ಮೂರು ಗಝಲ್ ಗಳು

ಮೂರು ಗಝಲ್ ಗಳು

ಕವನ

ಗಝಲ್-೧

ಯಾರು ನೋಡ ಬಾರದೆಂದು ಬಿರಿದು ಬಂದೆನು

ನೋವು ಕೊಟ್ಟ ಕೂಳರನ್ನು ಹುರಿದು ಬಂದೆನು

 

ಸಾವಿನಲ್ಲು ಸುಖವ ಪಡೆವ ಜನರು ಏತಕೊ

ಭಾವನೆಗಳ ಕೊಂದ ಇವರ ಜರಿದು ಬಂದೆನು

 

ದ್ವೇಷ ಇರುವ ಕಡೆಯಲೆಲ್ಲ ವಿಜಯ ಎಲ್ಲಿದೆ

ನಿನ್ನ ಮಾಯೆ ಮೋಹಕಿಂದು  ಉರಿದು ಬಂದೆನು

 

ಕರುಣೆ ಎನುವ ಪದವು ಈಗ ಸೊರಗಿ ನಿಂತಿದೆ

ಮನಸಿನಿಂದ ಮದವ ಹೀಗೆ ತರಿದು ಬಂದೆನು

 

ಮೌನ ಇರಲು ಮಾತು ನೆಗೆದು ಬಂತೆ ಈಶನೆ

ಕೆಸರ ಕೈಲಿ ಮಾಲೆ ಕಂಡು ಮುರಿದು ಬಂದೆನು

***

ಗಝಲ್-೨

ಮನದ ಕಿಟಿಕಿಯದು ಮುಚ್ಚಿಹುದು ಗೆಳೆಯ

ತನುವ ಬಾಗಿಲೊಳು ರೊಚ್ಚಿಹುದು ಗೆಳೆಯ

 

ವಿಷವೇರಿದ ಕಣ್ಣುಗಳದು ನೀಲಿಗಟ್ಟಿವೆ ಏಕೆ

ಸುಡದಿರುವ ಬಿಸಿಲೂ ಚುಚ್ಚಿಹುದು ಗೆಳೆಯ

 

ರಾತ್ರಿಯ ಕನಸುಗಳಲ್ಲಿ ನನಸಿಲ್ಲವೊ ಇಂದು

ಮಲಗಿದ್ದ ಹಾಸಿಗೆಯದು ಕಚ್ಚಿಹುದು ಗೆಳೆಯ

 

ತಂಪಾದ ಕೋಣೆಯೊಳು ಮೈಯು ಬೆವರುತ್ತಿದೆ

ಬಯಕೆಯಿರದ ಬಂಧನಕು ಹುಚ್ಚಿಹುದು ಗೆಳೆಯ

 

ಎನ್ನ ಹೃದಯದಾಳವು ಚಂಚಲವಾಗಿದೆ ಈಶಾ

ರೂಪವಿಲ್ಲದ ಆತ್ಮವಿಂದು ಬೆಚ್ಚಿಹುದು ಗೆಳೆಯ

***

ಗಝಲ್ - ೩

ನಾನು ಇರುವಲ್ಲಿಗೇ  ನೀನು ಹಾರಿ ಬಿಡು

ನನಗೆ ಸಮಸ್ಯೆಯೆ ಆಗದಂತೆ ಕೇಳಿ ಬಿಡು

 

ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು

ನಿನಗೆ ಗೊತ್ತಿರುವಂತೇ ನನ್ನನಿಂದು ದಾಟಿ ಬಿಡು

 

ನಾನು ಗತಿಯು ಇಲ್ಲದವನೆಂದೇ ಕರೆದೆಯೇನು

ನನಗೆ ಬದಲಾಗಲಾರದವನೆಂದು ಕಾಡಿ ಬಿಡು

 

ನೀನು ಹೆಸರಾದರೆ ಒಲವ ತರುವೆಯೇನು

ನಿನಗೆ ಬಯಸಿದ್ದೆಲ್ಲ ಸಿಕ್ಕಿದರೆ ತೇಲಿ ಬಿಡು

 

ನಾನು ಮೌನವಾದರೆ ಕನಸಲ್ಲಿ ಸರಿಯದಿರು

ನನಗೆ ಈಶನಿಂದು ಎದುರಾದರೆ  ಬಾಗಿ ಬಿಡು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್