ಮೂಕ ಬಲಿ
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘ಪುಸ್ತಕ ಪ್ರಾಧಿಕಾರ'ವಾಗಿ ಬೆಳೆದು, ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಲೆಂದು ಸದ್ಯದ ಆಶಯ.
ಈ ಆಶಯದಂತೆ ‘ಜನಪ್ರಿಯ ಪುಸ್ತಕ ಮಾಲೆ' ಸರಣಿಯಲ್ಲಿ ಪ್ರಕಟವಾದ ಪುಸ್ತಕ ಜಡಭರತ ಅವರ ‘ಮೂಕ ಬಲಿ'. ಈ ಪುಸ್ತಕದ ಕುರಿತಾಗಿ ಈ ಮಾಲಿಕೆಯ ಸಂಪಾದಕರು ತಮ್ಮ ಮಾತಿನಲ್ಲಿ ಹೀಗೆ ಬರೆದಿದ್ದಾರೆ “ಅಂತೂ ಎಷ್ಟೋ ವರ್ಷಗಳಿಂದ ಕೊಡುತ್ತೇವೆಂದು ಪ್ರಕಟಿಸುತ್ತ ಬಂದಿದ್ದ ಜಡಭರತರ ‘ಮೂಕ ಬಲಿ'ಯನ್ನು ಈಗ ಕೊಡುವಂತಾದುದಕ್ಕೆ ನಮಗೆ ಸಂತೋಷವಾಗುತ್ತಿದೆ. ಜಡಭರತರು ಬಿಟ್ಟು ಹೋದ ಗಂಟನ್ನು ಹುಡುಕಿ ನೋಡಲಾಗಿ, ಕಾದಂಬರಿ ಎಂದು ಮೊದಲು ಅವರು ತಿಳಿಸಿದ ಈ ‘ಮೂಕಬಲಿ' ಈಗ ನಾಟಕವಾಗಿತ್ತು. ಆದರೆ ಅವರು ಕಾದಂಬರಿಯಾಗಿಯೇ ಬರೆಯಬೇಕೆಂದು ಮೊದ ಮೊದಲು ಪ್ರಯತ್ನಿಸಿರಬೇಕೆಂಬುದು, ಅವರು ಅಲ್ಲಿ ಇಲ್ಲಿ ಬರೆದಿಟ್ಟ ಟಿಪ್ಪಣಿಗಳಿಂದ ಮತ್ತು ಪ್ರಾರಂಭ ಮಾಡಿದ ಒಂದು ಪ್ರಕರಣದಿಂದ ಗೊತ್ತಾಗುವಂತಿದೆ. ಅವರ ಆ ಪ್ರಕರಣವೇ ಈ ನಾಟಕಕ್ಕೆ ಹಿನ್ನಲೆಯಾಗಬಹುದೆಂದು ಭಾವಿಸಿ, ಅದನ್ನೂ ಈ ನಾಟಕದ ಜೊತೆಗೇ ಕೊಟ್ಟಿದ್ದೇವೆ.
ಆ ನಾಟಕವನ್ನು ಇದೇ ಹೆಸರಿನಿಂದ ಆರು ಹಸ್ತಪ್ರತಿಗಳೊಳಗಿಂದ ಆಯ್ದು ಕೊಡುವ ಕಠಿಣ ಕಾರ್ಯದಲ್ಲಿ ಶ್ರೀ ಕುರ್ತಕೋಟಿಯವರು ಸಹಾಯ ಮಾಡಿರದಿದ್ದರೆ ಈ ‘ಮೂಕ ಬಲಿ' ಇನ್ನೆಷ್ಟು ಕಾಲ ಹೀಗೆ ಮೂಕವಾಗಿಯೇ ಉಳಿಯುತ್ತಿತ್ತೋ ಯಾರು ಬಲ್ಲರು? ಯಾಕೆಂದರೆ ಆ ಆರೂ ಹಸ್ತಪ್ರತಿಗಳನ್ನು ಆಸ್ಥೆಯಿಂದ ಓದಿದ ಅವರು ‘ಒಂದನ್ನೇ ತಿದ್ದಿದ ಆರು ಪ್ರತಿಗಳಲ್ಲ ಇವು. ಇವೆಲ್ಲಾ ಪ್ರತ್ಯೇಕ ಒಂದೊಂದು ಹೊಸ ನಾಟಕಗಳೇ ಆಗಿವೆ. ಇವೆಲ್ಲವನ್ನೂ ಬೇರೆ ಬೇರೆಯಾಗಿಯೇ ಮುದ್ರಿಸುವಂತಿವೆ' ಎಂದು ಹೇಳಿದರು. ಸದ್ಯಕ್ಕೆ ಇದೊಂದನ್ನೇ ಕೊಟ್ಟು ಮುಂದೆ ಕಾಲಾವಕಾಶದಲ್ಲಿ ಅವನ್ನೂ ಕೊಡಬಹುದು ಎಂದು ಯೋಚಿಸಿ ಈಗ ಇದನ್ನು ಪ್ರಕಟಿಸಿದ್ದೇವೆ.”
ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವ ಸಾಹಸ ಮಾಡಿದ್ದಾರೆ ಶಂ. ರಾ. ಮೊಕಾಶಿ, ಪುಣೇಕರ ಇವರು. ಜಡಭರತರ ಬರವಣಿಗೆಯ ಸೊಗಡನ್ನು ಈ ನಾಟಕದಲ್ಲಿ ನಾವು ಗಮನಿಸಬಹುದು. ಸಾಮಾನ್ಯ ಜೀವಿಗಳ ಬಾಳಿನಲ್ಲಿಯೂ ಇರುವ ದುರಂತದ ಘೋರ ಚಿತ್ರಣ ಇಲ್ಲಿದೆ. ರಾಮಣ್ಣ, ಸೀತವ್ವ, ಶೀನಪ್ಪ, ಸುಶೀಲಿ, ರುದ್ರಪ್ಪ -ಬದುಕಿನ ವಿಷಮಯತೆಯನ್ನು ಅರಿತರೂ ಒಳ್ಳೆಯತನವನ್ನು ಕಾಪಾಡಿಕೊಳ್ಳಲೇಬೇಕೆಂದು ಹಟ ತೊಟ್ಟ ವ್ಯಕ್ತಿಗಳಿವು. ಬಿರುಗಾಳಿಯಲ್ಲಿ ಗಿಡಗಳು ಒಂದನ್ನೊಂದು ಅಪ್ಪಿಕೊಳ್ಳುವಂತೆ ಈ ವ್ಯಕ್ತಿಗಳು ಒಬ್ಬರಿಗೊಬ್ಬರು ಆಧಾರವಾಗಿದ್ದಾರೆ. ಅಂತಃಕರಣದ ತೀವ್ರವಾದ ತಳಮಳವೇ ಇವರ ಆದರ್ಶ ತ್ಯಾಗಕ್ಕೆ ಮೂಲವಾಗಿದೆ. ಆದರೆ ಎಲ್ಲಾ ಆರಲಿರುವ ಬೆಳಕು…
ಕತೆಯ ಗತಿಯೊಡನೆಯೇ ವಾತಾವರಣದ ಬದಲಾವಣೆಯೂ ನಿರಂತರವಾಗಿ ಸಾಗಿ ಇನ್ನೊಂದು ಲೋಕವನ್ನೇ ಸೃಷ್ಟಿಸಿರುವುದು ಈ ನಾಟಕದ ವೈಶಿಷ್ಟ್ಯವಾಗಿದೆ. ಉತ್ಕಟ ಭಾವವಲಯದಲ್ಲಿ ಸಾಮಾನ್ಯವಾದ ಮಾತು ಕಾವ್ಯದ ಮಟ್ಟಕ್ಕೇರುತ್ತದೆ. ಈ ಕೃತಿಯ ಪ್ರಧಾನರಸ ಕರುಣವಾಗಿದ್ದು, ಅದು ಭವಭೂತಿಯ ನೆನಪು ತಂದುಕೊಡುವಷ್ಟು ಉದಾತ್ತವಾಗಿದೆ…
ಈ ನಾಟಕಕ್ಕೆ ಜಡಭರತರು ಅಂಬಿಕಾತನಯದತ್ತ (ದ.ರಾ.ಬೇಂದ್ರೆ) ಅವರ ಎರಡು ಲಾವಣಿಗಳನ್ನು ಬಳಸಿಕೊಂಡಿದ್ದಾರೆ. ಸುಮಾರು ೧೧೦ ಪುಟಗಳ ಈ ನಾಟಕದ ಪುಸ್ತಕವು ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದರೂ ಆಸಕ್ತರಲ್ಲಿ ಅಥವಾ ಗ್ರಂಥಾಲಯದಲ್ಲಿ ಸಿಕ್ಕಿದರೆ ಅವಶ್ಯ ಓದಿ.