ಮೂರು ಗಝಲ್ ಗಳು
ಗಝಲ್ ೧
ಮನೆಯೊಳಗಿನ ಮಲಗುವ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಧರೆಯೊಳಗಿನ ಗುಡ್ಡದ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ
ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಕನಸುಗಳೇ ಬಾಳಿನಲಿ ಬೀಳದೆ ಸವಿಯನ್ನು ಉಣ್ಣುವುದೆ ಬೇಡವೆ ಹೇಳಿಂದು
ಭಯದೊಳಗಿನ ಶೀತಲ ಗೋರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಅಸತ್ಯಗಳ ನಡುವೆಯೇ ಸತ್ಯಗಳು ಮರಣ ಹೊಂದಿವೆಯೋ ನೋಡು ಬಾರೆ
ದಾರಿಯೊಳಗಿನ ನಿರ್ಮಲ ಕೇರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಅಗೋಚರಗಳ ನಡುವೆಯೆ ಹೊರಟಿರುವನು ನಗುವೇ ಇಲ್ಲದ ಸರದಾರ ಈಶಾ
ಗೋಚರದೊಳಗಿನ ಅಮಲಿನ ಭಾವನೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
***
ಗಝಲ್ ೨
ಇಷ್ಟ ಇಲ್ಲದವರಿಂದ ದೂರಾಗು
ಕಷ್ಟ ಬೇಡದವರಿಂದ ದೂರಾಗು
ಎಷ್ಟು ಬೇಡಿದರೂ ಒಲಿಯರೇ
ಅಷ್ಟ ಬಣದವರಿಂದ ದೂರಾಗು
ಕುಷ್ಠ ಪಾಪಗಳ ಫಲವೇನಯ್ಯಾ
ಭ್ರಷ್ಟ ಸೇವಕರಿಂದ ದೂರಾಗು
ಶಿಷ್ಟ ರಕ್ಷಕರು ಎಲ್ಲಿಹರಿಂದು
ನಷ್ಟ ಇರುವರಿಂದ ದೂರಾಗು
ಸ್ಪಷ್ಟ ನಿರ್ಧಾರಗಳಂತಿರು ಈಶಾ
ನಿಷ್ಠೆ ಮರೆತವರಿಂದ ದೂರಾಗು
***
ಗಝಲ್ ೩
ಪ್ರೀತಿಯಿರದ ಬಾಳಿನಲ್ಲಿ ಸವಿಯಿರುವುದೇ ಗೆಳತಿ
ಪ್ರೇಮವಿರದ ಬದುಕಿನಲ್ಲಿ ಸ್ನೇಹವಿರುವುದೇ ಗೆಳತಿ
ಒಂಟಿತನದ ಸಿಡುಕಿನೊಳಗೆ ಮೈಮನಗಳು ಹೇಗಿದೆ
ಮನದೊಳಗಿನ ಭಾವದಲ್ಲಿ ತನುವಿರುವುದೇ ಗೆಳತಿ
ಒಲವಿನಾಳ ಚೆಲುವಿನೊಳಗೆ ಸಿಗದಂತೆಯೇ ಸಾಗಿದೆ
ಚತುರೆಯೊಲವ ಕಂಗಳಲ್ಲಿ ಮೋಹವಿರುವುದೇ ಗೆಳತಿ
ಮಾತಿನಾಳದೊಳಗೆ ಮೌನ ಚಿತ್ತವಿಂದು ಸೊರಗಿದೆ
ಕನಸಲ್ಲಿಯ ತಿರುವಿನೊಳಗೆ ನನಸಿರುವುದೇ ಗೆಳತಿ
ಈಶನೊಡಲ ಕಡಲಿನಲ್ಲಿ ಹುಟ್ಟದೋಣಿ ಮರೆತಿದೆ
ಚಿಂತೆಯಿದ್ದ ನೋವಿನಲ್ಲಿ ಖುಷಿಯಿರುವುದೇ ಗೆಳತಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ