ಮೂರು ಆಯಾಮಗಳ ಮುದ್ರಣ ಸೇವೆ
ಕಪಿಲ್ ಸಿಬಾಲ್ ಇಂಟರ್ನೆಟ್ ತಾಣ ಹ್ಯಾಕರುಗಳ ಕೈಗೆ
ಕೇಂದ್ರ ಸಚಿವರಾದ ಕಪಿಲ್ ಸಿಬಾಲ್ ಅವರ ಇಂಟರ್ನೆಟ್ ತಾಣ www.kapilsibalmp.comವನ್ನು ಹ್ಯಾಕರುಗಳು ದಾಳಿ ಮಾಡಿದ್ದಾರೆ.ಅವರ ಪರಿಚಯ ಪುಟವನ್ನು ತಿರುಚಿ ಬರೆಯಲಾಗಿದೆ. ನಂತರ ಟ್ವಿಟರ್ ತಾಣದಲ್ಲಿ ಹಲವು ಅನಾಮಧೇಯ ಖಾತೆಗಳಿಂದ ಕಪಿಲ್ ಸಿಬಾಲ್ ಅವರನ್ನು ಜರೆದು ಸಂದೇಶಗಳನ್ನು ಪ್ರಕಟಿಸಲಾಗುತ್ತಿದೆ. ಸರಕಾರವು ಇಂಟರ್ನೆಟ್ನ ಮೂಲಕ,ಅದರಲ್ಲೂ ಜನಪ್ರಿಯ ಸಾಮಾಜಿಕ ತಾಣಗಳ ಆಗುಹೋಗುಗಳ ಮೇಲೆ ಬಿಗಿ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಹ್ಯಾಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
----------------------------------------
ನಿಸ್ತಂತು ವಿದ್ಯುಚ್ಛಕ್ತಿ ಮೂಲಕ ಸಾಧನ ಚಾರ್ಜ್: ಆಪಲ್ನಿಂದ ಪೇಟೆಂಟ್ಗೆ ಅರ್ಜಿ
ಕೀಲಿಮಣೆ,ಮೌಸ್ ಮುಂತಾದವನ್ನು ಕಂಪ್ಯೂಟರಿಗೆ ಕೇಬಲ್ ಹಂಗಿಲ್ಲದೆ ಸಂಪರ್ಕಿಸುವುದೀಗ ನಮಗೆ ಅಭ್ಯಾಸವಾಗಿ ಬಿಟ್ಟಿದೆ.ವಿದ್ಯುತ್ತನ್ನೂ ಹೀಗೆಯೇ ಕೇಬಲ್ ಕಾಟವಿಲ್ಲದೆ ಚಾರ್ಜ್ ಮಾಡಲು ಸಾಧ್ಯವಾಗಬೇಕು ಎನ್ನುವುದು ಎಲ್ಲರ ಕೋರಿಕೆ. ಹಲವು ಸಂಶೋಧನೆಗಳು,ಈ ಬಗ್ಗೆ ಪ್ರಗತಿಯನ್ನೂ ಪ್ರಕಟಿಸಿವೆ.ಇದೀಗ ಈ ಸಮಸ್ಯೆಗೆ ಆಪಲ್ ಕಂಪೆನಿ ತನ್ನದೇ ಪರಿಹಾರ ಕಂಡು ಕೊಂಡಂತಿದೆ.ಅದು ಹಕ್ಕುಸ್ವಾಮ್ಯಕ್ಕೆ ಅರ್ಜಿ ಸಲ್ಲಿಸಿದೆ.ಆಪಲ್ ಕಂಪೆನಿಯು ಈ ಬಗ್ಗೆ ಒಲವು ತೋರಿಸಿರುವುದರಿಂದ,ವಯರ್ಲೆಸ್ ಚಾರ್ಜಿಂಗ್ ಮಾರುಕಟ್ಟೆಗೆ ಲಭ್ಯವಾಗುವ ಆಸೆಗೆ ಗರಿಗೆದರಿದೆ. ಆದರೆ,ಸದ್ಯೋಭವಿಷತ್ತಿನಲ್ಲಿ ಇದು ಸಾಧ್ಯವಾಗುವ ಬಗ್ಗೆ ಹೆಚ್ಚು ಭರವಸೆ ಬೇಡ.
---------------------------------------
ಕಚೇರಿಯಲ್ಲಿ ನಿಮ್ಮದೇ ಸಾಧನ ಬಳಸಿ
ಕಚೇರಿಯಲ್ಲಿ ಬಳಸಲು ಉದ್ಯೋಗಿಗಳಿಗೆ ಸಂಸ್ಥೆಯೇ ಸಾಧನಗಳನ್ನು ನೀಡುವುದು ಇಂಗ್ಲೆಂಡಿನ ಸಾರ್ವಜನಿಕ ಸಂಸ್ಠೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.ಈಗ ನಿಧಾನವಾಗಿ,ಕೆಲವೆಡೆ,ಉದ್ಯೋಗಿಗಳು ತಮ್ಮ ಸ್ವಂತ ಸಾಧನಗಳನ್ನು ಕಚೇರಿಯ ಕೆಲಸಕ್ಕೂ ಬಳಸಲು ಅನುಮತಿಸಲಾಗುತ್ತಿದೆ.ಉದ್ಯೋಗಿಗಳು ಒಬ್ಬೊಬ್ಬರಿಗೆ ಒಂದೊಂದು ಬ್ರಾಂಡಿನ ಸಾಧನ ಪ್ರಿಯವಾಗುತ್ತದೆ. ಕಂಪೆನಿಯು ಸಾಧನ ಒದಗಿಸಿದಾಗ,ಎಲ್ಲರಿಗೂ ಒಂದೇ ಬ್ರಾಂಡಿನ ಸಾಧನ ಸಿಗುತ್ತದೆ.ಈಗ ಹಾಗಲ್ಲ-ಅವರವರ ಖರ್ಚು,ಅವರವರ ಮರ್ಜಿ!ಸಂಸ್ಥೆಗೂ ಖರ್ಚು ಕಡಿಮೆಯಾಗುತ್ತದೆ.ಆದರೆ,ಹೀಗೆ ಮಾಡಿದರೆ,ಕೆಲಸದ ಸ್ಥಳದ ಮಾಹಿತಿಗಳು ಸೋರುವ,ಭದ್ರತಾ ಸಂಬಂಧಿ ಸಮಸ್ಯೆಗಳೂ ಬರಬಹುದು.ಆದರೆ ಇದಕ್ಕೂ ಪರಿಹಾರ ಸಾಧ್ಯ. ಸಾಧನ ಕಾಣೆಯಾದಾಗ,ಅದರಲ್ಲಿರುವ ಮಾಹಿತಿಯನ್ನು ನಾಶ ಮಾಡಲು ಕ್ರಮಕೈಗೊಳ್ಳಬಹುದು.ತಮ್ಮ ಸಾಧನ ಬಳಸುವುದರಿಂದ,ಕೆಲಸದಲ್ಲಿ ದಕ್ಷತೆಯಂತೂ ಹೆಚ್ಚುತ್ತದೆ.
--------------------------------
ನಕಲಿ ಇಂಟರ್ನೆಟ್ ತಾಣ ಪತ್ತೆ:ಗೂಗಲ್ ಮೇಲುಗೈ
ಸದ್ಯ ಕೈಗೊಳ್ಳಲಾದ ಸಮೀಕ್ಷೆಯ ಪ್ರಕಾರ ಪ್ರಸಿದ್ಧ ಇಂಟರ್ನೆಟ್ ತಾಣಗಳ ನಕಲಿ ತಾಣಗಳನ್ನು ಪತ್ತೆ ಹಚ್ಚಿ ತೋರಿಸಿಕೊಡುವಲ್ಲಿ ಗೂಗಲ್ ಕಂಪೆನಿಯ ಕ್ರೋಮ್ ಬ್ರೌಸರ್ ಇಂಟರ್ನೆಟ್ ಎಕ್ಸ್ಪ್ಲೋರರ್,ಸಫಾರಿ ಮತ್ತು ಫೈರ್ಫೋಕ್ಸ್ ಬ್ರೌಸರುಗಳಿಗಿಂತ ಹೆಚ್ಚು ಯಶಸ್ಸು ಸಾಧಿಸಿದೆ.ಇವು ಕ್ರಮವಾಗಿ 94,92,91 ಮತ್ತು 90 ಯಶಸ್ಸಿನ ಪ್ರಮಾಣ ದಾಖಲಿಸಿವೆ.ಜನರು ಬ್ಯಾಂಕ್ ವ್ಯವಹಾರಗಳೇ ಮುಂತಾದ ಹಣಕಾಸಿನ ವ್ಯವಹಾರ ಮಾಡುವಾಗ ತಾಣದ ವಿಳಾಸವನ್ನು ತಪ್ಪಾಗಿ ಟೈಪಿಸಿದಾಗ,ಕಾಣಿಸಿಕೊಳ್ಳುವ ನಕಲಿ ತಾಣಗಳು ನೈಜ ತಾಣಗಳಂತೇ ಇದ್ದು ಜನರನ್ನು ಮೂರ್ಖರಾಗಿಸಬಲ್ಲುವು. ಅವರು ಲಾಗಿನ್ ಆಗಲು ಯತ್ನಿಸುವಾಗ ಅವರು ನೀಡುವ ವಿವರಗಳು ನಕಲಿ ತಾಣ ನಡೆಸುವವರಿಗೆ ಚಿನ್ನದ ಮೊಟ್ಟೆ ಇಡುವ ಬಾತುಕೋಳಿಯಂತೆ. ಆದರೆ ಬ್ರೌಸರುಗಳು ಅಂತಹ ತಾಣಗಳು ಮಾನ್ಯತೆ ಹೊಂದಿಲ್ಲದ ತಾಣಗಳೆಂದು ಗುರುತಿಸಿ,ಎಚ್ಚರಿಕೆಯ ಸಂದೇಶ ನೀಡುತ್ತವೆ.ಹಾಗಾಗಿ ಅಪಾಯ ತಪ್ಪುತ್ತದೆ. ವರ್ಷದಿಂದ ವರ್ಷಕ್ಕೆ ಪತ್ತೆಯಾಗುತ್ತಿರುವ ನಕಲಿ ತಾಣಗಳ ಸಂಖ್ಯೆ ಏರುತ್ತಲೇ ಇದೆ. ಈ ತಿಂಗಳು ಅದು ಐವತ್ತು ಸಾವಿರ ದಾಟಿದೆ.
--------------------------------------------
ಚಿಲ್ಲರೆ ಮಾರಾಟ: ಬೆಲೆ ಕ್ಷಣ ಕ್ಷಣ ಕಡಿತ
ಅಮೆರಿಕಾದ ಶಾಪಿಂಗ್ ಹಬ್ಬದ ವೇಳೆ ಚಿಲ್ಲರೆ ಮಾರಾಟ ಮಳಿಗೆಗಳು ವಸ್ತುಗಳ ಬೆಲೆ ಕಡಿತವನ್ನು ಸ್ಪರ್ಧಾತ್ಮಕವಾಗಿ ಮಾಡುತ್ತಿದ್ದುವು. ಅಮೇಜಾನ್,ವಾಲ್ಮಾರ್ಟ್,ಟಾರ್ಗೆಟ್ ಹೀಗೆ ಬೇರೆ ಬೇರೆ ತಾಣಗಳಲ್ಲಿ ಒಂದೇ ವಸ್ತುವಿನ ಬೆಲೆ ಅದೃಷ್ಟಶಾಲಿಗಳಿಗೆ ,ಮೊದಲು ಖರೀದಿಸಿದವರಿಗಿಂತ ಮೂರನೇ ಒಂದಂಶ ದರದಲ್ಲೂ ಲಭಿಸಿದ್ದಿದೆ. ಆನ್ಲೈನ್ ಮೂಲಕ ಖರೀದಿಸಿದವರಿಗೆ,ವಿವಿಧ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುವ ದರಗಳ ಹೋಲಿಕೆ ಪಟ್ಟಿ ಲಭ್ಯವಾಗಿಸುವ ಗ್ರೂಪಾನ್ ಅಂತಹ ತಾಣಗಳೂ ಇದ್ದು,ಜನರು ಅವುಗಳ ಸಹಾಯ ಪಡೆದರು. ತಾಳ್ಮೆಯುಳ್ಳ ಗ್ರಾಹಕರು ಆ ಹೋಲಿಕೆ ಪಟ್ಟಿಗಳ ಮೇಲೆ ಹದ್ದಿನ ಕಣ್ಣಿರಿಸಿ,ಸರಿಯಾದ ಸಮಯದಲ್ಲಿ ಖರೀದಿಸಿ ಲಾಭ ಮಾಡಿಕೊಳ್ಳಲು ಶಕ್ತರಾದರು. ಚೌಕಾಸಿ ವ್ಯವಹಾರ ಬದಲಿಗೆ ಈಗಿನ ಹೊಸ ವೈಖರಿಯಿದು!
--------------------------------
ಜಪಾನಿ ರಾಕೆಟ್ ಮಾಹಿತಿ ಕದ್ದ ವೈರಸ್
ಜಪಾನಿನ ಸೊಕೋಬಾ ಸ್ಪೇಸ್ ಸೆಂಟರಿನ ಕಂಪ್ಯೂಟರಿನಲ್ಲಿದ್ದ ರಾಕೆಟ್ ತಯಾರಿಕಾ ತಂತ್ರಜ್ಞಾನದ ಬಗೆಗಿನ ಮಾಹಿತಿಯನ್ನು ಹೊರಗಡೆಗೆ ರವಾನಿಸುತ್ತಿದ್ದುದ್ದು ಪತ್ತೆಯಾಗಿದೆ.ಆಂಟಿವೈರಸ್ ತಂತ್ರಾಂಶವು ವೈರಸನ್ನು ಪತ್ತೆ ಮಾಡಿದಾಗ ಇದು ಬೆಳಕಿಗೆ ಬಂತು.ಮಾಹಿತಿ ರವಾನೆಯಾಗುತ್ತಿದ್ದುದು ಎಲ್ಲಿಗೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.ಹಿಂದೆಯೂ ಇಂತಹ ಪ್ರಕರಣಗಳು ಆ ಬಾಹ್ಯಾಕೇಶ ಕೇಂದ್ರದಲ್ಲಿ ನಡೆದಿತ್ತಂತೆ. ಹೆಚ್ಚಿನವು ಚೀನಿ ಮೂಲಗಳಿಗೆ ಮಾಹಿತಿ ರವಾನಿಸುತ್ತಿದ್ದುವು. ಎಪ್ಸಿಲಾನ್ ಎನ್ನುವ ಇನ್ನೂ ಅಭಿವೃದ್ಧಿಯಾಗುತ್ತಿರುವ ಘನ ಇಂಧನ ಬಳಸುವ ರಾಕೆಟ್ ಬಗೆಗಿನ ಮಾಹಿತಿ ಸೋರಿ ಹೋದದ್ದು. ಈ ರಾಕೆಟ್ ಕ್ಷಿಪಣಿ ತಯಾರಿಕೆಗೂ ಸೂಕ್ತವಾಗುತ್ತಿತ್ತು.
-----------------------------------
ಧ್ರುವಪ್ರದೇಶ:ಹಿಮದ ಪದರ ಕರಗುವಿಕೆಯಲ್ಲಿ ಏರಿಕೆ
ಗೀನ್ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾ ಧ್ರುವ ಪ್ರದೇಶಗಳಲ್ಲಿ ಹಿಮದ ಪದರಗಳು ಕರಗುತ್ತಲೇ ಇರುತ್ತವೆ. ಆದರೆ ಅವುಗಳ ಕರಗುವಿಕೆಯ ಪ್ರಮಾಣ ಈಗಂತೂ ಭಾರಿ ಹೆಚ್ಚಿದೆ ಎನ್ನುತ್ತಾರೆ,ಈ ಪ್ರದೇಶಗಳ ಹಿಮಕರಗುವಿಕೆಯನ್ನು ಅಧ್ಯಯನ ಮಾಡುತ್ತಿರುವ ನಲುವತ್ತು ಮಂದಿ ವಿಜ್ಞಾನಿಗಳು.ಇವರು ಕೃತಕ ಉಪಗ್ರಹಗಳ ಚಿತ್ರಗಳು,ಇತರ ಸ್ಥಳೀಯ ಮಾಹಿತಿಗಳು,ಕಡಲ ಮೇಲಿನ ಚಲನೆಗಳು ಇವೆಲ್ಲವನ್ನೂ ಪರಿಗಣಿಸಿದ್ದಾರೆ.ತೊಂಭತ್ತರ ದಶಕದಲ್ಲಿ ಕರಗುತ್ತಿದ್ದ ಹಿಮದ ಪ್ರಮಾಣಕ್ಕೆ ಹೋಲಿಸಿದರೆ,ಈಗ ಕರಗುತ್ತಿರುವ ಹಿಮದ ಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆಯಂತೆ!ಗ್ರೀನ್ಲ್ಯಾಂಡಿನಲ್ಲಿ ಇದು ಐದು ಪಟ್ಟನ್ನೂ ಮುಟ್ಟಿದೆ ಎನ್ನುತ್ತಾರವರು.ಇದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚುತ್ತಿದೆ.ಕೆಳಮಟ್ಟದಲ್ಲಿ ಇರುವ ಭೂಮಿಯ ಭೂಪ್ರದೇಶಗಳನ್ನು ಸಮುದ್ರ ಕಬಳಿಸುವುದು ವರ್ಷದಿಂದ ವರ್ಷ ಹೆಚ್ಚುತ್ತಿದೆ.ಭೂಮಿಯ ವಾತಾವರಣದಲ್ಲಿ ಆಗುತ್ತಿರುವ ಏರಿಕೆ ಇದಕ್ಕೆಲ್ಲಾ ಕಾರಣವೆನ್ನುವುದು ನಿಮಗೂ ಗೊತ್ತು.
----------------------------------
ಮೂರು ಆಯಾಮಗಳ ಮುದ್ರಣ ಸೇವೆ
ಯಾವುದೇ ವಸ್ತುವಿನ ವಿನ್ಯಾಸ ನೀಡಿದರೆ,ಅದರ ಪ್ರತಿಕೃತಿಯನ್ನು ಮುದ್ರಿಸುವ ಸೇವೆಯನ್ನು ಸ್ಟೇಪಲ್ಸ್ ಎನ್ನುವ ಕಂಪೆನಿ ಆರಂಭಿಸಲಿದೆ.ಮುಂದಿನ ವರ್ಷ ಆರಂಭಕ್ಕೆ ಬೆಲ್ಜಿಯಂನಲ್ಲಿ ಮೊದಲಾಗಿ ಸೇವೆ ಲಭ್ಯವಾಗಲಿದೆ. ಬಳಿಕ ಇತರೆಡೆಗೂ ಇದನ್ನು ವಿಸ್ತರಿಸಲಾಗುತ್ತದೆ. ಈ ಮೂರು ಆಯಾಮಗಳ ಮುದ್ರಕವು,ಕಾಗದದ ರೀಮನ್ನು ಹರಿದು,ತುಣುಕುಗಳಿಗೆ ಅಂಟು ಸವರಿ,ಅವನ್ನು ಮೂರು ಆಯಾಮಕ್ಕೆ ತರುತ್ತವೆ.ಇದಕ್ಕೆ ಆಕರ್ಷಕ ಬಣ್ಣವನ್ನೂ ನೀಡುತ್ತವೆ.
---------
ದುಬಾರಿ ಸರ್ಫೇಸ್
ಮೈಕ್ರೋಸಾಫ್ಟ್ ಕಂಪೆನಿಯ ಸರ್ಫೇಸ್ ವಿಂಡೋಸ್ ಎಂಟು ಆಪರೇಟಿಂಗ್ ವ್ಯವಸ್ಥೆಯೊಂದಿಗೆ ಲಭ್ಯವಾದಾಗ,ಅದರ ಬೆಲೆ ಒಂಭೈನೂರು ಡಾಲರು ಆಗಲಿದೆ.ಜನವರಿಯಲ್ಲಿ ಸರ್ಫೇಸ್ ಲಭ್ಯವಾಗುತ್ತದೆ.ಸದ್ಯದ ಸರ್ಫೇಸ್ ಹಳೆಯ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುತ್ತಿದೆ. ಸರ್ಫೇಸ್ ಮೂಲಕ ಕಂಪ್ಯೂಟರ್ ಮಾರುಕಟ್ಟೆಗೆ ಕೈಹಾಕುವ ಸಾಹಸಕ್ಕೆ ಇಳಿದಿದೆ.-
-----------------
ಐಟಿ: ಬೆಳವಣಿಗೆ ನಿಧಾನ?
ನ್ಯಾಸ್ಕೋಮ್ ಪ್ರಕಾರ ಭಾರತದ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುವ ಕಂಪೆನಿಗಳು ವಾರ್ಷಿಕ ಬೆಳವಣಿಗೆಯ ದರವನ್ನು ಶೇಕಡಾ ಹನ್ನೊಂದರಿಂದ ಹದಿನಾಲ್ಕು ದಾಖಲಿಸಬಹುದು.ಆದರೆ ಹಲವಾರು ಐಟಿ ಉದ್ದಿಮೆಗಳು ಈ ಬಗ್ಗೆ ವಿಶ್ವಾಸ ಹೊಂದಿಲ್ಲ.ಅಮೆರಿಕಾ ಮತ್ತು ಯುರೋಪಿನಲ್ಲಿ ಕಂಡು ಬಂದಿರುವ ಆರ್ಥಿಕ ಹಿನ್ನಡೆಯ ಕಾರಣದಿಂದ,ಈ ಹಿಂದಿನ ವರ್ಷಗಳ ಬೆಳವಣಿಗೆ ದರವನ್ನು ಈ ಸಲ ಸಾಧಿಸಲು ಕಷ್ಟವಾಗಬಹುದು.ಆದರೆ,ಭಾರತದ ಐಟಿ ಉದ್ದಿಮೆಗಳು ಬಹಳ ಹಿನ್ನಡೆಯೇನೂ ಕಂಡಿಲ್ಲ ಎನ್ನುವುದು ಸಮಾಧಾನಕರ.
ಇಂಟರ್ನೆಟ್ನಲ್ಲಿ ಅಂಕಣ ಬರಹಗಳು: http://ashok567.blogspot.com
UDAYAVANI
EPAPER
*ಅಶೋಕ್ಕುಮಾರ್ ಎ