ಮೂರನೇ ದಾರಿ

ಮೂರನೇ ದಾರಿ

ಬರಹ

ಸಂಪದದಲ್ಲಿ ಆರೋಗ್ಯಕರ ಚರ್ಚೆಗಳು ಆಗುತ್ತಲೇ ಇವೆ.ಇದೊಂದು ಶುಭಸೂಚನೆ ಎಂದು ನನ್ನ ನಂಬಿಕೆ. ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಸರಳವಾಗಿ ಬರೆಯುವೆ.ಇದಕ್ಕೆ ಸಂಪದಿಗರ ಸ್ಪಂಧನ ಬೇಕು.

ಮೂರನೇ ದಾರಿ:

ವಿವೇಕಾನಂದರು ಒಂದುಕಡೆ ಹೇಳುತ್ತಾರೆ " ಎಲ್ಲರೂ ಹೋಗುತ್ತಿದ್ದಾರೆಂದು ನೀನು ಹೋಗಬೇಕಿಲ್ಲ. ನೀನು ಬೇರೆಯದಾಗಿಯೇ ಚಿಂತಿಸು" ಈ ಮಾತೇ ನನಗೆ ಪ್ರೇರಣೆ.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಎರಡು ರೀತಿಯ ದೋರಣೆಗಳನ್ನು  ನೋಡುತ್ತೇವೆ. ೧.ಹಿಂದುಪರ ೨.ಹಿಂದು ವಿರೋಧಿ

              ನಮ್ಮ ಭಾರತದ ನೆಲದಲ್ಲಿ ಸಹಸ್ರಾರು ವರ್ಷಗಳು ನಮ್ಮ ಋಷಿಪುಂಗವರು ಮಾಡಿದ ತಪಸ್ಸಿನ ಫಲವಾಗಿ ವಿಶ್ವವೇ ಮೆಚ್ಚುವಂತ ಒಂದು ಸಂಸ್ಕೃತಿ ನಮ್ಮದಾಗಿದೆ. ಕಾಲಗರ್ಭದಲ್ಲಿ ಅನೇಕ ದೋಷಗಳೂ ಸೇರದೆ ಇಲ್ಲ. ಆದರೆ ಇಂದು ಕಾಣುವ ಎರಡು ವರ್ಗಗಳಲ್ಲಿ ಒಂದು ಹಿಂದು ಹೆಸರಿನಲ್ಲಿ ನಡೆಯುತ್ತಿರುವ ಎಲ್ಲವೂ ಸರಿ ಎಂದು. ಮತ್ತೊಂದು ಪೂರ್ವಾಪರ ಏನೂ ಚಿಂತಿಸದೆ "ಹಿಂದು" ಎನ್ನುವ ಪದವನ್ನೇ ಧ್ವೇಷಿಸುವ ವರ್ಗ.

ಪ್ರಗತಿಪರರೆಂದು ಹೇಳುವ ಹಿಂದು ವಿರೋಧಿ ವರ್ಗದ "ಹಿಂದುತ್ವವಿರೋಧಿ" ದೋರಣೆಯ ಹೊರತಾಗಿ ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾಗಿರುವ ಅನೇಕ ವಿಚಾರಗಳು ಹಲವು ವೇಳೆ ಮನಸ್ಸಿಗೆ ಹಿತ ಕೊಡುವುದುಂಟು. ಆದರೆ ನಮ್ಮ ಸಮಾಜದ ಮೂಲವನ್ನೇ ವಿರೋಧಿಸುತ್ತಾ ನಡೆಯುವ ಚಿಂತನೆಗೆ ಓಗೊಡುವುದೆಲ್ಲಿಂದ ಬಂತು?

ಹಾಗೆಯೇ ಹಿಂದುಪರ ವರ್ಗದ ಬಗ್ಗೆ. ಆರ್.ಎಸ್.ಎಸ್.ನಲ್ಲಿರುವ ಹಲವಾರು ಹಿರಿಯ ಪ್ರಚಾರಕರ ಪರಿಚಯ ನನಗಿದೆ. ತಮ್ಮ ಸ್ವಂತಕ್ಕೆ ಎನನ್ನೂ ಚಿಂತಿಸದೆ ಕರ್ನಾಟಕದಲ್ಲಿಯೇ ಹೊ.ವೆ.ಶೇಷಾದ್ರಿಗಳಂತಹ ಹಲವಾರು ಪ್ರಚಾರಕರುಗಳು ತಮ್ಮ ಇಡೀ ಜೀವನವನ್ನು ಸಮಾಜದ ಕೆಲಸಕ್ಕೆ ಸಮರ್ಪಿಸಿ ಕೊನೆಯುಸಿರೆಳೆದರು. ಅವರುಗಳ ಸಮರ್ಪಿತ ಜೀವನವನ್ನು ನೋಡಿದ ನಮ್ಮಂತವರಿಗೆ ದೇಶಕ್ಕೆ ಆರ್.ಎಸ್.ಎಸ್.ನ ಕೊಡುಗೆ ಅರ್ಥವಾಗುತ್ತೆ. 

ಆದರೆ ಧರ್ಮದ ಹೆಸರಲ್ಲಿ  ನಡೆಯುವ ದೊಂಬರಾಟ " ದೇವರಿಗೆ ಕೋಟಿ ರೂಪಾಯಿಯಲ್ಲಿ ಚಿನ್ನದ ಕವಚ ತೊಡಿಸುವ, ಕೋಟಿ-ಕೋಟಿ  ರೂಪಾಯಿ  ಖರ್ಚು ಮಾಡಿ ಹವನ- ಹೋಮಗಳನ್ನು ಮಾಡುವ " ಇದನ್ನೇ ಹಿಂದುತ್ವದ ಕೆಲಸವೆಂದುಕೊಂಡವರ ಮತ್ತು ಈ ವಿಚಾರಗಳನ್ನು ವಿರೋಧಿಸುವವರನ್ನು ರಕ್ಷಿಸುವ ಕೆಲಸ ಮಾಡುವವರನ್ನು ಕಂಡಾಗ ರೋಸಿ ಹೋಗುತ್ತದೆ.

ಆದ್ದರಿಂದ ಮೂರನೆಯ ದಾರಿ ಬೇಕೆನ್ನುವುದು.

ಹಿಂದು ಸಂಸ್ಕೃತಿಯನ್ನು ಇಂದಿಗೆ ಒಪ್ಪುವಂತೆ ಆಚರಿಸಿಕೊಂಡು  "ಒಂದು ಸುಂದರ ಸಮಾಜ ನಿರ್ಮಾಣಕ್ಕೆ ಮೂರನೆಯ ದಾರಿ ಹುಡುಕ ಬೇಕಿದೆ"

ನನ್ನ ಮನ ಕಲಕುತ್ತಿರುವ ಎರಡು ವಿಷಯಗಳು:

೧.ಹಿಂದು ಧರ್ಮದಲ್ಲಿನ ಮೇಲು-ಕೀಳು ಭಾವನೆಗಳು

೨. ನಮ್ಮ ಸಂಸ್ಕೃತಿಯಬಗೆಗಿನ ಉದಾಸೀನತೆಯಿಂದ ಈಗಿನ ಯುವಕರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು

ನನ್ನ ವಿಚಾರಗಳನ್ನು ಮುಂದಿನ ಪ್ರತಿಕ್ರಿಯೆಗಳಲ್ಲಿ ಬರೆಯುವೆ. ದಯಮಾಡಿ ಸಂಪದದ ಮಿತ್ರರು ನಿಮ್ಮ ಸ್ಪಷ್ಠ ವಿಚಾರಗಳನ್ನು ತಿಳಿಸುವಿರಾ?

ಹರಿಹರಪುರಶ್ರೀಧರ್