ಮುಸ್ಲಿಮರು ನಮ್ಮವರೇ ಅಥವಾ…
ಮೀಸಲಾತಿಯನ್ನು ವಿರೋಧಿಸುತ್ತಿರುವವರೇ ಕಡಳೇಪುರಿಯಂತೆ ಮೀಸಲಾತಿ ಹಂಚುತ್ತಿದ್ದಾರೆ. ತೀರಾ ಕೆಳಮಟ್ಟದ ರಾಜಕೀಯ ತೀರ್ಮಾನ ಮತ್ತು ಸಮಾಜಕ್ಕೆ ಹಾನಿಕಾರಕ ನೀತಿ. ಮುಸ್ಲಿಮರು ಭಾರತೀಯ ಪ್ರಜೆಗಳೇ ಅಥವಾ ವಿದೇಶಿಯರೇ ಎಂಬುದು ಮೊದಲು ತೀರ್ಮಾನವಾಗಲಿ ಅಥವಾ ಎರಡನೆಯ ದರ್ಜೆಯ ನಾಗರಿಕರು ಎಂದಾದರೂ ಸಂವಿಧಾನಾತ್ಮಕವಾಗಿ ಅಧೀಕೃತ ಗೊಳಿಸಿ. ಆಗ ಸರ್ಕಾರಗಳ ತೀರ್ಮಾನಗಳನ್ನು ಪ್ರಶ್ನಿಸುವುದಿಲ್ಲ. ಇಲ್ಲದಿದ್ದರೆ ಈ ರೀತಿಯ ಅನ್ಯಾಯ ಮತ್ತು ತಾರತಮ್ಯವನ್ನು ಪ್ರಶ್ನಿಸಲೇ ಬೇಕು.
ಕ್ರಿಮಿನಲ್ ಅಪರಾಧದ ಕಾನೂನುಗಳನ್ನು, ಧಾರ್ಮಿಕ ಸ್ವಾತಂತ್ರ್ಯದ ನಿಯಮಗಳನ್ನು ಏಕ ಪ್ರಕಾರವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸುವವರು ಏಕಾಏಕಿ ಅವರಿಗೆ ನೀಡಿದ್ದ ಮೀಸಲಾತಿಯನ್ನು ತೆಗೆದು ಅದರಲ್ಲಿ ಸ್ವಲ್ಪ ಪ್ರಮಾಣವನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚುವುದು ಮತ್ತು ಅದನ್ನು ಆ ಸಮುದಾಯಗಳು ಸ್ವೀಕರಿಸುವುದು ಅವಮಾನಕರವಲ್ಲವೇ?
ನನ್ನ ಸಾಮಾಜಿಕ ಅನುಭವದ ಆಧಾರದ ಮೇಲೆ ಹೇಳುವುದಾದರೆ ಆದಿವಾಸಿಗಳು ಮತ್ತು ದಲಿತ ಸಮುದಾಯಗಳಲ್ಲೇ ಕೆಲವು ಅತ್ಯಂತ ಅಸ್ಪೃಶ್ಯ ಜಾತಿಗಳನ್ನು ಹೊರತುಪಡಿಸಿದರೆ ಅತಿಹೆಚ್ಚು ಬಡವರು ಇರುವುದು ಮುಸ್ಲಿಮರಲ್ಲಿಯೇ… ಅನಕ್ಷರತೆ ಮತ್ತು ಅಜ್ಞಾನಗಳೂ ಅಲ್ಲಿ ಹೆಚ್ಚಾಗಿಯೇ ಇದೆ. ಶೇಕಡಾ 80% ಹಿಂದೂ ಸಮುದಾಯಗಳು ಮತ್ತು ದೇವಸ್ಥಾನಗಳಿಗೆ ಹೋಲಿಕೆ ಮಾಡಿದಾಗ ಶೇಕಡಾ 17% ಆಸುಪಾಸಿನಲ್ಲಿ ಇರುವ ಮುಸ್ಲಿಂ ಜನಸಂಖ್ಯೆ ಮತ್ತು ಮಸೀದಿಗಳಿಗೆ ಅನುಪಾತ ಪ್ರಮಾಣವನ್ನು ಲೆಕ್ಕ ಹಾಕಿದರೆ ಮಸೀದಿಗಳ ಮುಂದೆ ಹೆಚ್ಚು ಭಿಕ್ಷುಕರನ್ನು ಕಾಣಬಹುದು. ಅದರಲ್ಲೂ ಮಕ್ಕಳನ್ನು ಹೊತ್ತುಕೊಂಡು ಮುಸ್ಲಿಂ ಮಹಿಳೆಯರು ಕಾಣುತ್ತಾರೆ.
ಹಸಿವಿಗೆ ಜಾತಿ ಧರ್ಮ ಭಾಷೆ ಪ್ರದೇಶಗಳ ಹಂಗಿಲ್ಲ. ಆದರೆ ವಾಸ್ತವದಲ್ಲಿ ಈ ವಿಭಜನೆಗಳು ನಮ್ಮ ಸಮಾಜದಲ್ಲಿ ಗಾಢವಾಗಿ ಅಸ್ತಿತ್ವ ಉಳಿಸಿಕೊಂಡಿವೆ. ಅದರ ಆಧಾರದ ಮೇಲೆ ಹೇಳುವುದಾದರೆ ಲಿಂಗಾಯತರು ಮತ್ತು ಒಕ್ಕಲಿಗರಿಗಿಂತ ಹೆಚ್ಚು ಆರ್ಥಿಕ ಸಂಕಷ್ಟದಲ್ಲಿ ಇರುವವರು ಮುಸ್ಲಿಮರು. ಮೂಲ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲದಿದ್ದರೂ ಮಧ್ಯದಲ್ಲಿ ಅದನ್ನು ಇಲ್ಲಿನ ಸರ್ಕಾರಗಳು ನೀಡಿವೆ. ಈಗ ಅದನ್ನು ದಿಢೀರನೆ ಕಿತ್ತುಕೊಂಡರೆ ಆ ಸಮುದಾಯಗಳ ಜನರು ಅಸಮಾಧಾನ ಗೊಳ್ಳುವುದಿಲ್ಲವೇ?
ಬೇರೆ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಿ ಅದನ್ನು ಜಾರಿ ಮಾಡಿದರೆ ಯಾರದೂ ತಕರಾರು ಇರುವುದಿಲ್ಲ. ಕಿತ್ತುಕೊಂಡಾಗ ಮಾತ್ರ ಶೋಷಣೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರಲ್ಲಿ ಸಾಮಾಜಿಕ ಅಭದ್ರತೆ ಹೆಚ್ಚಾಗುತ್ತಿರುವ ಅನುಮಾನ ಕಾಡುತ್ತಿರುವಾಗ ಅವರನ್ನು ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ನಮ್ಮ ನಡುವೆಯೇ ಸಮಾನತೆ - ಸ್ವಾತಂತ್ರ್ಯ ನೀಡಿ ಅವರನ್ನು ಪ್ರೀತಿಯಿಂದ ಆಧುನಿಕ ಜಗತ್ತಿಗೆ ಸ್ವಾಗತಿಸಿ ಅವರಲ್ಲಿ ಇರಬಹುದಾದ ಮೌಡ್ಯ ಅಜ್ಞಾನವನ್ನು ಅಳಿಸಿ ವೈಚಾರಿಕ ಪ್ರಜ್ಞೆ ಬೆಳೆಸಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿ ಚುನಾವಣಾ ಕಾರಣದಿಂದ ಈ ನಿರ್ಧಾರ ಅತ್ಯಂತ ಆತ್ಮಘಾತುಕವಾದುದು.
ನಾವು ಮುಸ್ಲಿಂ ಪರವಾದವರಲ್ಲ. ಧರ್ಮಗಳು ಒಂದು ರೀತಿಯ ಅಫೀಮು ಎಂದು ಭಾವಿಸಿರುವವರು. ಆದರೆ ' ಜಗತ್ತಿನ ಎಲ್ಲಾ ಶೋಷಿತರು ನಮ್ಮ ಸಂಗಾತಿಗಳು " ಎಂಬ ಚೆಗುವಾರ ಅವರ ಚಿಂತನೆಯನ್ನು ಮೆಚ್ಚಿರುವವರು. ಮನುಷ್ಯರೆಲ್ಲಾ ಸಮಾನರು ಎಂಬ ಬಸವಣ್ಣನವರ ಚಿಂತನೆಯನ್ನು ಎದೆಯಲ್ಲಿ ಇಟ್ಟುಕೊಂಡವರು. ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಪಾಲಿಸುವವರು.
ಆದ್ದರಿಂದ ಸರ್ಕಾರದ ಈ ಕಿತ್ತುಕೊಂಡು ಹಂಚುವ ಮೀಸಲಾತಿ ವಿರೋಧಿಸೋಣ. ಅದನ್ನು ಪಡೆದ ಒಕ್ಕಲಿಗ ಮತ್ತು ಲಿಂಗಾಯಿತರು ಆ ಕಿತ್ತುಕೊಂಡು ಸಂಖ್ಯೆಯಷ್ಟು ಮೀಸಲಾತಿ ತಿರಸ್ಕರಿಸುವ ಮೂಲಕ ಕುವೆಂಪು ಬಸವಣ್ಣನವರ ಆಶಯ ಈಡೇರಿಸಲಿ. ಆದರೆ ಮತ್ತೆ ಅವರ ಬೇಡಿಕೆಗೆ ಅನ್ಯ ಮಾರ್ಗವೇನಾದರೂ ಇದ್ದರೆ ಅದನ್ನು ಪಡೆದುಕೊಳ್ಳಲು ಹೋರಾಟ ಮಾಡಲಿ.
ಸದ್ಯಕ್ಕೆ ಮೀಸಲಾತಿ ಎಷ್ಟು ಗೋಜಲಾಗಿದೆ ಎಂದರೆ ಅದನ್ನು ಸ್ಪಷ್ಟವಾಗಿ ಹೇಳಲು ಅಂಬೇಡ್ಕರ್ ಅವರ ಅಧ್ಯಯನದಲ್ಲಿ ಸ್ವಲ್ಪ ಭಾಗವಾದರೂ ಓದಿದವರೇ ಬರಬೇಕು. ನಮ್ಮಂತ ಸಾಮಾನ್ಯರಿಗೆ ಅದು ನಿಲುಕುವುದಿಲ್ಲ. ಏನೇ ಆಗಲಿ ಮುಸ್ಲಿಮರು ಭಾರತದ ಸರ್ವತಂತ್ರ ಸ್ವತಂತ್ರ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವ ಪ್ರಜೆಗಳು. 1950 ಜನವರಿ 26 ರಿಂದ ಸಂವಿಧಾನದ ಅಣತಿಯಂತೆ ನಾವೆಲ್ಲರೂ ಒಂದೇ. ಸಮುದಾಯಗಳು ಸಣ್ಣದಾದರು ದೊಡ್ಡದಾದರು ಸಂಖ್ಯೆ ಮುಖ್ಯವಲ್ಲ. ಅನ್ಯಾಯ ನಡೆದಾಗ ಪ್ರತಿಭಟಿಸಲೇ ಬೇಕು. ಅದರಂತೆ ಸಂವಿಧಾನದ ವಿರೋಧಿಗಳೆಲ್ಲಾ ದೇಶ ವಿರೋಧಿಗಳೇ. ಯಾರೇ ಆಗಿರಲಿ…
ಮುಸ್ಲಿಮ್ ಮೂಲಭೂತವಾದಿಗಳ ಕೆಲವು ಧೋರಣೆಗಳನ್ನು ವಿರೋಧಿಸ ಬೇಕಾದ ನೈತಿಕತೆ ನಮಗೆ ಬರಬೇಕಾದರೆ ಮೊದಲು ಆ ಸಮುದಾಯವನ್ನು ಪ್ರೀತಿಸಬೇಕು ಮತ್ತು ಅವರ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಅವರಿಗೂ ಅನ್ಯಾಯವಾದಾಗ ಅವರ ಪರವಾಗಿ ಧ್ವನಿ ಎತ್ತಬೇಕು. ಆಗ ಟೀಕಿಸುವ ನೈತಿಕತೆ ಇರುತ್ತದೆ. ಕೇವಲ ದ್ವೇಷವನ್ನೇ ಸಾಧಿಸಿದರೆ ಆ ನೈತಿಕತೆ ನಮಗೆ ಇರುವುದಿಲ್ಲ. ದಯವಿಟ್ಟು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ