ಮೂರು ಗಝಲ್ ಗಳು
ಗಝಲ್ ೧
ಯಾರ ಬಗ್ಗೆಯು ಮಾತನಾಡದಿರು ಮನವೆ
ಬೇರೆಯವರ ಜೊತೆ ಬಡಿದಾಡದಿರು ಮನವೆ
ಯಾರನ್ನೂ ಉದ್ಧಾರ ಮಾಡಿ ಏನಾಗಬೇಕು
ನಂಜಿರುವವರ ಹತ್ತಿರ ಬೈದಾಡದಿರು ಮನವೆ
ಕತ್ತಲೆಯಲ್ಲೇ ಕಾಲ ಕಳೆಯುವರ ಸ್ನೇಹವೇಕೆ
ಕಟು ಮಾತುಗಳಿಗೆ ಮಿಸುಕಾಡದಿರು ಮನವೆ
ತಪ್ಪಿದ್ದೂ ವಾದಿಸುವ ಹಿರಿಯರ ನಡೆ ಸರಿಯೇ
ಗುರಿ ತಪ್ಪಿದ ಮಾತಿಗೆ ತಿಣುಕಾಡದಿರು ಮನವೆ
ಗಾಳಿ ಬೀಸಿದರೆ ದೀಪವು ಆರುತ್ತದೆ ತಿಳಿ ಈಶಾ
ಮತ್ಸರದ ಗೂಡಿನ ಹಿಂದೆ ತಡಕಾಡದಿರು ಮನವೆ
***
ಗಝಲ್ ೨
ನಾನು ಬದುಕನ್ನು ಅವಳಿಗೆ ಕೊಟ್ಟೆ *ಬೆಳಕಾಗಲಿಲ್ಲ* ಸಾಕಿ
ತನುವ ಇಂಚಿಂಚು ಹೀಗೆ ಹರಡಿದೆ *ಮರವಾಗಲಿಲ್ಲ* ಸಾಕಿ
ಜೀವನವು ನೀನೆಂದಷ್ಟು ಕೆಟ್ಟದ್ದು ಅಲ್ಲವೇ ಅಲ್ಲ ಅರಿವಿಲ್ಲವೆ
ಮರದಿಂದ ಉದುರಿದ ಹಣ್ಣಿನಂತೆ *ಮೆದುವಾಗಲಿಲ್ಲ* ಸಾಕಿ
ಕಾಲು ದಾರಿಗಳ ಪಕ್ಕದಲ್ಲೆ ದೊಡ್ಡದಾದ ರಸ್ತೆ ಅಗತ್ಯವಿದೆಯೆ
ಬದುಕೂ ದೂರದೃಷ್ಟಿಯ ಜೊತೆಗೇ *ಚೆಲುವಾಗಲಿಲ್ಲ* ಸಾಕಿ
ಮೂರು ದಿನಗಳ ಸಂತೆಯೊಳಗೆ ಕುಣಿದದ್ದೇ ಬಂತು ಜೀವನ
ಬಾಳಿನೊಲುಮೆಯ ಹತ್ತಿರ ಪ್ರೀತಿ *ಸವಿಯಾಗಲಿಲ್ಲ* ಸಾಕಿ
ಕಪ್ಪಿಟ್ಟಿರುವ ಮುಖಗಳ ನಡುವೆಯೇ ಬೆವರಿದ್ದಾನೆ ಈಶಾ
ಒಪ್ಪದಲಿ ಬೆರೆಯಲಾಗದೆ ಪ್ರೇಮ *ಗೆಲುವಾಗಲಿಲ್ಲ* ಸಾಕಿ
***
ಗಝಲ್ ೩
ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ
ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ
ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ
ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ
ಮೈಯ ಭಾರದ ನಡುವೆಯೇ ಬಾರದ ಆಲೋಚನೆಗಳಿಗೆ ಮುನ್ನುಗಲೆ
ನೆತ್ತರಿನ ವಾಸನೆಯ ನಡುವೆಯೂ ಸೌಂದರ್ಯವ ಕಾಡಬೇಕು ಚೆಲುವೆ
ನೆಲದಲ್ಲೆಲ್ಲ ನಡೆದಾಡಿದ ಗುರುತುಗಳೆಡೆಯೇ ಮೋಹದ ಸವಿಯ ಕಂಡೆನೆ
ಚೆಲ್ಲಿರುವ ಬೆಳದಿಂಗಳಿನ ಉಂಗುರದ ನಡುವನ್ನು ಮುಟ್ಟಬೇಕು ಚೆಲುವೆ
ಕಣ್ಣಿನೊಳಗಣ ಭಾವನೆಗಳನ್ನು ಅರ್ಥಮಾಡಿಕೊಳ್ಳುವರು ಇಹರೆ ಈಶಾ
ಪಡುವಣ ಕಡಲಿನ ತೀರ ಸಹ ಕೆಂಪುವರ್ಣದಿಂದ ಚೀರಬೇಕು ಚೆಲುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ