ಮೂರು ಟೆಡ್ಡಿ ಕರಡಿಗಳ ಸಾಗರ ಸಾಹಸ

ಮೂರು ಟೆಡ್ಡಿ ಕರಡಿಗಳ ಸಾಗರ ಸಾಹಸ

ಬೇಸಗೆಯ ಒಂದು ದಿನ, ಮೂವರು ಪುಟ್ಟ ಹುಡುಗರು ನದಿ ದಡದಲ್ಲಿ ಆಟವಾಡಲು ಬಂದರು. ತಮ್ಮೊಂದಿಗೆ ಈಜು ಉಡುಗೆಗಳು, ಬ್ರೆಡ್-ಜಾಮ್, ಬಾಳೆಹಣ್ಣು ಮತ್ತು ಟೆಡ್ಡಿ ಕರಡಿಗಳನ್ನು ತಂದಿದ್ದರು.

ಅವರು ಅಲ್ಲಿಗೆ ಬಂದಾಗ, ಅಲ್ಲೊಂದು ನೀಲಿ ಬಣ್ಣದ ದೋಣಿಯನ್ನು ಮರಕ್ಕೆ ಕಟ್ಟಿದ್ದನ್ನು ಕಂಡರು. ಮೂವರು ಹುಡುಗರೂ ದೋಣಿಯನ್ನೇರಿ ಖುಷಿಯಿಂದ ಕಡಲುಗಳ್ಳರ ಆಟವಾಡಿದರು. ನೀರನ್ನು ಎರಚಿಕೊಳ್ಳುತ್ತಾ, ಈಜಾಡುತ್ತಾ ಹೊತ್ತು ಕಳೆದರು. ಅನಂತರ ನದಿಯ ದಡದಲ್ಲಿ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ, ಅವರು ಕಣ್ಮರೆಯಾದರು.

ಈಗ, ದೋಣಿಯಲ್ಲಿ ಕುಳಿತಿದ್ದ ಮೂರು ಟೆಡ್ಡಿ ಕರಡಿಗಳಿಗೆ ಏನು ಮಾಡುವುದೆಂದು ಗೊತ್ತಾಗಲಿಲ್ಲ. ಅವುಗಳಲ್ಲೊಂದು ಪುಟ್ಟ ಕರಡಿ, ಇನ್ನೊಂದು ಕಂದು ಕರಡಿ ಮತ್ತು ಮೂರನೆಯದು ದೊಡ್ಡ ಕರಡಿ. ಪುಟ್ಟ ಕರಡಿ ಮತ್ತು ಕಂದು ಕರಡಿ ಗೆಳೆಯರು. ಅವುಗಳಿಗೆ ದೊಡ್ಡ ಕರಡಿ ಇಷ್ಟವಾಗುತ್ತಿರಲಿಲ್ಲ. ಯಾಕೆಂದರೆ ದೊಡ್ಡ ಕರಡಿ ಯಾವಾಗಲೂ ಗುರುಗುಟ್ಟುತ್ತಿತ್ತು ಮತ್ತು ಉಳಿದೆರಡು ಕರಡಿಗಳಿಗೆ "ಹಾಗೆ ಮಾಡಿ ಹೀಗೆ ಮಾಡಿ” ಎಂದು ಜಬರದಸ್ತು ಮಾಡುತ್ತಲೇ ಇತ್ತು.

ಹುಡುಗರು ಕಣ್ಮರೆಯಾದ ಕೂಡಲೇ ದೊಡ್ಡ ಕರಡಿ ದೋಣಿಯಲ್ಲಿ ಎದ್ದು ನಿಂತಿತು. ಅದರ ತೂಕಕ್ಕೆ ದೋಣಿ ಜೋರಾಗಿ ಅಲುಗಾಡಿತು. ಸುಮ್ಮನೆ ಕುಳಿತಿರಬೇಕೆಂದು ದೊಡ್ಡ ಕರಡಿಯನ್ನು ಪುಟ್ಟ ಕರಡಿ ಮತ್ತು ಕಂದು ಕರಡಿ ಕೇಳಿಕೊಂಡವು.

"ನಾನೊಬ್ಬ ಹೆದರಿಕೆಯಿಲ್ಲದ ನಾವಿಕ. ನಾನು ಏಳು ಸಾಗರಗಳಲ್ಲಿ ಯಾನ ಮಾಡಿದವನು; ಈಗ ಪುನಃ ಹಾಗೆಯೇ ಯಾನ ಮಾಡುತ್ತೇನೆ” ಎಂದಿತು ದೊಡ್ಡ ಕರಡಿ. ಅದು ದೋಣಿಯ ಹಗ್ಗ ಬಿಚ್ಚಿ, ದೋಣಿಯನ್ನು ದಡದಿಂದ ನೀರಿಗೆ ತಳ್ಳಿತು. ಆಗ ದೋಣಿ ಪಕ್ಕಕ್ಕೆ ವಾಲಿತು.

“ಬನ್ನಿ, ಬನ್ನಿ. ದೋಣಿ ಹೊರಟಿದೆ. ನಾನು ಹೇಳಿದಂತೆ ಮಾಡಿ. ನಾನು ನಿಮ್ಮನ್ನು ಸಾಗರ ದಾಟಿಸುತ್ತೇನೆ” ಎಂದಿತು ದೊಡ್ಡ ಕರಡಿ. ಹಗ್ಗ ಬಿಚ್ಚಿದ ಕಾರಣ ನೀಲಿ ದೋಣಿ ಮುಂದಕ್ಕೆ ಸರಿಯಿತು. ಪಕ್ಕಕ್ಕೆ ತಿರುಗಿದ ದೋಣಿ ನದಿ ನೀರಿನ ಮುಖ್ಯ ಪ್ರವಾಹವನ್ನು ಸೇರಿಕೊಂಡು ವೇಗವಾಗಿ ಸಾಗತೊಡಗಿತು.

“ದೊಡ್ಡ ಕರಡಿ, ದೋಣಿ ವೇಗವಾಗಿ ಓಡುತ್ತಿದೆ” ಎಂದು ಕೂಗಿತು ಪುಟ್ಟ ಕರಡಿ. "ಅದಕ್ಕೇನಂತೆ? ನಾವು ಸಾಗರದ ಹೆದರಿಕೆಯಿಲ್ಲದ ಕಡಲುಗಳ್ಳರು” ಎಂದು ಗುರುಗುಟ್ಟಿತು ದೊಡ್ಡ ಕರಡಿ.

ಸಣ್ಣ ದೋಣಿ ಹೊಲಗಳನ್ನೂ ಮನೆಗಳನ್ನೂ ದಾಟಿ ವೇಗವಾಗಿ ಮುಂದೋಡಿದಂತೆ ಸಣ್ಣ ಕರಡಿ ಮತ್ತು ಕಂದು ಕರಡಿ ಭಯದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡರು. “ಸಹಾಯ ಮಾಡಿ" ಎಂದು ಎರಡೂ ಕರಡಿಗಳು ಚೀರಿದವು. “ದೊಡ್ಡ ಕರಡಿ, ದೋಣಿ ನಿಲ್ಲಿಸು” ಎಂದು ಅವು ಕೂಗಿದವು.

ಆದರೆ ದೊಡ್ಡ ಕರಡಿ ಗಾಳಿಗೆ ಎದೆಯೊಡ್ಡಿ ದೋಣಿಯಲ್ಲಿ ನಿಂತಿತ್ತು. “ಹೋಹೋ, ಏನು ಮಜವಾಗಿದೆ!” ಎಂದು ಅದು ಮೈಕುಣಿಸಿತು. ಆ ಕಡೆ, ಈ ಕಡೆ ನೋಡಿದ ಪುಟ್ಟ ಕರಡಿಯ ಮೈನಡುಗಿತು. ಅದಕ್ಕೆ ತಲೆ ತಿರುಗತೊಡಗಿತು.

“ದೊಡ್ಡ ಕರಡೀ, ನೋಡು, ನೋಡು. ದೋಣಿ ಹೋಗಿ ದಡಕ್ಕೆ ಬಡಿಯಲಿದೆ. ಅದನ್ನು ಪಕ್ಕಕ್ಕೆ ತಿರುಗಿಸು” ಎಂದು ಸಣ್ಣ ಕರಡಿ ಕೂಗಿತು. ಆದರೆ ದೊಡ್ಡ ಕರಡಿ ಏನೂ ಮಾಡಲಿಲ್ಲ. ದೋಣಿ ರಭಸದಿಂದ ಹೋಗಿ ಧಡ್ ಎಂದು ದಡಕ್ಕೆ ಬಡಿಯಿತು. ತಕ್ಷಣವೇ ದೋಣಿ ತಿರುಗಿ ಪುನಃ ನದಿಯ ಮಧ್ಯಕ್ಕೆ ಮುನ್ನುಗ್ಗಿತು.

ಕಂದು ಕರಡಿ “ದೊಡ್ಡ ಕರಡಿಯೇ, ದೋಣಿ ನಿಲ್ಲಿಸು” ಎಂದು ಚೀರಿದರೂ ದೊಡ್ಡ ಕರಡಿ ಪೆಚ್ಚಾಗಿ ನೋಡುತ್ತಾ, ತನ್ನ ತಲೆಗೆ ಆಘಾತದಿಂದಾದ ಏಟನ್ನು ಉಜ್ಜಿಕೊಳ್ಳುತ್ತ ಕುಳಿತಿತ್ತು.
“ಇಲ್ಲ, ನನ್ನಿಂದಾಗದು. ನನಗೆ ನಿಜಕ್ಕೂ ದೋಣಿ ಓಡಿಸಲು ಗೊತ್ತಿಲ್ಲ” ಎಂದು ಪೆದ್ದುಪೆದ್ದಾಗಿ ಹೇಳಿತು ದೊಡ್ಡ ಕರಡಿ. ಈಗ ಅದೂ ಭಯದಿಂದ ತನ್ನ ಮುಖವನ್ನು ಅಂಗೈಗಳಿಂದ ಮುಚ್ಚಿಕೊಂಡು ಅಳತೊಡಗಿತು. ನದಿಯ ನೀರಿನ ಸೆಳೆತಕ್ಕೆ ದೋಣಿ ಅತ್ತಿತ್ತ ಓಲಾಡಿತು. ಮೂರೂ ಕರಡಿಗಳು ಭಯದಿಂದ ತತ್ತರಿಸುತ್ತಾ ದೋಣಿಯ ಅಂಚನ್ನು ಹಿಡಿದುಕೊಂಡವು. ಈಗ ನದಿಯ ಹರವು ಅಗಲವಾಗಿ, ಅವುಗಳಿಗೆ ಸಮುದ್ರಹಕ್ಕಿಗಳ ಕೂಗು ಕೇಳಿಸಿತು.

“ಓ ದೊಡ್ದ ಕರಡಿಯೇ, ನಮ್ಮ ದೋಣಿ ಸಮುದ್ರದತ್ತ ಓಡುತ್ತಿದೆ. ಏನಾದರೂ ಮಾಡು" ಎಂದು ಬೇಡಿಕೊಂಡಿತು ಕಂದು ಕರಡಿ. “ನನ್ನನ್ನು ಯಾರೂ ಇಷ್ಟ ಪಡುವುದಿಲ್ಲ. ನಾವೀಗ ನೀರಿನಲ್ಲಿ ಮುಳುಗಿ ಸಮುದ್ರದ ಆಳಕ್ಕೆ ಹೋಗಲಿದ್ದೇವೆ. ಹಾಗಾಗಿ ನೀವಿಬ್ಬರೂ ನನ್ನನ್ನು ಇಷ್ಟ ಪಡುವುದಿಲ್ಲ" ಎಂದು ಗೋಳಿಟ್ಟಿತು ದೊಡ್ಡ ಕರಡಿ.

ಪುಟ್ಟ ಕರಡಿ ಇದಕ್ಕೆಲ್ಲ ಕಿವಿಗೊಡಲಿಲ್ಲ. ಅದಕ್ಕೆ ದೋಣಿಯ ಹಾಯಿಯಿಂದ ನೇತಾಡುವ ಹಗ್ಗವೊಂದು ಕಂಡಿತ್ತು. "ದೋಣಿಯ ಹಾಯಿಯನ್ನು ಬಿಡಿಸೋಣ. ಅದು ನಮ್ಮನ್ನು ದಡಕ್ಕೆ ಸೆಳೆದೊಯ್ಯುತ್ತದೆಯೋ ನೋಡೋಣ" ಎಂದಿತು ಪುಟ್ಟ ಕರಡಿ.

“ಏ, ಹಾಗೆ ಮಾಡಬೇಡ. ಗಾಳಿಯ ಸೆಳೆತ ನಮ್ಮನ್ನು ಸಮುದ್ರದ ನಡುವಿಗೇ ಒಯ್ಯುತ್ತದೆ” ಎಂದಿತು ದೊಡ್ಡ ಕರಡಿ. ಆದರೆ ಅದರ ಮಾತಿಗೆ ಪುಟ್ಟ ಕರಡಿ ಬೆಲೆ ಕೊಡಲೇ ಇಲ್ಲ. ಅದು ಹಾಯಿಯನ್ನು ಎಳೆದು ಕಟ್ಟಿತು. ಈಗ ಹಾಯಿಯಲ್ಲಿ ಗಾಳಿ ತುಂಬಿತು ಮತ್ತು ಗಾಳಿಯ ಒತ್ತಡಕ್ಕೆ ಸಣ್ಣ ದೋಣಿ ಚಲಿಸತೊಡಗಿತು. ಅದು ಅಳಿವೆಯನ್ನು ದಾಟಿ, ಸಮುದ್ರ ತೀರಕ್ಕೆ ಹೋಗಿ ನಿಂತಿತು.

“ಓ ಪುಟ್ಟ ಕರಡಿ, ನೀನೊಬ್ಬ ಹೀರೋ! ಇವತ್ತು ನೀನೇ ನಮ್ಮನ್ನು ಉಳಿಸಿದೆ” ಎನ್ನುತ್ತಾ ಕಂದು ಕರಡಿ ಪುಟ್ಟ ಕರಡಿಯನ್ನು ಅಪ್ಪಿಕೊಂಡಿತು. ಅಷ್ಟರಲ್ಲಿ, ಮೂವರು ಹುಡುಗರೂ ದೋಣಿಯತ್ತ ಓಡಿ ಬಂದರು. ಅವರು ಸಾಗರ ರಕ್ಷಣಾ ದಳಕ್ಕೆ ಸಂದೇಶ ನೀಡಲಿಕ್ಕಾಗಿ ಸಾಗರ ತೀರಕ್ಕೆ ಬಂದಿದ್ದರು.

ಈಗ ಮೂರೂ ಟೆಡ್ದಿ ಕರಡಿಗಳು ಸುರಕ್ಷಿತವಾಗಿ ಇರೋದನ್ನು ನೋಡಿ ಅವರು ನಿಟ್ಟುಸಿರು ಬಿಟ್ಟರು. ತಮ್ಮ ಮುದ್ದಿನ ಟೆಡ್ದಿ ಕರಡಿಗಳನ್ನು ತಬ್ಬಿಕೊಂಡರು. ಇದೆಲ್ಲದರಿಂದ ದೊಡ್ಡ ಕರಡಿ ದೊಡ್ಡ ಪಾಠ ಕಲಿಯಿತು ಮತ್ತು ಅನಂತರ ಅದು ಇತರ ಟೆಡ್ಡಿ ಕರಡಿಗಳ ಮೇಲೆ ಯಾವತ್ತೂ ಜಬರದಸ್ತು ಮಾಡಲಿಲ್ಲ.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ