ಮೂಡಬಿದಿರೆಯಲ್ಲಿ ಕೃಷಿಸಿರಿ

ಮೂಡಬಿದಿರೆಯಲ್ಲಿ ಕೃಷಿಸಿರಿ

ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ವರುಷದಿಂದ ವರುಷಕ್ಕೆ ಕನ್ನಡ ನಾಡು-ನುಡಿ-ಸಂಸ್ಕತಿಯ ರಾಷ್ಟ್ರೀಯ ಸಮ್ಮೇಳನವಾಗಿ ಬೆಳೆಯುತ್ತಿದೆ. ಈ ವರುಷ ನುಡಿಸಿರಿಯಲ್ಲಿ ನೋಂದಾಯಿಸಿ ಭಾಗವಹಿಸಿದವರು ಸುಮಾರು 40,000 ಜನರು. ಇವರಲ್ಲದೆ, ಪ್ರತಿದಿನ ತಂಡತಂಡವಾಗಿ ಬಂದು ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳು ಹಾಗೂ ಆಸಕ್ತರು ಸುಮಾರು 60,000. ಮೂರು ದಿನಗಳ ಸಂಭ್ರಮದ ನುಡಿಹಬ್ಬವನ್ನು ಕಣ್ತುಂಬಿಕೋಂಡವರು ಮೂರು ಲಕ್ಷಕ್ಕಿಂತ ಜಾಸ್ತಿ  ಜನರು!
ಶ್ರೀಮತಿ ಸಾಯಿನರಸಿಂಹನ್ ಅವರ ಉದಯರಾಗದೊಂದಿಗೆ 2016ರ ನವೆಂಬರ್ 18ರ ಮುಂಜಾನೆ 5.30 ಗಂಟೆಗೆ ನುಡಿಸಿರಿ ಆರಂಭ. ಅನಂತರ ಒಂದು ತಾಸಿನ ಸಾಂಸ್ಕತಿಕ ಮೆರವಣಿಗೆ. ತದನಂತರ ಶ್ರೀಮತಿ ಸುಮಿತ್ರ ಬಾಯಿ ಅವರಿಂದ ಉದ್ಘಾಟನೆ.
ಈ ವರುಷದ ನುಡಿಸಿರಿಯ ವಿಶೇಷಗಳಲ್ಲೊಂದು  ಮೂರು ದಿನಗಳ "ಕೃಷಿಸಿರಿ" ಮತ್ತು ಫಲಪುಷ್ಪಗೆಡ್ಡೆ ಪ್ರದರ್ಶನ. ಒಂದು ದಿನ ಮುಂಚೆಯೇ, 17.11.2016 ರಂದು ಕೃಷಿಸಿರಿ ಉದ್ಘಾಟನೆ - ಹಿರಿಯರಾದ ಮಿಜಾರುಗುತ್ತು ಆನಂದ ಆಳ್ವ ಅವರಿಂದ. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಚ್.ಎಲ್. ಮಂಜುನಾಥ , ಕಾರ್ಯನಿರ್ವಾಹಕ ನಿರ್ದೇಶಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನೆ ಅವರು ನೀಡಿದ ಸಲಹೆ: ಕೃಷಿರಂಗ ಹಲವು ಆತಂಕಗಳನ್ನು ಎದುರಿಸುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಕೃಷಿಕರು ತಮ್ಮ ಚಿಂತನಾ ಲಹರಿ ಬದಲಾಯಿಸಿ, ವೈಜ್ನಾನಿಕ ವಿಧಾನಗಳನ್ನು ಅಳವಡಿಸಿ, ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು.
ನುಡಿಸಿರಿ ರೂವಾರಿ ಡಾ. ಎಂ. ಮೋಹನ ಆಳ್ವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೃಷಿಸಿರಿಯ ಆಶಯವನ್ನು ಈ ಮಾತುಗಳಲ್ಲಿ ಕಟ್ಟಿಕೊಟ್ಟರು: ಕೃಷಿಯಿಲ್ಲದ ಬದುಕು ಇಲ್ಲ. ಕೃಷಿಕರು ಹತಾಶೆಯಿಂದ ಹೊರಬಂದು ಆಶಾದಾಯಕ ವಾತಾವರಣ ನಿರ್ಮಿಸಿಕೊಳ್ಳಬೇಕು. ಹಾಗೆಯೇ ಯುವಜನರು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.
ಕೃಷಿಸಿರಿಯಲ್ಲಿ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು, ಉಪಕರಣಗಳನ್ನು, ಸೇವೆಗಳನ್ನು ಮಾರಾಟ ಮಾಡುವ ಸಾಲುಸಾಲು ಮಳಿಗೆಗಳು: ಬೀಜಗಳು, ಸಸಿಗಳು, ಗೊಬ್ಬರಗಳು ; ಕತ್ತಿ, ಹಾರೆ, ಕೊಯ್ಲುಕೋಲು, ಪಂಪುಸೆಟ್‌, ಪೈಪ್, ಪರ್ವಟಿರ್ಲ್ಲ,  ಟ್ರಾಕ್ರ್ಟ , ಕಳೆ/ಮರ ಕತ್ತರಿಸುವ ಯಂತ್ರಗಳು, ಪ್ಲಾಸ್ಟಿಕ್ ಬುಟ್ಟಿ ಅಲ್ಯೂಮಿನಿಯಂ ಏಣಿ ಇತ್ಯಾದಿ ಉಪಕರಣಗಳು; ಮಳೆನೀರು ಕೊಯ್ಲು, ಕೊಳವೆಬಾವಿ ಜಲ ಮರುಪೂರಣ ಸಾಧನಗಳು; ಮೌಲ್ಯವರ್ಧಿತ ಉತ್ಪನ್ನಗಳು. ಜೊತೆಗೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳ ಮಳಿಗೆಗಳು. ಅಲ್ಲಿನ ಕೆಲವು ನೋಟಗಳು ಇಲ್ಲಿವೆ.