ಮೂರು ಹೊತ್ತಿನ ತುತ್ತಿಗಾಗಿ ರೈತರ ಪರದಾಟ
ವರುಷವರುಷವೂ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ನೋವಿನ ದಿನಗಳು ಮುಗಿದವು ಎಂದನ್ನಿಸಿದಾಗ, ಮತ್ತೆ ಆತ್ಮಹತ್ಯೆಗಳ ಸುದ್ದಿ. ಭಾರತದ ಅಪರಾಧ ಬ್ಯುರೋ (ಎನ್.ಸಿ.ಆರ್.ಬಿ) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 2,96,438. ಯಾಕೆ ಹೀಗಾಗುತ್ತಿದೆ?
ಇದಕ್ಕೆ ಮುಖ್ಯ ಕಾರಣ ರೈತರ ಆದಾಯ ತೀರಾ ಕಡಿಮೆ ಆಗಿರುವುದು. ಅಸಂಘಟಿತ ರಂಗಗಳನ್ನು 1997 - 2007 ಅವಧಿಯಲ್ಲಿ ಅಧ್ಯಯನ ಮಾಡಿದ ಅರ್ಜುನ ಸೇನ್ ಗುಪ್ತ ಸಮಿತಿಯ ಅನುಸಾರ, ಭಾರತದ ರೈತನ ಮಾಸಿಕ ಆದಾಯ ರೂ. 2,115 ಹಾಗೂ ಮಾಸಿಕ ವೆಚ್ಚ ರೂ. 2,770. ಹಾಗಿರುವಾಗ, ರೈತರು ಸಾಲದ ಸುಳಿಯಲ್ಲಿ ಸಿಲುಕದೆ ಇರುವರೇ? (ಮಾಸಿಕ ವೆಚ್ಚ ಭರಿಸಲಿಕ್ಕಾಗಿ ರೈತರು ಸಾಲ ಮಾಡುತ್ತಲೇ ಇರುತ್ತಾರೆ. ಆ ಸಾಲದ ಬಡ್ಡಿ ಮತ್ತು ಚಕ್ರಬಡ್ಡಿ ಬೆಳೆಯುತ್ತಲೇ ಇರುತ್ತದೆ.)
ಅದೇ ಅವಧಿಯಲ್ಲಿ ಸರ್ಕಾರಿ ಉದ್ಯೋಗಿಗಳ ವೇತನ ಹೆಚ್ಚಿಸಲಾಗಿದೆ. ನಮ್ಮ ಶಾಸಕರ ವೇತನ ಮತ್ತು ಭತ್ಯೆಗಳು ಶೇಕಡಾ 800
ಏರಿಕೆಯಾಗಿವೆ. ಆದರೆ ರೈತರ ಬೆಳೆಗಳ ಫಸಲುಗಳ ಬೆಲೆಯಲ್ಲಿ ಆದ ಹೆಚ್ಚಳ ಕೇವಲ ಶೇ. 25. ಆದರೆ ಕೃಷಿಯೇತರ ಉತ್ಪನ್ನಗಳ ಬೆಲೆಗಳು ಶೇ. 500ರಿಂದ ಶೇ. 800 ಜಿಗಿದವು. ಕೃಷಿಯ ಒಳಸುರಿಗಳ (ಗೊಬ್ಬರ, ಬೀಜ, ಪೀಡೆನಾಶಕಗಳು) ಬೆಲೆಗಳಂತೂ ಶೇ.600 ಜಾಸ್ತಿಯಾದವು. ಅಂದಮೇಲೆ ರೈತರ ಮಾಸಿಕ ವೆಚ್ಚ ಹೆಚ್ಚಾಗದೆ ಇರುತ್ತದೆಯೇ? ಅವರ ಸಾಲದ ಹೊರೆ ಏರದೆ ಇರುತ್ತದೆಯೇ?
ಕೇಂದ್ರದಲ್ಲಿ ಆಡಳಿತ ನಡೆಸಿದ ಎಲ್ಲ ಸರಕಾರಗಳು ಮಾಡಿದ ಒಂದು ಕೆಲಸ: ಕೃಷಿ ಉತ್ಪನ್ನಗಳ ಬೆಲೆಗಳನ್ನು ಕೆಳಮಟ್ಟದಲ್ಲಿ ಇರಿಸಿದ್ದು - ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಗಾರರ ಕೂಲಿ ಕಡಿಮೆ ಇರಬೇಕೆಂಬ ಕಾರಣಕ್ಕಾಗಿ. ಇದರಿಂದ ತೊಂದರೆ ಆದದ್ದು ರೈತರಿಗೆ. ಯಾಕೆಂದರೆ, ಅಲ್ಲಿ ಕೂಲಿ ಕಡಿಮೆ ಆಗಿದ್ದರೂ, ರಾಸಾಯನಿಕ ಗೊಬ್ಬರಗಳು, ಬೀಜಗಳು ಮತ್ತು ಪೀಡೆನಾಶಕಗಳ ಬೆಲೆಗಳು ಏರುತ್ತಲೇ ಇವೆ.
ಕೇಂದ್ರ ಸರಕಾರ “ಕನಿಷ್ಠ ಬೆಂಬಲ ಬೆಲೆ”ಗಳನ್ನು ಘೋಷಿಸುತ್ತದೆ. ಇದರಿಂದ ಪ್ರಯೋಜನ ಆಗಿದೆಯೇ? ನಿರೀಕ್ಷಿತ ಪ್ರಮಾಣದಲ್ಲಿ ಪ್ರಯೋಜನ ಆಗಿಲ್ಲ. ಯಾಕೆಂದರೆ, ಕೃಷಿಯ ಒಳಸುರಿಗಳ ಬೆಲೆ ಹೆಚ್ಚಳಕ್ಕೆ ಹೋಲಿಸಿದಾಗ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳ ತೀರಾ ಕಡಿಮೆ. ಪ್ರತಿಯೊಂದು ಕೃಷಿ ಉತ್ಪನ್ನದ ನಿಜವಾದ ಉತ್ಪಾದನಾ ವೆಚ್ಚ ಮತ್ತು ಹಣದುಬ್ಬರದ ದರ ಇವೆರಡನ್ನೂ ಆಧರಿಸಿ ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸಿದರೆ ಪ್ರಯೋಜನ ಆದೀತು.
ಟಾಟಾ, ಬಿರ್ಲಾ, ಅಂಬಾನಿ, ಮಿತ್ತಲ್, ಅದಾನಿ ಇತ್ಯಾದಿ ಉದ್ಯಮಪತಿಗಳು ನಡೆಸುವ ಉದ್ಯಮಗಳು ಹತ್ತು ಹಲವು. ಆ ಕಂಪೆನಿಗಳ ಜವಾನರಿಂದ ತೊಡಗಿ ಚೇರ್ಮನ್ ವರೆಗೆ ಎಲ್ಲರೂ ಭರ್ಜರಿ ವೇತನ ಪಡೆಯುತ್ತಾರೆ. ಆದರೆ ತನ್ನ ಜಮೀನಿನಲ್ಲಿ “ಉತ್ಪಾದನಾ ಉದ್ಯಮ" ನಡೆಸುವ ರೈತನ ಕುಟುಂಬದವರ ಕಾಯಕಕ್ಕೆ ಬೆಲೆಯೇ ಇಲ್ಲ. ಅವರಿಗೆ ಯಾವತ್ತೂ ಮಾಸಿಕ ವೇತನ ಸಿಗೋದಿಲ್ಲ. ಈ ಪರಿಸ್ಥಿತಿ ಬದಲಾದರೆ ಮಾತ್ರ ರೈತರ ಉದ್ಧಾರ ಆದೀತು. ಅಂದರೆ, ಕೃಷಿ ಉತ್ಪನ್ನಗಳ ಬೆಲೆ ನಿರ್ಧಾರ ಮಾಡುವಾಗ ಬೆಳೆಗಾರರ ಕುಟುಂಬದ ಕಾಯಕದ "ಮಾರುಕಟ್ಟೆ ಧಾರಣೆ”ಯನ್ನೂ ಕೂಡಿಸಬೇಕು.
ಈಗಿನ ಕೇಂದ್ರ ಸರಕಾರವು 2020 ಡಿಸೆಂಬರಿನಲ್ಲಿ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಿಕ್ಕಾಗಿ “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ" ಎಂಬ ಯೋಜನೆಯನ್ನು ಘೋಷಿಸಿತು. ಇದರ ಪೂರ್ಣ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುತ್ತಿದೆ. ಇದರ ಅನುಸಾರ ಪ್ರತಿ ವರುಷ ರೂ.6,000 ಹಣವನ್ನು ಮೂರು ಕಂತುಗಳಲ್ಲಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. 31 ಮೇ 2022ರಂದು ಹತ್ತು ಕೋಟಿಗಿಂತ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ಈ ಯೋಜನೆಯ 11ನೇ ಕಂತಿನ ಒಟ್ಟು ಆರ್ಥಿಕ ಸಹಾಯ ರೂ. 21,000 ಕೋಟಿ ಜಮೆ ಮಾಡಲಾಗಿದೆ.
ಇದು ಒಳ್ಳೆಯ ಕ್ರಮ. ಇದರಿಂದಾಗಿ ರೈತ ಕುಟುಂಬಗಳು ಊಟಕ್ಕಿಲ್ಲದೆ ಪರದಾಡುವ ಪರಿಸ್ಥಿತಿ ತಪ್ಪಿದೆ. ಕೃಷಿ ಉತ್ಪನ್ನಗಳ ಬೆಲೆಗಳನ್ನು ಮಾರುಕಟ್ಟೆ ಶಕ್ತಿಗಳು ಅದುಮಿಟ್ಟು, ಕಳೆದ 75 ವರುಷಗಳಲ್ಲಿ ರೈತರ ಶೋಷಣೆ ಮಾಡಿಲ್ಲವೇ? ಈ ದೀರ್ಘ ಅವಧಿಯಲ್ಲಿ ನಮ್ಮ ದೇಶ ಬಾಂಧವರ ಹಸಿವು ನೀಗಿಸಿದ ರೈತರ ಋಣ ತೀರಿಸಲು ಇಷ್ಟಾದರೂ ಮಾಡಬೇಡವೇ?