ಮೂರು ಗಝಲ್ ; ನೂರು ನೋಟ !
ಗಝಲ್ - ೧.
ದೂರುವುದೇ ನಿಮ್ಮ ಭಾವವಾದರೆ ಬಹುದೂರ ಇದ್ದು ಬಿಡಿ
ಬೈಯುವುದೇ ಇಂದಿನ ದಿನವಾದರೆ ಬಹುದೂರ ಇದ್ದು ಬಿಡಿ
ಕನಸಿಲ್ಲದವರ ಜೊತೆಗೆ ಒಂಟಿಯಾಗಿ ನೀವು ಸಾಗುವುದು ಏಕೊ
ತಾವೆನ್ನುವುದೇ ಮುಖ್ಯವಾಗಿ ದಿಟವಾದರೆ ಬಹುದೂರ ಇದ್ದು ಬಿಡಿ
ಯಾತ್ರೆಗಳು ಜನರಿಗೆ ಯಾವತ್ತಿಗೂ ಏನನ್ನು ತಿಳಿಸಿ ಕೊಡುವುದೋ ನಾನು ತಿಳಿಯೆ
ಹುಳಿಹಿಂಡಿ ಕೈಹಿಡಿಯುವುದೇ ಮನದಾಳದಿ ಫಲವಾದರೆ ಬಹುದೂರ ಇದ್ದು ಬಿಡಿ
ತನ್ನೊಳಗಿನ ನುಡಿಯೇ ವೇದವಾಕ್ಯ ಎನ್ನುವವರಿಗೆ ಏನನ್ನಲಿ ಮನನೊಂದು
ತನ್ನ ಮಾತೇ ನಡೆಯಬೇಕೆಂಬ ಹಟವಾದರೆ ಬಹುದೂರ ಇದ್ದು ಬಿಡಿ
ನೆಮ್ಮದಿಯನು ಹುಡುಕುತ್ತಾ ಹೋಗುವವರ ಕಡೆಗೊಮ್ಮೆ ನೋಡುತಿರು ಈಶಾ
ಚೆಲುವಿನ ನೋವುಗಳೇ ಬೇರೆಯವರಿಗೆ ಫಲವಾದರೆ ಬಹುದೂರ ಇದ್ದು ಬಿಡಿ
***
ಗಝಲ್ ( ಹವಿಗನ್ನಡ ) - ೨
ಮತ್ತೆ ಬತ್ತೆ ಹೇಳಿದವು ನೋಡಿ ಅವಸರಲ್ಲಿ *ಬಂದಾಯಿದು* ಈಗ
ಅವಕ್ಕೆ ಎಂತ ಹೇಳಲೂ ಪುರುಸೊತ್ತೇ ಇಲ್ಲೆ *ಉಂಡಾಯಿದು* ಈಗ
ಸೋಮಾರಿಗಳ ಹಾಂಗೆ ಕಾಂಬವಕ್ಕೆ ಎಂತಕ್ಕು ಹೀಂಗೆ ಊಟವ ಕೊಟ್ಟರೆ
ಮನೆಲಿ ಇದ್ದುದರ ಕದಿವಲೆ ಹೊಂಚಾಕ್ಯೊಂಡು *ಕೂದಾಯಿದು* ಈಗ
ಪಾಪದವಕ್ಕೆ ಸಾಕ್ಷಿಯೇ ಮುಖ್ಯವಾದ್ದು ಹೇಳಿರೆ ಗತಿಯೆಂತ
ಅವಸರಕ್ಕೆ ಮಜ್ಜಿಗೆ ನೀರಿನ ಕುಡಿವಲೆ *ಹೊತ್ತಾಯಿದು* ಈಗ
ಹೊತ್ತಲ್ಲದ ಹೊತ್ತಿಲಿ ಬಂದವಕ್ಕೆ ಸುತ್ತೆಡಿ ಮುಂಡಾಸು ಗೊಂತ್ತಾತ
ಸಾಹಿತ್ಯದ ತೇರಿಂಗೆ ಗ್ರಹಣ ಬಂದದೂ *ಬೇಗಾಯಿದು* ಈಗ
ಅನಗತ್ಯ ಚರ್ಚೆ ಮಾಡುವವಕ್ಕೇ ಸನ್ಮಾನವ ಮಾಡುತ್ತವು ಈಶಾ
ಅಗತ್ಯ ಇಪ್ಪವರ ದೂರ ಮಡುಗಿ ಸುಮ್ಮನೆ *ನಿಂದಾಯಿದು* ಈಗ
***
ಗಝಲ್- ೩
ಮಾತು ಮುರಿಯಲಿಲ್ಲ ಹೊರಗೆಂದೂ *ಬೇಡಿಯೇ* ಬದುಕಿದ
ಸೋತು ಹೋಗಲಿಲ್ಲ ಮುಂದೆಯೂ *ನೋಡಿಯೇ* ಬದುಕಿದ
ಬಾಳು ಕರಗಲಿಲ್ಲ ಎನ್ನುತ್ತಾ ನಡೆಯುತ್ತಲೇ ಹೋದನೆ
ದಾಳ ಕದಲಲಿಲ್ಲ ಸನಿಹದಲೆಂದೂ *ಆಡಿಯೇ* ಬದುಕಿದ
ಜಾಲು ಕಾಣಲಿಲ್ಲವೇ ಬುವಿಯಲಿಂದು ಕಂಬನಿಯು ಜಾರದೆ
ಮೇಲೆ ಬೀಳಲಿಲ್ಲವೆಂದೂ ಜೀವನದಲ್ಲಿ *ಓಡಿಯೇ* ಬದುಕಿದ
ನೂಲು ಹರಿಯಿತೆಂದು ಸಿಟ್ಟನೆಂದೂ ಮಾಡಲಿಲ್ಲ ಬಟ್ಟೆಯು
ಶಾಲು ಹಾಕಿರದಿದ್ದರೂ ಅವನು *ಹಾಡಿಯೇ* ಬದುಕಿದ
ಕಾಲು ಹಿಡಿಯಲಿಲ್ಲವೆಂದು ಹೇಳುವವರು ಬರುವರೇ ಈಶಾ
ಸಾಲ ಸಾಯಲಿಲ್ಲವೆಂದು ಯಾವತ್ತೂ *ಬಾಡಿಯೇ* ಬದುಕಿದ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
