ಮೂಡಿದ್ದರೆ ಮಹದೇವ ..

Submitted by nageshamysore on Fri, 01/31/2014 - 21:32

ಈಗಿನ ಒತ್ತಡದ ಬದುಕಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಅನಿವಾರ್ಯ. ಹೀಗಾಗಿ ಒಂದರ ಹಿಂದೊಂದರಂತೆ ನಡೆಸುವ ಕ್ರಿಯೆಗಳಲ್ಲಿ ಮನದ ಆಸಕ್ತಿ ಒಂದೆ ತೆರನಾಗಿ ಇರುವುದೆಂದು ಹೇಳಬರುವುದಿಲ್ಲ. ಕೆಲ್ಲವೊಮ್ಮೆ ಉತ್ಸಾಹದ ಬುಗ್ಗೆ ಚಿಮ್ಮುತ್ತಿದ್ದರೆ, ಮತ್ತೆ ಕೆಲವೊಮ್ಮೆ ನಿರ್ಲಿಪ್ತತೆ ಮನೆ ಮಾಡಿರುತ್ತದೆ. ಮಿಕ್ಕ ಬಾರಿ ಆಕಾಶವೆ ತಲೆಯ ಮೇಲೆ ಬಿದ್ದ ನೀರವ ಭಾವ; ಏನು ಮಾಡಲೂ ಮನಸೆ ಇಲ್ಲದ ಉದಾಸ ಭಾವ, ಖಿನ್ನ ಮನದ ಕಾಡುವಿಕೆ. 

ಮನದ ಭಾವ ಏನೆ ಇರಲಿ ಅದು ನಾವು ಮಾಡುವ ಪ್ರತಿ ಕೆಲಸದ ಮೇಲೂ ಪರಿಣಾಮ ಬೀರದೆ ಇರದು. ಮನೆಯಲ್ಲಿ ಯಾವುದೊ ಕಾರಣಕ್ಕೆ ಜಗಳವಾಡಿಕೊಂಡು ಹೋಗಿದ್ದರೆ ಆ ಮೂಡು ಆಫೀಸಿನ ವಾತಾವರಣದಲ್ಲೂ ಪ್ರಭಾವ ಬೀರುವುದು ಎಲ್ಲರಿಗು ಅನುಭವವಿರುವ ಸಂಗತಿ. ಅಂತೆಯೆ ಯಾವಾವುದೊ ಕಾರಣಗಳಿಂದ ಯಾವಾವುದೊ ಬಗೆಯ ವಿಶ್ವರೂಪ ತಾಳುವ ಮನದ ಬಗೆಯನ್ನು ಹೀಗೆ ಎಂದು ಮುಂಚಿತವಾಗಿ ನಿಖರವಾಗಿ ಹೇಳಬರದು. 

ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ, ಮೂಡಿದ್ದಂತೆ ಮಹದೇವ. ಆ ಮೂಡಿನ ವೈವಿಧ್ಯಮಯ ರೂಪಿನ ಲಘುಲಹರಿ ಈ ಕೆಳಗಿನ ಪದ್ಯ. ಇದನ್ನು ಓದುವಾಗಲೂ ಅಷ್ಟೆ -  ಸರಿಯಾದ ಮೂಡಿದ್ದರೆ ಹಿಡಿಸೀತು, ಮೂಡು ಸರಿಯಿಲ್ಲವಾದರೆ ಇಲ್ಲವಾದರೆ ಅಷ್ಟಕ್ಕಷ್ಟೆ. ಹೇಗೆ ಬಣ್ಣಿಸಲಿ ಮೂಡೆ, ನಿನ್ನ ವಿಶ್ವ ರೂಪವಾ....

ಮೂಡಿದ್ದರೆ ಮಹದೇವ 
____________________

ಮೂಡಿದ್ದರೆ ಮಹದೇವ 
ಏನೆಲ್ಲವ ಮಾಡಿಸಿಬಿಡುವ 
ಮೂಢರನು ಮೇಲೆಬ್ಬಿಸಿಬಿಡುವ
ಗುಡ್ಡದ ಕಲ್ಲನೆ ಜರುಗಿಸಿಬಿಡುವ ||

ಎಲ್ಲಿಂದಲೊ ಬಂದಂತೆ ಹುರುಪು
ಉತ್ಸಾಹದ ಗೊಂಚಲ ನೆನಪು
ಚದುರಿದ್ದೆಲ್ಲ ಕುದುರಿಸಿಬಿಡುವ
ಬಂಡೆಕಲ್ಲ ಮನ ಕದಲಿಸಿಬಿಡುವ ||

ಆಲಸಿಕೆಯೆಲ್ಲಾ ಮಂಗಮಾಯ
ಮುನ್ನುಗ್ಗುವುದೊಂದೆ ನ್ಯಾಯ
ಗಣಿಸದೆ ಅಡ್ಡಿ ಆತಂಕ ಅಪಾಯ
ಹೂವೆತ್ತಿದಂತೆ ನಡೆಸಿಯೆಬಿಡುವ ||

ಪರಿಗಣಿಸದೆ ದೂರದ ಹಾದಿ
ಮೆಟ್ಟುತ ಕಾಡುವ ಒಳ ವ್ಯಾಧಿ
ಮಾಡದೆ ಯಾರಿಗೂ ಫಿರ್ಯಾದಿ
ನಡೆದಿರು ನೋಡದೆ ಎಡಬಲ ಬದಿ ||

ಮೂಡಿಲ್ಲದ ಮನವೆ ಕಿರುಬೆಟ್ಟ
ಶಿಖರವಿಟ್ಟು ಕಟ್ಟಿದಂತೆ ಜುಟ್ಟ
ಭಾರಕೆ ಬಾಗಿದ ಶಿರ ನಿಖರ
ತಲೆಯೊಳಗೇ ಸೇರಿದ ಭೀಕರ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು