ಮೂರು ನ್ಯಾನೋ ಕಥೆಗಳು

ಮೂರು ನ್ಯಾನೋ ಕಥೆಗಳು

ಏನೋ ಮಾಡಲು ಹೋಗಿ… 

ರಾಮಣ್ಣನ ತೋಟದಲ್ಲಿ ಹಲಸು ಹಣ್ಣಾದ ಸಮಯ. ಅಳಿಲು ಮಂಗಗಳ ಉಪಟಳಕ್ಕೆ ಅವರು ಕೋವಿ ಹಿಡಿದು ಧಾವಿಸಿದ್ದರು. ಕೋತಿಯೊಂದು ಅಳಿಲಿನ ಮರಿಯನ್ನೆತ್ತಿ ಕೆಳಗೆ ಎಸೆದ ರಭಸಕ್ಕೆ ಅದರ ಕಾಲು ಮುರಿದುಕೊಂಡಿತ್ತು. ರಾಶಿ ಬಿದ್ದ ಸೊಳೆಗಳಿಂದ ಬೀಜವಾದರೂ ಸಿಕ್ಕೀತೆಂದು ಕೆಳಗೆ ಬಾಗಿ ಬುಟ್ಟಿಯಲ್ಲಿ ತುಂಬಿಸುತ್ತಿರುವ ರಾಮಣ್ಣನ ಬೆನ್ನಿಗೆ ಕಾಯಿಯೊಂದು ಬಿದ್ದಾಗ ಪಕ್ಕದಲ್ಲೇ ಬಿದ್ದಿದ್ದ ಮರಿಯು ನೋವಿನಲ್ಲೂ ನಕ್ಕಂತೆ ಭಾಸವಾಗಿತ್ತು.

*******

ವಿಧಿಯಾಟ

ಜನಿಸಿದಾಗ ತಾಯಿಯನ್ನು ಕೊಂದು ತಿಂದನೆಂಬ ಆರೋಪದೊಂದಿಗೆ ತನ್ನಜ್ಜನ ಆಶ್ರಯದಲ್ಲಿ ಬೆಳೆದ ಪ್ರಶಾಂತನಿಗೀಗ ಹತ್ತರ ಹರೆಯ. ಸೊಸೆಯ ಮರಣದ ಕೊರಗಿನಲ್ಲಿ ತನ್ನ ಜೀವನ ಸಂಗಾತಿ ಮರಣವನ್ನಪ್ಪಿದಾಗ ಶ್ರೀಕಂಠಯ್ಯನವರು ಧೃತಿಗೆಡದೆ ಮೊಮ್ಮಗನನ್ನು ಸಾಕಿ ಬೆಳೆಸುವುದರಲ್ಲಿಯೇ ಸಂತೋಷವನ್ನು ಕಂಡವರು. ಹೈನುಗಾರಿಕೆಯೊಂದಿಗೆ ಜೀವನ ನಡೆಸಿದ ರಾಯರು ದನಕರುಗಳನ್ನು ಮೇಯಿಸಲು ಕರೆದುಕೊಂಡು ಹೋಗುವಲ್ಲಿಯೇ ಪ್ರಶಾಂತನಿಗೆ ಮನೆಪಾಠ ಹೇಳಿಕೊಡುತ್ತಾ ಮುಂದೆ ಅವನೊಬ್ಬ ಪೋಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಹಗಲಿರುಳು ಕಾಣುತ್ತಲೇ ಇದ್ದರು. ಅವರಿಚ್ಛೆಯಂತೆಯೇ ಪ್ರಶಾಂತ ಓದಿ ಐ ಎಸ್ ಅಧಿಕಾರಿಯಾದಾಗ ತಾತ ಇಹಲೋಕ ತ್ಯಜಿಸಿದ್ದು ಮಾತ್ರ ವಿಧಿಯಾಟವೇ ಸರಿ. 

********

ಮೂರು ದಿನದ ಬದುಕು

ಗಿಡದಲೊಂದು ದಾಸವಾಳ ಹೂವು ಅರಳಿ ನಗುತ್ತಾ ಇರುವುದು ನನ್ನ ಗಮನಕ್ಕೆ ಬಂದಿತು. ಕೂಡಲೇ ಅತ್ತ ಹೋದವಳು ಅದನ್ನು ಕಿತ್ತು ಒಂದೆರಡು ಹೆಜ್ಜೆ ಮುಂದಿಡುವಷ್ಟರಲ್ಲಿ “ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ” ಹಾಡಿನ ಮೂಲಕ ನನ್ನದೇ ಕೈಯಲ್ಲಿದ್ದ ಮೊಬೈಲ್ ರಿಂಗಣಿಸಿತು. ಕರೆ ಸ್ವೀಕರಿಸುವ ಬದಲು ಮನಸ್ಸು ಆ ಹಾಡಿನ ಭಾವಾರ್ಥವನ್ನು ಶೋಧನೆ ಮಾಡುವ ಕೆಲಸ ಮಾಡತೊಡಗಿತು. ಹೂವನೊಮ್ಮೆ ಗಿಡವನ್ನೊಮ್ಮೆ ನೋಡತೊಡಗಿದವಳಿಗೆ ಎಲ್ಲವೂ ಅರ್ಥವಾಗಿತ್ತು. ಇಂದು ನಾನು ನಾಳೆ ನೀನು ಎಂದು ಆ ಗಿಡ ಹೇಳಿದಂತೆ ಭಾಸವಾಗಿ ಬಂದಷ್ಟೇ ವೇಗದಿಂದ ಹೋಗಿ ಮನೆ ಸೇರಿಕೊಂಡೆನು.

✍🏻ಲತಾ ಬನಾರಿ

ಚಿತ್ರ ಕೃಪೆ: ಅಂತರ್ಜಾಲ ತಾಣ