ಮುನಿಸು ಬೇಕೆ...?

ಮುನಿಸು ಬೇಕೆ...?

ಕವನ

ಮುನಿಸು ನೀನು ತೊರೆಯುತಿರೆ

ಮನಕೆ ಹಗುರ ಕೇಳೆಲೆ

ಮನದ ಪ್ರೇಮ ಬರಲು ಸವಿಗೆ 

ಮನೆಗೆ ಹರುಷ ಹೇಳೆಲೆ 

 

ಮೌನದೊಳಗೆ ಮತ್ತೆ ಸಿಡುಕು

ಮೌನಿಯಾಯ್ತು ಹೂ ಬನ 

ಮೀನ ಮೇಷದೊಳಗೆ ಬದುಕು

ಮಿನುಗದಾಯ್ತು ಮೈ ಮನ 

 

ಮೇನೆಯೊಳಗೆ ಕುಳಿತುಕೊಳದೆ 

ಮನಕೆ ಇಹುದೆ ಸ್ಪಂಧನ 

ಮನಸಿನೊಳಗೆ ದೇಹ ಬಾದೆ

ಮನದೊಳಿರಲಿ ಹೂಮನ

 

ಮುನಿಯ ಬೇಡ ಚೆಲುವ ತೋರು

ಮನದ ಒಲುಮೆ ಸುಂದರಿ

ಮನಸಿನಾಟ ಒಡಲ ಸವಿಯು

ಮನೆಲೆ ಇಹುದು ಕಿನ್ನರಿ

***

ಗಝಲ್

ಹುಳಿಯ ಮೇಲಾರದ ರೀತಿಯಂತಿರಲಿ ಜೀವನ 

ಸವಿಯ ಹಣ್ಣುಗಳ ರುಚಿಯಂತಿರಲಿ ಜೀವನ

 

ತುಳುವ ಹಲಸಿನಂತೆ ಆಗದಿರಲಿ ಬದುಕು

ಮಾವಿನ ಒಳಗಿನ ಸವಿಯಂತಿರಲಿ ಜೀವನ 

 

ಸಾಂಬಾರಿಗೆ ಹಾಕುವ ಪದಾರ್ಥದಂತೆಯೆ ಒಲವಿರಲಿ

ನೀರುಳ್ಳಿ ಬಜೆಯಲ್ಲಿಯ ಪರಿಮಳದಂತಿರಲಿ ಜೀವನ 

 

ಕೋಸಂಬರಿಗೆ ಹಾಕುವ ಕೊತ್ತಂಬರಿಯಂತೆ ಚೆಲುವಿರಲಿ

ಮಸಾಲೆಯ ದೋಸೆಯೊಳಗಿನ ಗುಣದಂತಿರಲಿ ಜೀವನ 

 

ಹೆಸರಿನ ಪಾಯಸದಂತೆಯೆ ಮನಸದುವು ಈಶಾ

ಅವಿಲಿನಂತೆ  ಇರುವ ಗೆಲುವಿನಂತಿರಲಿ ಜೀವನ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್