ಮೂರನೆಯ ಒಂಟೆ

ವ್ಯಾಪಾರಿಯೊಬ್ಬರು ಉಜ್ಜಯನಿಯ ಸಂತೆಗೆ ಪ್ರತಿ ವಾರ ಹೋಗುತ್ತಿದ್ದರು. ವ್ಯಾಪಾರದ ಸಾಮಾನುಗಳನ್ನು ಒಂಟೆಗಳ ಮೇಲೆ ಹೇರಿಕೊಂಡು ಹೋಗುವ ಪರಿಪಾಠ. ಒಂದು ದಿನ ಸಂತೆಯ ವ್ಯಾಪಾರ ಮುಗಿಸಿಕೊಂಡು, ತನ್ನ ಮೂರು ಒಂಟೆಗಳೊಂದಿಗೆ ತನ್ನ ಊರಿಗೆ ವಾಪಾಸಾಗುತ್ತಿದ್ದ. ಆದರೆ, ಹೊರಟಿದ್ದು ವಿಳಂಬವಾದುದರಿಂದ ಅರ್ಧ ದಾರಿಗೆ ಬರುವಷ್ಟರಲ್ಲಿ ನಸುಗತ್ತಲಾಯಿತು. ಹತ್ತಿರದ ಗ್ರಾಮವೊಂದರ ಧರ್ಮಶಾಲೆಯಲ್ಲಿ ಆ ರಾತ್ರಿ ತಂಗುವುದು ಎಂದು ನಿರ್ಧರಿಸಿ, ಒಂಟೆಗಳೊಂದಿಗೆ ಧರ್ಮಶಾಲೆಯ ಬಳಿ ಬಂದ.
ಧರ್ಮಶಾಲೆಯ ಬಳಿ ಒಂಟೆಗಳನ್ನು ಮರವೊಂದಕ್ಕೆ ಕಟ್ಟಿಹಾಕಲು ಸಿದ್ಧನಾದ. ಆದರೆ, ಆತನ ಬಳಿ ಎರಡು ಹಗ್ಗ ಮಾತ್ರವಿದ್ದವು. ಮೂರನೆಯ ಒಂಟೆಯನ್ನು ಕಟ್ಟಲು ಹಗ್ಗ ಇರಲಿಲ್ಲ. ಮೂರನೆಯ ಒಂಟೆಯು ತನ್ನ ಯಜಮಾನನು ಹಗ್ಗದಿಂದ ತನ್ನನ್ನು ಕಟ್ಟಿ ಹಾಕುತ್ತಾನೆ. ಕೂಡಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬಹುದು ಎಂದು ಕಾಯುತ್ತಾ ನಿಂತಿತು. ಆದರೆ, ವ್ಯಾಪಾರಿಯ ಬಳಿ ಹಗ್ಗ ಇಲ್ಲದೇ ಇದ್ದುದರಿಂದ, ಏನು ಮಾಡುವುದೆಂದು ಯೋಚಿಸತೊಡಗಿದ.
ಅದೇ ಧರ್ಮಶಾಲೆಯಲ್ಲಿ ರಾತ್ರಿ ತಂಗಲು ಬಂದಿದ್ದ ಯೋಗಿಯೊಬ್ಬರು ವ್ಯಾಪಾರಿಯ ಪರದಾಟವನ್ನು ನೋಡುತ್ತಾ ನಸುನಗುತ್ತಿದ್ದರು. ಯೋಗಿಯು ನಸುನಗುತ್ತಿದ್ದುದನ್ನು ನೋಡಿದ ವ್ಯಾಪಾರಿಯು “ಸ್ವಾಮಿ, ನಿಮಗೆ ನಗು ಬರುತ್ತಿದೆ. ನನಗಿಲ್ಲಿ ಸಂಕಟ. ಎರಡು ಒಂಟೆಗಳನ್ನು ಕಟ್ಟಿ ಹಾಕಿದ್ದೇನೆ. ಮೂರನೆಯ ಒಂಟೆಯನ್ನು ಕಟ್ಟಿ ಹಾಕಲು ನನ್ನ ಬಳಿ ಹಗ್ಗ ಇಲ್ಲ. ಇದನ್ನು ಬೇಗ ಕಟ್ಟಿ ಹಾಕಿ, ಇವಕ್ಕೆ ನೀರು ಕುಡಿಸಬೇಕು" ಎಂದ.
ಯೋಗಿಯು ಇನ್ನಷ್ಟು ಜೋರಾಗಿ ನಗತೊಡಗಿದರು. “ಸ್ವಾಮಿ, ನೀವು ನಗುತ್ತಲೇ ಇದ್ದೀರಾ? ನನಗೊಂದು ಹಗ್ಗ ಕೊಡಿಸಿ" ಎಂದ ವ್ಯಾಪಾರಿ.
“ನಿನ್ನ ಪರದಾಟ ನೋಡಿ ನಗು ಬಂದದ್ದು ನಿಜ. ಆದರೆ, ಅದಕ್ಕೆ ನಿಜವಾದ ಕಾರಣ ಬೇರೆಯೇ ಇದೆ. ಆ ಕಾರಣದಲ್ಲೇ ಪರಿಹಾರವೂ ಇದೆ.” ಎಂದರು ಯೋಗಿ.
“ಅದೇನು ಹೇಳಿ ಸ್ವಾಮಿ" ಎಂದ ವ್ಯಾಪಾರಿ.
“ಇವೆಲ್ಲವೂ ನಿನ್ನದೇ ಒಂಟೆಗಳೋ?” ಎಂದು ಯೋಗಿ ಕೇಳಿದರು.
“ಹೌದು" ಎಂದ ವ್ಯಾಪಾರಿ. “ಹಾಗಿದ್ದಲ್ಲಿ, ಒಂದು ಕೆಲಸ ಮಾಡು. ಮೂರನೆಯ ಒಂಟೆಯನ್ನು ಮರದ ಬಳಿ ಕೊಂಡೊಯ್ದು, ಅದನ್ನು ಕಾಲ್ಪನಿಕವಾಗಿ ಕಟ್ಟಿ ಹಾಕುವಂತೆ ನಾಟಕ ಮಾಡು" ಎಂದ ಯೋಗಿ.
“ಸ್ವಾಮಿ, ಸುಮ್ಮನೆ ತಮಾಷೆ ಮಾಡಬೇಡಿ. ಕಾಲ್ಪನಿಕವಾಗಿ ಕಟ್ಟಿ ಹಾಕುವುದು ಎಂದರೆ ಹೇಗೆ?” ಎಂದು ವ್ಯಾಪಾರಿ ಕೇಳಿದ.
“ತಮಾಷೆ ಅಲ್ಲ, ಆ ಒಂಟೆಯ ಕುತ್ತಿಗೆಯನ್ನು ಹಿಡಿದು, ಹಗ್ಗವು ಕೈಯಲ್ಲಿದೆ ಎಂದು ಕಲ್ಪಿಸಿಕೊಂಡು, ಮರದ ಬಳಿ ಕೊಂಡೊಯ್ದು, ಹಗ್ಗ ಕಟ್ಟುವಾಗ ಏನೇನು ಮಾಡುತ್ತಿಯೋ, ಅದೆಲ್ಲವನ್ನೂ ಮಾಡು" ಎಂದರು ಯೋಗಿ.
ವ್ಯಾಪಾರಿಯು ಅರೆ ಮನಸ್ಸಿನಿಂದ, ಯೋಗಿ ಹೇಳಿದಂತೆ, ಒಂಟೆಯನ್ನು ಮರದ ಹತ್ತಿರ ಕೊಂಡೊಯ್ದು, ಅದರ ಕುತ್ತಿಗೆಯನ್ನು ಮುಟ್ಟಿ, ಹಗ್ಗ ಬಿಗಿದಂತೆ ನಟಿಸಿ, ಮರಕ್ಕೆ ಕಟ್ಟಿಹಾಕುವಂತೆ ನಟಿಸಿದ. ಒಂಟೆಯು ವಿಧೇಯವಾಗಿ ತಲೆ ಬಾಗಿತು. ಹಗ್ಗ ಕಟ್ಟಿದ ಒಂಟೆಯಂತೆಯೇ, ಆ ಮರದ ಬುಡದಲ್ಲಿ ನಿಂತು, ನೀರಿಗಾಗಿ ಕಾಯತೊಡಗಿತು. ವ್ಯಾಪಾರಿಯು ಯೋಗಿಗೆ ಧನ್ಯವಾದ ಹೇಳಿ, ಒಂಟೆಗಳಿಗೆ ನೀರು ಮತ್ತು ಆಹಾರ ನೀಡಿದ.
ಮರುದಿನ ಬೆಳಿಗ್ಗೆ ವ್ಯಾಪಾರಿಯು ತನ್ನ ಊರಿನತ್ತ ಹೊರಟ. ಹಗ್ಗ ಕಟ್ಟಿದ್ದ ಎರಡು ಒಂಟೆಗಳನ್ನು ಬಿಚ್ಚಿ ಮೂರನೆ ಒಂಟೆಗೆ ‘ಬಾ ಬಾ’ ಎಂದು ಕೂಗಿ, ಸನ್ನೆ ಮಾಡಿದ. ಹಗ್ಗ ಬಿಚ್ಚಿದ ಒಂಟೆಗಳು ಊರಿಗೆ ಹೊರಡಲು ಸಿದ್ಧವಾದವು. ಅದರೆ ಮೂರನೆಯ ಒಂಟೆ ಮರದ ಬಳಿ ಸುಮ್ಮನೇ ನಿಂತಿತ್ತು. ಏನು ಮಾಡಿದರೂ ಹೊರಡಲಿಲ್ಲ. ಯೋಗಿಗಳು ವ್ಯಾಪಾರಿಯನ್ನು ನೋಡಿ ಮತ್ತೆ ನಗಲು ಶುರು ಮಾಡಿದರು.
“ಸ್ವಾಮಿ, ಮತ್ತೆ ನಗುತ್ತಿದ್ದೀರಾ? ಆ ಒಂಟೆ ಮರದ ಬುಡದಿಂದ ಹೊರಡುತ್ತಲೇ ಇಲ್ಲ! ಇದಕ್ಕೂ ನೀವೇ ಪರಿಹಾರ ಹೇಳಬೇಕು" ಎಂದ.
“ಸರಳ, ನಿನ್ನೆ ಒಂಟೆಯನ್ನು ಕಟ್ಟಿ ಹಾಕಿದ್ದೀಯಾ. ಈಗ ಮರದ ಬಳಿ ಹೋಗಿ, ಅದರ ಕುತ್ತಿಗೆಯನ್ನು ಹಿಡಿದು, ಹಗ್ಗವನ್ನು ಬಿಚ್ಚಿದಂತೆ ನಟಿಸಬೇಕು, ಅಷ್ಟೇ. “ ಎಂದರು ಯೋಗಿ. ವ್ಯಾಪಾರಿಯು ನಟನೆಯಲ್ಲೇ ಒಂಟೆಯ ಹಗ್ಗವನ್ನು ಬಿಚ್ಚಿದ. ಅದು ಸಲೀಸಾಗಿ ನಡೆದು ಬಂದು, ಊರಿಗೆ ಹೊರಡಲು ತಯಾರಾಯಿತು.
“ಇಷ್ಟೇ ಕಣಪ್ಪ, ಆ ಒಂಟೆಯನ್ನು ನೋಡು! ನಮ್ಮ ಜೀವನವೂ ಅಷ್ಟೆ. ನಾವೇ ಕಲ್ಪಿಸಿಕೊಂಡ ಅನವಶ್ಯಕ ಬಂಧನಗಳಲ್ಲಿ ಸಿಲುಕಿ ನಲುಗುತ್ತಿದ್ದೇವೆ. ಅವನ್ನು ಗುರುತಿಸಿ, ಬಿಡಿಸಿಕೊಂಡು ಮುಂದೆ ಸಾಗಿದರೆ, ಯಶಸ್ಸೂ ಸಿಗುತ್ತದೆ. ಆಧ್ಯಾತ್ಮಪಥವೂ ಗೋಚರಿಸುತ್ತದೆ.” ಎಂದರು. ಯೋಗಿ. ವ್ಯಾಪಾರಿಯು, ತನ್ನ ಕೈಲಾದಷ್ಟು ಅರ್ಥ ಮಾಡಿಕೊಂಡು, ಅವರಿಗೆ ನಮಸ್ಕರಿಸಿ, ಒಂಟೆಗಳೊಂದಿಗೆ ಊರಿಗೆ ಹೊರಟ.
-ಶಶಾಂಕ್ ಮುದೂರಿ (ವಿಶ್ವವಾಣಿ ಪತ್ರಿಕೆಯಿಂದ)
ಚಿತ್ರ ಕೃಪೆ: ಅಂತರ್ಜಾಲ ತಾಣ