುದು, ನಡುನಡುವೆ ಲಾಗ ಹಾಕುವುದು, ಕಣ್ಣಿನಿಂದ ಸೂಜಿ ತೆಗೆಯುವುದು, ಹಣೆಯಿಂದ ನಾಣ್ಯ ಎತ್ತುವ ಕಸರತ್ತುಗಳನ್ನು ಅನಾಯಾಸವಾಗಿ ಮಾಡುತ್ತಾರೆ. ತಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಆಸಕ್ತ ಯುವಕರನ್ನು ಸೇರಿಸಿ ತಂಡಕಟ್ಟಿ ಆ ಮೂಲಕ ತಮಟೆ ಕಲೆಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. 

ತಮ್ಮ ತಮಟೆ ಸಂಗೀತದ ಬದುಕಿನ ಪ್ರಾರಂಭದ ದಿನಗಳಲ್ಲಿ ಉತ್ಸವ, ಪರಿಷೆ, ಕರಗ, ಸಭೆ, ಸಾವು, ಜಾತ್ರೆಗಳಿಗೆ ಸೀಮಿತವಾಗಿದ್ದ ಇವರ ತಮಟೆಯ ಸದ್ದು ನಿಧಾನವಾಗಿ ಜಿಲ್ಲೆಯ ಗಡಿ ದಾಟಿ ಮೈಸೂರು, ಬೆಂಗಳೂರು, ದೇಶದ ರಾಜಧಾನಿ ದಿಲ್ಲಿಯವರೆಗೆ ಕೇಳಿಸತೊಡಗಿತು. ನಂತರ ದೇಶದ ಗಡಿಯನ್ನೇ ದಾಟಿದ ಮುನಿವೆಂಕಟಪ್ಪನವರು ಅಮೇರಿಕದಲ್ಲಿ ನಡೆದ ಅಕ್ಕ ಸಮ್ಮೇಳನ, ಕನ್ನಡ ಕೂಟ, ಜಪಾನ್ ದೇಶದಲ್ಲಿ ಜರುಗಿದ ಸಾಂಸ್ಕೃತಿಕ ಮೇಳದಲ್ಲೂ ತಮಟೆಯ ಸದ್ದು ಕೇಳುವಂತೆ ಮಾಡಿದ್ದಾರೆ. ಇವರ ತಮಟೆಯ ಸದ್ದು ನಿಧಾನವಾಗಿ ತಾರಕಕ್ಕೆ ಏರುತ್ತಿದ್ದಂತೆ ಕುಳಿತಿದ್ದ ಸಭಿಕರನ್ನು ಎದ್ದು ನಿಂತು ನಲಿಯುವಂತೆ ಮಾಡುವುದು ಒಂದು ಅಪರೂಪದ ಮೋಡಿ ಎಂದರೆ ತಪ್ಪಾಗದು. 

ಮುನಿವೆಂಕಟಪ್ಪನವರಿಗೆ ಈಗ ೭೩ರ ಹರೆಯ. ತಮ್ಮ ತಂದೆಯವರನ್ನು ಪ್ರಥಮ ಗುರು ಎಂದು ಕರೆಯುವ ಇವರು ಜಾನಪದ ಲೋಕದ ರುವಾರಿ ಡಾ ಎಚ್ ಎಲ್ ನಾಗೇಗೌಡರನ್ನು ತಮ್ಮ ಎರಡನೇ ಗುರು ಮತ್ತು ಪ್ರೋತ್ಸಾಹಕರು ಎಂದು ಗೌರವಿಸುತ್ತಾರೆ. ನಾಗೇಗೌಡರು ಒಮ್ಮೆ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರಿಗೆ ಕಾರ್ಯಕ್ರಮ ನಿಮಿತ್ತ ಬಂದಾಗ ಅಲ್ಲಿ ಮುನಿವೆಂಕಟಪ್ಪವನರ ಕಲೆಯನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದರು. ನಂತರ ರಾಮನಗರದ ಜಾನಪದ ಲೋಕಕ್ಕೆ ಆಹ್ವಾನಿಸಿ ವೆಂಕಟಪ್ಪನವರಿಗೆ ತಮಟೆ ಕಲೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ನಂತರದ ದಿನಗಳಲ್ಲಿ ನಾಗೇಗೌಡರು ಹಲವಾರು ಕಾರ್ಯಕ್ರಮಗಳಲ್ಲಿ ವೆಂಕಟಪ್ಪನವರಿಗೆ ಧಾರಾಳ ಅವಕಾಶಗಳನ್ನು ಮಾಡಿಕೊಟ್ಟರು. ಈ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡ ವೆಂಕಟಪ್ಪನವರು ತಮಟೆ ಸಂಗೀತಕ್ಕೆ ಒಂದು ಉತ್ತಮ ವೇದಿಕೆಯನ್ನು ಕಂಡುಕೊಂಡರು. ಈ ಕಾರಣಕ್ಕೇ ವೆಂಕಟಪ್ಪನವರು ನಾಗೇಗೌಡರನ್ನು ತಮ್ಮ ಗುರುಗಳು ಎಂದು ಆರಾಧಿಸುವುದು. 

ಮುನಿವೆಂಕಟಪ್ಪನವರನ್ನು ಹುಡುಕಿಕೊಂಡು ಹಲವಾರು ಪ್ರಶಸ್ತಿ ಗೌರವಗಳು ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಗೌರವ, ಪದ್ಮಶ್ರೀ ಅವುಗಳಲ್ಲಿ ಪ್ರಮುಖವಾದವುಗಳು.   

ಚಿತ್ರ ಕೃಪೆ: ಅಂತರ್ಜಾಲ ತಾಣ