ಮೂರು ಝೆನ್ ಕಥೆಗಳು

ಮೂರು ಝೆನ್ ಕಥೆಗಳು

೧. ಚುವಾಂಗ್ ಜಿಯ ಆಯ್ಕೆ

ಝೆನ್ ಗುರು ಚುವಾಂಗ್ ಜಿ, ಪು ಎಂಬ ಕೊಳದಲ್ಲಿ ಮೀನು ಹಿಡಿಯುತ್ತ ತನ್ನ ದಿನಗಳನ್ನು ಕಳೆಯುತ್ತಿದ್ದ. ಇಂಥಾ ಬುದ್ಧಿವಂತ ಮನುಷ್ಯ ಅಲ್ಲಿ ಕಾಲಹರಣ ಮಾಡುತ್ತಿದ್ದಾನೆ, ಅವನನ್ನು ರಾಜಧಾನಿಗೆ ಕರೆಸಿಕೊಂಡು ಮಹತ್ವದ ಜವಾಬ್ದಾರಿ ವಹಿಸಬೇಕೆಂದು ಚು ಸಾಮ್ರಾಜ್ಯದ ರಾಜನಿಗೆ ಅನ್ನಿಸಿತು. ಅನ್ನಿಸಿದ್ದೇ ತನ್ನ ಭಟರನ್ನು ಕರೆದು ಚುವಾಂಗ್ ಜಿಯನ್ನು ಕರೆತರುವಂತೆ ಆದೇಶ ನೀಡಿದ.

ಭಟರು ಪು ಕೊಳದ ಬಳಿ ಬಂದರು. ಚುವಾಂಗ್ ಜಿ ಮೀನು ಹಿಡಿಯುತ್ತಿದ್ದ. ಭಟರು ಕೂಗಿ ಜರೆದರೂ ತಿರುಗಿ ನೋಡಲಿಲ್ಲ.

ಕೊನೆಗೆ ಭಟರು ನಿಂತಲ್ಲಿಂದಲೇ ರಾಜಾಜ್ಞೆಯನ್ನು ಅರುಹಿದರು.

ಗಾಳಕ್ಕೆ ಕಚ್ಚಿಕೊಂದ ಮೀನನ್ನು ಬುಟ್ಟಿಗೆ ಹಾಕುತ್ತಾ ಚುವಾಂಗ್ ಜಿ, “ಅರಮನೆಯಲ್ಲಿರೋ ಪೂರ್ವಜರ ಕೊಠಡಿಯಲ್ಲೊಂದು ಮೂರು ಸಾವಿರ ವರ್ಷಗಳಷ್ಟು ಪುರಾತನ ಆಮೆಯೊಂದಿದೆ ಎಂದು ಕೇಳಿದ್ದೇನೆ. ಅದನ್ನು ರಾಜ ಜೋಪಾನವಾಗಿರಿಸಿ, ಪ್ರತಿದಿನ ಪೂಜೆ ಮಾಡುತ್ತಾನಂತೆ. ಆ ಆಮೆ ಬದುಕಿದೆಯೋ ಸತ್ತಿದೆಯೋ? ಬದುಕಿದ್ದರೆ ಯಾವುದು ಒಳ್ಳೆಯದು, ಸತ್ತಂತೆ ಒಂದೆಡೆ ಬಿದ್ದುಕೊಂಡು ಪೂಜೆ ಮಾಡಿಸಿಕೊಳ್ಳೋದೋ, ಮಣ್ಣಿನಲ್ಲಿ ಹೊರಳುತ್ತ ಬಾಲ ಅಲ್ಲಾಡಿಸಿಕೊಂಡು ಬದುಕಿರೋದೋ?”

“ಮಣ್ಣಿನಲ್ಲಿ ಹೊರಳುತ್ತ ಬಾಲ ಅಲ್ಲಾಡಿಸಿಕೊಂಡು ಬದುಕಿರೋದು” ಸೈನಿಕರು ಒಂದು ಕ್ಷಣವೂ ಆಲೋಚಿಸದೆ ಒಕ್ಕೊರಲಿನಲ್ಲಿ ಉತ್ತರಿಸಿದರು. “ಸರಿ ಮತ್ತೆ!” ಚುವಾಂಗ್ ಜಿ ನಗುತ್ತ ನುಡಿದ, “ನಾನೂ ಮಣ್ಣಿನಲ್ಲಿ ಬಾಲ ಅಲ್ಲಾಡಿಸಿಕೊಂಡಿರಲು ಬಯಸ್ತೇನೆ. ಹೋಗಿ ಹೇಳಿ ನಿಮ್ಮ ದೊರೆಗೆ”  

***

೨. ಸೀಜೋಳ ಆತ್ಮ ಯಾವುದು?

ಚೋಕನ್‌ ಎಂಬುವನಿಗೆ ಸೀಜೋ ಎಂಬ ಸುಂದರ ಮಗಳಿದ್ದಳು. ಚೋಕನ್‌ ತನ್ನ ದೂರದ ಸಂಬಂಧಿಯಾದ ಓಚು ಮತ್ತು ಸಿಜೋ ಒಳ್ಳೆಯ ಜೋಡಿ ಎಂದು ಸಾಮಾನ್ಯವಾಗಿ ತಮಾಷೆ ಮಾಡುತ್ತಿದ್ದ. ಆದರೆ ತನ್ನ ಮಗಳನ್ನು ಓಚುವಿಗೆ ಕೊಟ್ಟು ಮಾಡುವ ಯಾವ ಉದ್ದೇಶವೂ ಅವನಿಗೆ ಇರಲಿಲ್ಲ, ಆದ್ದರಿಂದ ತನ್ನ ಮಗಳನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಯೋಜಿಸಿದ. ಆದರೆ ಚೋಕನ್‌ನ ತಮಾಷೆಯ ಮಾತು ಗಂಭೀರವಾಗಿ ಪರಿಗಣಿಸಿದ್ದ ಸೀಜೋ ಮತ್ತು ಓಚು ಪರಸ್ಪರ ಪ್ರೀತಿ ಬೆಳೆಸಿಕೊಂಡುಬಿಟ್ಟಿದ್ದರು!

ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಚೋಕನ್‌, ಒಂದು ದಿನ ಸೀಜೋಳ ನಿಶ್ಚಿತಾರ್ಥವನ್ನು ಏರ್ಪಾಟು ಮಾಡಿಯೇಬಿಟ್ಟ. ಇದರಿಂದ ಬೇಸರಗೊಂಡು ದುಃಖಿತನಾದ ಓಚುಗೆ ಆ ಊರಿಂದ ದೂರ ಓಡಿಬಿಡಬೇಕು ಅನಿಸಿತು. ಅದರಂತೆ ಹೊಳೆ ದಾಟಿ ಆಚೆ ದಡದ ಹಳ್ಳಿ ಸೇರಿಕೊಳ್ಳಲು ನಿರ್ಧರಿಸಿದ. ದೋಣಿಯಲ್ಲಿ ಕುಳಿತಿದ್ದ ಓಚು ಕಣ್ಣಿಗೆ ಸೀಜೋ ಕಂಡಂತಾಯಿತು. ಭ್ರಮೆ ಅಂದುಕೊಂಡು ಕಣ್ಣುಜ್ಜಿ ನೋಡಿದ. ಅವಳು ಸೀಜೋನೇ! ಅವನಿಗೆ ಕುಣಿದುಬಿಡುವಷ್ಟು ಖುಷಿಯಾಯಿತು. ಅವಳು ಕೂಡ ತಂದೆಯ ನಿರ್ಧಾರದಿಂದ ದುಃಖಿತಳಾಗಿ ಮನೆ ತೊರೆದಿದ್ದಳು.

ಅವರಿಬ್ಬರು ಮದುವೆಯಾಗಿ ಬೇರೊಂದು ನಗರದಲ್ಲಿ ಬಾಳತೊಡಗಿದರು. ಅವರಿಗೆ ಎರಡು ಮಕ್ಕಳೂ ಆದವು. ಒಂದು ದಿನ ಸೀಜೋಗೆ ತನ್ನ ತಂದೆಯನ್ನು ಭೇಟಿ ಮಾಡಬೇಕು ಎಂಬ ಆಸೆಯಾಯಿತು. ಓಚು ಕೂಡಾ ಅವಳ ಆಸೆಗೆ ಸಹಮತ ವ್ಯಕ್ತಪಡಿಸಿದ. ಅವರಿಬ್ಬರೂ ತಂದೆಯಲ್ಲಿ ಕ್ಷಮಾಪಣೆ ಕೇಳುವುದಕ್ಕೆ ಸಿದ್ಧವಾದರು.

ಮೊದಲಿಗೆ ಓಚು, ಸೀಜೋಳನ್ನು ದೋಣಿಯಲ್ಲೇ ಬಿಟ್ಟು ಮಾವನನ್ನುನೋಡಿ ಬರಲು ಹೋದ. “ನಿನಗೆ ತಿಳಿಸದೆ ನಿನ್ನ ಮಗಳ ಜೊತೆ ಓಡಿಹೋಗಿ ಮದುವೆಯಾಗಿದ್ದಕ್ಕೆ ಕ್ಷಮಿಸಿಬಿಡು” ಅಂತ ಮಂಡಿಯೂರಿ ಕೇಳಿಕೊಂಡ.

ಅವನಿಗೆ ಶಾಕ್ ಆಗುವಂತೆ ಚೋಕನ್‌, “ನನ್ನ ಮಗಳು ನೀನು ಹೋದ ಮೇಲೆ ತುಂಬಾ ಬೇಸರಪಟ್ಟು ಹಾಸಿಗೆ ಹಿಡಿದಳು. ಈಗಲೂ ಹಾಸಿಗೆಯಲ್ಲಿಯೇ ಇದ್ದಾಳೆ” ಅಂದ!

ಆದರೆ ಓಚು, “ಇಲ್ಲ ಸೀಜೋ ನನ್ನ ಜೊತೆ ಇದ್ದಾಳೆ” ಎಂದು ದೋಣಿಯಲ್ಲಿ ಕಾಯುತ್ತಿದ್ದ ಸೀಜೋಳನ್ನು ಕರೆತಂದ.

ಆಗ ಹಾಸಿಗೆಯಲ್ಲಿ ಮಲಗಿದ್ದ ಸೀಜೋ ಮತ್ತು ನಿಜವಾದ ಸೀಜೋ ಇಬ್ಬರೂ ಮುಖಾಮುಖಿಯಾದರು!

ಈ ಕಥೆಯನ್ನು ತನ್ನ ಅನುಯಾಯಿಗಳಿಗೆ ಹೇಳಿದ ಝೆನ್ ಗುರು ಗೋಸೋ ಕೇಳಿದ, “ಸೀಜೋ ಎರಡು ಆತ್ಮ ಹೊಂದಿದ್ದಾಳೆ. ಒಂದು ಆತ್ಮ ಅಪ್ಪನ ಮನೆಯಲ್ಲಿ ಕೃಶವಾಗಿ ಬಿದ್ದಿದೆ. ಇನ್ನೊಂದು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದೆ. ಈ ಎರಡರಲ್ಲಿ ಯಾವ ಆತ್ಮ ನಿಜವಾದದ್ದು!?”

ಈ ಬಗೆಹರಿಯದ ಕೊಆನ್‌ ಅನ್ನು ಇಂದಿಗೂ ಝೆನ್‌ ಶಿಷ್ಯಪರಂಪರೆ ಬಿಡಿಸುತ್ತಲೇ ಇದೆ. ಉತ್ತರ ದೊರಕಿದವರು ಜ್ಞಾನೋದಯ ಹೊಂದಿ, ಆ ಬಗ್ಗೆ ಏನೂ ಹೇಳದೆ ಹೋಗಿಬಿಟ್ಟಿದ್ದಾರೆ!

***

೩. ಹೌದು ಎಂದು ಹೇಳಿದ ಮನುಷ್ಯ

ಒಬ್ಬ ವ್ಯಕ್ತಿಯು ಮೌನವಾಗಿ ವಿಶ್ರಾಂತಿ ಪಡೆಯಲು ಬೌದ್ಧ ಮಠಕ್ಕೆ ಹೋದನು. ಅವನು ಮುಗಿಸಿದ ನಂತರ, ಅವನು ಉತ್ತಮ, ಶಾಂತ, ಬಲಶಾಲಿ ಎಂದು ಭಾವಿಸಿದನು, ಆದರೆ ಏನೋ ಕಾಣೆಯಾಗಿದೆ. ಅವರು ಹೊರಡುವ ಮೊದಲು ಒಬ್ಬ ಸನ್ಯಾಸಿಯೊಂದಿಗೆ ಮಾತನಾಡಬಹುದು ಎಂದು ಶಿಕ್ಷಕರು ಹೇಳಿದರು.

ಆ ವ್ಯಕ್ತಿ ಸ್ವಲ್ಪ ಹೊತ್ತು ಯೋಚಿಸಿ ಕೇಳಿದ: "ನಿಮಗೆ ಶಾಂತಿ ಸಿಗುವುದು ಹೇಗೆ?"

ಸನ್ಯಾಸಿ ಹೇಳಿದರು: “ನಾನು ಹೌದು ಎಂದು ಹೇಳುತ್ತೇನೆ. ನಡೆಯುವ ಪ್ರತಿಯೊಂದಕ್ಕೂ, ನಾನು ಹೌದು ಎಂದು ಹೇಳುತ್ತೇನೆ.

ಆ ವ್ಯಕ್ತಿ ಮನೆಗೆ ಹಿಂದಿರುಗಿದಾಗ, ಅವನಿಗೆ ಜ್ಞಾನೋದಯವಾಯಿತು.

***

(ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ