ಮೂರನೇ ದಿನದ ನವರಾತ್ರಿ ಆರಾಧನೆ - ಚಂದ್ರಘಂಟಾ ದೇವಿ
*ಯಾದೇವಿ ಸರ್ವಭೂತೇಷುಮಾಂ*
*ಚಂದ್ರಘಂಟಾ ರೂಪೇಣ ಸಂಸ್ಥಿತಾ|*
*ನಮಸ್ತಸೈ ನಮಸ್ತಸೈ ನಮಸ್ತಸೈ ನಮೋನಮಃ||*
*ಓಂ ದೇವಿ ಚಂದ್ರಘಂಟಾಯ್ಯೆ ನಮಃ*
ನಮ್ಮ ಪರಂಪರೆಯಲ್ಲಿ ಹಬ್ಬಗಳಿಗೆ ಅದರದ್ದೇ ಆದ ಸ್ಥಾನಮಾನಗಳೊಂದಿಗೆ, ಧಾರ್ಮಿಕ ಚೌಕಟ್ಟಿನೊಳಗೆ ಬಹಳ ವಿಶೇಷತೆಯಿದೆ, ಹಿನ್ನೆಲೆಯಿದೆ. ಶ್ರೀ ದುರ್ಗಾಮಾತೆಯ ಮೂರನೆಯ ಅವತಾರವೇ ‘ಚಂದ್ರಘಂಟಾ ದೇವಿ’. ಈ ದಿನ ದೇವಿಯ ಆರಾಧನೆಯನ್ನು ಶ್ರದ್ಧಾ ಭಕ್ತಿಗಳಿಂದ ಭಕ್ತ ಸಮೂಹ ಮಾಡುತ್ತಾರೆ. ತನ್ನ ಮಸ್ತಕದಲ್ಲಿ ಘಂಟೆಯಾಕಾರದ ಚಂದ್ರನನ್ನು ಧರಿಸಿದವಳು. ಆ ಘಂಟಾ ನಿನಾದವು ತನ್ನ ಪರಿಸರದಲ್ಲಿ ಇರುವಂತಹ ದುಷ್ಟ ಶಕ್ತಿಗಳನ್ನು, ಕೆಟ್ಟದ್ದನ್ನು, ದುರ್ಗುಣಗಳನ್ನು, ಅಸುರೀ ಶಕ್ತಿಯನ್ನು ದೂರಮಾಡಿ, ಕ್ಷೇಮವನ್ನುಂಟು ಮಾಡುತ್ತದೆ ಎಂದು ಪ್ರತೀತಿ ಮತ್ತು ನಂಬಿಕೆ.
ನವರಾತ್ರಿಯ ಮೂರು ದಿನಗಳಲ್ಲಿ ಮಹಾಮಾತೆಯು ‘ತಮೋಗುಣಗಳನ್ನು’ ಕಡಿಮೆಗೊಳಿಸುವಳೆಂಬ ನಂಬಿಕೆಯಿದೆ. ಈಕೆಯನ್ನು ರಣಚಂಡಿ, ಚಂದ್ರಿಕಾ ಎಂದೂ ಕರೆಯುವುದಿದೆ. ಚಂದ್ರಘಂಟಾದೇವಿ (ಘಂಟೆಯೊಳಗಿರುವ) ತನ್ನ ಮೂರನೇ ಕಣ್ಣನ್ನು ತೆರೆದು ಯಾವ ರೂಪದಲ್ಲಿಯಾದರೂ ದುಷ್ಟರ ಹನನ ಮಾಡುವಳು.
ಬ್ರಹ್ಮಚಾರಿಣೀ ದೇವಿ ಪರಶಿವನ ತಪಸ್ಸು ಮಾಡಿ ಮದುವೆಯಾಗಿ ಪಾರ್ವತಿ ದೇವಿಯಾಗಿ ನಂತರದ ಅವತಾರವೇ ಇದು. ಸದಾ ಶುಕ್ರಗ್ರಹವನ್ನು ನಿಯಂತ್ರಿಸುತ್ತಾಳೆ. ಮಮತೆ, ವಾತ್ಸಲ್ಯ, ಕ್ಷಮಾಶೀಲ ಗುಣಗಳನ್ನು ಹೊಂದಿದ ದೇವಿ ತನ್ನನ್ನು ನಂಬಿ ಬಂದವರ ದುರಿತಗಳನ್ನು, ಅಡೆತಡೆಗಳನ್ನು, ದುಃಖದುಮ್ಮಾನಗಳನ್ನು ದೂರಮಾಡಿ ಸಲಹುತ್ತಾಳೆ. ಕಮಂಡಲ, ಅಭಯಮುದ್ರೆ, ಜಪಮಾಲೆ, ತ್ರಿಶೂಲ, ಕಮಲ, ಗದೆ, ಖಡ್ಗ, ಬಿಲ್ಲು ಬಾಣ, ಹಣೆಯ ಮೇಲೆ ಮೂರನೇ ಕಣ್ಣು ಇವಿಷ್ಟು ಆಯುಧಪಾಣಿಯಾಗಿ ಹತ್ತು ತೋಳುಗಳಿಂದ ವಿಜೃಂಭಿಸಿ ಶೋಭಿಸುತ್ತಿದ್ದಾಳೆ ಮಾತೆ. ಮಣಿಪುರ ಚಕ್ರಧಾರಿಣಿಯಾಗಿ ಸ್ಥಾಪಿಸಲ್ಪಟ್ಟು ಅಭಯವನ್ನು ನೀಡುತ್ತಿದ್ದಾಳೆ. ಹೊನ್ನಿನ ತನುಕಾಂತಿ ಈಕೆಯದು. ಸಿಂಹವಾಹಿನಿಯಾಗಿ ತಾಯಿಯಂತೆ ಆದಿಶಕ್ತಿಯಂತೆ ವಾತ್ಸಲ್ಯದ ಪ್ರತಿರೂಪವಾಗಿ ಸಹನಾಶೀಲೆಯಾಗಿ ಸಲಹುತ್ತೇನೆಂದು ಅಭಯವನ್ನು ನೀಡುವಳು.
ವಿಶ್ವರೂಪಿಣಿಯಾದ ಮಹಾಮಾಯೆ ಜಗತ್ ನಿತ್ಯಳು. ಈ ವಿಶ್ವವೇ ಅವಳದು. ದೇವತೆಗಳ ಕಾರ್ಯಸಿದ್ಧಿಗಾಗಿಯೇ ಆವಿರ್ಭಾವ ಹೊಂದಿದವಳು. ಸೃಷ್ಟಿ, ಧರಿಸುವುದು, ಪಾಲಿಸಲ್ಪಡುವುದು ಎಲ್ಲವೂ ಮಾತೆಯ ಹೊಣೆಗಾರಿಕೆ. ಪರಮಶ್ರೇಷ್ಠಳಾದ ಪರಮೇಶ್ವರಿ ಮಾತೆ. ಧೂಪ ದೀಪ ನೈವೇದ್ಯ ಮಲ್ಲಿಗೆಯಿಂದ ಅಲಂಕರಿಸಿ ಪೂಜಿಸುವುದು ಇಂದಿನ ವಿಶೇಷ. ಮಹಾದೇವಿಯು ಸ್ವರಮಾಧುರ್ಯದಿಂದ ಕೂಡಿದವಳು. ದುಷ್ಟಶಕ್ತಿಯ ವಿನಾಶವೇ ಅವಳ ಗುರಿ. ಕಣ್ಣುಗಳು ಅಪೂರ್ವ ಕಾಂತಿಯಿಂದ ಹೊಳೆಯುತ್ತಿದ್ದು, ಎಲ್ಲಾ ಆಗುಹೋಗುಗಳನ್ನು ಗಮನಿಸುವ ವಿಶೇಷ ಶಕ್ತಿಯನ್ನು ಹೊಂದಿದೆ. ಪರಾಕ್ರಮ, ಆತ್ಮಶಕ್ತಿಗಳು ಜಾಗೃತಿಗೊಳ್ಳುವ ಸಂದರ್ಭವಿದು. ಮಾತೆಯ ಪೂಜೆಯಿಂದ ಪ್ರೇತಬಾಧೆ ನಿವಾರಣೆ, ಅಲೌಕಿಕ ಆನಂದ, ಶಾಂತಿ, ಧೈರ್ಯ, ಸಮಾಧಾನ, ಧನಲಾಭ, ಬಂಧುಲಾಭ, ಗೃಹಲಾಭಗಳೂ ಸಹ ಆಗುವುದೆಂಬ ಪ್ರತೀತಿಯಿದೆ. ಮಣಿಪುರ ಚಕ್ರದಲ್ಲಿ ಮನಸ್ಸನ್ನು ನೆಲೆಗೊಳಿಸಿ ತಾಯಿಯ ಧ್ಯಾನವನ್ನು ಮಾಡುವುದು ವಿಶೇಷ. ಮಹಾದೇವಿ ಲೋಕಕ್ಕೆ ಆವರಿಸಿದ ಈ ಸಂಕಷ್ಟವನ್ನು ದೂರಮಾಡಿ ಸೌಖ್ಯ ಕರುಣಿಸಿ, ಶಾಂತಿ ಸುಖ ನೀಡಲೆಂದು ಪ್ರಾರ್ಥಿಸೋಣ.
(ಆಧಾರ: ಪುರಾಣ ಮಾಲಿಕಾ)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ