ಮೂರು ಗಝಲ್ ಗಳು

ಮೂರು ಗಝಲ್ ಗಳು

ಕವನ

೧.

ಮೊತ್ತವನು ಕಳೆದಾಗ ಶೇಷ ಉಳಿಯಿತು

ಚಿತ್ತವದು ಸವೆದಾಗ ಕ್ಲೇಷ ಉಳಿಯಿತು

 

ಬೆತ್ತದೊಳಗಿನ ಮಾಯೆಯು ಹೇಳು ಎಲ್ಲಿದೆ

ಬತ್ತದಿರುವ ಮನದಲ್ಲಿ ದೋಷ ಉಳಿಯಿತು

 

ನರಕದಲ್ಲಿಯ ನಿಲ್ದಾಣದಲಿ ಇಹುದೆ ಪ್ರೀತಿಯು

ಮತ್ತೇರದಿರುವ ಬಾಹುವಿನಲ್ಲಿ ವೇಷ ಉಳಿಯಿತು

 

ನಿದ್ರೆಯಿರದ ರಾತ್ರಿಯಲ್ಲಿ ಕಾಣದೇ ಮೋಹವು

ಕಮಲದಳದ ನಡುವೆಯೇ ತೋಷ ಉಳಿಯಿತು

 

ಸಂಪತ್ತಿನೊಳಗಿನ ಬಯಕೆಯು ಬೇಕೇನು ಈಶಾ

ಕರಗದಿಹ ಮೌಲ್ಯದೊಳಗೆ ಘೋಷ ಉಳಿಯಿತು

***

೨.

ಮೋಹ ಎನ್ನುವುದೇ ಭ್ರಮೆಯಂತಾಗಿದೆ  ಗೆಳತಿ

ಪಾರದರ್ಶಕ ವ್ಯವಸ್ಥೆ ಸೋಲುವಂತಾಗಿದೆ  ಗೆಳತಿ

 

ಸುಳಿಗೆ ಸಿಲುಕಿದ ದೋಣಿಯಂತೇ ನಮ್ಮ ಬದುಕೆ

ಜೀವನವೊ ಒದ್ದಾಡುವ ಮೀನಿನಂತಾಗಿದೆ ಗೆಳತಿ

 

ಒಲವಿಂದು ಮಂಜಿನಲ್ಲಿ ಬಿದ್ದಂತೆ ಆಗಿದೆಯೇಕೆ

ಪ್ರೇಮವೋ ನಿಜವಾಗಿ ಬಾಡಿದಂತಾಗಿದೆ ಗೆಳತಿ

 

ವಾತ್ಸಲ್ಯದ ಪದಕ್ಕೆ ಅರ್ಥವ ಹುಡುಕಿರುವೆಯಾ

ಪ್ರೀತಿ ಗೋರಿಯೊಳಗಿನ  ಹೆಣದಂತಾಗಿದೆ ಗೆಳತಿ

 

ಬಾಳಿನೊಳಗಿನ ಪಯಣದಲ್ಲಿ ದುರಂತವೇ ಈಶಾ 

ಜೀವಿತ ಚಿತ್ತಾರವಿಲ್ಲದ ಯಾತ್ರೆಯಂತಾಗಿದೆ ಗೆಳತಿ

***

೩.

ನನ್ನೊಳಗೆ ನಿನ್ನೊಲವಿನ ವಿರಹವೆಲ್ಲವೂ ಲಾವಾರಸವಾಗಿ ಕಪ್ಪಾಗುತಿದೆ ಮೋಹಿನಿ

ಬೆಳಗೀಗ ಆಗುವುದಿಲ್ಲವೇನೋ ಎನ್ನುವ ಭ್ರಮೆಯೊಂದು ಕೆಂಪಾಗುತಿದೆ  ಮೋಹಿನಿ

 

ಕಣ್ಣುಗಳೆಲ್ಲ ಏನನ್ನೋ ಹುಡುಕುತ್ತಿವೆ ನಿನ್ನಧರಗಳು ಬಳಿಯಿಂದೇಕೆ ನಿಲ್ಲಲಾರದು

ಈಗೀಗ ಹೆಚ್ಚಾಗಿಯೇ ಕನಸಿನಾಳಗಳು ಮನದೊಳಗೆ ನೆನಪಾಗುತಿದೆ ಮೋಹಿನಿ

 

ಚಡಪಡಿಕೆಯ ನೋವಿರುವ ಬೇರುಗಳ ಅರ್ಥವಾದರೂ ಗೊತ್ತಿದೆಯೇ ನಿನಗಿಂದು

ಬೇಡವೆಂದರೂ ತಬ್ಬಿಮುತ್ತಿಟ್ಟ ಗಳಿಗೆಯೊಳಗಿನ ವಿಷವು ಕಹಿಯಾಗುತಿದೆ ಮೋಹಿನಿ

 

ನಿನ್ನೊಳಗಿನ ಸೌಂದರ್ಯವೇ ಮಯೂರದಂತೆ ನಾನಂದು ಹೇಳಿದ್ದು ನೆನಪಿದೆಯಾ 

ಒಡಲಿನೊಳಗಿನ ವಯ್ಯಾರಗಳು ವರ್ಣನೆಗಳ ನಡುವೆ  ಮರೆಯಾಗುತಿದೆ  ಮೋಹಿನಿ

 

ನನಸುಗಳು ಸುಡುತ್ತಲೇ ಕರಕಲಾಗಿರುವುದ ಇನ್ನಾದರೂ  ತಿಳಿಯಲಾರೆಯಾ ಈಶಾ

ಮೋದವಿರದ ಬಾಳುವೆಯ ಜೊತೆಗೇ ಪ್ರೀತಿಪ್ರೇಮವು ಬೇರೆಯಾಗುತಿದೆ ಮೋಹಿನಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್