ಮೂರು ಹುಡುಗರು, ಒಂದು ಸುತ್ತಿಗೆ ಮತ್ತು ೨೧ ಕೊಲೆಗಳು !

ಮೂರು ಹುಡುಗರು, ಒಂದು ಸುತ್ತಿಗೆ ಮತ್ತು ೨೧ ಕೊಲೆಗಳು !

ಜೂನ್ ೨೫, ೨೦೦೭ರ ಮುಂಜಾನೆ ಎಂದಿನಂತೆ ಉಕ್ರೇನ್ ದೇಶದ ಮೂವತ್ತಮೂರು ವರ್ಷದ ಎಕ್ಟೆರಿನಾ ಇಲ್ಜೆಂಕೋ ಎನ್ನುವ ಮಹಿಳೆ ಡೆನ್ ಪ್ರೊ ಪೆಟ್ರೊವೆಸ್ಟ್ ಎನ್ನುವ ಸ್ಥಳದಲ್ಲಿರುವ ತನ್ನ ಮನೆಯ ಹತ್ತಿರ ಒಂದು ಸಣ್ಣ ವಾಕ್ ಮಾಡಿ ಅಲ್ಲೇ ಹತ್ತಿರಲ್ಲಿರುವ ತನ್ನ ಗೆಳತಿಯ ಮನೆಗೆ ತೆರಳಿ, ಆಕೆ ಮಾಡಿಕೊಟ್ಟ ಟೀ ಕುಡಿದು, ಸ್ವಲ್ಪ ಹರಟೆ ಹೊಡೆದು ತನ್ನ ಮನೆಗೆ ಹಿಂದಿರುಗುವ ಸಮಯದಲ್ಲಿ ಆಕೆಯ ಮೇಲೆ ಅನಿರೀಕ್ಷಿತವಾಗಿ ದಾಳಿಯಾಗುತ್ತದೆ. ಸುತ್ತಿಗೆಯಿಂದ ಬಲವಾಗಿ ಆಕೆಯ ತಲೆಗೆ ಹೊಡೆದು, ಮುಖವನ್ನು ಜಜ್ಜಿ ಯಾರೋ ಭೀಕರವಾಗಿ ಕೊಲೆ ಮಾಡಿದ್ದರು. ಆಕೆಯ ದೇಹ ಪತ್ತೆಯಾದದ್ದು ಮಾತ್ರ ಮರುದಿನ ಬೆಳಿಗ್ಗೆ ಐದು ಗಂಟೆಗೆ. ಅದೂ ಆಕೆಯ ತಾಯಿಯ ಕಣ್ಣಿಗೆ. 

ಎಕ್ಟರಿನಾಳ ಕೊಲೆ ನಡೆದ ಒಂದು ಗಂಟೆಯಲ್ಲೇ ರೋಮನ್ ಟಟ್ರಾವೆಚ್ ಎಂಬ ವ್ಯಕ್ತಿಯ ಕೊಲೆಯೂ ಇದೇ ರೀತಿ ನಡೆದು ಹೋಯಿತು. ಪಾರ್ಕ್ ಒಂದರ ಬೆಂಚಿನಲ್ಲಿ ಸುಮ್ಮನೇ ಮಲಗಿಕೊಂಡಿದ್ದ ಆ ವ್ಯಕ್ತಿಯನ್ನು ಇದೇ ರೀತಿ ಸುತ್ತಿಗೆಯನ್ನು ಬಳಸಿ ಮುಖವನ್ನು ಜಜ್ಜಿ ಹತ್ಯೆಗಯ್ಯಲಾಗಿತ್ತು. ಕೊಲೆಯಾದ ಇಬ್ಬರೂ ಪರಸ್ಪರ ಪರಿಚಿತರಲ್ಲ, ಆದರೆ ಕೊಲೆ ಮಾಡಿದ ರೀತಿ ಮಾತ್ರ ಒಂದೇ ಆಗಿತ್ತು. ಎರಡೂ ಹತ್ಯೆಗಳು ನಡೆದದ್ದು ಕೆಲವೇ ಕೆಲವು ಹೆಜ್ಜೆಗಳ ಅಂತರದಲ್ಲಿ ಎನ್ನುವುದು ಮತ್ತೊಂದು ವಿಶೇಷ. ಈ ಸ್ಥಳ ಸ್ಥಳೀಯ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಆಫೀಸಿನಿಂದ ಕಣ್ಣಳತೆಯ ದೂರದಲ್ಲಿತ್ತು. 

ಈ ಎರಡು ಕೊಲೆಗಳಿಂದಾಗಿ ಉಕ್ರೇನ್ ಪೋಲೀಸರು ಎಚ್ಚೆತ್ತುಕೊಂಡರು. ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ಎರಡು ವ್ಯಕ್ತಿಗಳ ಹತ್ಯೆ ಎನ್ನುವುದು ಅವರಿಗೆ ಸಾಮಾನ್ಯ ಸಂಗತಿಯಾಗಿರಲಿಲ್ಲ. ಅನುಮಾನ ವ್ಯಕ್ತ ಪಡಿಸಲು ಯಾರ ಮೇಲೂ ಸಂಶಯ ಪಡುವ ಅವಕಾಶವೇ ಇರಲಿಲ್ಲ. ಏಕೆಂದರೆ ಕೊಲೆ ನಡೆದದ್ದು ಹಣಕ್ಕಾಗಿ ಅಥವಾ ಚಿನ್ನಕ್ಕಾಗಿ ಆಗಿಯೇ ಇರಲಿಲ್ಲ. ಯಾರಾದರೂ ಸುಮ್ಮನೇ, ಪರಿಚಯವೇ ಇಲ್ಲದ ವ್ಯಕ್ತಿಗಳನ್ನು ಕೊಲ್ಲುತ್ತಾನೆಯಾ? ಯಾರಾತ? ಸೈಕೋಪಾತ್ ಕೊಲೆಗಾರನೇ?

ಈ ಕೊಲೆಗಳನ್ನು ಮಾಡಿದ್ದು ಒಬ್ಬನಲ್ಲ, ಇಬ್ಬರಲ್ಲ, ಮೂರು ಮಂದಿ. ಅವರೇ ವಿಕ್ಟೋರ್ ಸಾಯೆಂಕೊ (Viktor Sayenko), ಐಗೋರ್ ಸ್ಪೂರೋನ್ಯೂಕ್ (Igor Suprunyuck) ಮತ್ತು ಅಲೆಕ್ಸಾಂಡರ್ ಹಂಜಾ (Alexander Hanzha). ಈ ಮೂವರು ಇಷ್ಟೊಂದು ಕ್ರೂರವಾಗಿ, ಮುಖವನ್ನು ಜಜ್ಜಿ ಅಪರಿಚಿತರನ್ನು ಕೊಲ್ಲಲು ಇದ್ದ ಕಾರಣವಾದರೂ ಏನು? ಅವರ ಮೇಲೆ ಇವರಿಗಿದ್ದ ದ್ವೇಷವಾದರೂ ಏನು? ಅಚ್ಚರಿಯ ವಿಷಯವೆಂದರೆ ಇವರು ಕೊಂದ ೨೧ ಮಂದಿಗಳ ಮೇಲೆ ಇವರಿಗೆ ಯಾವ ದ್ವೇಷವೂ ಇರಲಿಲ್ಲ. ಯಾವುದೇ ಹಣಕಾಸಿನ, ಕಳ್ಳತನದ ವಿಷಯಕ್ಕೂ ಕೊಲೆ ನಡೆದಿರಲಿಲ್ಲ. ಕೊಲೆ ಮಾಡಿದ ಕಾರಣ ಕೇಳಿದರೆ ನೀವು ದಂಗಾಗುವಿರಿ. 

“ನಲ್ವತ್ತು ಕೊಲೆಗಳನ್ನು ಮಾಡಿ ಅದರ ವಿಡಿಯೋವನ್ನು ನೀಡಿದರೆ ನಿಮಗೆ ಬಹಳಷ್ಟು ಹಣವನ್ನು ಕೊಡುತ್ತೇನೆ” ಎಂದು ಈ ಮೂವರಿಗೆ ಇಂಟರ್ನೆಟ್ ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿಯೊಬ್ಬ ಹೇಳಿದ್ದ. ಆತನ ಮಾತನ್ನು ನಂಬಿ ಇವರು ೨೧ ಮಂದಿ ಅಮಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಅದೂ ಹದಿಹರೆಯದ ವಯಸ್ಸಿನಲ್ಲಿ. ಕೊಲೆ ಮಾಡಿದಾಗ ಈ ಮೂವರ ವಯಸ್ಸೂ ಹತ್ತೊಂಬತ್ತರ ಆಸುಪಾಸಿನಲ್ಲಿತ್ತು. ಬಹಳ ದೊಡ್ಡ ಮೊತ್ತದ ಹಣ ಸಿಗುವುದೆಂಬ ತೆವಲಿಗೆ ಬಿದ್ದ ಈ ಮೂವರೂ ತಾವು ಮಾಡಿದ ಕೃತ್ಯಗಳ ವಿಡಿಯೋ ಮತ್ತು ಫೊಟೋ ಮಾಡಿ ಇಟ್ಟಿದ್ದರು. ಕೊಂದವರ ಹೆಣದ ಮುಂದೆ ನಗುನಗುತ್ತಾ ಫೋಸ್ ಕೊಡುವುದು ನೋಡಿದರೆ ಕೊಲೆಗಡುಕರು ಹೀಗೂ ಇರ್ತಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. 

ಈ ಮೂವರಲ್ಲಿ ವಿಕ್ಟೋರ್, ಹಂಜ ಬಾಲ್ಯ ಸ್ನೇಹಿತರು. ಬಾಲ್ಯದಲ್ಲೇ ಇವರ ಜೊತೆ ಸೇರಿಕೊಂಡವನು ಐಗೋರ್. ಸಾಧಾರಣ ಕಲಿಕೆಯ ಹುಡುಗರಾಗಿದ್ದ ವಿಕ್ಟೋರ್ ಮತ್ತು ಹಂಜ, ಐಗೋರ್ ನ ಸಹವಾಸ ಮಾಡಿದ ಬಳಿಕ ಕಲಿಕೆಯನ್ನು ಮರೆತು ಪೋಲಿ ತಿರುಗಾಡಲು ಶುರು ಮಾಡಿದರು. ಶಾಲೆಯ ಇತರೆ ಮಕ್ಕಳ ಜೊತೆ ಹೊಡೆದಾಟ ಬಡಿದಾಟ ಇವರಿಗೆ ಸರ್ವೇ ಸಾಮಾನ್ಯವಾಗಿತ್ತು. ಐಗೋರ್, ವಿಕ್ಟೋರ್ ಮತ್ತು ಹಂಜ ಅವರಿಗೆ ಧೈರ್ಯ ಬರುವಂತೆ ಮಾಡಲು ನಾಯಿಯನ್ನು ಕೊಲ್ಲಬೇಕು ಎಂದು ಹೇಳಿದ್ದ. ನಾಯಿಗಳನ್ನು ಹಿಡಿದು ಹಿಂಸಿಸಿದರೆ ಧೈರ್ಯ ಬರುತ್ತದೆ ಮತ್ತು ಯಾರೂ ಈ ಬಗ್ಗೆ ನಿಮ್ಮನ್ನು ಬಯ್ಯುವುದಿಲ್ಲ ಎಂದು ಧೈರ್ಯ ತುಂಬಿದ್ದ. ಈತನ ಮಾತು ಕೇಳಿ ವಿಕ್ಟೋರ್ ಮತ್ತು ಹಂಜ ಸೇರಿ ಒಂದು ನಾಯಿಯನ್ನು ಹಿಡಿದು ಅದನ್ನು ಮರಕ್ಕೆ ನೇತು ಹಾಕಿ ಅದಕ್ಕೆ ಚಿತ್ರ ಹಿಂಸೆ ನೀಡಿ, ಹತ್ಯೆಗೈದು ಧೈರ್ಯ (?!) ಸಂಪಾದಿಸಿದ್ದರು. ಈ ನಾಯಿಯ ಕಳೇಬರದ ಎದುರು ನಿಂತು ನಗುತ್ತಾ ಫೋಸ್ ನೀಡಿ ಚಿತ್ರವನ್ನೂ ತೆಗೆಸಿದ್ದರು (ಫೋಟೋ ನೋಡಿ). 

ಒಂದು ರೀತಿಯಲ್ಲಿ ಇವರು ಹಿಟ್ಲರ್ ಅನುಯಾಯಿಗಳಾಗಿದ್ದರು. ಕಾಕತಾಳೀಯವಾಗಿ ಐಗೋರ್ ನ ಜನ್ಮವೂ ಹಿಟ್ಲರ್ ನ ಜನ್ಮದಿನವೂ ಒಂದೇ ಆಗಿತ್ತು. ಕೊಲೆ ಮಾಡಿದ ಬಳಿಕ ಇವರು ಹಿಟ್ಲರ್ ಮಾದರಿಯಲ್ಲಿ ಸೆಲ್ಯೂಟ್ ಸಹಾ ಹೊಡೆಯುತ್ತಿದ್ದರು. ನಿರುದ್ಯೋಗಿಗಳಾಗಿ ಅಲೆಯುತ್ತಿದ್ದ ಇವರುಗಳಿಗೆ ಸರಿಯಾದ ಸಮಯಕ್ಕೆ ಇಂಟರ್ನೆಟ್ ನಲ್ಲಿ ತಲೆ ಕೆಟ್ಟವನೊಬ್ಬ ಕೊಲೆ ಮಾಡಿ ವಿಡೀಯೋ ಮಾಡುವ ಐಡಿಯಾ ನೀಡಿದ. ಅಲ್ಲಿಂದ ಶುರು ಆಯ್ತು ನೋಡಿ ಈ ಕೊಲೆಗಳ ಸರಪಳಿ. 

ಮೊದಲೆರಡು ಕೊಲೆಗಳ ಬಳಿಕ ಜುಲೈ ೬ರ ರಾತ್ರಿ ಎಲೆನಾ ಶ್ರಾಮ್ ಎಂಬ ಇಪ್ಪತ್ತೆಂಟು ವರ್ಷದ ಮಹಿಳಾ ಗಾರ್ಡ್ ಸೇರಿದಂತೆ ಮೂವರನ್ನು ಕೊಲೆ ಮಾಡಿದರು. ಬಳಸಿದ್ದು ಅದೇ ಸುತ್ತಿಗೆ. ಜುಲೈ ಏಳರಂದು ಇವರಿದ್ದ ಪಟ್ಟಣಕ್ಕೆ ಸಮೀಪವಿದ್ದ ಗ್ರಾಮವೊಂದಕ್ಕೆ ನುಗ್ಗಿ ಮೀನು ಹಿಡಿಯಲು ಹೋಗುತ್ತಿದ್ದ ಇಬ್ಬರು ಹುಡುಗರಾದ ಆಂಡ್ರೆ ಸಿಡ್ಯೂಕ್ ಮತ್ತು ವ್ಯಾಡಿಮ್ ಲ್ಯಾಕೋವ್ ಅವರನ್ನು ಕೊಲೆ ಮಾಡಲು ಹಿಡಿದುಕೊಂಡರು. ಆದರೆ ವ್ಯಾಡಿಮ್ ಇವರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿ ಬಚಾವಾದ. ಆದ್ರೆ ಸಿಡ್ಯೂಕ್ ಕೊಲೆಯಾಗಿ ಹೋದ. ಇದಾದ ಬಳಿಕ ಸ್ವಲ್ಪ ದಿನ ಸುಮ್ಮನಿದ್ದ ಹಂತಕರು ಜುಲೈ ಹನ್ನೆರಡನೇ ತಾರೀಖಿಗೆ ಸೆರ್ಗಾಯ್ ಯಾಟ್ ಜಿಂಕೋ ಎಂಬ ನಲವತ್ತೆಂಟು ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದರು. ಪೋಲೀಸರಿಗೆ ನಿಜಕ್ಕೂ ತಲೆ ನೋವು ಪ್ರಾರಂಭವಾಗಿತ್ತು.

ವ್ಯಾಡಿಮ್ ಲ್ಯಾಕೋವ್ ಎಂಬ ಹುಡುಗ ಇವರಿಂದ ತಪ್ಪಿಸಿಕೊಂಡು ಹೋಗಿದ್ದನಲ್ಲಾ, ಆತ ಈ ವಿಷಯವನ್ನು ತನ್ನ ಮನೆಯಲ್ಲಿ ಹೇಳಿದಾಗ ಈ ಸುದ್ದಿ ಪೋಲೀಸರ ತನಕ ತಲುಪಿತು. ಆತನನ್ನು ಮೊದಲು ಪೋಲೀಸರೂ ನಂಬಲಿಲ್ಲ. ತನ್ನ ಗೆಳೆಯನನ್ನು ಈತನೇ ಕೊಲೆ ಮಾಡಿ ಈಗ ಆಪಾದನೆಯನ್ನು ಬೇರೆಯವರ ಮೇಲೆ ಹಾಕುತ್ತಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಆತನನ್ನು ಸರಿಯಾಗಿ ವಿಚಾರಿಸಿದಾಗ ಆತ ಹೇಳುವುದು ಸತ್ಯ ಎನ್ನುವ ಸಂಗತಿ ಅವರಿಗೆ ಅರಿವಾಯಿತು. ಆತನನ್ನು ಬಳಸಿ ಆ ಹಂತಕರ ಚಿತ್ರಗಳನ್ನು ಬಿಡಿಸಿದರು. ಯಾವಾಗ ಆ ಹಂತಕರ ಚಿತ್ರವು ಹೊರ ಪ್ರಪಂಚಕ್ಕೆ ತಿಳಿಯಿತೋ ಅಂದಿನಿಂದ ಕೊಲೆ ಮಾಡುವುದು ಹಂತಕರಿಗೆ ಸ್ವಲ್ಪ ಕಷ್ಟವಾಯಿತು. ಆದರೂ ಕೊಲೆಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇದ್ದವು. 

ಪೋಲೀಸರು ಹಂತಕರು ತಾವು ಕೊಲೆ ಮಾಡಿದ ವ್ಯಕ್ತಿಯೊರ್ವನ ಮೊಬೈಲ್ ಕದ್ದುಕೊಂಡು ಹೋಗಿದ್ದ ಸಂಗತಿಯನ್ನು ಅರಿತು ಅದನ್ನು ಆ ಮೊಬೈಲ್ ಅನ್ನು ಟ್ರೇಸ್ ಮಾಡತೊಡಗಿದರು. ಈ ವಿಚಾರ ತಿಳಿಯದ ಹಂತಕರಲ್ಲಿ ಒಬ್ಬನಾದ ಐಗೋರ್ ಡೆನ್ ಪ್ರೊಪೆಟ್ರೋವಸ್ಕ್ ನಗರದ ಒಂದು ಮೊಬೈಲ್ ಅಂಗಡಿಯವನ ಬಳಿ ಮಾರಾಟಕ್ಕೆ ಚೌಕಾಶಿ ಮಾಡುತ್ತಿದ್ದ. ಈ ವಿಚಾರವನ್ನು ತಿಳಿದ ಪೋಲೀಸರು ಅಲ್ಲಿಗೆ ಧಾವಿಸಿ ಆತನನ್ನು ಬಂಧಿಸಿದರು. ಆತನನ್ನು ಹೆಚ್ಚಿಗೆ ವಿಚಾರಿಸಿದಾಗ ಆತನ ಸಹಚರರಾದ ವಿಕ್ಟೋರ್ ಮತ್ತು ಹಂಜ ಅವರೂ ಸಿಕ್ಕಿಬೀಳುತ್ತಾರೆ. ಅಂದು ಜುಲೈ ೨೩, ೨೦೦೭. 

ಸುಮಾರು ಒಂದು ತಿಂಗಳ ಒಳಗಾಗಿ ಈ ಮೂರು ಮಂದಿ ಹದಿಹರೆಯದ ಹುಡುಗರು, ಒಬ್ಬ ವಿದೇಶಿಗನ ಮಾತು ನಂಬಿ ೨೧ ಕೊಲೆಗಳನ್ನು ಮಾಡಿ ಆಗಿತ್ತು. ಇವರು ಸಿಗುವುದು ಇನ್ನು ಸ್ವಲ್ಪ ದಿನ ತಡ ಆಗುತ್ತಿದ್ದಿದ್ದರೆ ನಲವತ್ತು ಮಂದಿಯ ಕೊಲೆಯಾಗುವುದು ಖಂಡಿತವಿತ್ತು. ಹಣದ ಆಸೆ ಏನೆಲ್ಲಾ ಮಾಡಿಸುತ್ತದೆ ಅಲ್ಲವೇ? 

ನಂತರ ಪೋಲೀಸರು ಈ ಮೂವರು ಅಪರಾಧಿಗಳ ಮೇಲೆ ಕೇಸ್ ಫೈಲ್ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಇವರೇ ತೆಗೆದ ೨೧ ಕೊಲೆಗಳ ವಿಡಿಯೋಗಳು ಅವರು ಕೊಲೆ ಮಾಡಿದ್ದನ್ನು ರುಜುವಾತು ಮಾಡಿತು. ಆದರೆ ಆ ವಿಡಿಯೋದಲ್ಲಿ ಎಲ್ಲೂ ಆರೋಪಿ ಸ್ಥಾನದಲ್ಲಿದ್ದ ಹಂಜ ಕಾಣಿಸುವುದಿಲ್ಲ. ಎಲ್ಲಾ ವಿಡಿಯೋ, ಫೋಟೋಗಳಲ್ಲಿ ವಿಕ್ಟೋರ್ ಮತ್ತು ಐಗೋರ್ ಮಾತ್ರ ಕಾಣಿಸುತ್ತಾರೆ. ಬಹುಷಃ ಎಲ್ಲಾ ವಿಡಿಯೋ ಚಿತ್ರೀಕರಣ ಮಾಡಿದ್ದು ಹಂಜ ಇರಬಹುದೇನೋ? ಎನ್ನುವ ಸಂದೇಹ ನ್ಯಾಯಾಲಯ ವ್ಯಕ್ತ ಪಡಿಸಿದರೂ ಈ ಕೊಲೆಗಳಲ್ಲಿ ಹಂಜನ ಪಾತ್ರ ತಿಳಿದುಬರುವುದಿಲ್ಲ. ಆದ್ದರಿಂದ ಹಂಜನಿಗೆ ಒಂಬತ್ತು ವರ್ಷಗಳ ಕಾಲ ಕಳ್ಳತನದ ಬಗ್ಗೆ ಶಿಕ್ಷೆ ನೀಡಲಾಯಿತು. ಉಳಿದ ಇಬ್ಬರು ಕೊಲೆಗಡುಕರಿಗೆ ೨೧ ಕೊಲೆ, ದರೋಡೆ ಹಾಗೂ ಎಂಟು ಹಲ್ಲೆ ಪ್ರಕರಣಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತು (ಉಕ್ರೇನ್ ನಲ್ಲಿ ಮರಣದಂಡನೆ ಶಿಕ್ಷೆ ಇಲ್ಲದಿರುವುದೇ ಇದಕ್ಕೆ ಕಾರಣವಿರಬಹುದು). ಏನೋ ಆಗ ಹೊರಟ ಯುವಕರು ಹಣದ ಆಸೆಗೆ ಹೋಗಿ ೨೧ ಅಮಾಯಕರ ಪ್ರಾಣ ತೆಗೆದು ತಾವೂ ಜೈಲು ಹಕ್ಕಿಯಾದದ್ದು ದುರ್ದೈವವೇ ಸರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ