ಮುನ್ನಾರ್ ಎಂಬ ಸ್ವರ್ಗ

ಮುನ್ನಾರ್ ಎಂಬ ಸ್ವರ್ಗ

ಬರಹ

ಕೇರಳದ ಪೂರ್ವಭಾಗದ ಅರಣ್ಯಗಳಲ್ಲಿ ಸಮುದ್ರಮಟ್ಟದಿಂದ ಸುಮಾರು ೧೬೦೦ ಮೀಟರು ಮೇಲೆ ಇರುವ ಸುಂದರ ಗಿರಿಧಾಮ ಮುನ್ನಾರ್. ದಟ್ಟ ಕಾಡು ಹಾಗೂ ಅಪಾರ ಹರವಿನ ಚಹಾ ತೋಟಗಳ ನಡುವೆ ಬೈತಲೆಯಂತೆ ಕಾಣುವ ಕಪ್ಪು ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲೂ ಸರಿದಾಡುವ ಮೋಡಗಳು, ಗಗನಚುಂಬಿ ಗಿರಿಶಿಖರಗಳು ಪ್ರವಾಸಿಗರ ಮನದಲ್ಲಿ ಕಲ್ಪನಾತೀತ ಭಾವನೆಗಳನ್ನು ಕೆರಳಿಸುವುದು ಅತ್ಯಂತ ಸಹಜ. ದಕ್ಷಿಣ ಇಂಡಿಯಾದ ಅತಿ ಎತ್ತರದ ಗಿರಿಶಿಖರ 'ಆನೈಮುಡಿ' ಯು ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಈ 'ಮುನ್ನಾರ್' ಪರ್ವತಗಳಲ್ಲಿ ಇದೆ. ಸದಾ ಮೋಡಗಳಿಂದ ಮುಚ್ಚಿಕೊಂಡಿರುವ ಈ ಗಿರಿಶಿಖರದ ಎತ್ತರ ೨೬೯೫ ಮೀಟರುಗಳು (೮೮೪೨ ಅಡಿಗಳು) ಎಂದು ಲೆಕ್ಕಿಸಲಾಗಿದೆ. (ಕರ್ನಾಟಕದ ಅತಿ ಎತ್ತರದ ಗಿರಿಶಿಖರ 'ಮುಳ್ಳಯ್ಯನಗಿರಿ'ಯು ಬಾಬಾ ಬುಡನ್ಗಿರಿ ಪರ್ವತಶ್ರೇಣಿಯಲ್ಲಿದೆ. ಅದರ ಎತ್ತರ ೬೩೫೬ ಅಡಿಗಳು)

ನಾನು ಮತ್ತು ಜೆಸಿಂತ ನಮ್ಮ ಮಗಳಾದ ಸ್ನೇಹಾಳ ಹುಟ್ಟುಹಬ್ಬವನ್ನಾಚರಿಸಲು ಮುನ್ನಾರಿಗೆ ಹೋಗುವುದೆಂದು ನಿಶ್ಚಯಿಸಿ ಒಂದು ದಿನ ಮುಂಚಿತವಾಗಿ ಅಲ್ಲಿಗೆ ತಲುಪಿದೆವು. ಜುಲೈ ೬ನೇ ತಾರೀಖು ನಾವು ಮುನ್ನಾರಿಗೆ ಬಂದಿಳಿದಾಗ ಒಂದು ವಾರದ ಸತತಮಳೆಯಿಂದ ತೊಯ್ದಿದ್ದ ಮುನ್ನಾರ್ ನಿಧಾನವಾಗಿ ಗರಿಗೆದರುತ್ತಿತ್ತು. ಅಲ್ಲಿಯ ಜನಕ್ಕೆ ಅದು ಆಫ್ ಸೀಸನ್. ಹಾಗಾಗಿ ಆರುನೂರು ರೂಪಾಯಿಗಳ ಹೋಟೆಲ್ ರೂಮ್ ನಮಗೆ ನಾನೂರು ರೂಪಾಯಿಗೆ ಸಿಕ್ಕಿತು. ಬಿಸಿಬಿಸಿಯಾದ ನೀರಿನಲ್ಲಿ ಸ್ನಾನ ಮುಗಿಸಿ ಪ್ರಫುಲ್ಲರಾಗಿ ಹೊರಬಂದು ಹತ್ತಿರದ ಮೌಂಟ್ ಕಾರ್ಮೆಲ್ ಚರ್ಚ್ಗೆ ತೆರಳಿ ಪ್ರಾರ್ಥನೆ ಮಾಡಿ ಅಲ್ಲೇ ಎದುರಿನಲ್ಲೇ ಇದ್ದ ಶರವಣ ಭವನದಲ್ಲಿ ನಾಷ್ಟಾ ಮುಗಿಸಿದೆವು.

ಈ ಮುನ್ನಾರ್ ಎಂಬುದು ತಮಿಳಿನ ಮೂನು ಆರ್ ಎಂಬ ಸಂಧಿಪದ. ಕನ್ನಿಮಲೆ, ಮಾಟ್ಟುಪಟ್ಟಿ ಮತ್ತು ನಲ್ಲತಣ್ಣಿ ಎಂಬ ಮೂರು ನದಿಗಳು ಇಲ್ಲಿ ಸಂಗಮಿಸುವುದರಿಂದ ಮೂನು (ಮೂರು) ಆರ್ (ನದಿ) ಎಂಬ ಹೆಸರು ಬಂದಿದೆಯೆಂದು ಹೇಳುತ್ತಾರೆ. ಈ ಮುನ್ನಾರ್ ಪ್ರವಾಸಿ ಕ್ಷೇತ್ರದಿಂದ ನಾಲ್ಕು ದಿಕ್ಕಿನಲ್ಲಿ ರಸ್ತೆಗಳು ಹೊರಹೋಗುತ್ತವೆ. ಅವು ಯಾವುವೆಂದರೆ ಟಾಪ್ಸ್ಟೇಷನ್ ರಸ್ತೆ, ಕೊಯಮತ್ತೂರು ರಸ್ತೆ, ಕೊಚ್ಚಿ ರಸ್ತೆ ಹಾಗೂ ತೇಕ್ಕಾಡಿ ಅರಣ್ಯದ ಮೂಲಕ ಸಾಗುವ ತೇಣಿ ರಸ್ತೆ. ನಾವು ಮೊದಲಿಗೆ ಟಾಪ್ಸ್ಟೇಷನ್ ದಿಕ್ಕಿನತ್ತ ಸಾಗಿದೆವು. ಈ ದಾರಿಯಲ್ಲಿನ ಚಹಾ ತೋಟಗಳು ಹಲವಾರು ಸಿನೆಮಾಗಳಿಗೆ ಚಿತ್ರೀಕರಣ ತಾಣಗಳಾಗಿವೆಯೆಂದು ನಮ್ಮ ರಿಕ್ಷಾದವ ಹೇಳಿದ. ಮಾಟ್ಟುಪೆಟ್ಟಿ ಜಲಾಶಯವು ಅತ್ಯಂತ ವಿಶಾಲವಾಗಿದ್ದು ಇದರ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸಲಾಗುತ್ತದೆ. ಜಲಾಶಯದಲ್ಲಿ ವೇಗದ ದೋಣಿಗಳ ವಿಹಾರಕ್ಕೆ ವ್ಯವಸ್ಥೆಯಿದೆ. ಜಲಾಶಯದ ಒಂದು ಕೋವಿನಲ್ಲಿ ಆನೆಗಳ ಹಿಂಡು ನೀರು ಕುಡಿಯಲು ಬರುತ್ತವೆಂದು ಹೇಳುತ್ತಾರೆ. ಅದೇ ಜಲಾಶಯದ ಮತ್ತೊಂದು ಕೊನೆಯಲ್ಲಿ ಇರುವ Echo Point ಎಂಬ ಸ್ಥಳದಲ್ಲಿ ನಿಂತು ಕೂಗು ಹಾಕಿದರೆ ಆ ಕೂಗು ಸ್ಪಷ್ಟ ಪ್ರತಿಧ್ವನಿಯಾಗಿ ಕೇಳಿಸುತ್ತದೆ.

ಕೇರಳದ ಮೊದಲ ಜಲವಿದ್ಯುತ್ ಕೇಂದ್ರಕ್ಕಾಗಿ ೧೯೪೬ರಲ್ಲಿ ಸೀತಾರಾಮಪುರಂ ಡ್ಯಾಮ್ ಎಂಬ ಅಣೆಕಟ್ಟನ್ನು ಚಿತ್ತಿರ ತಿರುನಾಳ್ ಮಹಾರಾಜರ ೨೫ನೇ ವರ್ಷದ ರಾಜ್ಯಭಾರದ ನೆನಪಿಗೆ ಕಟ್ಟಲಾಗಿದೆ. ಇದು ಕುಂಡಲಿ ಲೇಕ್ ಎಂದೇ ಪ್ರಸಿದ್ಧವಾಗಿದೆ. ಅದೇ ರಸ್ತೆಯಲ್ಲಿ ಮುಂದೆ ಸಾಗಿದರೆ 'ಟಾಪ್ಸ್ಟೇಷನ್' ಎಂಬ ಶಿಖರಾಗ್ರ ಸಿಗುತ್ತದೆಂದು ಹೇಳಿದರಾದರೂ ಆಗಲೇ ಸಂಜೆಯಾಗಿದ್ದರಿಂದ ವಾಪಸು ಬರಬೇಕಾಯ್ತು.

ಮರುಬೆಳಗಿನ ನಮ್ಮ ಮೊದಲ ವೀಕ್ಷಣೆಯ ಸ್ಥಳ ಕೊಯಮತ್ತೂರು ಮಾರ್ಗದಲ್ಲಿ ಒಂಬತ್ತು ಕಿಲೋಮೀಟರು ದೂರದಲ್ಲಿರುವ 'ಇರವಿಕುಲಂ ನ್ಯಾಷನಲ್ ಪಾರ್ಕ್'. ನ್ಯಾಮಕಾಡು ಜಲಪಾತದ ಬಳಿಯ ದ್ವಾರದಲ್ಲಿದ್ದ ಕೇರಳ ಅರಣ್ಯ ಇಲಾಖೆಯ ಸಿಬ್ಬಂದಿಯವರು ಈ ಅಭಯಾರಣ್ಯದೊಳಕ್ಕೆ ಕೊಂಡೊಯ್ಯುವ ಸಫಾರಿ ವಾಹನಕ್ಕೆ ಹಾಗೂ ಕ್ಯಾಮೆರಾಗೆ ಶುಲ್ಕ ಪಡೆದು ಬಸ್ ತುಂಬುವಷ್ಟು ಜನ ಬರಲೆಂದು ಕಾಯಿಸಿದರು. ಅಲ್ಲಿಯೇ ಕನ್ನಿಮಲೆ ನದಿಯ ಸೇತುವೆಯ ಮೇಲೆ ಅಡ್ಡಾಡುತ್ತಾ, ದೂರದ ಬೆಟ್ಟದಿಂದ ಹಾಲಿನ ಗೆರೆಯಂತೆ ಜಾರುತ್ತಿದ್ದ ನೀರ ಧಾರೆಯನ್ನು ನೋಡುತ್ತಾ, ಗಿರಿಜನರು ಕೊಟ್ಟ ಹಸಿ ಕ್ಯಾರೆಟ್ಟು ಮೆಲ್ಲುತ್ತಾ, ಎಳೆ ಬಿಸಿಲನ್ನು ಮೈಮೇಲೆ ಹೊದ್ದುಕೊಂಡೆವು. ಈ ಗಿರಿಜನರು ಇಬ್ಬನಿ ಹಾಗೂ ಸೋನೆ ಮಳೆಯ ವಿರುದ್ಧ ಪ್ಲಾಸ್ಟಿಕ್ ಕವುದಿಯನ್ನು ಮೈತುಂಬಾ ಹೊದ್ದುಕೊಂಡು ಚೀಲದ ತುಂಬಾ ಚಹದೆಲೆಯ ಚಿಗುರುಗಳನ್ನು ಹೊತ್ತು ಸಾಗುತ್ತಿದ್ದರು. ನಿತ್ಯವೂ ನಮ್ಮಂಥ ಎಷ್ಟೋ ಪ್ರವಾಸಿಗರನ್ನು ಅವರು ಕಾಣುತ್ತಿದ್ದರಿಂದ ಕುತೂಹಲಕ್ಕಾದರೂ ಅವರು ನಮ್ಮತ್ತ ನೋಡಲಿಲ್ಲ.

ಒಂದಷ್ಟು ಬಂಗಾಲಿಗಳು, ವಿದೇಶೀಯರು, ನಮ್ಮ ಕನ್ನಡಿಗರೇ ಆದ ಒಂದೆರಡು ನವವಿವಾಹಿತ ದಂಪತಿಗಳು ಬಂದು ಬಸ್ಸು ತುಂಬಿತು. ನಾವ, ನಮ್ಮ ಬಸ್ಸು ಹಾಗೂ ನಾಲ್ಕೈದು ಜನ ಅರಣ್ಯ ಸಿಬ್ಬಂದಿ ಬಿಟ್ಟರೆ ಅಲ್ಲಿ ಇನ್ಯಾರೂ ಇರಲಿಲ್ಲ. ಯಾರೂ ಯಾರಿಗೂ ಹಲೋ ಹಾಯ್ ಎನ್ನಲಿಲ್ಲ, ಗುಡ್ಮಾರ್ನಿಂಗೂ ಇಲ್ಲ. ಹೈಕ್ಲಾಸ್ ಸೊಸೈಟಿಯ ಮೌನದಲ್ಲಿ ನಾವೆಲ್ಲ ರಾಜರತ್ನಂಅವರು ಹೇಳಿದಂತೆ 'ನಮ್ದೇ ಲೋಕಾನ ವುಟ್ಟುಸ್ಕೊಂಡಿದ್ವಿ'. ಮೇಲೆ ಮೇಲೆ ಘಟ್ಟವೇರುತ್ತಾ ಮೋಡಗಳಿಗಿಂತ ಮೇಲೆ ಕೊಂಡುಹೋದ ಆ ಮಿನಿಬಸ್ಸು ಎರಡು ಬೃಹತ್ ಝರಿಗಳ ನಡುವಿನ ಜಾಗದಲ್ಲಿ ನಿಂತುಕೊಂಡಿತು. ಅಲ್ಲಿಂದ ಮೇಲಕ್ಕೆ ಹರಿದಿದ್ದ ರಸ್ತೆಯಲ್ಲಿ ಅಲ್ಲಲ್ಲ ನಮ್ಮದಲ್ಲದ ಲೋಕದಲ್ಲಿ ನಾವು ನಡೆದೇ ಹೋಗಬೇಕೆಂದು ತಿಳಿಸಲಾಯಿತು. ಒಮ್ಮಿಂದೊಮ್ಮೆಲೇ ನಾವು ಮಳೆಗಾಲಕ್ಕೆ ಕಾಲಿಟ್ಟಿದ್ದೆವು ಅಥವಾ ಮಳೆಯ ಮೋಡಗಳ ನಡುವೆಯೇ ನಾವಿದ್ದೆವು ಎಂದರೆ ಸರಿಯಾದೀತು. ಅದಕ್ಕೆಂದೇ ಸಿದ್ಧವಾಗಿದ್ದ ಅಲ್ಲಿನ ಸಿಬ್ಬಂದಿ ಎಲ್ಲರಿಗೂ ಒಂದೊಂದು ಕೊಡೆಯನ್ನು ಐದು ರೂಪಾಯಿ ದರದಲ್ಲಿ ಬಾಡಿಗೆಯಾಗಿ ನೀಡಿದರು.

ಕೊಡೆ ನೀಡಿದ ಆ ಸ್ಥಳದಲ್ಲಿ 'ಕಾಡಿನ ಕಥೆ' ಎಂಬ ಒಂದು ಛಾಯಾಚಿತ್ರ ಗ್ಯಾಲರಿ ಇತ್ತು. ಆ ನ್ಯಾಷನಲ್ ಪಾರ್ಕಿನಲ್ಲಿನ ಅಪರೂಪದ ದೃಶ್ಯಗಳ ಹಲವಾರು ವರ್ಣಚಿತ್ರಗಳನ್ನು ಇಂಗ್ಲಿಷ್ ಮತ್ತು ಮಲಯಾಳದ ವಿವರಣೆಯೊಂದಿಗೆ ಅಲ್ಲಿ ತೂಗುಹಾಕಲಾಗಿತ್ತು. ಎಲ್ಲೆಡೆ ಹಸಿರು ವನರಾಜಿಯ ಆ ಪ್ರದೇಶ ಹನ್ನೆರಡು ವರ್ಷಕ್ಕೊಮ್ಮೆ ನೀಲಕುರಿಂಜಿ ಎಂಬ ಹೂಗಳಿಂದ ಆವೃತವಾಗುವುದಂತೆ. ಆಗ ಕಣಿವೆಗಳೆಲ್ಲ ನಸುನೇರಳೆ ಹೊದಿಕೆ ಹೊದ್ದು ರಮಣೀಯವಾಗಿ ಕಂಗೊಳಿಸುವುದಕ್ಕೆ ಅಲ್ಲಿರುವ ಚಿತ್ರಗಳೇ ಪುರಾವೆಯಾಗಿವೆ. ನಾ ಡಿಸೋಜರು ಬರೆದಿರುವ 'ಕುಂಜಾಲು ಕಣಿವೆಯ ಕೆಂಪು ಹೂ' ಎಂಬ ಕಾದಂಬರಿಯ ನೆನಪಾಯಿತೇ ?

ಎಲ್ಲ ದಿಕ್ಕಿನಿಂದ ರಾಚುವ ತುಂತುರು ಮಳೆಗೆ ಕೊಡೆಗೆ ಅಡ್ಡ ಹಿಡಿಯುತ್ತಾ ಮುಂದೆ ಮುಂದೆ ನಡೆದೆವು. ಮೋಡಗಳ ನಡುವೆ ನಡೆದು ಹೋಗುವ ಎಲ್ಲ ಮಾನವರ ಕನಸು ನಮಗಂತೂ ನಿಜವಾಗಿತ್ತು. ಕೆಳಗೆ ನೋಡಿದರೆ ನಮಗೂ ಕೆಳಭೂಮಿಗೂ ನಡುವೆ ಬೆಳ್ಳಿಮೋಡಗಳ ದಟ್ಟಗೋಡೆ. ತಲೆಯೆತ್ತಿ ಮೇಲೆ ನೋಡಿದರೆ ಇನ್ನೂ ಎತ್ತರದಲ್ಲಿ ಆನೆಮುಡಿ ಶಿಖರಾಗ್ರವು ಕರುಣೆಯಿಂದ ನಮ್ಮತ್ತ ನೋಡುತ್ತಿತ್ತು.

ಸುತ್ತಲ ಎಲ್ಲ ಬೆಟ್ಟಗಳ ಮೈಯೂ ತೊಯ್ದಿದ್ದವು. ಹನಿಹನಿಗೂಡಿದರೆ ಹಳ್ಳ ಎಂಬಂತೆ ಬೆಟ್ಟಗಳ ಪಾದದಡಿ ನೀರು ಹರಿದಿತ್ತು. ಈ ಹಳ್ಳಗಳೇ ಮುಂದೆ ಮುಂದೆ ಹರಿದು ಮತ್ತೊಂದರೊಡನೆ ಸೇರಿ ಬೆಟ್ಟದ ಮೇಲಿನಿಂದ ಜಲಪಾತವಾಗಿ ಧುಮ್ಮಿಕ್ಕುತ್ತಿತ್ತು. ಪರ್ವತಾಗ್ರದಲ್ಲಿ ನದಿಯು ಹುಟ್ಟುವ ಪರಿಯನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು. ಮೋಡಗಳು ಘನೀಭವಿಸಿ ಸುತ್ತಮುತ್ತಲ ಔಷಧಿ ಸಸ್ಯಗಳ ಮೈಸವರಿ ಹರಿದುಬರುತ್ತಿದ್ದ ಸ್ಪಟಿಕಸ್ಪಷ್ಟವಾದ ಆ ಖನಿಜಯುಕ್ತ ಶುದ್ಧ ಜಲವನ್ನು ಬೊಗಸೆ ತುಂಬಿ ಕುಡಿದು ಪುನೀತರಾದೆವು.

ಈ ಅಭಯಾರಣ್ಯದಲ್ಲಿ ಅದೃಷ್ಟವಿದ್ದರೆ 'ನೀಲಗಿರಿ ತಾರ್' ಎಂಬ ಬೆಟ್ಟದ ಆಡುಗಳನ್ನು ನೋಡಬಹುದು ಎಂದಿದ್ದರು. ಆ ಮಾತೂ ನಮ್ಮ ಪಾಲಿಗೆ ನಿಜವಾಗಿತ್ತು. ನಮ್ಮ ಬರುವಿಕೆಯನ್ನು ನೋಡಿಯೂ ಕ್ಯಾರೇ ಎನ್ನದೇ ನಮ್ಮೆದುರಿಗೇ ನಾಲ್ಕೈದು ಬೆಟ್ಟದಾಡುಗಳು ಸೊಂಪಾಗಿ ಮೇಯುತ್ತಿದ್ದವು.

ಇರವಿಕುಲಂ ನ್ಯಾಷನಲ್ ಪಾರ್ಕನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿಸಿದ್ದಾರೆ. ಆ ಅಭಯಾರಣ್ಯದ ಸಿಬ್ಬಂದಿ ನಮ್ಮಲ್ಲಿದ್ದಿರಬಹುದಾದ ಪ್ಲಾಸ್ಟಿಕ್ ಗಾಗಿ ನಮ್ಮ ಚೀಲಗಳನ್ನು ತಡಕಾಡಿದ್ದರು. ಅಲ್ಲಿದ್ದ ಒಂದು ಫಲಕದಲ್ಲಿನ 'ಇಲ್ಲಿ ಏನನ್ನೂ ಬಿಸಾಡಬೇಡಿ, ಇಲ್ಲಿಂದ ಏನನ್ನೂ ಒಯ್ಯಬೇಡಿ, ಇಲ್ಲಿ ಪಡೆವ ಸ್ಫೂರ್ತಿಯನ್ನಷ್ಟೇ ಕೊಂಡುಹೋಗಿ' ಎಂಬ ಹೇಳಿಕೆ ನಿಜಕ್ಕೂ ಅರ್ಥಪೂರ್ಣ.

ತುಂತುರು ತೂರಲಿಗೆ ನಮ್ಮ ಬಟ್ಟೆಗಳೆಲ್ಲ ತೊಯ್ದುಹೋಗಿದ್ದರೂ ಸುತ್ತಲಿನ ಪ್ರಕೃತಿ ಸೌಂದರ್ಯ ಹಾಗೂ ಸ್ವರ್ಗಸದೃಶವಾದ ಆ ಚಾರಣ ನಮ್ಮ ಮೈಮನಗಳಲ್ಲಿ ಮಹಾಪ್ರಸ್ಥಾನದ ಪುಳಕ ಮೂಡಿಸಿದ್ದವು. ಎಂದೂ ಆರದ ಸ್ಫೂರ್ತಿಯನ್ನು ಬೆಳಗಿಸಿದ್ದವು.

ಮರುದಿನ ಬೆಳಗ್ಗೆ ಬಸ್ ಹತ್ತಿ ತೇಣಿಯ ಮಾರ್ಗವಾಗಿ ಮಧುರೈಗೆ ಹೋಗುವುದೆಂದು ನಿರ್ಧರಿಸಿದೆವು. ತೇಕ್ಕಾಡಿ ಕಾಡಿನ ಮಾರ್ಗದಲ್ಲಿರುವ ಈ ಘಟ್ಟ ಪ್ರದೇಶವೂ ಭಾರೀ ತಿರುವುಗಳಿಂದಲೂ ಕಡಿದಾದ ಪ್ರಪಾತಗಳಿಂದಲೂ ತುಂಬಿದೆ. ಕಾಡಿನ ಮಧ್ಯೆ ಅಲ್ಲಲ್ಲಿ ಪ್ರವಾಸಿ ರೆಸಾರ್ಟ್ಗಳು ಇದ್ದು ಅರಣ್ಯ ಮಧ್ಯದ ತಂಗುವಿಕೆಗೆ ಇಂಬುಗೊಡುತ್ತವೆ. ಈ ಘಟ್ಟ ಪ್ರದೇಶದ ದಾರಿ ಚಾಲಕುಡಿಯ ದಾರಿಗಿಂತ ಅತ್ಯಂತ ಕಡಿದು ಹಾಗೂ ಎತ್ತರವಿದೆ. ಈ ಘಟ್ಟದಾರಿಯ ಚಹಾತೋಟಗಳು, ದಟ್ಟ ಕಾನನಗಳಿಂದ ಸುಳಿದು ಬರುವ ಹಿತಕರ ಹವೆ, ಅಲ್ಲಲ್ಲಿನ ನೀರ ಝರಿಗಳು, ಭೂಕುಸಿತಗಳು, ಮೋಡಗಳ ಕಿರೀಟ ಹೊತ್ತ ಗಿರಿಶಿಖರಗಳನ್ನು ಆಸ್ವಾದಿಸುತ್ತಾ ಒಂದು ಘಟ್ಟವೇರಿ ಬಯಲಿಗೆ ಬಂದು ಮತ್ತೊಂದು ಘಟ್ಟವೇರಿ ಬಯಲಿಗೆ ಬಂದು ಕೊನೆಯ ಘಟ್ಟವೇರಿದ ಅನಂತರ ಅನತಿ ದೂರದಲ್ಲೇ ತೇಣಿಯ ಪ್ರಸ್ಥಭೂಮಿ ಕಾಣುತ್ತ ಮೆಲ್ಲಗೆ ಮನದಲ್ಲಿ ಮುನ್ನಾರ್ಗೆ ವಿದಾಯ ಹೇಳುತ್ತಿದ್ದಂತೆಯೇ ಮುಖಕ್ಕೆ ರಾಚುವ ಧೂಳು ಬೆರೆತ ಬಿಸಿಗಾಳಿ ನಮ್ಮ ಕಾಂಕ್ರೀಟ್ ನೆಲದ ಧಗೆಗೆ ಮುನ್ನುಡಿಯಾಗುತ್ತದೆ.