ಮೂರು ಗಝಲ್ ಗಳ ದನಿ...

ಮೂರು ಗಝಲ್ ಗಳ ದನಿ...

ಕವನ

೧.

ಉತ್ತಮರ ನಡುವೆಯೇ ಬದುಕೆನ್ನ ಕಂದಾ

ಶಿಷ್ಟಾಚಾರವ ಕಲಿತು ನಡೆಯೆನ್ನ ಕಂದಾ

 

ನಗುಮುಖವ ಮರೆತು ಹೋಗಿರುವೆ ಯಾಕೆ

ಅಳುದನಿಯ ಮರೆಯುತಲೆ ಸಾಗೆನ್ನ ಕಂದಾ

 

ಜೀವನದ ಪಯಣದಲಿ ಜಾರದಿರು ನೀನೆಂದು

ಜ್ಞಾನಿಯಾಗುತ ದಿನವು ತೂಗೆನ್ನ ಕಂದಾ

 

ದಾಸನಾಗದೆ ನೆಲದಿ ದಿವಾನನಾಗಿಯೆ ಬಾಳು

ದಯವಿರಲಿ ಮನದೊಳಗೆ ಹಾಡೆನ್ನ ಕಂದಾ

 

ಕರುಣೆಯೊಳು ಕಾಪಾಡು ಓಯೆನ್ನ ಈಶಾ

ದಾರಿದ್ರ್ಯ ಕಳೆಯುತಲೆ ಬಾಳೆನ್ನ ಕಂದಾ

***

೨.

ಬಲಿತವರು ಯಾರಿಹರೊ ಹೀಗೆಂದವರು ಹೋದರು

ನಡತೆಯೆ ಸಂಶಯ ಹಾಗೆಂದವರು ಹೋದರು

 

ಕಲಿತವರು ಎಲ್ಲಿಹರೊ ಹುಡುಕಾಡಿ ಸಾಕಾಗಿದೆ

ಕಳಿತವರ ನಡುವೆ ಬೇಡೆಂದವರು ಹೋದರು

 

ನಮ್ಮೊಳಗಿನ ಕೇಡದು ನಮ್ಮನ್ನೇ ನುಗಿತಂತೆ ಹೌದೆ

ಮುನಿಸುಗಳು ತರವಲ್ಲ ತೂರೆಂದವರು ಹೋದರು

 

ಕೆಲವೊಂದು ಸಸ್ಯಗಳು ತಾವೇ ಹಾಯಾಗಿ ಬೆಳೆಯುತ್ತವೆ 

ಹಲವು ಮನುಜರ ರೀತಿ ಬಾಯೆಂದವರು ಹೋದರು

 

ವಿಜಾತಿಯ ವಸ್ತುಗಳಲ್ಲಿ ಆಕರ್ಷಣೆ ಜಾಸ್ತಿಯಂತೆ ಈಶಾ

ಇದ್ದಿಲಾದರು ವಜ್ರವೆನುತ ಜೋರೆಂದವರು ಹೋದರು

***

೩.

ಪ್ರೀತಿಯ ನಡುವೆ ಬಾಳಿನಲಿ ದ್ವೇಷ ಹರಡದಿರು ಮನವೆ

ಪ್ರೇಮದ ಸಲುಗೆಯ ನಡೆಗೆ ವಿಷವನು ಕಾರದಿರು ಮನವೆ

 

ಬಂಧುಗಳು ಕೈಹಿಡಿಯೆ ಲೋಪವಿಹುದೇ ನಿನಗಿಂದು

ಕರುಣೆಯು ಇಲ್ಲದವರಲ್ಲಿ ಸ್ನೇಹ ಮಾಡದಿರು ಮನವೆ

 

ಉರಿಬೇಗೆಯ ಹೃದಯದೊಳು ತಂಪದುವು ಇಲ್ಲವೇನು

ಬಾಳಿನ ಕೆಸರೊಳಗೆ ಕಾಲುಗಳ ಊರದಿರು ಮನವೆ

 

ಲೋಭಿಯಾದವನ ಸಂಗಡ ಮತ್ತೆ ಯಾಕೆ ಹೋಗುವೆ

ತಾಮಸ ಗುಣದವನ ಮಾತಿಗೆ ಬಾಡದಿರು ಮನವೆ

 

ಉಪದೇಶದ ನಡುವೆಯೇ ನೆಲವನು ಒದ್ದು ಹೋದನೇ ಈಶಾ

ನಿರ್ದಯ ಧ್ವನಿಯವರ ಜೊತೆಗೆ ನೀನೆಂದೂ ಸೇರದಿರು ಮನವೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್