ಮೂಕ ರೋಧನೆ
ಕವನ
ರವಿಯು ಪಶ್ಚಿಮದೆಡೆಗೆ ಸಾಗಲು
ಬುವಿಯು ಕತ್ತಲ ಸೆರಗಲಿ
ಇರುಳು ಕಳೆದರೆ ಬೆಳಕು ಬರಲಿದೆ
ಇರದು ಸಂಶಯ ಮನದಲಿ
ಸರಿದ ಸೂರ್ಯನು ಮತ್ತೆ ಬರುವನು
ಇಳೆಯು ಮೆರೆವುದು ಬೆಳಕಲಿ
ಸವೆದ ಬದುಕಿದು ಚರಿತೆಯಾಯಿತು
ಮತ್ತೆ ಬರುವುದೆ ಬಾಳಲಿ
ಒಡಲ ಮಕ್ಕಳ ಮಡಿಲಲಿರಿಸುತ
ಕಳೆದು ಹೋಯಿತು ಯೌವನ
ರೆಕ್ಕೆ ಬಲಿಯಲು ತೊರೆದ ಮಕ್ಕಳು
ಸಾಕು ಎನಿಸಿದೆ ಜೀವನ
ಉದರ ಹಸಿವಿಗೆ ಉಣಲು ಹಿಟ್ಟಿದೆ
ತಿನಲು ಮನವಿದು ಬಾರದೆ
ಮನದ ಹಸಿವಿಗೆ ಪ್ರೀತಿಯಂಬಲಿ
ಕೊಡುವ ಮಂದಿಯ ಕಾಣದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ವಾಟ್ಸಾಪ್)
ಚಿತ್ರ್