ಮೂರು ಗಝಲ್ ಗಳ ನೋಟ

ಮೂರು ಗಝಲ್ ಗಳ ನೋಟ

ಕವನ

ಗಝಲ್-೧  (ಮುರದ್ದಫ್)

ನೋವು ನಲಿವಿನಲಿ ಏನು ಅಡಗುತಿದೆಯೊ ಹೇಳಲಾರೆ ಗೆಳೆಯಾ

ಭಾವ ಚೇತನದಿ ಪ್ರೀತಿ ಮುಳುಗುತಿದೆಯೊ ಹೇಳಲಾರೆ ಗೆಳೆಯಾ

 

ಮಧುರ ವಾತ್ಸಲ್ಯ ಸೃಷ್ಟಿಯೊಳಗಿನ್ನು ಸಿಗದೆ ಹೋದಿತೇನೊ

ತನನ ತನುವಿದು ನೀರ ಮೇಲೆಯೆ ತೇಲುತಿದೆಯೊ ಹೇಳಲಾರೆ ಗೆಳೆಯಾ

 

ಕಷ್ಟನಿಕೃಷ್ಟಗಳ ನಡುವೆ ಹೊಂದಾಣಿಕೆ ಇಹುದೆ ನೋಡು

ಬಂದಣಿಕೆಯಂತೆ ದೇಹವ ಮುಚ್ಚುತಿದೆಯೊ ಹೇಳಲಾರೆ ಗೆಳೆಯಾ

 

ಹೃದಯದೊಳಗಿನ ನೋವು ಹೊರಗೆ ಬರಬಾರದೆ ಹೋಯಿತೇನೊ

ನಡೆಯೊಳಗೆಯಿಂದು ಸವಿಯೆಲ್ಲ ಕರಗುತಿದೆಯೊ ಹೇಳಲಾರೆ ಗೆಳೆಯಾ

 

ಈಶನೊಲುಮೆಯಲಿ ರಶ್ಮಿ ಮೂಡಿತೆ ಕಣ್ಣ ನೋಟದೊಳಗೆ

ಅಂತರಾತ್ಮದ ಸತ್ಯಚೆಲುವಿಗೆ ನನಸು ಮೂಡುತಿದೆಯೊ ಹೇಳಲಾರೆ ಗೆಳೆಯಾ

***

ಗಝಲ್-೨

ಹಸಿಯಾಗಲಿಲ್ಲ ಬದುಕ ಉರಿಸಿ ಬಿಡು

ಕೊನೆಯಾಗಲಿಲ್ಲ ಉಸಿರ ಆರಿಸಿ ಬಿಡು

 

ಖುಷಿಯಾಗಲಿಲ್ಲ ಪ್ರೀತಿ ಒರೆಸಿ ಬಿಡು

ಋಷಿಯಾಗಲಿಲ್ಲ ಮುತ್ತ ಕರೆಸಿ ಬಿಡು

 

ಹೊಣೆಯಾಗಲಿಲ್ಲ ಜೊತೆಗೆ ಬೆರೆಸಿ ಬಿಡು

ಕುರೆಯಾಗಲಿಲ್ಲ  ಅವನ ಬಳಸಿ ಬಿಡು

 

ಚಳಿಯಾಗಲಿಲ್ಲ  ತಂಪ ಉಳಿಸಿ ಬಿಡು

ನವೆಯಾಗಲಿಲ್ಲ ಒಲುಮೆ ತರಿಸಿ ಬಿಡು

 

ಮನೆಯಾಗಲಿಲ್ಲ  ಈಶನ ತಣಿಸಿ ಬಿಡು

ಗುಡಿಯಾಗಲಿಲ್ಲ ದೇವರ ಹೊರಿಸಿ ಬಿಡು

***

ಗಝಲ್ -೩

ಮನಸಿದ್ದರೇನು ಛಲವಿಂದು ಬಾರದೆ ಗೆಳತಿ

ತನುವಿದ್ದರೇನು ಪ್ರೇಮವಿಂದು ತೋರದೆ ಗೆಳತಿ

 

ಭೀತಿಗಳ ನಡುವಿನ ಪ್ರೀತಿಯಲ್ಲಿ ಸ್ವಾಧವಿದೆಯೆ

ಹಕ್ಕಿದ್ದರೇನು ಒಲವಿಂದು ನಿಲ್ಲದೆ ಗೆಳತಿ

 

ಆಟವಾಡುವ ಸಮಯದಲ್ಲಿ ನೋವಿನ ಆಹ್ವಾನವೆ

ಜಿಂಕೆಯಿದ್ದರೇನು ಚೆಲುವಿಂದು ಕಾಣದೆ ಗೆಳತಿ

 

ಹೃದಯದ ಒಳಗಿನ ಭಾವಗಳನು ಮರೆಯಬಾರದೇನು

ಸಂಬಂಧವಿದ್ದರೇನು ಸಲ್ಲಾಪವಿಂದು ತೀರಿದೆ ಗೆಳತಿ

 

ಸಾವಕಾಶದ ನಡೆಗೆ ಈಶನು ಸಾಗುತಿರುವನೆ

ನಡತೆಯಿದ್ದರೇನು ತೀರವಿಂದು ಸೇರದೆ ಗೆಳತಿ

 

-ಹಾ ಮ ಸತೀಶ

 

ಚಿತ್ರ್