ಮುನ್ನಡೆ ಮನವೆ

ಮುನ್ನಡೆ ಮನವೆ

ಬರಹ

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಹಿರಿದು ಕಿರಿದು ಎಲ್ಲ ಸುಳ್ಳು

ಮೇಲು ಕೀಳು ಬರಿ ಜೊಳ್ಳು

ನಂಬದಿರು, ನೆಚ್ಚದಿರು

ಮಾಯೆಯ ಮಾಯೆಯಲಿ ನೀನು ಸಿಲುಕದಿರು।

ಆರಿಗಿಲ್ಲ ಆರು ಸಾಟಿ

ಆರಮೇಲೋ ಆರ ಪೈಪೋಟಿ।

ಒಬ್ಬರಂತೆ ಒಬ್ಬರಲ್ಲ

ಅರಿತು ಅರಿಯದಿರುವೆಯಲ್ಲ।

ಬಾಳಿನಲ್ಲಿ ಎಲ್ಲ ಉಂಟು,

ಉಂಟು ಎಂದುಕೊಂಡರೆ।

ಏನೂ ಇಲ್ಲ, ಎಲ್ಲ ಇದ್ದು

ಇಲ್ಲ ಎಂದು ಕೊಂಡರೆ।

ಇರುವು ಇರವುಗಳ ನಡುವೆ

ಏನಿಲ್ಲ ಅಂತ ಫರಕು

ಅದು ನಿನ್ನ ಭ್ರಮೆ

ಬರಿ ಭ್ರಾಂತಿ ಹರಕು-ಹರಕು।

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಬುದ್ದನೇಳಿದ ಬದ್ದಿ ಮಾತು

ನೀನು ಮರೆತೆಯಾ

ನಿನ್ನ ಒಡನೆ ನೀನೆ

ಕಾಳಗಕೆ ನಿಂತೆಯಾ।

ಆಸೆ ಎಂಬುದು ಬಿಸಿಲ ಕುದುರೆ

ದುಸ್ತರವು ಅದನ ಏರುವುದು

ವಾಸ್ತವದ ಅರಿವು ಅರಿತುಕೊಂಡು

ಮುನ್ನಡೆ ನೀ ಶರಣಾಗದೆ।

ಬದುಕ ಇಬ್ಬಂದಿಗಳಿಗೆ

ಬೆನ್ನ ತೋರಿಸದಿದ್ದು

ಸದಾ ಒಳಿತನ್ನೆ ನೆನೆದು

ಮುನ್ನಡೆ ನೀ ಶರಣಾಗದೆ।

ಅಲ್ಲಿ ಇಲ್ಲಿ ಅಲೆವುದನ ಬಿಟ್ಟು

ಹಿಡಿದ ದಾರಿಯಲಿ ಮನಸನಿಟ್ಟು

ಮುನ್ನಡೆ ನೀ ಮನವೆ, ಅವರನಿವರನು ನೋಡುವುದ ಬಿಟ್ಟು
- ಜಯಪ್ರಕಾಶ ನೇ ಶಿವಕವಿ.