ಮುಲ್ಲಾ ಕತೆ: ೩: ಆಚೆ ಈಚೆ ೪: ಒಂಟೆ ೫: ಕತ್ತೆ ಮನುಷ್ಯ
೩. ಆಚೆ ಈಚೆ
ಮುಲ್ಲಾ ಒಮ್ಮೆ ನದಿಯ ದಡದಲ್ಲಿ ಕೂತಿದ್ದ. ಇನ್ನೊಂದು ದಡದಲ್ಲಿದ್ದ ಒಬ್ಬಾತ “ಆಚೆ ದಡಕ್ಕೆ ಹೋಗುವುದು ಹೇಗೆ?” ಎಂದು ಕೂಗಿ ಕೇಳಿದ. ”ನೀನು ಆಗಲೇ ಆಚೆ ದಡದಲ್ಲಿದ್ದೀಯಲ್ಲ” ಎಂದು ಈ ದಡದಿಂದ ಮುಲ್ಲಾ ಕೂಗಿದ!
೪ ಒಂಟೆ
ಒಮ್ಮೆ ಮುಲ್ಲಾ ನಸ್ರುದ್ದೀನ್ ಒಂಟೆಯ ಮೇಲೆ ಕೂತು ಹಳ್ಳಿಹಗೆ ಬಂದ. ಒಂಟೆಗೋ ಬಹಳ ವೇಗವಿತ್ತು. ಕಣ್ಣು ಮುಚ್ಚಿತೆರೆಯುವುದರೊಳಗೆ ಇಡೀ ಹಳ್ಳಿ ಸುತ್ತಿ ಹೊರಟು ಹೋದ ಮುಲ್ಲಾ. ಜನರೆಲ್ಲ ಕಣ್ಣು ಬಿಟ್ಟುಕೊಂಡು ನೋಡುತ್ತನಿಂತಿದ್ದರು. ಮಾರನೆಯ ದಿನವೂ ಅದೇ ಕತೆ. ಒಂಟೆಯ ಮೇಲೆ ಕೂತೇ ಮುಲ್ಲಾ ಸುತ್ತ ಕಣ್ಣಾಡಿಸುತ್ತಿದ್ದ. ಜನ ಬಾಯಿ ತೆರೆದು ನೋಡುತ್ತಲೇ ಇದ್ದರು. ಮತ್ತೆ ಮರುದಿನವೂ ಅದೇ ಕತೆ. ಈ ಬಾರಿ ಒಬ್ಬ ಪುಟ್ಟ ಹುಡುಗ ಒಂಟೆಯ ದಾರಿಗೆ ಅಡ್ಡ ನಿಂತು ಕೇಳಿದ: “ಏನು ಹುಡುಕುತಿದ್ದೀ ಮುಲ್ಲಾ?” “ನನ್ನ ಒಂಟೆ ಎಲ್ಲೋ ಹೋಗಿಬಿಟ್ಟಿದೆ. ನೀನೇನಾದರೂ ಕಂಡೆಯಾ?” ಎಂದ ಮುಲ್ಲಾ. [“ಎತ್ತನೇರಿ ಎತ್ತನರಸುವರು” ಎಂಬುದು ಅಲ್ಲಮನ ಒಂದು ವಚನ. ನಮ್ಮೊಳಗೇ ಇರುವ ದೈವಿಕತೆ ತಿಳಿಯದೆ ಎಲ್ಲೋ ಹುಡುಕುತ್ತೇವಲ್ಲವೆ!]
೬ ಕತ್ತೆ ಮನುಷ್ಯ
ಪಕ್ಕದ ಮನೆಯಾತ ಮುಲ್ಲಾನ ಬಳಿಗೆ ಬಂದು “ಅಯ್ಯಾ, ನಿನ್ನ ಕತ್ತೆಯನ್ನು ಇವತ್ತು ಕೊಟ್ಟಿರು. ನಾನು ಪಕ್ಕದ ಊರಿಗೆ ಮನೆಯ ಸಾಮಾನು ಸಾಗಿಸಬೇಕಾಗಿದೆ” ಎಂದ. ಅವನಿಗೆ ಕತ್ತೆಯನ್ನು ಕೊಡುವುದು ಮುಲ್ಲಾನಿಗೆ ಇಷ್ಟವಿರಲಿಲ್ಲ. ಆದರೂ ಸೌಜನ್ಯಕ್ಕೆಂಬಂತೆ “ಅಯ್ಯೋ, ನನ್ನ ಕತ್ತೆ ಇಲ್ಲವಲ್ಲ! ಇವತ್ತು ಬೇರೆ ಯಾರಿಗೋ ಕೊಟ್ಟು ಕಳಿಸಿದ್ದೇನೆ” ಎಂದ. ಅಷ್ಟು ಹೊತ್ತಿಗೆ ಹಿತ್ತಲಿನಲ್ಲಿದ್ದ ಕತ್ತೆ ಜೋರಾಗಿ ಒದರಿತು. “ಸುಳ್ಳು ಹೇಳುತ್ತಿದ್ದೀಯಲ್ಲಾ ಮುಲ್ಲಾ! ಕತ್ತೆ ನಿನ್ನ ಹಿತ್ತಲಲ್ಲೇ ಇದೆ!” ಎಂದ ನೆರಮನೆಯವನು. “ನೀನು ಯಾರ ಮಾತು ನಂಬುತ್ತೀಯೆ, ಕತ್ತೆಯ ಮಾತನ್ನೋ, ಮನುಷ್ಯನ ಮಾತನ್ನೋ?” ಎಂದ ಮುಲ್ಲಾ.