ಮೂಖ ವೇದನೆ...
ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಎದಿರು ನೋಡುತ್ತ ಕೆರೆಯ ಏರಿಯ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯೆಲ್ಲ ಕವಚದಂತೆ ಆವರಿಸಿತ್ತೆನೋ ಎಂಬಂತೆ ನೀರಿನ ಹಬೆ ಕೆರೆಯಿಂದ ನಿದಾನವಾ ಗಿ ಹಾರತೊಡಗಿತ್ತು. ಶುಬ್ರ ತಿಳಿಯಾದ ಕೆರೆ ನೀರಿನಲ್ಲಿ ಸಣ್ಣ ಪುಟ್ಟ ಮೀನುಗಳೊಟ್ಟಿಗೆ ತಮಗೂ ತಿಳಿಯದ ಹೆಸರಿನ ಕೆಲ ದೊಡ್ಡ ಮೀನುಗಳೂ ಕಾಣತೊಡಗಿದವು. ದೂರದಲ್ಲೆಲ್ಲೋ ಕೋಗಿಲೆಯೊಂದು ಕೂಗಿದ ದ್ವನಿ ಪ್ರತಿದ್ವನಿಸುತ್ತಿತ್ತು.
ಚಳಿ ಜಾಸ್ತಿಯಾಗಿದ್ದರಿಂದಲೆನೋ ಮನೆಯಲ್ಲಿ ಇನ್ನೂ ಯಾರು ಎದ್ದಿರಲಿಲ್ಲ. ಮನೆಯ ಒಂದು ಕೋಣೆಯಲ್ಲಿ ಮಲಗಿದ್ದ ಪುಟ್ಟಿ, ಒಮ್ಮೆ ನಿದಾನವಾಗಿ ಕೆಮ್ಮಿದಳು. ಮನೆ ನಿಶ್ಯಬ್ದವಾಗಿದ್ದರಿಂದ ಕೆಮ್ಮಿದ ದ್ವನಿ ಅಪ್ಪ ಅಮ್ಮ ಮಲಗಿದ್ದ ಪಕ್ಕದ ಕೋಣೆಗೂ ಕೇಳಿತು. ಕಳೆದ ಕೆಲದಿನಗಳಿಂದ ಶೀತವಾಗಿದ್ದರಿಂದ ಪುಟ್ಟಿ ಆಗಾಗೆ ಕೆಮ್ಮುತ್ತಿದ್ದಳು ಹಾಗೂ ಅದಕ್ಕೆ ಪೂರಕವಾಗಿ ಬೇಕಾಗಿದ್ದ ಎಲ್ಲಾ ಔಷದಿಗಳನ್ನೂ ಸೇವಿಸಿದ್ದಳು. ಆದರೂ ಯಾಕೋ ಕೆಮ್ಮು ಇಳಿದಿರಲಿಲ್ಲ. ಕೆಮ್ಮಿನ ಸದ್ದು ಕೇಳಿದೊಡನೆ ಪುಟ್ಟಿಯ ಅಮ್ಮ ಪುಟ್ಟಿ ಮಲಗಿದ್ದ ಕೋಣೆಗೆ ಓಡಿ ಬಂದಳು.
"ಪುಟ್ಟಿ..ಪುಟ್ಟಿ" ಅನ್ನುತ ಅವಳು ಓದ್ದಿದ್ದ ಅರೆ ಒದಿಕೆಯನ್ನು ಸರಿಯಾಗಿ ಓದಿಸಿ, ಕಿವಿ ಮುಚ್ಚುವಂತೆ ಬಟ್ಟೆಯನ್ನು ಕಟ್ಟಿ, "ಬಿಸಿ ಕಷಾಯ ಮಾಡಿ ಕೊಡ್ತಿನಿ, ಕುಡಿವಂತೆ" ಅನ್ನುತ ಎದ್ದಳು. "ಹಾಳಾದ್ ಕಷಾಯ ಕುಡ್ದು ಕುಡ್ದು ಎಳೆ ಹುಡ್ಗಿ ಎದೆ ಸುಟ್ ಹೋದಾತು, ಸಂತೆಲ್ ತಂದ್ ಒಂದ್ ಕೋಳಿನ ಕುಯ್ದು ಜೀರಿಗೆ ಮೆಣೆಸು ಹಾಕಿ ಕಾರಾಗ್ ಮಾಡಿ ಕೊಡು, ಸೀತಾ-ಗೀತಾ ಎಲ್ಲಾ ಹೊತದೆ" ಅನ್ನುತ ತನ್ನ ಆಸೆಯ ಇಂಗಿತವನ್ನು ಬೆರೆಸಿ ಅಪ್ಪ ಹೆಂಡತಿಯನ್ನು ಉದ್ದೇಶಿಸಿ ಕೂಗಿದ.ಪಕ್ಕದ ಊರಿನ ಸಂತೆಯಲ್ಲಿ ಸಿಗುವ ಗಿರಿರಾಜ ತಳಿಯ ಕೋಳಿ ಚಿಕ್ಕಿ (ಪುಟ್ಟಿ ಇಟ್ಟ ಹೆಸರು) ಮೊಟ್ಟೆ ಇಟ್ಟು ಮಾಡಿದ ಮರಿಗಳನ್ನು ತಬ್ಬಿ ಕೂತಿತ್ತು. ರಕ್ಕೆ, ಪುಕ್ಕ ಎಲ್ಲೆಂದರಲ್ಲಿ ಮುಖವನ್ನು ತುರಿಸಿ ಮರಿಗಳು ಚಿಯೋ-ಪಿಯೋ ಅನ್ನುತಿದ್ದವು. ಮೊಟ್ಟೆಯೊಡೆದು ಹೊರಬಂದು ಆಗಲೇ ನಾಲ್ಕು ತಿಂಗಳಾದರೂ ಮಲಗುವಾಗ ಚಿಕ್ಕಿಯ ರೆಕ್ಕೆಯ ಪುಕ್ಕದೊಳಗೆ ಹೊಕ್ಕಿ ಮಲಗುವುದ ಇನ್ನೂ ಬಿಟ್ಟಿರಲಿಲ್ಲ, ಚಿಕ್ಕಿಯ ಮಕ್ಕಳು.
"ಅಮ್ಮ, ಕರಿಯ ಬಂತ?" ಎನ್ನುತ ತನ್ನ ಮುಚ್ಚಿದ ಕಣ್ಣುಗಳಲ್ಲೇ ಪುಟ್ಟಿ ಕೇಳಿದಳು.
" ಇಲ್ಲ ಕಣೆ" ಎಂದು ಸುಮ್ಮನಾಗಿ, ದೂರದಲ್ಲೀಲೋ ನಾಯಿಗಳು ಬೊಗಳುವ ಸದ್ದನ್ನು ಕೇಳಿ... "ಆಲ... ಎಲ್ಲೋ ಕಿತ್ತಾಡ್ತಾ ಇದೆ ಅನ್ಸುತ್ತೆ.. ಆದ್ರ್ ಸದ್ದ್ ನೋಡು...ಅದ್ರು ಬಾಯಿಗೆ!" ಎನ್ನುತಾ ಕರಿಯನನ್ನು ಶಪಿಸುತ್ತಾ ಅಮ್ಮ ಹೊರ ನಡೆದಳು. ಕರಿಯನ ಸದ್ದನ್ನು ಕೇಳಿ ಪುಟ್ಟಿ ನಿದಾನವಾಗಿ ಎದ್ದು ತಲೆಯ ಬದಿಗಿದ್ದ ಕಿಟಕಿಯಿಂದ ಹೊರ ನೋಡಿದಳು....
*********************************************************************************************************************************************************************
ಪೂರ್ವದ ಕೇಸರಿಯ ಆಕಾಶ ನಿದಾನವಾಗಿ ಕರಗಿ ನೀಲಿ ಬಣ್ಣಕ್ಕೆ ತಿರುಗುತಿತ್ತು. ಕೋಗಿಲೆಯೋಟ್ಟಿಗೆ ಇತರ ಹಕ್ಕಿಗಳ ಚಿಲಿಪಿಲಿ ಸದ್ದು ಬರೆಯತೊಡಗಿತು. ಕೆರೆಯ ತಳದ ಬುಡಕ್ಕೆ ಅವಿತು ಕೂತಿದ್ದ ಮೀನುಗಳು ಒಂದರ ಹಿಂದೊಂದು ಮೇಲೆ ಬರ ತೊಡಗಿದವು. ಕೆರೆಯೇ ಅವುಗಳ ಜೀವನ. ಪ್ರತಿ ದಿನ ಅದೇ ನೀರು, ಅದೇ ಕಲ್ಲು, ಅಷ್ಟೇ ಬೆಳಕು ಮತ್ತು ಅಷ್ಟೇ ವಿಪರೀತ ಕತ್ತಲೆ. ಇವುಗಳಲ್ಲಿ ಎಲ್ಲವೂ ಒಂದೇ ರೀತಿ, ಒಂದೇ ಸಮನೆ, ಜೀವನವಿಡಿ ಅವಕ್ಕೆ. ತಮ್ಮೊಟ್ಟಿಗೆ ಕೆಲ ಏಡಿ, ಹಾವು ಹಾಗೂ ಇತರ ಹುಳುಗಳು, ತಮ್ಮ ನೆರೆಹೊರೆಯವರು. ಹೊರಗಿನ ಪ್ರಪಂಚದ ವಿವರಣೆ ಮೀನುಗಳಿಗೆ ಈ ನೆರೆವೊರೆಯವರ ಮೂಲಕವೇ. ಮಾನವರಿಗೆ ಮಾನವರೆಂದು, ನಾಯಿಗಳಿಗೆ ನಾಯಿಗಳೆಂದು ಹಾಗೂ ತಮಗೆ ಮೀನುಗಳೆಂದು ಹೊರಜಗತ್ತಿನಲ್ಲಿ ಕರೆಯಲಾಗುತ್ತದೆಂದು ಅವಕ್ಕೆ ತಿಳಿಯದು. ಅವುಗಳ ನೆರೆಹೊರೆಯವರಿಗೂ ಸಹಿತ! ಮೇಲೆ ತೇಲುತ್ತಿದ್ದ ಗುಂಪಿನ ಒಂದು ಮರಿ ಮೀನು ತಾನು ಹುಟ್ಟಿನಿಂದ ಕಂಡಿದ್ದ, ತನ್ನ ಶೂಶೃಷೆ ಮಾಡಿದ್ದ, ಮಾಡುತಿದ್ದ ದೊಡ್ಡ ಮೀನಿನ ಬಳಿ ಹೋಗಿ ಕಣ್ಣ ಸನ್ನೆಗಳಲ್ಲೇ "ಅನ್ನ ಇನ್ನೂ ಏಕೆ ಬೀಳಲಿಲ್ಲ.. ಹೊಟ್ಟೆ ಹಸಿಯುತ್ತಿದೆ.." ಎಂದಿತು. "ಆ ನಾಲ್ಕು ಕಾಲಿನ ಕಪ್ಪು ಜೀವ ಯಾಕೋ ಇನ್ನೂ ಬಂದಿಲ್ಲ...ಸ್ವಲ್ಪ ತಾಳು.." ಎಂದು ದೊಡ್ಡ ಮೀನು ಅದನ್ನ ಸಮಾದಾನಪಡಿಸಿತು, ಕಣ್ಣ ಸನ್ನೆಗಳಲ್ಲೇ.
"ನೀವಾದರೂ ಹೊರಗೆ ಹೋಗಿ ನೋಡಿ ಬರುವಿರಾ..? ನನ್ನ ಕಂದಮ್ಮಗಳು ಹಸಿವೇಯಿಂದ ಅಳುತ್ತಿವೆ.. ಸೂರ್ಯ ನೆತ್ತಿಗೆ ಬಂದರೂ ಆ ನಾಲ್ಕು ಕಾಲಿನ ಕಪ್ಪು ಜೀವ ಇನ್ನು ಬರಲಿಲ್ಲ" ಎಂದು ಮೀನುಗಳ ತಾಯಿ ಶವದಂತೆ ಬಿದ್ದಿದ್ದ ಏಡಿಯನ್ನು ಕೇಳಲು ಏಡಿ, ತನಗೂ ಇದಕ್ಕೂ ಯಾವುದೇ ಸಂಬದ್ದವೂ ಇಲ್ಲವೆಂಬಂತೆ ಎತ್ತಲೋ ಕಣ್ಣುಗಳನ್ನು ತಿರುಗಿಸಿ ಕೊಸರಿ ಮಲಗಿತು, ಇಲ್ಲಿಲ್ಲವೆಂದರೆ ಹೊರಗಡೆ ತಿನ್ನಲು ಸಿಕ್ಕೆ ಸಿಗುತ್ತದೆ ಎಂದು ತಿಳಿದ್ದಿದ, ಕಲ್ಲೇಡಿ.
ಮಕ್ಕಳು ಹಸಿವಯಿಂದ ಚಿಟ-ಪಟ ಚಿಟ-ಪಟ ಜಿಗಿಯತೋಡಗಿದವು. ಅದನ್ನು ನೋಡಿದ ತಾಯಿ ಮೀನು ತಾನೆ ಜಿಗಿದು ನೀರಿನ ಮೇಲೆ ಹಾರಿ ನೋಡೋಣವೆಂದು ನೀರಿನ ಮೇಲಕ್ಕೆ ಬಂದು ಜಿಗಿಯಿತು. ಒಮ್ಮೆ ಜಿಗಿದಗಿಂತಲು ಮತ್ತೊಮ್ಮೆ ಇನ್ನೂ ಎತ್ತರಕ್ಕೆ ಜಿಗಿಯಿತು. ಜಿಗದಷ್ತೂ ಇನ್ನೂ ದೂರ ದೂರದ ಜಾಗ ಕಾಣತೊಡಗಿ, ನಾಲ್ಕು ಕಾಲಿನ ಕರಿ ಜೀವಿ, ಕರಿಯ ಎಲ್ಲೆಂದು ಗುರುತಿಸತೊಡಗಿತು. ಸೂರ್ಯನ ತಿಳಿ ರಶ್ಮಿಗಳಿಗೆ ಮಾನವನ ಲೆಕ್ಕಾಚಾರದಲ್ಲಿ ಕೇಜಿಗೆ ೫೦೦ ರೂಪಾಯಿಯಂತೆ ಮಾರಾಟವಾಗುವ ಈ ಮೀನಿನ 'ದೇಹ' ಪಳ-ಪಳ ಹೊಳೆಯತೊಡಗಿತು. ಎಷ್ಟೋ ದಿನಗಳಿಂದ ಹೊಂಚು ಹಾಕುತ್ತಿದ್ದ ರಣಹದ್ದು ಖುಷಿಗೆ ಜೀವವೇ ಬಾಯಿಗೆ ಬಂದಂತಾಗಿ ತನ್ನ ದೊಡ್ಡ ರೆಕ್ಕೆಗಳನ್ನು ಪಟ-ಪಟನೆ ಬಡಿಯುತ್ತಾ ಮೀನಿನಡೆ ಹಾರಿತು.
*******************************************************************************************************************************************************************
ಗಟ್ಟಿಯಾಗಿ ನೆಲೆವನ್ನು ಕಾಲ್ಗಳಿಂದ ಕಚ್ಚಿ, ಬಾಲವನ್ನು ಸಾದ್ಯವದಷ್ಟು ಮೇಲೆತ್ತಿ, ಅಷ್ಟೂ ದಂತ ಪಂಕ್ತಿಗಳು ಕಾಣುವಂತೆ ವಿಕಾರವಾಗಿ ಬಾಯನ್ನು ಬಿಟ್ಟು, ಅದಕ್ಕಿಂತಲೂ ಭಯಂಕರವಾಗಿ ಕಣ್ಣನ್ನು ಕೆರಳಿ ಕರಿಯ ಗುರ್ರ್... ಅನ್ನುತಾ ನಿಂತಿತು. ಮುಖಕ್ಕೆ ಮುಖ ಮಾಡಿ ಪಕ್ಕದ ಊರಿನ ಕೆಂಚ ಮಹಾಯುದ್ದದ ಸೇನಾಪತಿಯಂತೆ ಕರಿಯನ ಗುರ್ರಿಗೆ ಗುರ್ರ್ರ್ ಎನ್ನುತಾ ನಿಂತಿತು. ಕೆಂಚನ ಹಿಂದೆ ಬೊಗಳುವುದಕ್ಕಿಂತ ಹೆಚ್ಚಾಗಿ ಬದುಕಲು ಅವಣಿಸುವ ಆಡಿನ ಮರಿಯಂತೆ ಟಾಮು, ಅದಕ್ಕೆ ಸಾಕ್ಷಿ ಎಂಬಂತೆ ಅದರ ಬಾಲವೂ ನೈಜ ಸ್ಥಿತಿಗಿಂತ ಇನ್ನೂ ತುಸು ಕೆಳಗ್ಗೆ ಬಿದ್ದಿತ್ತು. ಕೋಳಿ ಕೂಗುವ ಮೊದಲೇ ತನ್ನ ಪಾಡಿಗೆ ತಾನು ನೆಲ ಮೂಸುತ್ತಾ ಎತ್ತಲೋ ಹೊರಟಿದ್ದ ಟಾಮು ವಿಪರ್ಯಾಸವೆಂಬಂತೆ ಕೆಂಚನ ದೃಷ್ಟಿಗೆ ಸಿಕ್ಕಿ ಮನಸ್ಸಿಲ್ಲದ ಮನಸ್ಸಿನಲ್ಲಿ ಸೇನಾಪತಿಯ ಜೊತೆ ಪುಕ್ಕಲು ಸೈನಿಕನಂತೆ ಹಿಂದೆ ಹಿಂದೆ ಬಂದಿತ್ತು. ಹಾಗೂ ಕೆಂಚ ಮತ್ತು ಕರಿಯನ ದೃಷ್ಟಿ ಯುದ್ದದಲ್ಲಿ, ತನ್ನ ಕೊಂಚ ಗಂಡುತನದ ಮಾನವನ್ನು ಉಳಿಸಿಕೊಳ್ಳಲು ಆಗೊಮ್ಮೆ ಹೀಗೊಮ್ಮೆ ಕೆಂಚನ ಪರವಾಗಿ ಬೌಗುಡತೊಡಗಿತ್ತು. ಆ ಸದ್ದಿನಲ್ಲಿ ಮುಂದಿರುವ ವೈರಿಯನ್ನು ಹೆದರಿಸುವ ಗತ್ತಿಗಿಂತಲೂ ತನ್ನನು ಯಾರಾದರು ಕಾಪಾಡಿ ಅನ್ನುವ ಆರ್ತನಾದವೇ ಹೆಚ್ಚಾನ್ತಿತ್ತು! ಕೆಂಚ ಹಾಗು ಟಾಮುವಿನ ಹಿಂದೆ 'ಸಣ್ಣಿ', ಕರಿಯನ ಮನೆಯಿಂದ ಕದ್ದು ತಂದ ಒಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿ ಹಿಡಿದು ಎತ್ತ ಕಡೆ ಓಡುವುದೆಂದು ಹವಣಿಸುತ್ತಿತ್ತು. ಸಣ್ಣಿಯ ಪ್ರಾಣ ಹಾಗು ಮಾನ ರಕ್ಷಕರಂತೆ ಕೆಂಚ ಮತ್ತು ಟಾಮು ನಿಂತಿದ್ದವು. ಇನ್ನೂ ದೃಷ್ಟಿಯುದ್ದ ಕೊನೆಗಾಣದಿದ್ದಾಗ, ಕರಿಯ ಕೆರಳಿ ಮುನ್ನುಗಿತ್ತು. ಕರಿಯನ ಬೌಗುಡುವ ಸದ್ದು ಊರಿಗೆ ಊರೇ ಬೆಚ್ಚಿ ಬೀಳುವನ್ತಿತ್ತು!
*********************************************************************************************************************************************************************
ಚಿಕ್ಕಿಯ ಪುಕ್ಕದ ಒಳಗೆಲ್ಲ ಹೊಕ್ಕಿದ್ದ ಮರಿಗಳು ಚಳಿ ಕಳೆದು ಸೆಕೆ ಹೆಚ್ಚಾದಾದೆಂತಲ್ಲ ಹೊರಬರತೊಡಗಿದವು. ಹೊತ್ತು ಇಷ್ಟಾದರೂ ಇನ್ನೂ ಏಕೆ ನಮ್ಮನ್ನು 'ಬಿಟ್ಟಿ'ಲ್ಲವೆಂದು ಚಿಕ್ಕಿ ಯೋಚಿಸತೊಡಗಿತು. ಹಸಿವು ಹೆಚ್ಚಾದಂತೆಲ್ಲ ಮರಿಗಳ ಚಿಯೋ-ಪಿಯೋ ಸದ್ದು ಸಹ ಹೆಚ್ಚಾಗ ತೊಡಗಿತು!
'ಕರಿಯನಾರೋ ಇದ್ದಿದ್ದರೆ ತನಗೆ ಹಾಕಿದ ತಂಗಳು ಊಟದ ತಟ್ಟೆಯನ್ನು ತಾನು ತಿಂದು ಮಿಕ್ಕಿಸಿ ಇತ್ತ ಕಡೆ ತನ್ನ ಕಾಲಿನಿಂದ ತಳ್ಳುತ್ತಿದ್ದ ಪುಣ್ಯಾತ್ಮ' ಎನ್ನುತಾ ಕರಿಯನನ್ನು ಒಮ್ಮೆ ಚಿಕ್ಕಿ ನೆನೆಯಿತು.
ಅಷ್ಟರಲ್ಲೇ ಮನೆಯ ಒಳಗಿಂದ ಯಾರೋ ಸದ್ದು ಮಾಡಿ ಇತ್ತಲೇ ಬಂದಂತಾಯಿತು. ಮುಖದಲ್ಲಿ ಯಾವುದೇ ರೀತಿಯ ಭಾವನೆಗಳು ವ್ಯಕ್ತವಾಗದ ಪುಟ್ಟಿಯ ಅಮ್ಮ, ಚಿಕ್ಕಿಯ ಪುಟ್ಟ ಮನೆಯಾದ ಕುಕ್ಕೆಯ ಬಳಿ ಬಂದು ಕೂತಳು. ತಿನ್ನಲು ಏನಾದರೂ ಸಿಗುತ್ತದೆಂದು ಚಿಕ್ಕಿಯ ಮಕ್ಕಳು ಅವಳ ಕೈಗಳನ್ನೇ ನೋಡತೋಡಗಿದವು! ಬರಿದಾದ ಪುಟ್ಟಿಯ ಅಮ್ಮನ ಕೈಗಳು ಇದ್ದಕ್ಕಿದಂತೆ ಕುಕ್ಕೆಯ ಒಳಗೆ ಬಂದವು! ಚಿಕ್ಕಿಯ ಮಕ್ಕಳು ಹಸಿವೆಯಿಂದಲೋ ಅಥವಾ ಭಯದಿಂದಲೋ ಏನೋ ಆಕೆಯ ಕೈಗಳನ್ನೇ ಪುಟ್ಟ ಕೊಕ್ಕುಗಳಿಂದ ಕುಕ್ಕತೊಡಗಿದವು. 'ಥು ನಿಮ್ಮ್ ಕೊಕ್ಕ್ ಮುರ್ದ್ಹೋಗ.. ' ಎನ್ನುತಾ ಪುಟ್ಟಿಯ ಅಮ್ಮ ತಕ್ಷಣ ಕೈ ಹೊರ ಎಳೆದಳು. ಇದನ್ನ ನೋಡಿದ ತಕ್ಷಣ ಏನೋ ನೆನಪಾದಂತೆ ಚಿಕ್ಕಿ ತನ್ನ ಮಕ್ಕಳನೆಲ್ಲಾ ತನ್ನ ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿತು. ಪಿಸುಗುಡುವಾಗ ದುಃಖ ಉಕ್ಕಿ ಬಂದು ಎದೆ ಭಾರವಾದಂತಿತ್ತು. ಭೂಮಿ ನಡುಗುವ ಮುನ್ಸೂಚನೆಯನ್ನೇ ಎಲ್ಲರಿಗಿಂತ ಮೊದಲೇ ತಿಳಿಯಬಲ್ಲ ಚಿಕ್ಕಿಗೆ ಇನ್ನು ಕೆಲವೇ ನಿಮಿಷದಲ್ಲಿ ತನಗೊದಗುವ ಆಪಾಯದ ಸುಳಿ ಕಾಣದೆ ಇದ್ದೀತೆ?!
"ಮನೆಯ ಅಮ್ಮ ಈಗ ನನ್ನನು ಕರೆದುಕೊಂಡು ಹೋಗುತ್ತಾಳೆ. ಆಮೇಲೆ ನಾನು ಬರುವುದಿಲ್ಲವೆನಿಸುತ್ತೆ.." ಎನ್ನುತ ಸುಮ್ಮನಾಯಿತು. "ನೀವು ಎಲ್ಲಿಗೆ ಹೋಗುತ್ತಿರಿ.. ಎಷ್ಟೋತ್ತಿಗೆ ವಾಪಸ್ಸು ಬರುವುದು" ಎಂದ ಒಂದು ಮರಿಗೆ ಚಿಕ್ಕಿ, ಆ ಮರಿಯ ಒಟ್ಟಿಗೆ ಇತರ ಮರಿಗಳನ್ನು ಬಿಗಿದಾಗಿ ತಬ್ಬಿ "ತಾನು ಪಕ್ಕದ ಊರಿಗೆ ಹೋಗಿ ತಿನ್ನಲು ಅಕ್ಕಿ ಹಾಗು ಗೋದಿಯ ಕಾಳುಗಳನ್ನು ತರುತ್ತೀನಿ" ಎಂದಿತು. ನಾನು ಬಾರದೆ ಹೋದರೆ ಕರಿಯ ಅವುಗಳಿಗೆ ಅನ್ನದ ತಟ್ಟೆಯನ್ನು ಕೊಡುತ್ತಾನೆಂದೂ, ಚೆನ್ನಾಗಿ ತಿಂದು ಜಗಳವಾಡದೆ ಇರಬೇಕೆಂದು ಹೇಳಿತು. ಚಿಕ್ಕಿಯ ಮಾತುಗಳು ಇನ್ನೂ ಮುಗಿಯುವುದರೊಳಗೆ ಆದರ ಕುತ್ತಿಗೆಗೆ ಪುಟ್ಟಿಯ ಅಮ್ಮನ ಕೈ ಬಿದ್ದಿತು. 'ಕೊರ್ರ್.....ಕೊರ್ರ್' ಅನ್ನುತ ಚಿಕ್ಕಿ ಹೊರಗೆಳೆಯಲ್ಪಟ್ಟಿತ್ತು. ಚಟ-ಪಟ ಬಡಿಯುತ್ತಿದ್ದ ರೆಕ್ಕೆಯನ್ನು ಪುಟ್ಟಿಯ ಅಮ್ಮ ಗಟ್ಟಿಯಾಗಿ ಹಿಡಿದಳು. 'ಕೊರ್ರೋ...' ಎನ್ನುತಾ ಚಿಕ್ಕಿ ಕೂಗತೊಡಗಿತು. ಚಿಕ್ಕಿಯ ಮಕ್ಕಳು ತಮ್ಮ 'ಅಮ್ಮ'ನಿಗೆ ಏನು ಮಾಡುತ್ತಿದ್ದಾರೆ ಎಂದು ತಿಳಿಯುವುದರೊಳಗೆ ಚಿಕ್ಕಿಯ ಸದ್ದು ನಿಂತಿತ್ತು...ನಿಂತೇ ಹೋಯಿತು. ಕುಕ್ಕೆಯೊಳಗಿನ ಚಿಯೋ-ಪಿಯೋ ಸದ್ದು ಇನ್ನೂ ಜಾಸ್ತಿಯಾಯಿತು. ಅಮ್ಮ ಬರುತ್ತಾಳೆಂದು, ಪಕ್ಕದ ಊರು ಜಾಸ್ತಿ ದೂರದಲ್ಲಿಲ್ಲವೆಂದು ಗುಂಪಿನ ಮರಿಯೊಂದು ಹೇಳಿದಾಗ ಇತರ ಮರಿಗಳೆಲ್ಲ ನಿಜವೆಂದು ಕುಕ್ಕೆಯ ಸಂದಿನಿಂದ ಅಮ್ಮನ ದಾರಿಯನ್ನೇ ಪಿಳಿ-ಪಿಳಿ ಕಣ್ಣುಗಳಿಂದ ನಿರೀಕ್ಷಿಸತೊಡಗಿದವು.
*******************************************************************************************************************************************************************
ಅನ್ನ ಸಿಗುವುದಿಲ್ಲವೆಂದು ಮರುಗಿ ಮೀನಿನ ಮರಿಗಳೆಲ್ಲಾ ಗುಂಪಾಗಿ ತಳ ಸೇರಿದ್ದವು. ಅನ್ನದ ರುಚಿಯೇ ಹಾಗೆ! ಊರಿನ ಭಟ್ಟರ ಹೋಟೆಲಿನ ಉಳಿದ ಅನ್ನವನ್ನು ಭಟ್ಟ ಹೋಟೆಲಿನ ಹಿಂದೆಯೇ ಎಲೆಗಳ ಸಮೇತಾವಾಗಿ ಎಸೆಯುತ್ತಿದ್ದ. ಊರಿನ ಎಲ್ಲೆಡೆಯಿಂದ ಶ್ವಾನದಳಗಳು ಬೆಳಗನ ಜಾವವೇ, ಕೆಲವು ರಾತ್ರಿಯೇ ತಮ್ಮ ಪಯಣವನ್ನು ಆರಂಭಿಸಿ, ಹೋಟೆಲ್ಲ ಬಾಗಿಲು ತೆರೆಯುವುದರೊಳಗೆ ಅರಳಿ ಕಟ್ಟೆಯ ಮುಂದೆ ಜನ ಪಂಚಾಯಿತಿ ಸೇರುವ ಹಾಗೆ ಸೇರುತ್ತಿದ್ದವು. ಆದರೆ ಕರಿಯ ಮಾತ್ರ ಮನೆಯವರು ಏಳುವ ಕೊಂಚ ಮುಂಚೆಯಷ್ಟೇ ಬಾಗಿಲ ಹೊರಗೆ ಹಾಕಿರುವ ಗೋಣಿಚೀಲದಿಂದ ಮೇಲೆದ್ದು, ಮೈ ನಿಮಿರಿ, ಕೊಡಕಿ, ಬಟ್ಟರ ಹೋಟೆಲ ಬಳಿ ಹೋದರೆ ಸಾಕು, ರಾಜನಿಗೆ ತಲೆಬಾಗಿ ದಾರಿ ಬಿಡುವ ಮಂತ್ರಿಗಳಂತೆ, ಕಂತ್ರಿ-ನಾಯಿಗಳು ಪಕ್ಕಕೆ ಸರಿಯುತ್ತಿದ್ದವು! ಸಾದ್ಯವಾದಷ್ಟನ್ನು ಶಿಸ್ತಿನಿಂದ ತಿಂದು, ಎಲೆಯೊಂದನ್ನು ಅದರಲ್ಲಿ ಅನ್ನ ಬರುವಂತೆ ಕಚ್ಚಿ ಹೊರಟರೆ ಬಾಯನ್ನು ಬಿಚ್ಚುತ್ತಿದ್ದಿದ್ದು ಊರಿನ ಕೆರೆಯ ನೀರಿನಲ್ಲೇ! ಅಷ್ಟರಲ್ಲಾಗಲೇ ಮೀನುಗಲೆಲ್ಲವೂ ನೀರಿನ ಮೇಲೆ ಬಂದು ಈಜುತ್ತಿರುತ್ತಿದ್ದವು! ಕರಿಯ ತಂದು ಬಿಟ್ಟ ಅನ್ನದ ಅಗುಳುಗಳನ್ನು ಕ್ಷಣ ಮಾತ್ರದಲ್ಲೇ ತಿಂದು ಮುಗಿಸುತ್ತಿದ್ದವು! ಮೀನುಗಳನ್ನೇ ಕೆಲಹೊತ್ತು ಕರುಣೆಯ ಕಣ್ಣುಗಳಿಂದ ನೋಡುತಿತ್ತು... ಮೀನುಗಳು ಮೇಲೆ ಬರುವುದನ್ನೇ ಕೆರೆಯ ಏರಿಯ ಮೇಲೆ ಹೊಂಚು ಹಾಕಿ ಕೂರುವ ನರ ಹದ್ದುಗಳೆಡೆ, ಘರ್ಜಿಸುವಂತೆ ಬೊಗಳಿ, ಅವುಗಳು ಕಾಣದಂತೆ ದೂರವಾದ ಮೇಲೆ ಅಲ್ಲಿಂದ ಹೊರಡುತ್ತಿತ್ತು, ಕಪ್ಪು ಬಣ್ಣದ ಶುಭ್ರ ಮನಸ್ಸಿನ ಕರಿಯ. ಮನೆಯಲ್ಲಿ ಮಾಡಿ, ತಿಂದು, ಉಳಿದು ಎಸೆಯುವ ಕೋಳಿಯ,ಮೀನಿನ ಮೂಳೆಗಳನ್ನು, ಎಸೆದವನು ಅಥವಾ ಎಸೆದವಳು ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ ಕರಿಯ 'ನುಂಗಿ' ಬಿಡುತ್ತಿತ್ತಾದರೂ ಊರಿನ ಕೇರಿಯ ಮೀನು, ಮನೆಯ ಚಿಕ್ಕಿ ಕೋಳಿ ಹಾಗು ಅದರ ಮರಿಗಳೆಂದರೆ ಕರಿಯನಿಗೆ ಅದೇನೋ ಒಂದು ಭಾವ! ನಮ್ಮವರು, ನನ್ನವರು ಎನ್ನುವ ಆತ್ಮೀಯ ಪ್ರೀತಿ. ಹೇಳಲಾಗದೆ ಕೇವಲ ಅನುಭವಿಸಬಹುದಾದ ಹಾಗು ನೀಡಬಹುದಾದ ಮಮತೆ! ಕರಿಯ,ಚಿಕ್ಕಿ ಹಾಗು ಮೀನುಗಳ ಈ ವರ್ಣನಾತೀತ ಸಂಭಂದವು ಊರಿನ ಯಾವ ಮಾನವ ಪ್ರಾಣಿಗೂ ಕಾಣದು, ಕಂಡರೂ ಅವಕ್ಕೆ ಅರಿಯದು.
ಮುಂಜಾವು ಕಳೆದು ಸೂರ್ಯ ನೆತ್ತಿಯ ಮೇಲೆ ಬಂದರೂ ಕರಿಯನ ಬರದಿರುವಿಕೆ ಮೀನಿಗೆ ಕೊಂಚ ಆತಂಕವನ್ನು ಉಂಟುಮಾಡಿತ್ತು. ಮರಿಗಳು ಇಂದು ಎಲ್ಲಿ ಏನನ್ನೂ ತಿನ್ನದೆ ಇರುತ್ತಾವೆಂದು! ಅದೆಷ್ಟೇ ಹೊತ್ತಾದರೂ ಸರಿ, ಕೊನೆ ಪಕ್ಷ ನಾನು ಜಿಗಿಯುವುದ ದೂರದಿಂದೆಲ್ಲೋ ಕಂಡರೆ ನಾಲ್ಕು ಕಾಲಿನ ಕರಿ ಜೀವಿ ಕಂಡಿತಾ ಬರುತ್ತಾನೆಂದು ಊಹಿಸಿ ಮೀನು ಪುಳಕ್-ಪುಳ್ಕ್ ಏನ್ನುತಾ ನೀರಿನ ಹೊರಕ್ಕೊ,ಒಳಕ್ಕೂ ಜಿಗಿಯತೊಡಗಿತು.ಖುಷಿಯಿಂದ ಜೀವ ಬಾಯಿಗೆ ಬಂದ ಅನುಭವದಿಂದ ಹಾರಿ ಇತ್ತಲೇ ಬಂದ ರಣ ಹದ್ದಿನ ಸದ್ದು ಮೀನಿಗೆ ಕೇಳದೇ ಹೋಯಿತು... ಕ್ಷಣ ಮಾತ್ರದಲ್ಲೇ ಹದ್ದಿನ ಉಗುರುಗಳು ೫೦೦ ರೂಪಾಯಿ ಬೆಲೆಬಾಳುವ ಮೀನಿನ ದೇಹದೊಳಕ್ಕೆ ಹೊಕ್ಕಿದ್ದವು. ಬೆಲೆ ಐನೂರಾದರೆನು? ದೇಹದಿಂದ ಹೊರಬಿದ್ದಿದ್ದು ಅದೇ ರಕ್ತ, ಕಣ್ಣಿಂದ ಬಂದಿದ್ದು ನಾನಿಲ್ಲದೆ ಮರುಗುವ ಮರಿಗಳ ಬಗೆಗಿನ ಕನಿಕರ. ಏನೋ ಹೇಳುವಂತೆ ಬಾಯಿ ತೆರೆದು ತೆರೆದು ಮುಚ್ಚಿತು, ಊರ ಕೆರೆಯ ದೊಡ್ಡ ಮೀನು! ಕ್ಷಣ ಮಾತ್ರದಲ್ಲೇ ರಣಹದ್ದು ಮೀನನ್ನು ಹೊತ್ತು ಹಾರಿಹೋಗಿತ್ತು.
ಇದ್ಯಾವುದರ ಅರಿವು ಮಕ್ಕಳೆಂದು ಕರೆಯುವ ಮರಿಮೀನುಗಳಿಗೆ ತಿಳಿಯದು. ಪುಳಕ್ ಎಂದು ಮೇಲೆ ಹಾರಿದ್ದ ಸದ್ದು ಮಾತ್ರ ಕೇಳಿತು ಅವಕ್ಕೆ. ತಮ್ಮ ಪಾಡಿಗೆ ನೀರ ತಳದಲ್ಲಿ ಒಂದರ ಪಕ್ಕದಲ್ಲಿ ಅದೇನೋ ಪಿಸಿ ಪಿಸಿ ಹೇಳಿಕೊಳ್ಳುತ್ತಾ ಇದ್ದವು. 'ಮೀನು' ಅದೇನೋ ಮಾಡಿ ಅನ್ನ ತರುತ್ತಾಳೆಂಬ ಭರವಸೆಯಿಂದ!
ಇತ್ತ ಕಡೆ ಸೈನ್ಯಾದಿಪತಿ ಕೆಂಚ ಹಾಗು ಆತನ ಜೊತೆಗಿದ್ದ ಅರೆ ಪುಕ್ಕಲು ಟಾಮು ಮತ್ತು ಸಣ್ಣಿಯೋಟ್ಟಿಗೆ ಕಾದಾಡಿ,ಗುದ್ದಾಡಿ, ಕಚ್ಚಿ,ಪರಚಿ ಸುಸ್ತಾದ ಕರಿಯ,ಸಣ್ಣಿಯನ್ನೊಮ್ಮೆ ನೋಡಿ ಬೊಗಳಿತು. ಆ ಸದ್ದಿಗೆ ಇದ್ದೇನೋ ಬಿದ್ದೆನೋ ಎಂಬಂತೆ ಸಣ್ಣಿ, ಬಾಯಲ್ಲಿ ಕಚ್ಚಿದ್ದ ಪುಟ್ಟಿಯ ಚೆಪ್ಪಲಿಯನ್ನು ಅಲ್ಲೇ ಬಿಟ್ಟು ಓಟ ಕಿತ್ತಿತು. ಅದನ್ನು ನೋಡಿ,ನಾಲ್ಕೂ ಕಾಲುಗಳನ್ನು ಗಡ-ಗಡನೆ ನಡುಗಿಸುತ್ತಿದ್ದ ಟಾಮು, ಬಾಲ ಮುದುರಿ, ಒಂದಿಷ್ಟೂ ಪೆಟ್ಟು ಬೀಳದಿದ್ದರೂ, ಭಯಾನಕ ಗಾಯವಾದಂತೆ ನಟಿಸುತ್ತಾ, ಕುಂಟುತ್ತಾ,ಕೂಗುತ್ತ ನಡೆಯಿತು. ಮೈಯಲ್ಲ ಗಾಯವಾಗಿ, ಅಲ್ಲಲ್ಲಿ ರಕ್ತ ಸುರಿಯುತ್ತಿದ್ದ ಕೆಂಚ ಹಾಗು ಕರಿಯರಿಬ್ಬರೂ ರಾಜಿಯಾದಂತೆ ಹಿಂದಕ್ಕೆ ಸರಿದರು! ತನ್ನ ಬಂದ ಕೆಲಸ ಆದಂತೆ, ಪುಟ್ಟಿಯ ಚಪ್ಪಲಿಯನ್ನು ಕಚ್ಚಿ ಹಿಡಿದು, ತಕ್ಷಣ ಏನೋ ನೆನಪಾದಂತೆ ಕರಿಯ ಕೆಂಚನ ಕಡೆ ಮತ್ತೊಮ್ಮೆ ಗುರ್ರೆಂದು ಬೊಗಳಿ ಓಡಿತು.
*********************************************************************************************************************************************************************
ಗಂಟೆ ಸುಮಾರು ಹನ್ನೊಂದರ ಹೊತ್ತಿಗೆ ಪುಟ್ಟಿಯ ಅಮ್ಮ ಆಕೆ ಮಲಗಿದ್ದ ಕೋಣೆಗೆ ಹೋಗಿ ಅವಳ ತಲೆ ಸವರುತ್ತಾ "ಯಾರ್ ಹಾಳಾದ್ ಕಣ್ ಬಿತ್ತೆ ಮಗ್ಲೆ ನಿಂಗೆ, ಕೆಮ್ಮಿ-ಕೆಮ್ಮಿ ಎಷ್ಟ್ ಸೋತ್ಹೊಗಿಯ ನೋಡು" ಎಂದಳು.
"ನಿಂಗೆ ಅಂತಾನೆ ಕೋಳಿ ಕುಯ್ದು ಸಾರ್ ಮಾಡಕ್ಕಿಟ್ಟೀನಿ..ಇನ್ನು ಸ್ವಲ್ಪ ಹೊತ್ತಲ್ಲೇ ಆತದೆ..ಯಾಕೆ, ಕೋಳಿ ಸಾರ್ ಘಮ ಬರ್ತಿಲ್ವೇನೆ?"
ಶೀತದಿಂದ ಮೂಗು ಕಟ್ಟಿ, ಮನೆಯ ಯಾವುದೇ ಪರಿಮಳವನ್ನು ಆಸ್ವಾದಿಸದ ಪುಟ್ಟಿಯ ಮೂಗುಗಳು ಕೇವಲ ಉಸಿರಾಟಕ್ಕೆ ಮಾತ್ರ ಸೀಮಿತವಾಗಿದ್ದವು. ಅಮ್ಮನ ಮಾತನ್ನು ಕೇಳಿ ಏನೋ ಕಳೆದುಕೊಂಡಂತೆ ಪುಟ್ಟಿ, ತಲೆ ಸವರುತ್ತಿದ್ದ ಅಮ್ಮನ ಕೈಯನ್ನು ಬದಿಗಿಟ್ಟುಎದ್ದು ಕೂತು, "ಯಾವ್ ಕೋಳಿ ಕುಯ್ದೆ??" ಎನ್ನುತ ಗದ್ಗದಿತ ದ್ವನಿಯಲ್ಲಿ ಕೇಳಿದಳು.
"ಅದೇ ಚಿಕ್ಕಿ ಯಾಟೆಮರಿ ಕಣೆ.. ಕೋಳಿಏನ್ ತುಂಬ್ಕೊಂಡು ಮನೆ ಎಲ್ಲಾ ಮಾಡಿತ್ತಲ್ಲ ಅದೇ" ಎಂದೊಡನೆ ಚಳಿಯಿಂದ ಬಾತಿದ್ದ ಪುಟ್ಟಿಯ ಮುಖ ಕೆಂಪಾಗಿ, ಕಣ್ಣಿನಿಂದ ಹನಿಗಳು ಇಬ್ಬನಿಯಂತೆ ಕರಗಿ, ಕೆಂಪು ಕೆನ್ನೆಗಳ ಮೇಲೆ ಹರಿದು ಜಾರಿದವು. ಪುಟ್ಟಿ ಕೂಡಲೇ ಹೊದ್ದಿದ್ದ ಒದಿಕೆಯನ್ನು ಎತ್ತಿ ಹೊಗೆದು ಅಳುತ್ತಲೇ ಚಿಕ್ಕಿಯನ್ನು ಮುಚ್ಚಿಟ್ಟಿದ್ದ ಕುಕ್ಕೆಯ ಬಳಿ ಓಡಿದಳು.
"ಲೇ ಪುಟ್ಟಿ.. ನಿಲ್ಲೇ..ಗಾಳಿಗೆ ಸೀತಾ ಇನ್ನೂ ಜಾಸ್ತಿ ಆದೀತು..ನಿಲ್ಲೇ ಎಲ್ಲಿಗ್ ಓಡ್ತಿದ್ದಿಯ" ಅಮ್ಮ ಕೂಗಿದಳು.
"ಆ.ಆ ...ಅದು.... ಚಿಕ್ಕಿ..ಎಲ್ಲಿ..ಚಿಕ್ಕಿ ಬೇಕು .. ನಾ.ನ...ನ .ನಂಗೆ ಚಿಕ್ಕಿ.." ಎನ್ನುತಾ ಪುಟ್ಟಿ ಚಿಕ್ಕಿ ಇದ್ದ ಬುಟ್ಟಿಯ ಮುಂದೆ ನಿಂತು ಅಳುತ್ತಾ ಬಿಕ್ಕಳಿಸತೋಡಗಿದಳು. ಅಕ್ಕಿ ಹಾಗೂ ಗೋದಿಯ ಕಾಳುಗಳನ್ನು ತರಲು ಹೋಗಿದ್ದ ಅಮ್ಮನ ದಾರಿಯನ್ನು ಕಾದು, ನೋಡಿ, ಕೂಗಿ ದಣಿದು ಮೂಲೆಯಲ್ಲಿ ಮಲ್ಗಗಿದ್ದ ಮರಿಗಳು ಪುಟ್ಟಿಯ ಕೂಗಿಗೆ ಎದ್ದು ಕುಕ್ಕೆಯ ಸಂದಿನಿಂದ ತಮ್ಮ ಪುಟ್ಟ ಕಣ್ಣುಗಳನ್ನು ಸಾದ್ಯವಾದಷ್ಟು ಹಿಗ್ಗಿಸಿ ನೋಡತೊಡಗಿದವು.
"ಲೇ ಪುಟ್ಟಿ.. ನಿಂದ್ ಇನ್ನೊಂದ್ ಚಪ್ಪ್ಲಿ ಎಲ್ಲೇ??" ಎನ್ನುತಾ ಪುಟ್ಟಿಯ ಅಮ್ಮ, ಪುಟ್ಟಿ ಅಳುವುದನ್ನೂ ಗಮನಿಸದೆ ಹುಡುಕತೊಡಗಿದಳು. ಇನ್ನೆಂದೂ ತನ್ನ ಜೀವನದಲ್ಲಿ ಒಮ್ಮೆಯೂ ಚಿಕ್ಕಿ ಬಾರದು,ಕಾಣಲು ಸಿಗದು ಎಂದು ದುಃಖ ಇಮ್ಮಡಿಸಿ ಬಂದು ಪುಟ್ಟಿ ಇನ್ನೂ ಜೋರಾಗಿ ಅಳತೊಡಗಿದಳು. ಪುಟ್ಟ ಮರಿಯಿಂದಲೂ ಅಕ್ಕರೆ, ಪ್ರೀತಿಯಿಂದ ಪುಟ್ಟಿಯೋಟ್ಟಿಗೆ ಆಡುತ್ತಾ ಬೆಳೆದಿದ್ದ ಚಿಕ್ಕಿಗೆ, ಪುಟ್ಟಿಯಂದರೆ ಅಷ್ಟೇ ಒಡನಾಟ. ತನ್ನ ಮರಿಗಳನ್ನು ಪುಟ್ಟಿ ಹಾಗು ಕರಿಯನಿಗೆ ಬಿಟ್ಟು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಹತ್ತಿರ ಬಂದವರ ಕಣ್ಣಿಗೆ ಕುಕ್ಕುವಂತೆ ನೆಗೆದು, ಹಾರಿ, ಹಿಂಬಾಲಿಸಿ ಓಡಿಸುತ್ತಿತ್ತು. ಇದನ್ನು ಕಂಡು ಪುಟ್ಟಿಯ ಅಮ್ಮನಿಗಂತು ಆಶ್ಚರ್ಯವೇ ಆಶ್ಚರ್ಯ.
ಹುಡುಕಿ ಹುಡುಕಿ ಚಪ್ಪಲಿ ಸಿಗದಿದ್ದದ್ದಾಗ "ಆ ಆಳಾದ್ ಕರ್ಯಂದೆ ಅಂತ ಕಾಣ್ಸುತ್ತೆ ಕೆಲ್ಸ..ಬರ್ಲಿ ತಡಿ ಆದ್ರ್ ಕಾಲ್ ಮುರಿತೀನಿ" ಅನ್ನುತಾ ಪುಟ್ಟಿಯ ಬಳಿಗೆ ಬಂದ ಅಮ್ಮ ಪುಟ್ಟಿಯ ಕೈರೆಟ್ಟೆಯನ್ನು ಬಿಗಿಯಾಗಿ ಹಿಡಿದು ಮೆನೆಯೊಳಗೆ ಕರೆದೊಯ್ದಳು.
*******************************************************************************************************************************************************************
ಪಕ್ಕದ ಊರಿನ ಕೆಂಚನೊಟ್ಟಿಗೆ ಪುಟ್ಟಿಯ ಚಪ್ಪಲಿಗಾಗಿ ಕಾದಾಡಿ ಗಾಯಗಳೊಟ್ಟಿಗೆ ಮೈಯಲ್ಲ ಕೆಸರು ಮಾಡಿಕೊಂಡಿದ್ದ ಕರಿಯ ಅಲ್ಲಿಂದ ಸೀದಾ ಬಟ್ಟರ ಹೋಟೆಲ ಬಳಿ ಬಂದು ನಿಂತಿತು. ಅಷ್ಟರಲ್ಲಾಗಲೇ ಊಟದ ಎಲೆಗಳೆಲ್ಲವೂ ಚಿಲ್ಲಾ-ಪಿಲ್ಲಿಯಾಗಿ, ಅದರಲ್ಲಿರುವ ಅನ್ನದ ಕಾಳುಗಳು ಕಾಣದಂತೆ ತಿಂದು, ನೆಕ್ಕಿ, ಮರೆಯಗಿದ್ದವು, ಊರಿನ ಶ್ವಾನದಳಗಳು. ಇಂದು ಬೆಳಗ್ಗೆಯೇ ಎದಿಸುರು ಬಿಡುತ್ತಾ ಮೆನೆಯ ಹತ್ತಿರ ಬಂದ ಕೆಂಚ, ಟಾಮು ಹಾಗು ಸಣ್ಣಿಯ ಗುಂಪು ಚಿನ್ನಾಟವಾಡುತ್ತಾ ಕರಿಯ ಮಲಗಿರುವುದನ್ನೂ ಗಮನಿಸದೆ ಹೊರಗೆ ಬಿಟ್ಟಿದ್ದ ಪುಟ್ಟಿಯ ಚಪ್ಪಲಿಗಳನ್ನು ಸಣ್ಣಿ ಹಾಗೂ ಟಾಮು ಒಂದೊಂದನ್ನು ಬಾಯಲ್ಲಿ ಕಚ್ಚಿ ಹೊರಡುತ್ತಿರುವಾಗಲೇ, ದಾರಿಯ ಮದ್ಯದಲ್ಲೆ ಕರಿಯ ತಮ್ಮನ್ನು ಗುರ್ರೆಂದು ನಿಂತಿರುವುದನ್ನು ಕಂಡವು. ತನಗರಿವಿಲ್ಲದಂತೆ ಬಾಯಲ್ಲಿದ್ದ ಚಪ್ಪಲ್ಲಿ ಟಾಮುವಿನ ಬಾಯಿಂದ ಬಿದ್ದಿತು! ಕರಿಯನ ಪ್ರಾಂತ್ಯಕ್ಕೆ ಬಂದರಿಂದಲೋ ಏನೋ, ಕೆಂಚನು ಕರಿಯನ ಗುರ್ರಿಗೆ ಗುರ್ರ್ ಅನ್ನದೆ ಅಲ್ಲಿಂದ ಜಾಗ ಕಿತ್ತಿತು. ಆದರೆ ಸಣ್ಣಿ ಮಾತ್ರ ಕಚ್ಚಿದ್ದ ಚೆಪ್ಪಲಿಯನ್ನು ಬಿಡದೆ ಕೆಂಚನ ಹಿಂದೆ ಓಡತೊಡಗಿತು. ಸಣ್ಣಿಯ ಮೂರ್ಖತನಕ್ಕೆ ಟಾಮುವಿಗೆ ಜೀವವೇ ಬಾಯಿಗೆ ಬಂದಂತಾಗಿ, ಬೇರೆ ದಾರಿ ಕಾಣದೆ ಅದು ಕೂಡ ಕೆಂಚ ಮತ್ತು ಸಣ್ಣಿಯ ಹಿಂಬಾಲಿಸಿತು, 'ಕೈಯಂಯೋ..' ಅನ್ನುವ ಬೊಳ್ಳು ಸದ್ದಿನೊಂದಿಗೆ. ಕೂಡಲೇ ರೊಚ್ಚಿಗೆದ್ದ ಕರಿಯ, ಟಾಮುವಿನ ಬಾಯಿಂದ ಬಿದ್ದ ಚೆಪ್ಪಲಿಯನ್ನು ಬಾಯಲ್ಲಿ ಕಚ್ಚಿ ಮನೆಯ ಬಳಿ ಹಾಕಿ, ಇನ್ನೊದು ಚೆಪ್ಪಲಿಗೋಸ್ಕರ ಕೆಂಚನ ಅರೆ ಪುಕ್ಕಲು ಸೈನ್ಯವನ್ನು ಹಿಂಬಾಲಿಸಿತು. ಹಾಗಾಗಿ ಇಂದು ಭಟ್ಟರ ಹೋಟೆಲ್ಲಿಗೆ ಹೋಗಲಾಗದೆ, ಕೆರೆಯ ಮೀನುಗಳಿಗೂ ಅನ್ನವಾಕಲು ಸಾದ್ಯವಾಗಲಿಲ್ಲ.
ತುಸು ಹೊತ್ತು ಹೋಟೆಲ್ಲ ಹಿಂದೆ-ಮುಂದೆಲ್ಲ ಮುಸುತ್ತಾ ಅಲೆದು ನಂತರ ಬಾಯಲ್ಲಿ ಕಚ್ಚಿತಂದ ಚಪ್ಪಲಿಯನ್ನು ಅಲ್ಲಿಯೇ ಬಚ್ಚಿಟ್ಟು, ಯಾರೋ ಬಿಟ್ಟೆಸೆದ ಅನ್ನದ ಎಲೆಯನ್ನು ಹುಡುಕಿ,ಅದರಲ್ಲಿದ್ದ ಕೆಲವೇ ಅನ್ನದ ಅಗುಳುಗಳು ಬೀಳದಂತೆ ಕಚ್ಚಿ ಹಿಡಿದು ಕರಿಯ ಕೆರೆಯ ಬಳಿ ಓಡಿತ್ತು.
ಹಿಂದೆದ್ದು ಇಲ್ಲದ ಶಾಂತತೆ ಇಂದು ಕೆರೆಯ ಬಳಿ ಇದ್ದಿತು. ಮದ್ಯಾನದ ಬಿಸಿಲು ಚುರುಕುಗೊಳ್ಳುತ್ತಿದ್ದರೂ, ಮೀನುಗಳು ಕಾಣದಿರುವುದು ಕರಿಯನಿಗೆ ದಿಗ್ಬ್ರಮೆಯಾಯಿತು.ತುಸು ಹೊತ್ತು ಅತ್ತಿತ್ತಾ ಓಡಾಡಿ, ಕಣ್ಣನ್ನು ನೀರಿನಲ್ಲಿ ಕೆಂದ್ರೀಕರಿಸಿ,ತಲೆಯನ್ನು ಎಡಕ್ಕೂ ಬಲಕ್ಕೂ ಅರ್ದವೃತಾಕೃತಿಯಲ್ಲಿ ಸುತ್ತಿ, ತುಸುಸಮಯದ ನಂತರ ಬೌಗುಟ್ತಿತು, ಬಾಯಲ್ಲಿ ಕಚ್ಚಿ ತಂದಿದ್ದ ಅನ್ನದ ಎಲೆ ನೀರಿಗೆ ಬಿದ್ದ ಕೂಡಲೇ, ನೀರಿನ ಕೆಳಗಿದ್ದ ಮರಿ ಮೀನುಗಳು ಒಂದೊಂದಾಗೆ ಮೇಲೆ ಬರ ತೊಡಗಿದವು. ಕರಿಯ ಅವುಗಳನ್ನೇ ನೋಡುತ್ತಾ ತುಸು ಸಮಯ ನಿಂತಿತು. ಎಷ್ಟೋತ್ತಾದರೂ ಬರದ ದೊಡ್ಡ ಮೀನನ್ನು ಕಂಡು ಕರಿಯ ಮತ್ತೊಮ್ಮೆ ಬೌಗುಟ್ಟಿತು. ತಕ್ಷಣೆವೆ ಏನೋ ಒಳೆದಂತಾಗಿ ಕೆರೆಯ ಏರಿಯ ಮೇಲೋಗಿ ಸುತ್ತಲೂ ಒಮ್ಮೆ ನೋಡಿತು. ದೂರದಲೆಲ್ಲೋ ಎರಡು ರಣಹದ್ದುಗಳು ಏನನ್ನೋ ಹಿಡಿದು ಕಿತ್ತಾಡುತ್ತಿದ್ದವು. ತಕ್ಷಣವೇ ಹೆಬ್ಬುಲಿಯಂತೆ ರೊಚ್ಚಿಗೆದ್ದು, ಕುತ್ತಿಗೆಯ ಕೂದಲ ನಿಮಿರಿಸಿ ಕರಿಯ ಬೌಗುಡುತ್ತಾ ಅಲ್ಲಿಗೆ ಧಾವಿಸಿತು.
ಅಷ್ಟರಲ್ಲಾಗಲೇ ಮೀನಿನ ದೇಹವನ್ನು ಹದ್ದುಗಳು ಹಸಿವಿನ ದಾಹದಲ್ಲಿ ಕುಕ್ಕಿ, ಹರಿದು, ಮಾಂಸವನ್ನು ತಿಂದು 'ಮುಳ್ಳು'ಗಳೆಂದು ಕರೆಯುವ ದೇಹದ ಮೂಳೆಗಳು ಕಾಣುವಂತೆ ಮಾಡಿದ್ದವು. ಕರಿಯ ತಮ್ಮಲ್ಲಿಗೆ ಬಂದ ಅಬ್ಬರಕ್ಕೆ ಹದ್ದುಗಳು ಮೀನಿನ ದೇಹವನ್ನು ಅಲ್ಲಿಯೇ ಬಿಟ್ಟು ಹಾರಿದವು. ಮೀನಿನ ಬಳಿಗೆ ಬಂದ ಕರಿಯ ಸ್ವಲ್ಪ ಹೊತ್ತು ಸುಮ್ಮನಿದ್ದು ವಿಕಾರವಾಗಿ ಕೂಗತೊಡಗಿತು. ಇಂದು ಬಳಗ್ಗೆ ತಾನು ಬೇಗನೆ ಬಂದಿದ್ದರೆ ಮೀನನ್ನು ಉಳಿಸಬಹುದಿತ್ತೆನೋ ಎಂಬ ಮೂಕ ಪ್ರಾಣಿಯ ಬವಣೆಯ ರೋದನೆ! ನಂತರ ಅಳಿದುಳಿದ ಮೀನನ್ನು ಬಾಯಲ್ಲಿ ಕಚ್ಚಿ, ಕೆರೆಯಿಂದ ಗದ್ದೆಗಳಿಗೆ ಮಾಡಿದ್ದ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಬಿಟ್ಟಿತು. ಕೆರೆಯ ಬಳಿಗೆ ಬಂದು ನೋಡುವಷ್ಟರಲ್ಲೇ ಬಾಯಲ್ಲಿ ಕಚ್ಚಿ ತಂದು ಬಿಟ್ಟಿದ್ದ ಅನ್ನದ ಅಗುಳುಗಳನ್ನೆಲ್ಲಾ ಮರಿ ಮೀನುಗಳು ತಿಂದು, ಲವಲವಿಕೆಯಿನದ ನೀರಿನಲ್ಲಿ ಆಟವಾಡುತ್ತಿದ್ದವು. ಇನ್ನುಮುಂದೆ ಇವುಗಳ ದಿನದ ಅನ್ನದ ಜವಾಬ್ದಾರಿ ತನ್ನದೆನ್ನುವಂಬುವಂತೆ ಅವುಗಳನ್ನು ಕರುಣೆಯ ಕಣ್ಣುಗಳಿಂದ ಒಮ್ಮೆ ನೋಡಿ, ಮತ್ತೊಮ್ಮೆ ವಿಕಾರವಾಗಿ ಕೂಗಿ, ಸುತ್ತ ಮುತ್ತಲು ಎಲ್ಲಾದರೂ ಹದ್ದುಗಳಿವೆಯೋ ಎಂದು ನೋಡಿ ಅಲ್ಲಿಂದ ಭಟ್ಟರ ಹೋಟೆಲಿನ ಬಳಿಗೆ ಹೋಗಿ ಬಚ್ಚಿಟ್ಟಿದ್ದ ಪುಟ್ಟಿಯ ಚಪ್ಪಲಿಯನ್ನು ಕಚ್ಚಿ ಮನೆಯ ಕಡೆ ಓಡಿತು. ಮದ್ಯಾನದ ಉರಿಬಿಸಿಲಿಗಾಗಲೇ ಕರಿಯನ ಮೈಯ ಕೆಸರು ಒಣಗಿ ಗಟ್ಟಿಯಾಗಿತ್ತು. ಬಾಯಲ್ಲಿ ಚಪ್ಪಲಿಯನ್ನು ಕಚ್ಚಿ ಇತ್ತಲೇ ಬರುತ್ತಿದ್ದ ಕರಿಯನನ್ನು ನೋಡಿ ಪುಟ್ಟಿಯ ಅಮ್ಮ "ಬಂತು ನೋಡು, ಊರ್ ಹಾಳ್ಮಡಕ್ ಹೋಗಿ ಹೆಂಗ್ ಕೆಸ್ರು ಮೆತ್ಕೊಂಡಿದೆ " ಅಂದಳು. ಊಟ ಬೇಡವೆಂದು ಅಳುತ್ತಾ ಮಲಗಿದ್ದ ಪುಟ್ಟಿ, ಕರಿಯ ಬಂದನೆಂದು ಕೇಳಿದಾಗ ಎದ್ದು ಕಿಟಕಿಯನ್ನು ತೆರೆದಳು. ಬಾಯಲ್ಲಿ ಕಚ್ಚಿ ತಂದ ಚಪ್ಪಲಿಯನ್ನು ಅಲ್ಲಿಯೇ ಮನೆಯ ಮುಂದೆ ಬಿಟ್ಟು ಪಕ್ಕಕೆ ತಿರುಗಿತಷ್ಟೇ, ಪುಟ್ಟಿಯ ಅಮ್ಮನ ಕೈಯಿಂದ ಬೀಸಿದ ಸೌದೆಯ ತುದಿ ರಪಾರನೆ ಕರಿಯನ ಮುಖಕ್ಕೆ ಬಡಿಯಿತು. "ಚಪ್ಲಿ ಕಚ್ಚ್ಕೊಂಡ್ ಹೋಗ್ತಿಯ.." ಎನ್ನುತ ಇನ್ನೊಂದು ಪೆಟ್ಟನ್ನು ಕರಿಯನ ಬೆನ್ನಿನ ಮೇಲೆ ಬಾರಿಸಿದಳು.ಅಳುತ್ತಾ ಓಡಿಬಂದ ಪುಟ್ಟಿಯನ್ನು ಮೆನೆಯೊಳಗೆ ಎಳೆದೊಯ್ದಳು. ಆ ನೋವಿನಲ್ಲೂ ಪುಟ್ಟಿಯನ್ನು ಕಂಡಾಕ್ಷಣ ಖುಷಿಯ ಕಣ್ಣುಗಳಲ್ಲಿ ಬಾಲವನ್ನು ಅಲ್ಲಾಡಿಸಿ, ಸ್ವಲ್ಪ ಹೊತ್ತು ನೋವಿನಿಂದ ಕೂಗಿ, ಸುಮ್ಮನಾಗಿ ಚಿಕ್ಕಿಯ ಕುಕ್ಕೆಯ ಪಕ್ಕದಲ್ಲಿ ತನಗಾಗಿ ಹಾಕಿದ ಗೋಣಿಚೀಲದ ಮೇಲೆ ಮುದುಡಿ ಮಲಗಿತು. ಹಿಂದೆಂದೂ ಕೂಡಿ ಹಾಕದ ಚಿಕ್ಕಿಯ 'ಸಂಸಾರ'ವನ್ನು ಇನ್ನೂ ಕುಕ್ಕೆಯ ಒಳಗೆ ಇಟ್ಟಿದ್ದನ್ನು ಕಂಡು ಕರಿಯ, ತನ್ನ ಕತ್ತನ್ನೆತ್ತಿ, ಕುಕ್ಕೆಯ ಒಳಗೆ ಕಣ್ಣಾಯಿಸಿತು. ಕೂಗಿ, ಕೂಗಿ ಸುಸ್ತಾಗಿ ಮಲಗಿದ್ದ ಚಿಕ್ಕಿಯ ಮಕ್ಕಳು ಕರಿಯನ ಕಂಡು ಅದರ ಮೂಗಿನ ಬಳಿ ಬಂದು ಚೀಯ್ಗುಡತೊಡಗಿಡವು. ಯಾರು ಇಲ್ಲದ ಅಬಲೆಯರಿಗೆ ಪೋಷಕರು ಸಿಕ್ಕಿದಂತೆ! ಪುಟ್ಟಿಯ ಅಮ್ಮ ಒಳಗಿನಿಂದ ಕರಿಯನಿಗೆ ತಿನ್ನಲು ಊಟವನ್ನು ಹಾಕಿದಳು. ಅದರಲ್ಲಿ ಅನ್ನ, ಅಂಬಲಿ ಹಾಗು ಸಾರಿನೋಟ್ಟಿಗೆ ಕೆಲ ಮೂಳೆಗಳು ಸೇರೆದ್ದವು. ಚಿಕ್ಕಿಯ ಮೂಳೆಗಳೆಂದು ಅರಿಯಲು ಕರಿಯನಿಗೆ ತುಂಬ ಸಮಯ ಹಿಡಿಯಲಿಲ್ಲ!!! ಹಾಕಿದ್ದ ಊಟವನ್ನು ಮೂಸು ನೋಡದೆ ಕರಿಯ ಬುಟ್ಟಿಯ ಪಕ್ಕಕ್ಕೆ ಬಂದು ತನ್ನ ಹಿಂಗಾಲುಗಳ ಮೇಲೆ ಮುಖ ಹಾಕಿ, ಕುಕ್ಕೆಯಲ್ಲಿದ್ದ ಮರಿಗಳನ್ನೇ ನೋಡುತ್ತಾ ಮಲಗಿತು.
ಕರಿಯ ಕಣ್ಣು ಬಿಡುವಾಗಲೇ ಸಂಜೆಯಾಗಿತ್ತು. ಕೆಂಚನೊಟ್ಟಿಗೆ ಕಿತ್ತಾಡಿ,ಬೆಳಗ್ಗಿನಿಂದ ಏನೂ ತಿನ್ನದೆ, ಮನೆಯ ಅಮ್ಮನಿಂದ ಮಾಡಿರದ ತಪ್ಪಿಗೆ ಕಣ್ಣು ಊದುವಂತೆ ಒಡೆತ ತಿಂದ ಕರಿಯ ತುಸು ಜಾಸ್ತಿ ಹೊತ್ತೆ ಮಲಗಿತ್ತು. ಅಷ್ಟರಲ್ಲಾಗಲೇ ಪುಟ್ಟಿ ಒಳಗಿನಿಂದ ಒಂದು ಲೋಟದಲ್ಲಿ ಹರಳೆಣ್ಣೆಯನ್ನು ತಂದು ಕರಿಯನ ಕಣ್ಣುಗಳಿಗೆ ಹಚ್ಚುತ್ತಿದ್ದಳು. ಕೃತಜ್ಞತೆಯ ಭಾವದಿಂದ, ಪ್ರೀತಿಯಿಂದ, ಕರಿಯ ಅವಳ ಕೈಗಳನ್ನೇ ನೆಕ್ಕತೊಡಗಿತು. ಎಣ್ಣೆ ಹಚ್ಚಿದ ನಂತರ ಪುಟ್ಟಿ ಕರಿಯನ ತಟ್ಟೆಯನ್ನು ಅದರ ಪಕ್ಕಕ್ಕಿಟ್ಟಳು. ಕರಿಯನನ್ನು ಚೆನ್ನಾಗಿ ಅರಿತಿದ್ದ ಆರು ವರ್ಷದ ಪುಟ್ಟಿ, ಕರಿಯನಿಗೊಸ್ಕರ ಅದರಿಷ್ಟವಾದ ಹಾಲು ಮತ್ತು ಬಿಸ್ಕತ್ತನ್ನು ತಟ್ಟೆಗೆ ಹಾಕಿದ್ದಳು. ತನ್ನ ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಕಳೆದುಕೊಂಡು ಖಿನ್ನವಾಗಿದ್ದ ಕರಿಯ, ಹಸಿವಿಗಿಂತ ಜಾಸ್ತಿ ಏಕಾಂತದ ಮೊರೆ ಹೊಯಿತು. ಕುಕ್ಕೆಯ ಮರಿಗಳನ್ನೊಮ್ಮೆ ನೋಡಿ, ಪುಟ್ಟಿ ತಂದಿಟ್ಟ ಹಾಲು ಬಿಸ್ಕತ್ತನ್ನೂ ತಿನ್ನದೆ, ಊರ ದೇವಸ್ಥಾನದ ಬಳಿ ಹೊರಟಿತು, ಆಕೆ ಕೂಗಿ ಏನೋ ಹೇಳುತ್ತಿರುವುದನ್ನು ಲೆಕ್ಕಿಸದೆ.
ಸಂಜೆಯ ಸೂರ್ಯ ಅಷ್ಟರಲ್ಲಾಗಲೇ ನಿದಾನವಾಗಿ ಪಶ್ಚಿಮದಲ್ಲಿ ಇಳಿಯುತ್ತಿದ್ದ, ಮೂಖ ಪ್ರಾಣಿಗಳ ಮೂಖ ವೇದನೆಯನ್ನು, ಮೂಖವಾಗಿ ನೋಡುತ್ತಾ. ತಂಪಾದ ಗಾಳಿ ಎಲ್ಲೆಡೆ ಹರಿದಾಡುತ್ತಿತ್ತು. ಊರ ದೇವಸ್ಥಾನದ ಕಟ್ಟೆಯ ಮೇಲೆ ಕೂತು, ಎತ್ತಲೋ ನೋಡುತ್ತ, ಉದ್ದ ನಾಲಗೆಯನ್ನು ಹೊರ ಹಾಕಿ ಏದುಸಿರು ಬಿಡುತ್ತಾ, ಯಾವುದೊ ಆಲೋಚನೆಯಲ್ಲಿ ಕರಿಯ ಮಗ್ನವಾಗಿತ್ತು. ಒಣಗಿದ ಕೆಸರಿನಿಂದ ದೇಹವೆಲ್ಲ ಕಂದು ಮಿಶ್ರಿತ ಕಪ್ಪಾಗಿ, ಇದು ಕರಿಯನೆ ಎಂದು ಕ್ಷಣಮಾತ್ರದಲ್ಲಿ ಕಂಡು ಹಿಡಿಯುವುದು ಕಷ್ಟವಾಗಿತ್ತು. ದೇಶ ಸ್ವಚ ಆಂದೋಲನದ ಬ್ಯಾನರನ್ನು ಹಾಕಿ, ಊರೆಲ್ಲ ಸುತ್ತಿದ ವಾಹನ ಕೊನೆಯದಾಗಿ ಈ ಊರಿಗೆ ಬಂದಿತು. ವಾಹನದ ತುಂಬ ಇದ್ದಿದ್ದು, ಸತ್ತು ಬಿದ್ದ 'ನಿಯತ್ತಿನ' ನಾಯಿಗಳೇ, ದೇಶದ 'ಅಬಿವೃದ್ದಿ'ಗೆಂದು ಜೀವ ತೆತ್ತ ಅಮಾಯಕ ಪ್ರಾಣಿಗಳ ದೇಹಗಳೇ! ನಾಯಿ ಯಾರದೆಂದು ದೂರದಿಂದ ಯಾರನ್ನೋ ಕೇಳಿ, ಕರಿಯನ ಕೊಳಚೆ ಬಣ್ಣದ ದೇಹವನ್ನು ದೂರದಿಂದ ಅವರು ಗುರುತಿಸದೆ, ಗೊತ್ತಿಲ್ಲವೆಂದೂ, ಎದ್ದು ಓಡುವುದರ ಮೊದಲೇ ಹಿಡಿಯುವಂತೆ ಸಲಹೆಯನ್ನೂ ನೀಡಿದರು. ಊರಿನ ಕೆರೆಯ ಮೀನು ಹಾಗು ಚಿಕ್ಕಿಯ ಜೀವನ ಮತ್ತು ಅವುಗಳ ಮರಿಗಳ ಬಗ್ಗೆಯೊ ಯೋಚಿಸುತ್ತಾ ಏನೋ ಕರಿಯ ತನ್ನ ಮುಂಗಾಲುಗಳ ಮೇಲೆ ಮುಖವಿಟ್ಟು ಮಲಗಿತ್ತು. ಹಿಂದಿನಿಂದ ಬಂದ ಸ್ವಚ್ಚ ದೇಶದ ಕೊಳಕು ಪ್ರಜೆಗಳು ಕರಿಯನಿಗರಿಯದಂತೆ ಅದರ ಕುತ್ತಿಗೆಗೆ ಹಗ್ಗದ ನುಣಿಕೆಯನ್ನು ಹಾಕಿದ್ದರು! ಕೆಲ ಕ್ಷಣಗಳಲ್ಲೇ ಕೂಗಿ, ಕಿರುಚಿ, ಒದ್ದಾಡಿ ಕರಿಯ ಸದ್ದಿಲ್ಲದಂತಾಯಿತು! ಎತ್ತಾಲಾಗದೆ, ತಿಣುಕಾಡಿ ದೇಶದ ಸತ್'ಪ್ರಜೆಗಳು' ಕರಿಯನ ದೇಹವನ್ನುವಾಹನದೊಳಗೆ ಎಸೆದರು....
ಚಿಕ್ಕಿಯ ಕುಯ್ದರಿಂದಲೋ ಅಥವಾ ಮಧ್ಯಾನ ಸರಿಯಾಗಿ ಊಟ ಮಾಡದಿದ್ದರಿಂದಲೋ ಅಥವಾ 'ನಾಯಿ ಹಿಡಿಯುವವರು ಬಂದಿದ್ದಾರೆ , ಎಲ್ಲಿಗೂ ಹೋಗಬೇಡ' ಎಂದು ಎಚ್ಚರಿಸಿದ್ದನ್ನು ಕೇಳದೆ ಹೊರಟ ಕರಿಯನ ನಿರ್ಲಕ್ಷತನವೋ ಏನೋ, ಪುಟ್ಟಿಗೆ ಜ್ವರ ವಿಪರೀತವಾಯಿತು! ಮನೆಯ ಪಕ್ಕಕ್ಕೆ ಎಸೆದಿದ್ದ ಚಿಕ್ಕಿಯ ಪುಕ್ಕಗಳು ಸಂಜೆಯ ಗಾಳಿಗೆ ಹಾರಿ, ಒಂದೆರೆಡು ಕುಕ್ಕೆಯ ಬಳಿ ಬಂದು ಬಿದ್ದವು. ಅಮ್ಮ ಬಂದಳೆಂದು ಮರಿಗಳು ಮತ್ತೆ ಎದ್ದು ಕುಕ್ಕೆಯ ಸಂದಿಗೆ ಬಂದವು. ಬೆಳಗ್ಗಿನಿಂದ ಕಾಣದ ದೊಡ್ಡ ಮೀನನ್ನು ಹುಡುಕುವಂತೆ ಮರಿ ಮೀನುಗಳು ನೀರಿನ ಮೇಲೆ ಹಾರ ತೊಡಗಿದ್ದವು, 'ಪುಳಕ್-ಪುಳ್ಕ್' ಸದ್ದಿನೊಂದಿಗೆ.. ಇವಲ್ಲವನ್ನು ನೋಡಲಾಗದೆ ಎಂಬಂತೆ ಸೂರ್ಯ ಬೇಗನೆ ಪಶ್ಚಿಮದಲ್ಲಿ ಜಾರಿದ.
*************************