ಮೂರು ಗಝಲ್ ಗಳು...
ಗಝಲ್ ೧
ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ
ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ
ಸಾಗರದ ಅಲೆಯಲ್ಲಿ ಉಬ್ಬರದ ಕೋಪವೇತಕೆ ಇಂದು
ಜೀವನದ ಕನಸನಿನಲ್ಲಿ ಮನವಿಂದು ಇರುವುದೇ ಗೆಳತಿ
ನನಸಿನಲಿ ಸಾಗದಿರೆ ಬಾಳಿನಲೆಯ ಒಲುಮೆಯು ಬೇಕೆ
ಧನವೆಲ್ಲವೂ ಬರಿದಾಗುತಿರೆ ಗೆಲುವು ಬರುವುದೇ ಗೆಳತಿ
ಬಾಡಿರುವ ಹೃದಯದೊಳು ಮೋಹವು ಕಂಡಿತೇ ಹೇಳು
ನಡುಗುತಿಹ ತನುವಿಂದ ಪ್ರೀತಿಯಿಂದು ಸಿಗುವುದೇ ಗೆಳತಿ
ನೊಂದಿರುವ ಆತ್ಮದಲಿ ಸಖಿಯವಳು ಎಲ್ಲಿಹಳೋ ಈಶಾ
ಕಾರಣವದು ಇಲ್ಲದಿರಲು ಉಸಿರೆಂದೂ ನಿಲುವುದೇ ಗೆಳತಿ
***
ಗಝಲ್ ೨
ಬೋಳಾದ ಗುಡ್ಡೆಯ ಮೇಲೆ ಗಿಡವನ್ನು ಬೆಳೆಸುವ ಜನ
ನೀರು ಇಲ್ಲದೆ ಸುತ್ತ ಕಲ್ಲೇ ಎಲ್ಲ ಆದರೂ ಕೊಳೆಸುವ ಜನ
ಕುದಿವ ಆತ್ಮಗಳಿಗಂತೂ ದಿಕ್ಕುಗಳ ಪರಿಚಯವೇ ಇಲ್ಲವೆ
ಕದಿವ ಬುದ್ದಿಗಳಿಗೆಂದೂ ಹೀಗೆ ಹೀಗೆಯೇ ಹರಸುವ ಜನ
ಕನಸಿಲ್ಲದ ನನಸುಗಳ ಜೊತೆಯಲ್ಲೆ ಹೊಂದಾಣಿಕೆ ಏತಕೊ
ಗುರಿಯಿರದೆ ಕಾದುವರ ಹತ್ತಿರವೇ ನೆತ್ತರ ಸುರಿಸುವ ಜನ
ಊಟಕ್ಕಿಲ್ಲದ ಉಪ್ಪಿನ ಕಾಯಂತೆ ದೂರ ಇಟ್ಟರೂ ಬರುವರು
ಮೆತ್ತನೆಯ ಹಾಸಿಗೆಯಲ್ಲಿ ಮಲಗುತ್ತ ಬೆನ್ನು ತೊರಿಸುವ ಜನ
ಸನ್ನಿವೇಶಕ್ಕೆ ತಕ್ಕಂತೆಯೇ ಎಲ್ಲರೆದುರು ಕುಣಿಯದಿರು ಈಶಾ
ಸುಖಾ ಸುಮ್ಮನೆ ಬೇರೆಯವರ ಮನವನ್ನೇ ತುರಿಸುವ ಜನ
***
ಗಝಲ್ ೩
ಶ್ರಮಜೀವಿಗಳ ಮೇಲೆಯೆಯಿಂದು ಎರಗುವಿಯೇನು ನಾಯಕನೆ
ಹೊಟ್ಟೆ ತುಂಬಿದವರ ನಡುವೆಯೇ ಸೊರಗುವಿಯೇನು ನಾಯಕನೆ
ಬೇಟೆಗಾರರ ಬಾಣಕ್ಕಿಂದು ಬಡಜೀವಿಗಳು ಬಲಿಯಾಗಿವೆ ನೋಡು
ಹಸಿವಿನಾಳವನ್ನು ಹುಡುಕದೆಯೇ ಮಿರುಗುವಿಯೇನು ನಾಯಕನೆ
ದುಡ್ಡಿರುವವ ಜಗದೊಡೆಯನೆಂದು ಹೇಳುವವರೆಲ್ಲರು ಏಕೆಯಿಂದು
ಪ್ರೀತಿಯಿರದವರ ನೋವುಗಳಿಗಿಂದು ಕೊರಗುವಿಯೇನು ನಾಯಕನೆ
ಅಜ್ಞಾನದ ಕತ್ತಲೊಳಗೆ ಜ್ಞಾನವನು ಯಾವುದಕ್ಕಾಗಿ ಪಡೆಯುತಿಹರೊ
ಮುಳುಗದವರ ಬದುಕಿಗೆ ಮತ್ತೊಮ್ಮೆ ಮರುಗುವಿಯೇನು ನಾಯಕನೆ
ಚಲಿಸುತಿರುವ ನೌಕೆಯೆಂಬ ಬಾಳಿನೊಲುಮೆ ಹೀಗೆಯಿರುವುದೇ ಈಶಾ
ವ್ಯವಸ್ಥೆಯೊಳಗಿನ ಜಾಣತನವನು ಹೀಗೆ ಬರಗುವಿಯೇನು ನಾಯಕನೆ
-ಹಾ ಮ ಸತೀಶ ಬೆಂಗಳೂರು*
ಚಿತ್ರ ಕೃಪೆ: ಇಂಟರ್ನೆಟ್ ತಾಣ