ಮುಸ್ಸಂಜೆ ಮಾತುಗಳು !
ಮುಸ್ಸಂಜೆ ವೇಳೆ ... ಆಫೀಸಿನಿಂದ ಹೊರಗೆ ಬಂದ ಆಕೆ, ಖಾಲೀ ಬರುತ್ತಿದ್ದ ಆಟೋ ಒಂದನ್ನು ಕೂಗಿ ಕರೆದಾಗ, ಆಕೆಯ ಮುಂದೆ ಗಕ್ಕನೆ ನಿಂತಿತ್ತು ಮೂರು ಚಕ್ರದ ವಾಹನ.
ಹತ್ತು ಮುನ್ನ ಡ್ರೈವರ್’ನ ಡಿಸ್ಪ್ಲೇ ಕಾರ್ಡ್ ಗಮನಿಸಿ ನಂತರ ಆಟೋ ಏರಿದ ಇಂದಿರ ಎಲ್ಲಿಗೆ ಎಂದು ನುಡಿದಳು. ಮುಂಚಿತವಾಗಿಯೇ ಹೇಳಿದರೆ ಮೂತಿ ತಿರುಗಿಸಿಕೊಂಡು ಹೋಗಬಹುದು ಎಂದು ಆಟೋ ಏರಿದ ನಂತರ ಹೇಳಿದ್ದಳು. ಡಿಸ್ಪ್ಲೇ ಕಾರ್ಡ್’ನ ಮಾಹಿತಿ ಓದಿಕೊಂಡಾಗ ಮನದಲ್ಲಿ ಮೊದಲು ಸಂತಸ, ನಂತರ ಸಿಟ್ಟು, ಕಿರುನಗು, ಹೆಮ್ಮೆ ಹೀಗೆ ನಾನಾ ಭಾವನೆಗಳು ಮೂಡಿತು.
"ನಾನು ಮಾತಾಡ್ತಾ ಇದ್ರೆ ನಿಮಗೇನೂ ತೊಂದರೆ ಆಗೋದಿಲ್ಲ ತಾನೆ?"
ಡ್ರೈವರ್ ನುಡಿದ "ಖಂಡಿತ ಇಲ್ಲ ಮೇಡಂ ... ಈಗಿನ ದಿನಗಳಲ್ಲಿ ಯಾರು ಮಾತಾಡ್ತಾರೆ? ಆ ಕಡೆ ಈ ಕಡೆ ಗಮನ ಕೊಡದೇ ಮೊಬೈಲ್’ನಲ್ಲೇ ಮುಳುಗಿರ್ತಾರೆ. ಕೆಲವರು ನಮ್ಮನ್ನೂ ಗಣನೆಗೆ ತೆಗೆದುಕೊಳ್ಳದೇ ಮನೆ ವಿಚಾರ ಎಲ್ಲ ಮಾತಾಡ್ತಿರ್ತಾರೆ. ಅದು ತರವಲ್ಲ. ಇನ್ನು ಕೆಲವರು ಕಿವಿಗೆ ಚುಚ್ಚಿಕೊಂಡು ಹಾಡು ಕೇಳ್ತಿರ್ತಾರೆ. ಜಗತ್ತಿನ ಉಸಾಬರಿಯೇ ಬೇಡ ಅಂತ. ಅದು ಬಿಟ್ರೆ ವಾಟ್ಸಪ್ಪ್ ಮೆಸೇಜ್ ಹೀಗೆ. ಫೇಸ್ಬುಕ್’ಗೆ ಗೊತ್ತಿಲ್ಲದೇ ಇರೋ ಅಷ್ಟು ವಿಚಾರ ಒಬ್ಬ ಡ್ರೈವರ್’ಗೆ ಗೊತ್ತಿರುತ್ತೆ ಮೇಡಮ್. ಏನು ಮಾಡೋದು, ನಮ್ಮಲ್ಲಿ ಹಲವರು ಮಾಹಿತೀನ್ನ ದುರುಪಯೋಗ ಮಾಡ್ಕೋತಾರೆ. ಅದರಿಂದ ಎಲ್ಲಾ ಆಟೋ ಡ್ರೈವರ್’ಗಳನ್ನೂ ಅನುಮಾನದ ದೃಷ್ಟಿಯಿಂದಲೇ ನೋಡ್ತಾರೆ. ಸೈಬರ್ ಸೆಕ್ಯೂರಿಟಿ, ಮನೆ ಸೆಕ್ಯೂರಿಟಿ ಅಂತೆಲ್ಲ ಹಾರಾಡ್ತಾರೆ. ಆಟೋದಲ್ಲಿ ಕೂತಾಗೆ ಹೇಗೆ ಇರಬೇಕು ಅನ್ನೋದು ಮಾತ್ರ ಇವರಿಗೆ ಅರಿವಿಲ್ಲ. ಓ! ... ಸಾರಿ ಮೇಡಮ್ .. ನೀವು ಒಂದು ಮಾತು ಹೇಳಿದ್ರಿ ನಾನು ಭಾಷಣಾನೇ ಬಿಗಿದೆ!"
"ಇರಲಿ ಬಿಡಿ ... ನನಗೇನೂ ಇದು ಹೊಸದಲ್ಲ ... ನೀವು ಕಾಲೇಜು ದಿನಗಳಲ್ಲೂ ಹಾಗೇ ತಾನೇ ?"
ಆಟೋದಲ್ಲಿ ಸಂಪೂರ್ಣ ಮೌನ ... ಮುಂದಿನ ಸೀಟಿನಿಂದ ಮಾತು ಬರುತ್ತೇನೋ ಎಂದು ಇಂದಿರೆ ಕಾದರೆ, ಈಕೆ ಯಾರಿರಬಹುದು ಎಂದು ಯೋಚಿಸುತ್ತಿದ್ದ ಆತ ...
"ನಿಮ್ಮ ಮಾತಿನ ಒಂದಂಶದಲ್ಲಿ ನಿಮಗೆ ಹೆಣ್ಣಿನ ಬಗ್ಗೆ ತಾತ್ಸಾರ ಇಲ್ಲ ಬದಲಿಗೆ ಗೌರವ ಇದೆ ಅಂತಾಯ್ತು! ಸರ್ಪ್ರೈಸ್ ಅಲ್ವಾ? ಇರಲಿ ... ಕಾಲೇಜು ದಿನಗಳಲ್ಲಿ ನಾನು ನನ್ನ ಪ್ರೀತಿ ನಿವೇದಿಸಿಕೊಂಡಾಗ ನನ್ನೆಲ್ಲ ಫ್ರೆಂಡ್ಸ್ ಮುಂದೆ ’ಆಟೋ ಡ್ರೈವರ್ ಮಗಳು’ ಅಂತ ಹೀಯಾಳಿಸಿದ್ದಿರಿ. ಅದೂ ಒಂದು ವೃತ್ತಿ ಅಂತ ನಿಮ್ಮ ಮನಸ್ಸಿನಲ್ಲಿ ಇರಲಿಲ್ಲ. ನೀವೇನು ಎಷ್ಟೋ ಜನರಿಗೆ ಇಲ್ಲ. ಕಾರಿನ ಸೀಟ್’ಗೂ ಆಟೋ ಸೀಟ್’ಗೂ ಬಹಳ ವ್ಯತ್ಯಾಸ ಇದೆ, ನಿನ್ನಂಥವರಿಗೆ ಅದು ಅರ್ಥವಾಗೋಲ್ಲ ಅಂದಿದ್ದಿರಿ. ಅಂದಿನಿಂದ ಇಂದಿನವರೆಗೂ ’ನಿನ್ನಂಥೋರಿಗೆ’ ಅನ್ನೋ ಪದದ ಅರ್ಥ ನನಗೆ ಸಿಕ್ಕಿಲ್ಲ. ನಾನು ಕಾರು ಓಡಿಸುವಾಗ ನಮ್ಮ ಮಕ್ಕಳ ಜೊತೆ ಹಿಂದೆ ಕೂತು ಬರೋ ಕನಸು ಕಾಣಬೇಡ ಅಂತ ನುಡಿದು ನನ್ನ ಮನದಲ್ಲಿ ಇಲ್ಲದ ಕನಸಿನ ಬಲೂನನ್ನು ಒದ್ದಿ ಚುಚ್ಚಿ ಒಡೆದಿದ್ದಿರಿ. ಇದೆಲ್ಲಕ್ಕಿಂತ ಮೇಲಾಗಿ ನನ್ನ ಭವಿಷ್ಯವಾಣಿ ಬೇರೆ ನುಡಿದ್ದಿರಿ ... ಯಾರಾದರೂ ಆಟೋ ಡ್ರೈವರ್’ನೇ ನೋಡ್ಕೋ ಹೋಗು ಅಂತ. ಆ ಅಧಿಕಾರ ನಿಮಗೆ ಯಾರು ಕೊಟ್ಟರೋ ನನಗೆ ಗೊತ್ತಿಲ್ಲ. ಹೀಗೆ ಕಟುನುಡಿಗಳನ್ನು ಆಡಿದ ನೀವು, ಇಂದು ಹೆಣ್ಣಿನ ಬಗ್ಗೆ ಗೌರವ ಹಾಗೆ ಹೀಗೆ ಅಂತ ಭಾಷಣ ಬಿಗಿದಾಗ ಖಂಡಿತ ಅಚ್ಚರಿಯಾಯ್ತು ... ಹಿಂದೆ ತಿರುಗಬೇಡಿ ಮುಂದೆ ನೋಡಿ ... ನೀವು ಒಮ್ಮೆ ಹಿಂದೆ ತಿರುಗಿ ನೋಡಿ ಅದರಿಂದ ಕಲಿಯುತ್ತೀರಿ ಅನ್ನೋ ಭರವಸೆ ನನಗೆ ಇಲ್ಲ. ಅದರ ಅವಶ್ಯಕತೆಯೂ ನನಗೆ ಇಲ್ಲ. ನೀವಾಡಿದ ಮಾತುಗಳನ್ನ ನಾನು ಸವಾಲಾಗಿ ಸ್ವೀಕರಿಸಿದೆ. ನಿಮಗೆ ಧನ್ಯವಾದಗಳು. ಇಲ್ಲೇ ಸೈಡ್’ನಲ್ಲಿ ನಿಲ್ಲಿಸಿ."
ಮಾನಸಿಕವಾಗಿ ಜರ್ಜರಿತನಾದ ಡ್ರೈವರ್ ಪದಗಳನ್ನು ಹುಡುಕುತ್ತ ನುಡಿದಿದ್ದು ಇಷ್ಟೇ "ಇ ... ಇಂದು?"
"ಹೌದು .. ಅಂದೂ ಇಂದೂ ನಾನು ಅದೇ ಇಂದು ... ಇಂದಿರಾ ... ನೀವು ಮಾತ್ರ ಪ್ರಕಾಶ ಕಳೆದುಕೊಂಡಿರೋ ಚಂದ್ರ ಅಲ್ಲವೇ? ಹಾ! ಅಂದ ಹಾಗೆ ನಿಮ್ಮ ಬಗ್ಗೆ ನನಗೆಲ್ಲ ಗೊತ್ತು. ನಿಮ್ಮ ಈ ಆಟೋ’ಗೆ ಲೋನ್ ಸಾಂಕ್ಷನ್ ಮಾಡಿದ ಬ್ಯಾಂಕ್ ಮೇನೇಜರ್ ನಾನೇ. ಕಾರು ಸರ್ವೀಸ್’ಗೆ ಕೊಟ್ಟಿದ್ದೆ. ಸಂಜೆ ಕೊಡ್ತೀನಿ ಅಂದಿದ್ದ ಆದರೆ ಕೊಡಲಿಲ್ಲ. ಹಾಗಾಗಿ ಆಟೋ’ದಲ್ಲಿ ಕೂತೆ. ನನಗೇನೂ ಬೇಸರವಿಲ್ಲ. ಆಟೋ ನನ್ನ ಜೀವನದ ಅವಿಭಾಜ್ಯ ಅಂಗ. ಆದರೆ ನಿಮ್ ಮಾತಿನಂತೆ ನೀವು ಮುಂದೆ, ನಾನು ಹಿಂದೆ ಕೂತು ಪ್ರಯಾಣ ಮಾಡಿದ್ದು ಆಯ್ತು. ಆ ಸಮಾಧಾನ ಇದೆ. ನಾ ಹೊರಟೆ".
ತಕ್ಕಮಟ್ಟಿಗೆ ಶ್ರೀಮಂತ ಕುಟುಂಬದವನಾದ ಚಂದ್ರ ತಂದೆಯ ಬಿಸಿನೆಸ್ ಕುಸಿದಾಗ ಸೋತು ಸುಣ್ಣವಾಗಿದ್ದ. ಆಟೋ ಓಡಿಸುವುಕೆ’ಯನ್ನು ತನ್ನ ಜೀವನಾಗಿ ಸ್ವೀಕರಿಸೋದಕ್ಕೆ ಬಹಳಾ ಹಿಂದು ನೋಡುತ್ತಿದ್ದವನಿಗೆ ಜೀವನ ಪಾಥ ಕಲಿಸಿದೆ. ಅದೂ ಒಂದು ವೃತ್ತಿ ಎಂಬ ಅರಿವು ಮೂಡಿದೆ. ಅರಿವು ಮೂಡುವ ವೇಳೆಗೆ ತಲೆಕೂದಲು ನರೆತಿದ್ದರಿಂದ ಒಂಟಿಯಾಗೇ ಜೀವನ ನೆಡೆಸುತ್ತಿದ್ದಾನೆ. ಯಾವ ನಂಟೂ ಹಚ್ಚಿಕೊಳ್ಳದ ಪಯಣಿಗ ಕೂತೆದ್ದು ಹೋದ ಖಾಲೀ ಸೀಟಿನಂತೆ ಇವನ ಜೀವನ.
ಅವಮಾನ, ಛಲ, ಓದು, ಕೆರಿಯರ್, ತಂದೆಯ ಆರೋಗ್ಯ ಎಂಬೆಲ್ಲದರ ನಡುವೆ ಮದುವೆ ಎನ್ನುವುದನ್ನು ಮನಸ್ಸಿಗೂ ತಂದುಕೊಳ್ಳದ ಇಂದಿರ ಇಂದು ಒಂಟಿ ಜೀವಿ.
ಆಟೋದಲ್ಲಿನ ಗುಂಜಿನ ಸೀಟಿಗೂ, ಕಾರಿನಲ್ಲಿನ ಮೆತ್ತನೆ ಹಾಸಿಗೆಯಂಥಾ ಸೀಟಿಗೂ ಹೆಚ್ಚೇನು ವ್ಯತ್ಯಾಸವಿಲ್ಲ ಅನ್ನೋ ಅರಿವು ಇಬ್ಬರಿಗೂ ಮೂಡಿದೆ ಅನ್ನಿಸುತ್ತೆ !
Comments
ಉ: ಮುಸ್ಸಂಜೆ ಮಾತುಗಳು !
ಲೇಖನದ ಪ್ರಾರಂಭವಾದ ರೀತಿ ನಾನೇ ಆಟೋದಲ್ಲಿ ಕುಳಿತಂತಿತ್ತು.ಚಿಕ್ಕದಾಗಿ ಚೊಕ್ಕವಾಗಿ ಅರ್ಥಪೂರ್ಣವಾಗಿದೆ. ಜೀವನದ ಆಟೋದಂತಿತ್ತು.
In reply to ಉ: ಮುಸ್ಸಂಜೆ ಮಾತುಗಳು ! by Dayananda Kulkarni
ಉ: ಮುಸ್ಸಂಜೆ ಮಾತುಗಳು !
ಅನಂತ ಧನ್ಯವಾದಗಳು ದಯಾನಂದ್ :-)
ಉ: ಮುಸ್ಸಂಜೆ ಮಾತುಗಳು !
ತಿರುಗಿದ ಚಕ್ರ!! ನೀತಿ ಸುಂದರ!! ಧನ್ಯವಾದ, ಭಲ್ಲೆಯವರೇ.
In reply to ಉ: ಮುಸ್ಸಂಜೆ ಮಾತುಗಳು ! by kavinagaraj
ಉ: ಮುಸ್ಸಂಜೆ ಮಾತುಗಳು !
ಧನ್ಯವಾದಗಳು ಕವಿಗಳೇ!
ಉ: ಮುಸ್ಸಂಜೆ ಮಾತುಗಳು !
ಭಲ್ಲೆಯವರೆ, ತಮ್ಮ ಮುಸ್ಸಂಜೆಯ ಮಾತುಗಳು, ಮುನಮುಟ್ಟುವಂತಹ ಮಾತುಗಳು! ಅಭಿನಂದನೆಗಳು!
In reply to ಉ: ಮುಸ್ಸಂಜೆ ಮಾತುಗಳು ! by karababu
ಉ: ಮುಸ್ಸಂಜೆ ಮಾತುಗಳು !
ಅನಂತ ಧನ್ಯವಾದಗಳು ಬಾಬು'ಅವರೇ :-)
ಉ: ಮುಸ್ಸಂಜೆ ಮಾತುಗಳು !
ಮ್ಮ್ ಕತೆ ಚೆನ್ನಾಗಿದೆ
ಆದರೆ ಪಾಪ ಇಬ್ಬರಿಗೂ ಮದುವೆ ಮಾಡಿಸದೆ ಹಾಗೆ ಉಳಿಸಿಬಿಟ್ಟಿರಲ್ಲ !
In reply to ಉ: ಮುಸ್ಸಂಜೆ ಮಾತುಗಳು ! by partha1059
ಉ: ಮುಸ್ಸಂಜೆ ಮಾತುಗಳು !
ಸುಖಾಂತ್ಯ ಇರಲಿ ಅಂತ ಮದುವೆ ಮಾಡಿಸಲಿಲ್ಲ ಸಾರ್ !!!
ಇರಲಿ, ಮದುವೆ ಮಾಡಿಸಿದ್ದರೆ 'ಎಲ್ಲ ಸರಿ ಹೋಯ್ತು' ಅಂತ ಸಿನಿಮಾದಲ್ಲಿ ಕಡೆಯ ದೃಶ್ಯ ತೋರಿಸಿದಂತೆ ಆಗುತ್ತಿತ್ತು .. ನೈಜತೆ ಇರಲಿ ಅಂತ :-)
In reply to ಉ: ಮುಸ್ಸಂಜೆ ಮಾತುಗಳು ! by bhalle
ಉ: ಮುಸ್ಸಂಜೆ ಮಾತುಗಳು !
ಬರವಣಿಗೆ ಚೆನ್ನಾಗಿದೆ. ಅಮೆರಿಕದಲ್ಲಿದರೂ ಹೀಗೆಯೇ ಕನ್ನಡ ಬರೀತಾ ಇರಿ.
In reply to ಉ: ಮುಸ್ಸಂಜೆ ಮಾತುಗಳು ! by venkatesh
ಉ: ಮುಸ್ಸಂಜೆ ಮಾತುಗಳು !
ಅನಂತ ಧನ್ಯವಾದಗಳು !
ಉ: ಮುಸ್ಸಂಜೆ ಮಾತುಗಳು !
ಹೃನ್ಮನ ತಟ್ಟಿತು!
ಉ: ಮುಸ್ಸಂಜೆ ಮಾತುಗಳು !
"ಜೀವನದ" ಮುಸ್ಸಂಜೆ ಮಾತುಗಳು ಚೆನ್ನಾಗಿದೆ ಭಲ್ಲೆಯವರೆ.............ಸತೀಶ್