ಮೂರು ಗಝಲ್ ಗಳು

ಮೂರು ಗಝಲ್ ಗಳು

ಕವನ

ಗಝಲ್ ೧

ಹರೆಯ ತುಂಬಿ ಬಂದ ಗಳಿಗೆ ನಿನದೆ ಚೆಲುವು ನನ್ನೊಳು

ಮಾತು ಕತೆಯ ಒಡಲ ದನಿಗೆ ಹೀಗೆ ಒಲವು ನನ್ನೊಳು

 

ಗಿಡವು ಚಿಗುರಿದಾಗ ಪಕಳೆ ತೂಗಿ ಹಾಡಿ ನಲಿಯಿತು

ಮಧುರ ಭಾವ ಚಿಮ್ಮಿದಾಗ ನಿನ್ನ ಛಲವು ನನ್ನೊಳು

 

ಕನಸು ಬರಲು ನನಸು ಇಹುದು ತಿಳಿದೆ ನಾನು ಎನ್ನಲೆ

ತಿಳಿವಿನೊಳಗೆ ಸವಿಯು ಬರಲು ಬದುಕ ಫಲವು ನನ್ನೊಳು

 

ಗಾಳಿ ಬೀಸಿ ಹಾಡುತಿಹುದು ಹೆಸರ ಕರೆದು ಬೀಗಲೆ

ನಿನ್ನ ಚೆಂದ ನವಿರು ಭಾವ ತುಂಬಿ ಬಲವು ನನ್ನೊಳು

 

ಹೊತ್ತು ಕಂತಿದಂತೆ ನೆನಪು ಮೂಡಿತಾಗ ಈಶನೆ

ಒನಪಿನೊಳಗೆ ಹೊಳಪು ಕಂಡು ಮತ್ತೆ ಗೆಲುವು ನನ್ನೊಳು

***

ಗಝಲ್ ೨

ಬಲಿತವರು ಯಾರೋ ಹೀಗೆಂದವರು ಹೋದರು

ನಡತೆಯೆಲ್ಲ ಸಂಶಯ ಹಾಗೆಂದವರು ಹೋದರು

 

ಕಲಿತವರೆಲ್ಲ ಎಲ್ಲಿಹರೊ ಹುಡುಕಾಡಿ ಸಾಕಾಗಿದೆ

ಕಳಿತವರ ನಡುವೆಯೇ ಏಳೆಂದವರು ಹೋದರು

 

ನಮ್ಮೊಳಗಿನ ಕೇಡದು ನಮ್ಮನ್ನೇ ನುಗಿತಂತೆ ಹೌದೆ

ಮುನಿಸುಗಳು ತರವಲ್ಲ ಬೇಡೆಂದವರು ಹೋದರು

 

ಕೆಲವು ಸಸ್ಯಗಳು ತಾವೇ ಹಾಯಾಗಿ ಬೆಳೆಯುತ್ತವೆ 

ಹಲವು ಮನುಜರ ರೀತಿ ಹೋಗೆಂದವರು ಹೋದರು

 

ವಿಜಾತಿಯ ವಸ್ತುಗಳ ಆಕರ್ಷಣೆ ಜಾಸ್ತಿಯಂತೆ ಈಶಾ

ಒಳ್ಳೆಯವರ ಇದ್ದಿಲೆನುತ ಜೋರೆಂದವರು ಹೋದರು

***

ಗಝಲ್ ೩

ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ

ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ನನಸಿರದಿಹ ಜೀವನದಲೆಂದು ಆತುರವೇ ಕಾಣುವುದು

ಮನಸುಗಳು ಬಲಿಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಬೆಂದಿರದ ವಸ್ತುಗಳಿಂದ ಹೊಟ್ಟೆಯದು ತುಂಬುವುದೆ

ಉತ್ತರಗಳು ಹೊರೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಬರಡಾದ ಗುಡ್ಡದಲಿ ಹುಲ್ಲದುವು ಚಿಗುರಿತೇ ಈಶಾ

ಪ್ರೀತಿಗಳು ಕಾಣೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್