ಮುಷ್ಕರ ಪ್ರತಿಭಟನೆಗಳ ನಾಡಿನಲ್ಲಿ ಒಂದು ದಿನ

ಮುಷ್ಕರ ಪ್ರತಿಭಟನೆಗಳ ನಾಡಿನಲ್ಲಿ ಒಂದು ದಿನ

ಬರಹ

 
(ನಗೆ ನಗಾರಿ ಮುಷ್ಕರ ವಿರೋಧಿ ಬ್ಯೂರೊ)

ಲಾರಿಗಳ ಮುಷ್ಕರ ಏಳನೆಯ ದಿನ ಪೂರೈಸಿದೆ. ತೈಲ ಕಂಪೆನಿಗಳ ಮುಷ್ಕರ ಮೂರು ದಿನ ನಡೆದಿದೆ.
ಸ್ಟೇಟ್ ಬ್ಯಾಂಕ್ ನೌಕರರ ಮುಷ್ಕರವನ್ನು ನಾವು ಕಂಡಿದ್ದೇವೆ. ದಿನಗೂಲಿ ನೌಕರರ ಮುಷ್ಕರ
ದಿನಪತ್ರಿಕೆಗಳಲ್ಲಿ ಸರ್ವೇ ಸಾಮಾನ್ಯ ಎಂಬ ಸ್ಥಿತಿ ನಮ್ಮಲ್ಲಿದೆ. ಆಕಾಶದಲ್ಲಿ ಹಾರುವ ವಿಮಾನಗಳ
ಪೈಲಟ್‌ಗಳು ಅವನ್ನು ಸುರಕ್ಷಿತವಾಗಿ ಭೂಮಿಯ ಮೇಲಿಳಿಸಿ ಮುಷ್ಕರ ಶುರು ಮಾಡುತ್ತಾರೆ. ವೈದ್ಯರು
ಆಸ್ಪತ್ರೆ ಮುಚ್ಚಿ ಮುಷ್ಕರ ಮಾಡುತ್ತಾರೆ. ವೈದ್ಯ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿ
ಮುಷ್ಕರ ಮಾಡುತ್ತಾರೆ. ವೈದ್ಯ ವಿದ್ಯಾರ್ಥಿಗಳ ವಿರುದ್ಧ ಒಂದು ತಂಡ ಮುಷ್ಕರ ಮಾಡುತ್ತದೆ. ಆಟೋಗಳು
ಸಾಲಾಗಿ ರಸ್ತೆಯ ಪಕ್ಕ ನಿಂತು ಮುಷ್ಕರ ನಡೆಸುತ್ತವೆ. ರಸ್ತೆಯ ಮಧ್ಯೆ ಕಲ್ಲು ಇಟ್ಟು ರಸ್ತೆ ತಡೆ
(ರಸ್ತೆ ಎಲ್ಲಿಗೆ ಹೋಗುತ್ತಿತ್ತೋ ಎನ್ನುವಂತೆ ಇವರು ಅದನ್ನು ತಡೆಯುತ್ತಾರೆ!) ನಡೆಸಿ ಕೆಲವರು
ಮುಷ್ಕರ ನಡೆಸುತ್ತಾರೆ. ಹತ್ತು ನಿಮಿಷ ರಸ್ತೆ ಗುಡಿಸುವ ವ್ಯಾಯಾಮ ಮಾಡಿ ಕೆಲವರು ಪ್ರತಿಭಟನೆ
ನಡೆಸುತ್ತಾರೆ. ಉಪವಾಸ ಸತ್ಯಾಗ್ರಹ ಕೆಲವರದ್ದು. ಕಪ್ಪು ಟೋಪಿ, ಕನ್ನಡಕದ ಕನ್ನಡದ ಕಂದಮ್ಮಗಳು
ಪ್ರತಿಭಟನೆ ನಡೆಸುವ ನಾನಾ ವಿಧಾನಗಳ ಬಗ್ಗೆ ಪಿ ಎಚ್ ಡಿಯನ್ನೇ ನಡೆಸುವಷ್ಟು ಪಾಂಡಿತ್ಯ
ಗಳಿಸಿಕೊಂಡಿದ್ದಾರೆ.

ಮುಷ್ಕರ ಎಂಬುದು ಎಷ್ಟು ಸಹಜವಾದದ್ದು ಎಂಬ ಬಗ್ಗೆ ಇತ್ತೀಚೆಗಷ್ಟೇ ಬುದ್ಧಿಜೀವಿ ಪದವಿ
ಗಳಿಸಿಕೊಂಡಿರುವ ಮಾಜಿ ಚಿಂತಕರೊಬ್ಬರು ನೀಡಿದ ವಿವರಣೆ ಹೀಗಿದೆ: ಮುಷ್ಕರ ಪ್ರತಿಭಟನೆ ಮನುಷ್ಯನ
ಸಹಜ ಸ್ವಭಾವ. ಪ್ರಕೃತಿಯೂ ಇದಕ್ಕೆ ಹೊರತಾಗಿಲ್ಲ. ತನಗಿಷ್ಟವಾಗದ್ದನ್ನು ಬಾಯಿಗಿಟ್ಟರೆ ಅದನ್ನು
ಹೊರಕ್ಕೆ ಕಕ್ಕಿ ನಾಲಿಗೆ ಪ್ರತಿಭಟಿಸುತ್ತದೆ, ಅಪಥ್ಯವಾದದ್ದನ್ನು ಹೊಟ್ಟೆಗೆ ತುರುಕಿದರೆ ಅದು
ಸೇಫ್ಟಿ ವಾಲ್ವ್ ಬಿಚ್ಚಿ ಹೊರಕ್ಕೆ ದಬ್ಬಿ ಬಿಡುತ್ತದೆ. ತರಗತಿಯಲ್ಲಿ ಅಪ್ರಿಯವಾದ ಪಾಠವನ್ನು
ತಲೆಗೆ ತುಂಬುವ ಪ್ರಯತ್ನ ಮಾಡಿದರೆ ವಿದ್ಯಾರ್ಥಿಗಳ ದೇಹ ಮೆದುಳನ್ನೇ ಸ್ಥಗಿತ ಗೊಳಿಸಿ ಅಸಂಖ್ಯಾತ
ಆಕಳಿಗೆಳ ಬಾಣಗಳನ್ನೆಸೆದು, ತೂಕಡಿಕೆಗಳ ಬಾಂಬುಗಳನ್ನು ತೂರಿ ಪ್ರತಿಭಟನೆ ನಡೆಸುತ್ತದೆ. ಒಂದು
ಕಿವಿಗೆ ಹಾಕಿದ ಹಿತವಚನವನ್ನು ಮತ್ತೊಂದು ಕಿವಿಯಾಚೆ ದಾಟಿಸಿ ಮುಷ್ಕರ ಹೂಡುವ ತಲೆಗಳೂ ಅನೇಕ ಇವೆ.
ಕೈ ಕಾಲು ಮುಷ್ಕರ ಹೂಡುವುದು ಸೋಮಾರಿ ದೇಶಗಳಲ್ಲಿ ಹೆಚ್ಚು. ಕಾರ್ಮಿಕರ ಹಕ್ಕುಗಳು ಅಲ್ಲಿ ಬಹಳ
ಮಹತ್ವವನ್ನು ಪಡೆಯುತ್ತವೆ.

ಮುಷ್ಕರದ ಲಾಭಗಳ ಬಗ್ಗೆ ಪ್ರಶ್ನಿಸಲಾಗಿ ಬೆಂಗಳೂರಿನ ಜವಾಬ್ದಾರಿಯುತ ನಾಗರೀಕರೊಬ್ಬರು
ಉತ್ತರಿಸಿದ್ದು ಹೀಗೆ: ಮುಷ್ಕರಗಳಿಂದ ಬೆಲೆ ಏರಿಕೆ ಆಗುತ್ತ, ಮಾರ್ಕೆಟಿನಲ್ಲಿ ತರಕಾರಿ, ಆಹಾರ
ಧಾನ್ಯದ ಬೆಲೆ ಏರಿಕೆಯಾಗುತ್ತದೆ ಎಂಬುದು ಸುಳ್ಳು ನೋಡಿ ನಾನು ಇದೀಗ ತಾನೆ ಇಲ್ಲಿನ ಮಾಲ್‌ನಲ್ಲಿ
ವ್ಯಾಪಾರ ಮಾಡಿಕೊಂಡು ಬಂದೆ. ಈ ಕೋಕ್‌ನ ಎಂಆರ್‌ಪಿ ಹಿಂದೆ ಇದ್ದಷ್ಟೇ ಇದೆ. ಈ ಸಿಗರೇಟ್ ಪ್ಯಾಕು
ಒಂದು ಪೈಸೆ ಕೂಡ ಏರಿಕೆಯಾಗಿಲ್ಲ. ಇದೆಲ್ಲಾ ಜನರನ್ನು ದಾರಿ ತಪ್ಪಿಸಲು ನಡೆಸಲಾಗುತ್ತಿರುವ
ಅಪಪ್ರಚಾರ. ಹಾಗೆ ನೋಡಿದರೆ ಮುಷ್ಕರದಿಂದ ನಮಗ ಅಪಾರ ಸಮಯ ಉಳಿಯುತ್ತದೆ. ಆಟೋದವರು, ಲಾರಿಯವರು
ಮುಷ್ಕರ ಮಾಡಿದರೆ ರಸ್ತೆ ಹಾಯಾಗಿರುತ್ತದೆ. ನಾವು ರಾತ್ರಿ ಒಂದು ತಾಸು ಹೆಚ್ಚು ಟಿವಿ ನೋಡಿ,
ಬೆಳಿಗ್ಗೆ ಹೆಚ್ಚಿನ ಸಮಯದವರೆಗೆ ನಿದ್ರೆಯನ್ನು ಮಾಡಿ ತಡವಾಗಿ ಹೊರಟರೂ ಸರಿಯಾದ ಸಮಯಕ್ಕೆ ಆಫೀಸು
ತಲುಪಿ ಮತ್ತೆ ನಿದ್ರೆಗೆ ಜಾರಬಹುದು. ಟ್ರಾಫಿಕ್ ಹೆಚ್ಚಾಗಿದ್ದರೆ ತಲೆ ಕೆಟ್ಟು ಹೋಗಿ ಆಫೀಸಿಗೆ
ಹೋದ ತಕ್ಷಣ ನಿದ್ದೆಯೇ ಬರದು. ಯಾರೇ ಮುಷ್ಕರ ಮಾಡಿದರೂ ಈ ಮೊಬೈಲು ಕಂಪೆನಿಯವರು, ಇಂಟರ್ನೆಟ್ಟು
ಮುಷ್ಕರ ಹೂಡಲೇ ಬಾರದು. ಎಂಥದ್ದೇ ಅನ್ಯಾಯ ನಡೆಯುತ್ತಿದ್ದರೂ ಟಿವಿ ಚಾನೆಲ್ಲುಗಳನ್ನು ಬಂದ್
ಮಾಡಬಾರದು, ಸಿನೆಮಾ ಥಿಯೇಟರುಗಳನ್ನು ಮುಚ್ಚಿಸಬಾರದು - ಸರಕಾರ ಇದರ ಗಮನ ವಹಿಸಬೇಕು.

ವರದಿಗಾರಿಕೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಸಮಸ್ಯೆಯ ನಿವಾರಣೆಗೆ
ರಚನಾತ್ಮಕವಾದ ಪರಿಹಾರವನ್ನೂ ಸೂಚಿಸಬೇಕು ಎಂಬುದು ನಗೆ ಸಾಮ್ರಾಟರು ಪತ್ರಿಕೋದ್ಯಮದ ತರಗತಿಯಲ್ಲಿ
ಕಲಿತ ಪಾಠ. ಹೀಗಾಗಿ ಅವರು ಮುಷ್ಕರ, ಪ್ರತಿಭಟನೆ ಬಂದ್ ಗಳಿಂದ ಜನರಿಗೆ ಆಗುವ ಅನನುಕೂಲ ಹಾಗೂ
ಅವ್ಯವಸ್ಥೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡು ಕನಿಷ್ಠ ಮೂರು ದಿನ ಬಂದ್
ಆಚರಿಸಲು ಕರೆಕೊಡುವ ತೀರ್ಮಾನ ಮಾಡಿದ್ದಾರೆ.