ಮುಲ್ಲಘ್ ಮೆಡಲ್ ಎಂದರೇನು?
ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಬಾರ್ಡರ್ - ಗಾವಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳು ಈಗಾಗಲೇ ನಡೆದು ಇತ್ತಂಡಗಳೂ ೧-೧ ಸಮಬಲದಲ್ಲಿವೆ. ಮೊದಲ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಭಾರತ ‘ಬಾಕ್ಸಿಂಗ್ ಡೇ’ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ವಿಜಯದ ಮಾಲೆ ಧರಿಸಿದೆ. ಕ್ರಿಸ್ ಮಸ್ ಹಬ್ಬದ ಮರುದಿನ ನಡೆಯುವ ಟೆಸ್ಟ್ ಪಂದ್ಯಗಳನ್ನು ‘ಬಾಕ್ಸಿಂಗ್ ಡೇ’ ಪಂದ್ಯವೆಂದು ಕರೆಯುತ್ತಾರೆ. ಆಸ್ಟ್ರೇಲಿಯಾದಲ್ಲಂತೂ ಇದೊಂದು ಸಂಪ್ರದಾಯವೇ ಆಗಿಹೋಗಿದೆ. ಪ್ರತೀ ವರ್ಷ ಮೆಲ್ಬರ್ನ್ ಕೀಡಾಂಗಣದಲ್ಲಿ ಡಿಸೆಂಬರ್ ೨೬ರಂದು ‘ಬಾಕ್ಸಿಂಗ್ ಡೇ’ ಪಂದ್ಯ ನಡೆದೇ ನಡೆಯುತ್ತೆ. ಈ ವರ್ಷ ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲೂ ‘ಬಾಕ್ಸಿಂಗ್ ಡೇ’ ದಿನದಂದು ಟೆಸ್ಟ್ ಪಂದ್ಯಾವಳಿಗಳು ನಡೆದಿವೆ.
ನಾನು ಈಗ ಹೇಳಹೊರಟಿರುವುದು ಮುಲ್ಲಘ್ ಮೆಡಲ್ ಕುರಿತು. ಈ ವರ್ಷ ‘ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಟರಾದವರಿಗೆ ಮುಲ್ಲಘ್ ಮೆಡಲ್ ನೀಡಲಾಗಿದೆ. ಈ ವರ್ಷದಿಂದ ಈ ಮೆಡಲ್ ನೀಡುವ ಯೋಜನೆಯನ್ನು ‘ಕ್ರಿಕೆಟ್ ಆಸ್ಟ್ರೇಲಿಯಾ’ ಪ್ರಾರಂಭಿಸಿದೆ. ಯಾರು ಈ ಮುಲ್ಲಘ್? ಇವರ ಪೂರ್ತಿ ಹೆಸರು ಜಾನಿ ಮುಲ್ಲಘ್ (Johnny Mullagh). ಇವರು ೧೯ನೇ ಶತಮಾನದಲ್ಲಿ ಆಸ್ಟ್ರೇಲಿಯಾ ಪರವಾಗಿ ಆಟವಾಡಿದ ಆಲ್ ರೌಂಡರ್ ಕ್ರಿಕೆಟಿಗ (೧೮೪೧-೧೮೯೧). ಬಲಗೈ ಬ್ಯಾಟ್ಸ್ ಮೆನ್ ಹಾಗೂ ಬಲಗೈ ಬೌಲರ್. ಇವರು ಯಾವುದೇ ಅಧಿಕೃತ ಟೆಸ್ಟ್ ಅಥವಾ ಒಂದು ದಿನದ ಪಂದ್ಯವನ್ನು ಆಡದೇ ಇದ್ದರೂ ಇಂಗ್ಲೆಂಡ್ ವಿರುದ್ಧ ಹಲವಾರು ಪಂದ್ಯಗಳನ್ನು ಆಡಿದ್ದಾರೆ.
ಆಸ್ಟ್ರೇಲಿಯಾದ ಮೂಲ ನಿವಾಸಿಯಾದ ಇವರು ಪ್ರಥಮ ಬಾರಿಗೆ ದೇಶೀಯ ಕ್ರಿಕೆಟ್ ತಂಡವನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ದ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆಯನ್ನು ಗಮನಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಜಾನಿ ಮುಲ್ಲಘ್ ಸ್ಮರಣಾರ್ಥ ‘ಮುಲ್ಲಘ್ ಮೆಡಲ್' ಅನ್ನು ಡಿಸೆಂಬರ್ ೨೦೧೯ರಲ್ಲಿ ಘೋಷಣೆ ಮಾಡಿತ್ತು. ಅದರ ಪ್ರಕಾರ ೨೦೨೦ರಿಂದ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಪಂದ್ಯಶ್ರೇಷ್ಟರಾಗುವ ಆಟಗಾರನಿಗೆ ಈ ಮೆಡಲ್ ದೊರೆಯಲಿದೆ. ಈ ವರ್ಷ ಈ ಗೌರವಕ್ಕೆ ಪಾತ್ರರಾದದ್ದು ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯ ರೆಹನೆ. ರೆಹಾನೆಯವರ ಆಕರ್ಷಕ ಶತಕ ಹಾಗೂ ಜಾಣತನದ ನಾಯಕತ್ವದ ನೆರವಿನಿಂದ ಭಾರತ ಈ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಅಜಿಂಕ್ಯ ರೆಹಾನೆ ಮುಲ್ಲಘ್ ಮೆಡಲ್ ಪಡೆದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೆ ಪಾತ್ರರಾದರು.
ಅಧಿಕ ಮಾಹಿತಿ: ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇನ್ನೊಂದು ಅಪರೂಪದ ದಾಖಲೆ ಭಾರತದ ಆಟಗಾರರ ಪಾಲಿಗೆ ಒಲಿದಿದೆ. ಈ ಪಂದ್ಯದಲ್ಲಿ ಆಟವಾಡಿದ ಎಲ್ಲಾ ೧೧ ಮಂದಿಗೂ ವಿದೇಶದಲ್ಲಿ ಚೇಸಿಂಗ್ ಮಾಡಿ ಜಯಿಸಿದ ಮೊದಲ ಅನುಭವ ಇದು. ೧೦ ವರ್ಷಗಳ ಹಿಂದೆ ಶ್ರೀಲಂಕಾದ ಕೊಲಂಬೋದಲ್ಲಿ ಹೀಗೆ ಚೇಸ್ ಮಾಡಿ ಭಾರತ ಶೀಲಂಕಾ ಎದುರು ಜಯ ದಾಖಲಿಸಿತ್ತು. ತಂಡದ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಹಿಂದೆ ಬಂದ ಕಾರಣ ಅವರಿಗೆ ಈ ದಾಖಲೆಯಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿತು. ಭಾರತ ಸುಮಾರು ೧೭ ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಚೇಸಿಂಗ್ ಮಾಡಿ ಜಯಶಾಲಿಯಾಗಿದೆ. ತಂಡದ ಎಲ್ಲಾ ೧೧ ಆಟಗಾರರಿಗೆ ಇದೊಂದು ಸ್ವಾರಸ್ಯಕರವಾದ ಅನುಭವ.
ಚಿತ್ರದಲ್ಲಿ: ಮುಲ್ಲಘ್ ಮೆಡಲ್ ಗೆದ್ದ ಅಜಿಂಕ್ಯ ರೆಹಾನೆ ಮತ್ತು ಜಾನಿ ಮುಲ್ಲಘ್ ಭಾವಚಿತ್ರ
ಮುಲ್ಲಘ್ ಮೆಡಲ್ ಚಿತ್ರ.
ಚಿತ್ರಗಳು: ಅಂತರ್ಜಾಲ ಕೃಪೆ