ಮುಳುಗಿದ ಸ್ವರ್ಗ ಟೈಟಾನಿಕ್

ಮುಳುಗಿದ ಸ್ವರ್ಗ ಟೈಟಾನಿಕ್

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ನಟರಾಜ್
ಪ್ರಕಾಶಕರು
ಸುಧನ್ವ ಪಬ್ಲಿಕೇಷನ್ಸ್, ಜೆ ಪಿ ನಗರ ೧ನೇ ಹಂತ, ಬೆಂಗಳೂರು. ದೂ: ೯೯೮೬೧೦೯೧೫೪
ಪುಸ್ತಕದ ಬೆಲೆ
ರೂ. ೧೪೦.೦೦, ಮುದ್ರಣ: ೨೦೨೨

ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ ಹೊರಬಂದಿರುವ ಹೊಸ ಪುಸ್ತಕ ‘ಮುಳುಗಿದ ಸ್ವರ್ಗ ಟೈಟಾನಿಕ್'. ಲೇಖಕರಾದ ಕೆ ನಟರಾಜ್ ಅವರು ಸಾಗರ ಸುಂದರಿ ಟೈಟಾನಿಕ್ ಮುಳುಗಿದ ಕಥೆ-ವ್ಯಥೆಯನ್ನು ಹೇಳಲು ಹೊರಟಿದ್ದಾರೆ. 

ಕೆ.ನಟರಾಜ್ ಅವರು ವಿಜ್ಞಾನ ಮತ್ತು ಇತಿಹಾಸದ ಲೇಖಕರು. ಉತ್ತಮ ಕವಿಯೂ ಹೌದು. ಶಿವಮೊಗ್ಗ ಇವರ ಮೂಲಸ್ಥಾನ. ಇತಿಹಾಸದ ಅನ್ವೇಷಕರು. ಮಾನವ ಇಟ್ಟ ಇತಿಹಾಸದ ಹೆಜ್ಜೆಗಳನ್ನು ಅವಲೋಕಿಸುವುದು ಇವರ ಹವ್ಯಾಸ.

‘ಟೈಟಾನಿಕ್' ಸಾಗರ ಸುಂದರಿ, ಅಂದಿನ ಕಾಲದ ಅತ್ಯಂತ ವೈಭವೋಪೇತ ಹಡಗಾಗಿತ್ತು. ಎಲ್ಲರೂ ‘ಎಂದೂ ಮುಳುಗದ ಹಡಗು' ಎಂದೇ ವ್ಯಾಖ್ಯಾನಿಸುತ್ತಿದ್ದರು. ಅಂದು ಐರ್ಲ್ಯಾಂಡಿನ ಸೌಥಾಂಪ್ಟನ್ ಹಡಗು ನೆಲೆಯಿಂದ ಪ್ರಥಮ ಪ್ರಯಾಣ ಆರಂಭಿಸಿದಾಗ ಅದರ ಬೀಳ್ಗೊಡುಗೆಗೇ ಒಂದು ಲಕ್ಷ ಜನ ಸೇರಿದ್ದರಂತೆ! ಅದೊಂದು ಕಡಲ ರಾಣಿಯಾಗಿತ್ತು. ಅದರ ವೈಭೋಗಕ್ಕೆ ಸಾಟಿಯೇ ಇರಲಿಲ್ಲ. ಅದು ಮಾನವನ ಯಂತ್ರ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅಂದು ಅದರಲ್ಲಿ ಪ್ರಯಾಣಿಸುವುದೇ ಒಂದು ಪ್ರತಿಷ್ಟೆಯ ವಿಷಯವಾಗಿತ್ತು!

೧೦, ಎಪ್ರಿಲ್ ೧೯೧೨ರಂದು ತನ್ನ ಪ್ರಯಾಣವನ್ನು ಐರ್ಲ್ಯಾಂಡಿನ ಸೌಥಾಂಪ್ಟನ್ ನೌಕಾ ನೆಲೆಯಿಂದ ಅದು ಅಮೇರಿಕಾದ ನ್ಯೂಯಾರ್ಕ್ ನಗರಕ್ಕೆ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಕೇವಲ ೬೦೦ ಕಿ.ಮೀ.ಪ್ರಯಾಣಿಸಿ ದಿನಾಂಕ ೧೪, ಎಪ್ರಿಲ್ ೧೯೧೨ ರಾತ್ರಿ ಅಟ್ಲಾಂಟಿಕ್ ಸಾಗರದ ದಕ್ಷಿಣದ ನ್ಯೂ ಫೌಂಡ್ ಲ್ಯಾಂಡಿನ ಸಮುದ್ರದ ನೀರ್ಗಲ್ಲಿಗೆ ಢಿಕ್ಕಿ ಹೊಡೆದು ಕೆಲವೇ ಗಂಟೆಗಳಲ್ಲಿ ಸಾಗರದ ತಳದಲ್ಲಿ ಮುಳುಗಿ ಹೋಯಿತು. ಆಗ ಹಡಗಿನಲ್ಲಿದ್ದ ಒಟ್ಟು ಪ್ರಯಾಣಿಕರು ಹಾಗೂ ಸಿಬ್ಬಂದಿ ೨,೨೨೪. ಅದರಲ್ಲಿ ಸುಮಾರು ೧,೫೦೦ ಜನ ಮುಳುಗಿ ಸತ್ತರು. ಉಳಿದವರು ಲೈಫ್ ಬೋಟ್ ಗಳಲ್ಲಿ ತಮ್ಮ ಪ್ರಾಣ ಉಳಿಸಿಕೊಂಡರು. ಇದೊಂದು ಐತಿಹಾಸಿಕ ಘಟನೆ ಎನ್ನುತ್ತಾರೆ ಲೇಖಕರು.  

ಲೇಖಕರು ತಮ್ಮ ಮುನ್ನುಡಿಯಾದ ‘ಮುಳುಗಿದ ಸ್ವರ್ಗಕ್ಕೆ ಮುನ್ನ...' ದಲ್ಲಿ “ಏನಿತ್ತು ..ಏನಿರಲಿಲ್ಲ..ಹೇಳಿ ಆ ಟೈಟಾನಿಕ್ ನಲ್ಲಿ? ಅದನ್ನು ‘ಸಾಗರಕ್ಕಿಳಿದ ಸ್ವರ್ಗ' ಎಂದೇ ಕರೆಯಲಾಗುತ್ತಿತ್ತು. ಸಾಗರ ಯಾನದ ಪ್ರತಿಷ್ಟೆಗಾಗಿಯೇ ಆ ಹಡಗನ್ನು ಕಟ್ಟಲಾಗಿತ್ತು. ಅದು ಮನುಷ್ಯನ ಅಂದಿನ ತಾಂತ್ರಿಕ ಪ್ರಗತಿಯ ಪ್ರತೀಕವೇ ಆಗಿತ್ತು ಆ ಟೈಟಾನಿಕ್ ಹಡಗು ! ಆದರೆ ಅದು ಅಂದು ನೀರಿನ ಮೇಲೆ ಮರಳುಗೂಡು ಕಟ್ಟಿದಂತೆ ಕ್ಷಣಾರ್ಧದಲ್ಲಿ ಕರಗಿಹೋಗಿತ್ತು. ನೀರಿಗಿಳಿದ ಕೆಲವೇ ದಿನಗಳ ಪ್ರಯಾಣದಲ್ಲಿ ದುರ್ಘಟನೆ ಸಂಭವಿಸಿ ಅದು ಅಟ್ಲಾಂಟಿಕ್ ಸಾಗರದ ತಳ ಸೇರಿ ಹೋಗಿತ್ತು.

ಮಾನವ ಪ್ರಯತ್ನಗಳು ಶ್ಲಾಘನೀಯವೇ ಸರಿ. ಆದರೂ ಪ್ರಕೃತಿಯ ಜೊತೆ ನಾವು ಸಾಗುವಾಗ ಅದರ ಅಗಾಧ ಶಕ್ತಿಯ ಅರಿವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಪ್ರಕೃತಿಯ ಜೊತೆ ನಮ್ಮ ಎದೆಗಾರಿಕೆ ವಿನಾಶವನ್ನೂ ತರಬಹುದು ಎಂಬುದನ್ನು ಈ ‘ಟೈಟಾನಿಕ್' ಕೃತಿಯಲ್ಲಿ ಕಾಣಬಹುದು. ಮಾನವನಿಗೆ ತನ್ನ ಇತಿ-ಮಿತಿಗಳ ಅರಿವು ಇರಬೇಕಾದದ್ದು ಅತ್ಯಗತ್ಯ. ಇಲ್ಲವಾದಲ್ಲಿ ಭೀಕರ ದುರಂತಗಳು ಸಂಭವಿಸಿ ಅಪಾರ ಪ್ರಾಣ ಹಾನಿ ಸಂಭವಿಸಿ ಬಿಡುತ್ತದೆ. ಇಂತಹ ಘಟನೆಗಳು ಮಾನವನ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ಉಳಿದು ಬಿಡುತ್ತದೆ.” ಎಂದಿದ್ದಾರೆ ಕೃತಿಕಾರರು. 

೧೮ ಅಧ್ಯಾಯಗಳನ್ನು ಪರಿವಿಡಿಯಲ್ಲಿ ನೀಡಲಾಗಿದೆ. ಟೈಟಾನಿಕ್ ಸುಂದರಿಯ ಯಾನದ ಆರಂಭದಿಂದ ಮುಳುಗಡೆ, ಪ್ರಯಾಣಿಕರ ಭೀಕರ ಅನುಭವಗಳು, ಹಡಗಿನ ಇತಿಹಾಸ ಬಗ್ಗೆ ಎಲ್ಲಾ ವಿವರಗಳನ್ನು ನೀಡಲಾಗಿದೆ. ಪುಸ್ತಕದ ಬಹುಮುಖ್ಯ ಹೈಲೈಟ್ ಎಂದರೆ ಹಡಗಿನ ಹಾಗೂ ಹಡಗಿನ ಕೆಲವು ಪ್ರಯಾಣಿಕರ ವಿವರಗಳ ಜೊತೆಗೆ ಭಾವಚಿತ್ರವನ್ನೂ ನೀಡಿರುವುದು. ಇದನ್ನು ಗಮನಿಸುವಾಗ ಈ ಪುಸ್ತಕ ರಚನೆಗೆ ಲೇಖಕರು ಬಹಳಷ್ಟು ಶ್ರಮವಹಿಸಿದ್ದು ಗಮನಕ್ಕೆ ಬರುತ್ತದೆ. ೧೨೪ ಪುಟಗಳ ಈ ಪುಸ್ತಕವನ್ನು ಬಹುಬೇಗನೇ ಓದಿ ಮುಗಿಸಬಹುದು. ಏಕೆಂದರೆ ಇದೊಂದು ದುರಂತದ ಕಥೆಯಾದರೂ ಪತ್ತೇದಾರಿ ಕಾದಂಬರಿಯಂತೆ ಕುತೂಹಲ ಕೆರಳಿಸುತ್ತಾ ಓದಿಸಿಕೊಂಡು ಹೋಗುತ್ತದೆ.