ಮುರಕಲ್ಲಿನ ಗುಡ್ಡದಲ್ಲಿ ಹಸುರು ಹಾಸು
ಅವತ್ತು ಮಂಗಳೂರಿನಿಂದ ಕುಂಬಳೆಗೆ ಹೋಗಿ, ಬಸ್ ಬದಲಾಯಿಸಿ, ಐದು ಕಿಮೀ ದೂರದ ಪೆರ್ಣೆಯಲ್ಲಿ ಇಳಿದಾಗ ಬೆಳಗ್ಗೆ ೯ ಗಂಟೆ. ಗೆಳೆಯ ಶಾಮ ಭಟ್ ಜೊತೆ ಹತ್ತು ನಿಮಿಷ ನಡೆದು ರಸ್ತೆಯ ಪಕ್ಕದಲ್ಲಿದ್ದ ಗೇಟು ತೆರೆದು ಒಳಹೋದೆ.
ಎದುರಿಗಿದ್ದ ಜಮೀನು ನೋಡಿ “ಇಲ್ಲಿ ಕೃಷಿ ಸಾಧ್ಯವೇ” ಅನಿಸಿತು. ಯಾಕೆಂದರೆ ಅದು ಮುರಕಲ್ಲಿನ (ಜಂಬಿಟ್ಟಿಗೆ) ಗುಡ್ದ. ಅಲ್ಲಿ ಬಹುಬೆಳೆಗಳ ತೋಟ ಬೆಳೆಸಿ, ಹಸುರು ಹಾಸು ಹಾಸಿದ ಶ್ಯಾಮಪ್ರಸಾದ ಎದುರಾದರು. ಆಗಲೇ “ತಿಂಗಳ ತಿರುಗಾಟ”ಕ್ಕಾಗಿ ಅಲ್ಲಿಗೆ ಜೀಪುಗಳಲ್ಲಿ ಬಂದಿಳಿದ ಏತಡ್ಕದ ಕೃಷಿ ವಿಚಾರ ವಿನಿಮಯ ಕೇಂದ್ರದ ಸದಸ್ಯರು ನಮ್ಮನ್ನು ಸೇರಿಕೊಂಡರು.
ನಮ್ಮನ್ನೆಲ್ಲ ತೋಟಕ್ಕೆ ಕರೆದೊಯ್ಯುತ್ತಾ, ತಾನು ಕೃಷಿಗಿಳಿದ ದಿನಗಳನ್ನು ಸ್ಮರಿಸಿದರು ಶ್ಯಾಮಪ್ರಸಾದ್, “ಇದು ಅಜ್ಜ ಖರೀದಿಸಿದ ಐದೆಕ್ರೆ ಜಾಗ. ಈ ಮುರಕಲ್ಲಿನ ಗುಡ್ಡದಲ್ಲಿ ಏನೂ ಬೆಳೆಯದು ಅನ್ನುವವರೇ ಎಲ್ಲರೂ. ಕಾಲೇಜಿನ ಡಿಗ್ರಿ ಮುಗಿಸಿದ ನನಗೆ ಪ್ರಯತ್ನ ಮಾಡೋಣ ಅನಿಸಿತು. ಗುಡ್ಡವನ್ನು ಎರಡು ಹಂತಗಳಲ್ಲಿ ಲೆವೆಲ್ ಮಾಡಿಸಿದೆ. ಅನಂತರ ಮೂವತ್ತು ಲಾರಿ ಲೋಡ್ ಮಣ್ಣು ತರಿಸಿ ಇಲ್ಲಿ ಹಾಕಿಸಿದೆ. ಈಗ ನೀವು ನೋಡ್ತಿರುವ ಗಿಡಗಳೆಲ್ಲ ಆ ಮಣ್ಣಿನಲ್ಲೇ ಬೆಳೆಸಿದ್ದು.”
ಈಗ ಅವರ ತೋಟದಲ್ಲಿ ಹಲವು ಬೆಳೆಗಳು: ಅಡಿಕೆ, ಅನಾನಸ್, ನುಗ್ಗೆ, ಬಾಳೆ, ಮಲ್ಲಿಗೆ, ವೆನಿಲ್ಲಾ. ಅಲ್ಲಿ ಇಸವಿ ೨೦೦೦ದಲ್ಲಿ ಅಡಿಕೆ ಸಸಿಗಳನ್ನು ನೆಟ್ಟರು ಶ್ಯಾಮಪ್ರಸಾದ್. ಅದು ಫಸಲಿಗೆ ಬರುವ ತನಕ, ಐದು ವರುಷ ಅಡಿಕೆ ಸಸಿಗಳ ನಡುವೆ ನೇಂದ್ರ ಬಾಳೆ ಬೆಳೆಸಿದರು. ಕಿಲೋಕ್ಕೆ ರೂ.೧೨ ದರದಲ್ಲಿ ಒಂದು ಗೊನೆಗೆ ರೂ.೧೫೦ ಸಿಗುತ್ತಿತ್ತು. ಖರ್ಚು ಕಳೆದು ಪ್ರತೀ ಗೊನೆಯಿಂದ ರೂ.೧೦೦ ಲಾಭ. ಹತ್ತಿರದ ಬೇಕರಿಗಳಿಗೆ ಮಾರಾಟ. ಉತ್ತಮ ಗಾತ್ರದ ಬಾಳೆಕಾಯಿಗೆ ಒಳ್ಳೆಯ ದರ. ನೇಂದ್ರ ಬಾಳೆಕಂದುಗಳ ಮಾರಾಟದಿಂದಲೂ ಅವರಿಗೆ ಆದಾಯ.
ನೇಂದ್ರ ಬಾಳೆಯ ಜೊತೆಗೇ ಅನಾನಸ್ ಬೆಳೆದರು ಶ್ಯಾಮಪ್ರಸಾದ್. ಈಗ ತೋಟದಲ್ಲಿ ೬೦೦ ಸಸಿಗಳು. ಕ್ಯೂ ಮತ್ತು ಕ್ವೀನ್ ತಳಿಗಳು. ಕಾಯಿ ಮೂಡಿದ ನಂತರ ಒಂದೊಂದು ಗಿಡಕ್ಕೆ ಒಂದು ಗ್ಲಾಸ್ ಪ್ಲಾನೋಫಿಕ್ಸ್ ಹಾರ್ಮೋನ್ ಸುರಿಯುವ ಕ್ರಮ. ಕಿಲೋಕ್ಕೆ ರೂ.೬ರಿಂದ ರೂ.೮ ದರದಲ್ಲಿ ಅನಾನಸ್ ಮಾರಾಟ. “ಮೇ ತಿಂಗಳ ಮುಂಚೆಯೇ ಅನಾನಸ್ ಮಾರಾಟ ಮಾಡಬೇಕು. ಒಮ್ಮೆ ಮಳೆ ಬಂದರೆ, ಅನಂತರ ಅನಾನಸಿಗೆ ಕಿಲೋಕ್ಕೆ ಮೂರು ರೂಪಾಯಿ ರೇಟೂ ಸಿಗೋದಿಲ್ಲ” ಎಂದು ಎಚ್ಚರಿಸಿದರು.
ಅಡಿಕೆ ಗಿಡಗಳಿಂದ ಮೊದಲ ಫಸಲು ಅವರ ಕೈಗೆ ಬಂದದ್ದು ೨೦೦೫ರಲ್ಲಿ (ಮಂಗಳ ಮತ್ತು ಇಂಟರ್-ಸಿ ತಳಿಗಳು). ಈಗ ೧೮-೨೦ ಅಡಿಗಳೆತ್ತರ ಬೆಳೆದಿರುವ ಅಡಿಕೆ ಗಿಡಗಳ ನೆರಳು ತೋಟದಲ್ಲೆಲ್ಲ ಹರಡಿದೆ. ಅವಕ್ಕೆ ಹಟ್ಟಿಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಹಾಕುತ್ತಿದ್ದರು. ಈಗ ೮ ತಿಂಗಳಿನಿಂದ ಸ್ಲರಿಗೇಷನ್ ಮಾಡುತ್ತಿದ್ದಾರೆ.
ಮನೆಯ ಪಕ್ಕದಲ್ಲಿ ಹಂಚಿನ ಚಾವಣಿಯ ಕಟ್ಟಡ. ಅದರ ಎಡಭಾಗದಲ್ಲಿ ಉಗ್ರಾಣ ಹಾಗೂ ಬಲಭಾಗದಲ್ಲಿ ಹಟ್ಟಿ. ಅಲ್ಲಿ ಮುಂಭಾಗದಲ್ಲಿ ೬ ದನಗಳು ಮತ್ತು ಹಿಂಭಾಗದಲ್ಲಿ ಕರುಗಳು. ಹಟ್ಟಿಯ ಪಕ್ಕದಲ್ಲೇ ಎರೆಗೊಬ್ಬರದ ತೊಟ್ಟಿ. ಹಟ್ಟಿಯ ಹಿಂಭಾಗದಲ್ಲಿ ಸ್ಲರಿಟ್ಯಾಂಕ್. ಅದರ ಆಳ ೨೦ ಅಡಿ, ವ್ಯಾಸ ೧೬ ಅಡಿ. ಅದರಾಚೆಗೆ ಕಂಪೋಸ್ಟ್ ಹೊಂಡ.
“ಸ್ಲರಿಗೇಷನ್ ವ್ಯವಸ್ಥೆ ಮಾಡಿದ್ದು ಯಾಕೆ?" ಎಂದು ಚಂದ್ರಶೇಖರ ಏತಡ್ಕರ ಪ್ರಶ್ನೆ. ಶ್ಯಾಮಪ್ರಸಾದರ ಉತ್ತರ “ಕೆಲಸದಾಳುಗಳ ಸಮಸ್ಯೆ ಪರಿಹರಿಸಲಿಕ್ಕಾಗಿ. ಒಳ್ಳೇ ಟೈಮಿಗೆ ಅವರು ಕೈಕೊಡ್ತಾರೆ. ಸ್ಲರಿಗೇಷನ್ ಮಾಡಲಿಕ್ಕೆ ಒಬ್ಬ ಇದ್ದರೆ ಸಾಕು. ಪಂಪ್ ಚಾಲೂ ಮಾಡಿ, ಗಿಡಗಳ ಬುಡಕ್ಕೆ ಪೈಪ್ ಹಿಡಿದರೆ ಎಲ್ಲ ಗಿಡಗಳಿಗೆ ಸಾವಯವ ಗೊಬ್ಬರವೂ ಹೋಗ್ತದೆ, ನೀರೂ ಸಿಗ್ತದೆ.”
ಮನೆಯ ಪಕ್ಕದ ಪುಟ್ಟ ಮಲ್ಲಿಗೆಯ ತೋಟ ಪತ್ನಿ ಉಮಾ ಅವರ ಸಾಹಸ. ಅಲ್ಲಿವೆ ಶಂಕರಪುರದ ಮಲ್ಲಿಗೆ ತಳಿಯ ೪೦ ಗಿಡಗಳು. ಎರಡು ವರುಷ ಮುಂಚೆ ಮೂರಡಿ ಘನ ಹೊಂಡಗಳಲ್ಲಿ ನೆಟ್ಟು, ಹಿಂಡಿ ಹಾಗೂ ಸೆಗಣಿಸ್ಲರಿ ಹಾಕಿ ಬೆಳೆಸಿದ್ದಾರೆ. ದಿನಕ್ಕೆ ಎರಡು ಸಲ ನೀರಿನ ಸಿಂಪರಣೆ. ಸಸಿಗಳಲ್ಲಿ ಅರಳುವ ಹೂಗಳನ್ನು ದಿನದಿನವೂ ಮುಂಜಾನೆ ೪ ಗಂಟೆಗೆದ್ದು ಕೊಯ್ಯಬೇಕು. ಮಲ್ಲಿಗೆ ಖರೀದಿಸಲು ಪೂರ್ವಾಹ್ನ ೯ ಗಂಟೆಗೆ ಮತ್ತು ಮಧ್ಯಾಹ್ನ ೧೨ ಗಂಟೆಗೆ ಏಜೆಂಟ್ ಮನೆಗೇ ಬರುತ್ತಾನೆ.
ಶ್ಯಾಮಪ್ರಸಾದರ ಕಾಯಕವೂ ಮುಂಜಾನೆ ೪ ಗಂಟೆಗೆ ಶುರು. ಬೆಳಗ್ಗೆ ಮೂರು ತಾಸು ಮತ್ತು ಸಂಜೆ ಮೂರು ತಾಸು ಅವಧಿ ಅವರಿಗೆ ಹಟ್ಟಿಯ ಕೆಲಸ. ಬೆಳಗ್ಗೆ ೬.೩೦ ಗಂಟೆಗೆ ಅವರು ಹೋಟೆಲಿಗೆ ಹಾಲು ಒಯ್ಯಲೇ ಬೇಕು.
“ಇದೆಲ್ಲ ಕಷ್ಟದ ಕೆಲಸವೇ. ನಾನೇನೂ ಇಷ್ಟಪಟ್ಟು ಕೃಷಿಗೆ ಬರಲಿಲ್ಲ. ಆದರೆ ಕೃಷಿಯಲ್ಲಿ ನಷ್ಟವಿಲ್ಲ” ಎನ್ನುತ್ತಾರೆ ಶ್ಯಾಮಪ್ರಸಾದ್. ವೆನಿಲ್ಲಾದ ಕೋಡು ಬೆಳೆಸದೆ, ಬಳ್ಳಿಯನ್ನೇ ಮಾರಿ ಲಾಭ ಮಾಡಿಕೊಂಡ ಅನುಭವ ಅವರದು. ಕೇವಲ ೨೦ ರೂಪಾಯಿ ತೆತ್ತು ೨೦ ಮೀಟರ್ ವೆನಿಲ್ಲ ಬಳ್ಳಿ ತಂದವರು, ಅನಂತರ ಮೀಟರಿಗೆ ರೂ. ೬೦, ರೂ.೮೦ ಹಾಗೂ ರೂ.೧೦೦ ದರದಲ್ಲಿ ಬಳ್ಳಿ ಮಾರಿದರು. ಇದರಿಂದ ಗಳಿಸಿದ ಆದಾಯ ರೂಪಾಯಿ ಒಂದು ಲಕ್ಷ ದಾಟಿದೆ. “ಬೇಡಿಕೆ ಇರೋದನ್ನ ಬೆಳೆಸಿ, ಸಕಾಲದಲ್ಲಿ ಮಾರಿದರೆ ಲಾಭ ಖಂಡಿತ” ಎನ್ನುತ್ತಾ ಮುಗುಳ್ನಕ್ಕರು ಶ್ಯಾಮಪ್ರಸಾದ್.
ಫೋಟೋ: ಶ್ಯಾಮಪ್ರಸಾದರ ಮಾತಿನ ದ್ವನಿಮುದ್ರಣ - ಶ್ಯಾಮ ಭಟ್ ಅವರಿಂದ