ಮೂಲ - ಅನುವಾದ - ರೂಪಾಂತರ - ಭಾಷಾಂತರ ಇತ್ಯಾದಿ ಇತ್ಯಾದಿ....

ಮೂಲ - ಅನುವಾದ - ರೂಪಾಂತರ - ಭಾಷಾಂತರ ಇತ್ಯಾದಿ ಇತ್ಯಾದಿ....

ಮೂಲ ಕೃತಿ ಮತ್ತು ಅನುವಾದ ಅಥವಾ ಭಾಷಾಂತರ, ಮೂಲ ಸಿನಿಮಾ ಅಥವಾ ರಿಮೇಕ್ ಸಿನಿಮಾ ಇವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಯಾವುದು ಅತಿ ಹೆಚ್ಚು ಕ್ರಿಯಾತ್ಮಕತೆಯನ್ನು ಹೊಂದಿರುತ್ತದೆ ಎಂಬ ಚರ್ಚೆಯ ಸುತ್ತ ಇನ್ನೊಂದಿಷ್ಟು ಅಭಿಪ್ರಾಯಗಳು.

ಇತ್ತೀಚೆಗೆ ಎದೆಯ ಹಣತೆ ಎಂಬ ಕನ್ನಡದ ಮೂಲ ಕೃತಿಯ ಅನುವಾದ Heart lamp ಎಂಬ ಇಂಗ್ಲಿಷ್ ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿತು. ಅದರ ಮೂಲ ಭಾನು ಮುಷ್ತಾಕ್ ಅವರು ಬರೆದ ಕನ್ನಡ ಭಾಷೆಯ ಕೃತಿ. ಅದನ್ನು ಅತ್ಯಂತ ಅಚ್ಚುಕಟ್ಟಾಗಿ ಇಂಗ್ಲೀಷಿಗೆ ಅನುವಾದಿಸಿದವರು ದೀಪಾ ಭಾಸ್ತಿ.  ಆ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿಯ ಮೊತ್ತವನ್ನು ಇಬ್ಬರಿಗೂ ಸಮನಾಗಿ ಹಂಚಲಾಗಿದೆ. ಈ ಸಂದರ್ಭದಲ್ಲಿ ಅನುವಾದಕರಿಗೆ ಸಹ  ಮೂಲ ಕೃತಿಯ ಲೇಖಕರಷ್ಟೇ ಮಹತ್ವ ನೀಡಬೇಕು ಎಂಬುದಾಗಿ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಈ ವಿಷಯವನ್ನು ತುಂಬಾ ಸಮಗ್ರವಾಗಿ, ಆಳವಾಗಿ 360° ಕೋನದಲ್ಲಿ ವಿಮರ್ಶೆಗೊಳಪಡಿಸಿ, ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ‌. ಇದಕ್ಕೆ ಸಾಂಕೇತಿಕವಾಗಿ ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳೋಣ. 

ಭತ್ತ ಬೆಳೆಯುವ ರೈತರಿಗೆ ಹೆಚ್ಚು ಮಹತ್ವ ನೀಡಬೇಕೋ, ಅಕ್ಕಿ ಮಾರುವ ವ್ಯಾಪಾರಿಗಳಿಗೆ ಹೆಚ್ಚು ಮಹತ್ವ ನೀಡಬೇಕೋ ಅಥವಾ ಇಬ್ಬರಿಗೂ ಸಮನಾದ ಗೌರವ ನೀಡಬೇಕೋ, ಹಾಗೆಯೇ ಅಡುಗೆ ಮಾಡುವ ಅಡುಗೆ ಭಟ್ಟರಿಗೋ ಅಥವಾ ಬಡಿಸುವರಿಗೋ ಅಥವಾ ಊಟ ಮಾಡಿಸುವವರಿಗೋ ಅಥವಾ ಊಟ ಮಾಡಿ ಬಡಿಸುವವರಿಗೆ ಮಹತ್ವ ನೀಡಬೇಕೋ ಸ್ವಲ್ಪ ಯೋಚಿಸಿ ನೋಡಿ. 

ಇದನ್ನೆಲ್ಲಾ ಗಮನಿಸಿದಾಗ ಖಂಡಿತವಾಗಲೂ ಮೂಲ ಕೃತಿಗೆ ಶೇಕಡ 80 ರಷ್ಟು ಶ್ರೇಯವೂ, ಅನುವಾದಕರಿಗೆ ಅಥವಾ ಭಾಷಾಂತರಕಾರರಿಗೆ ಅಥವಾ ರಿಮೇಕ್ ಮಾಡುವವರಿಗೆ ಅಥವಾ ಬಡಿಸುವವರಿಗೆ ಶೇಕಡ 20 ರಷ್ಟು ಶ್ರೇಯ ಸಲ್ಲಬೇಕು ಎಂದೆನಿಸುತ್ತದೆ. ಇದನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಹೇಳುವುದು ಉಚಿತವಲ್ಲ, ಆದರೆ ಸುಲಭವಾಗಿ ಅರ್ಥ ಮಾಡಿಸಲು ಈ ಪರ್ಸೆಂಟೇಜ್ ಲೆಕ್ಕ ಹಾಕಲಾಗಿದೆ. 

ಏಕೆಂದರೆ ಮೂಲ ಕೃತಿಯಲ್ಲಿ ಲೇಖಕರು ಅಥವಾ ನಿರ್ದೇಶಕರು ತಮ್ಮೆಲ್ಲಾ ಜ್ಞಾನವನ್ನು, ಅರಿವನ್ನು, ಪ್ರಜ್ಞೆಯನ್ನು, ಕ್ರಿಯಾತ್ಮಕತೆಯನ್ನು, ಗ್ರಹಿಕೆಯೂ ಸೇರಿ ಎಲ್ಲವನ್ನೂ ಬಸಿದು ರಚಿಸಲಾಗಿರುತ್ತದೆ ಅಥವಾ ಸೃಷ್ಟಿಸಲಾಗಿರುತ್ತದೆ. ಅದರಲ್ಲಿ ಎಲ್ಲಾ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ಮಾನವಿಕ, ಸಾಂವಿಧಾನಿಕ ಎಲ್ಲವನ್ನೂ ಗ್ರಹಿಸಿಯೇ ರಚಿಸಲಾಗಿರುತ್ತದೆ. ಮನಸ್ಸಿನ ಗುಣ, ಮಣ್ಣಿನ ಸೊಗಡು ಎರಡು ಬೆರೆತಿರುತ್ತದೆ. 

ಹಾಗೆ ಒಮ್ಮೆ ಅದು ರಚಿತವಾದರೆ ತದನಂತರ ಅದನ್ನು ಭಾಷಾಂತರಿಸುವುದು ಅಥವಾ ರಿಮೇಕ್ ಮಾಡುವುದು ಸುಲಭವಾಗುತ್ತದೆ. ಯಾವುದಾದರೂ ಸುಂದರ ಮೂರ್ತಿಯನ್ನು ಕೆತ್ತಿದಾಗ ಮೂರ್ತಿ ಕೆತ್ತಿದವರಿಗೆ ಪ್ರಾಮುಖ್ಯತೆಯೇ ಹೊರತು ಅದಕ್ಕೆ ಬಣ್ಣ ಹಾಕಿ ಒಳ್ಳೆಯ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿದವರಿಗಲ್ಲ. ಹಾಗೆಂದು ಭಾಷಾಂತರ ಅಥವಾ ರೂಪಾಂತರ ಅಥವಾ ರಿಮೇಕ್ ಅಥವಾ ರುಚಿಕರವಾದ ಅಡುಗೆ ಮಾಡುವುದು ಸುಲಭ ಅಥವಾ ಅದರಲ್ಲಿ ಕ್ರಿಯಾತ್ಮಕಥೆ, ಶ್ರಮ, ಮಣ್ಣಿನ ಗುಣ ಇರುವುದಿಲ್ಲ ಎಂದು ಭಾವಿಸಬೇಡಿ. 

ಇದೂ ಸಹ ಒಂದು ಕ್ರಿಯಾತ್ಮಕ ಕಲೆಗಾರಿಕೆ. ಅಲ್ಲಿ ಭಾಷೆಯ ಬಗ್ಗೆ ಹಿಡಿತ, ಆ ಭಾಷೆಯ ಸಾಂಸ್ಕೃತಿಕ, ಭೌಗೋಳಿಕ, ಸಾಮಾಜಿಕ ಜ್ಞಾನ, ಪದಗಳ ಜೋಡಣೆ, ಸಾಂದರ್ಭಿಕ ಬದಲಾವಣೆಗಳು ಮುಂತಾದವುಗಳು ತುಂಬಾ ಶ್ರಮದಾಯಕವೇನೋ ನಿಜ. ಹಾಗೆಯೇ ರಿಮೇಕ್ ಮತ್ತು ಅಡುಗೆ ಮಾಡುವುದು. ಆದರೆ ನಿಜವಾದ ಜೀವಕಳೆ ಇರುವುದು ಮೂಲ ಕೃತಿಯಲ್ಲಿ ಮಾತ್ರ. ಅದಕ್ಕೆ ಭಾಷಾಂತರ ಒಂದು ರೂಪ ಮಾತ್ರ. 

ಒಂದು ವಿಷಯವನ್ನು ವಕೀಲಿಕೆ ಮುಖಾಂತರ ಸಮರ್ಥಿಸಬೇಕಾದಾಗ ಎಲ್ಲಕ್ಕೂ ಸಾಕಷ್ಟು ಕಾರಣಗಳು ಸಿಗುತ್ತವೆ. ಸಮರ್ಥನೆಯ ಅಂಶಗಳೂ ಸಿಗುತ್ತವೆ. ಆದರೆ ಪ್ರಕೃತಿಯ ಮೂಲದಿಂದ ಒಂದು ವಿಷಯವನ್ನು ಗ್ರಹಿಸಿದಾಗ ಸಿಗಬಹುದಾದ ಅಂಶಗಳೇ ಹೆಚ್ಚು ಮಹತ್ವ ಮತ್ತು ಸಹಜವಾದದ್ದು. ನಮ್ಮೊಳಗೆ ಏನನ್ನಾದರೂ ಪೂರ್ವಾಗ್ರಹ ಪೀಡಿತವಾಗಿ ಯೋಚಿಸಿದಾಗ ಅಥವಾ ಅಭಿಪ್ರಾಯ ವ್ಯಕ್ತಪಡಿಸಿದಾಗ ನೈಜ ಅಂಶಗಳು ನಮ್ಮಿಂದ ಮರೆಯಾಗುವ ಸಾಧ್ಯತೆ ಇರುತ್ತದೆ.

ಇದನ್ನು ಇನ್ನಷ್ಟು ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂದರೆ ರಾಮಾಯಣ, ಮಹಾಭಾರತ, ವೇದ ಉಪನಿಷತ್ತುಗಳನ್ನು, ಬುದ್ಧ, ಮಹಾವೀರ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಕನ್ನಡಕ್ಕೆ ಅತ್ಯುತ್ತಮವಾಗಿ ಅನುವಾದಿಸಿದ ಕಾರಣದಿಂದ ಅನುವಾದಕರು ಕೂಡ ಅಷ್ಟೇ ಮಹತ್ವವನ್ನು ಪಡೆಯುವುದಿಲ್ಲ. ಅನುವಾದಕರ ಭಾಷೆ, ನಿರೂಪಣೆ, ಸನ್ನಿವೇಶಗಳ ಜೋಡಣೆ ಅತ್ಯುತ್ತಮವಾಗಿದ್ದರೂ ಸಹ ಅದು ಮೂಲ ಚಿಂತನೆ ಮೂಲ ಚಿಂತಕರ ಅನುಭಾವದ ನುಡಿಗಳಾಗಿರುತ್ತವೆ. ಯಾವುದೋ ಅದ್ಭುತ ಇಂಗ್ಲೀಷ್ ಕಾದಂಬರಿಯನ್ನು  ಕನ್ನಡಕ್ಕೆ ಭಾಷಾಂತರಸಿದ ಕಾರಣದಿಂದ  ಯಾರೂ ಆ ಲೇಖಕನಷ್ಟೇ ಮಹತ್ವದ ವ್ಯಕ್ತಿಯಾಗುವುದಿಲ್ಲ. ಪ್ರಶಸ್ತಿ ಸಹ ಭಾಷಾಂತರದ ಸಾಮರ್ಥ್ಯಕ್ಕಾಗಿ ಬಂದಿರುವುದಿಲ್ಲ. ಅದು ಮೂಲ ಕೃತಿಯಲ್ಲಿರಬಹುದಾದ ಸಾಹಿತ್ಯಕ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳಿಗಾಗಿ ಕೊಟ್ಟಿರುತ್ತಾರೆ. ಆದರೆ ಇಬ್ಬರಿಗೂ ಸಮ ಪ್ರಮಾಣದಲ್ಲಿ ಹಂಚುವುದು ಭಾಷಾಂತರ ಅಥವಾ ಅನುವಾದ ಮತ್ತು ಮೂಲ ಕೃತಿಯ ನಡುವಿನ ವ್ಯತ್ಯಾಸವನ್ನು ಗಮನಿಸುವಲ್ಲಿ ಸ್ವಲ್ಪ  ಗೊಂದಲ ಇರುವವರು ಎನಿಸುತ್ತದೆ. 

ಪೂರ್ಣ ಚಂದ್ರ ತೇಜಸ್ವಿ ಅವರು ಅನೇಕ ಬೇರೆ ಭಾಷೆಯ ಒಳ್ಳೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು ಅವರು ರಾಮಕೃಷ್ಣ ಪರಮಹಂಸ, ವಿವೇಕಾನಂದರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಎಲ್ಲದರ ನಡುವೆ ಅವರು ಪ್ರಖ್ಯಾತರಾಗಿರುವುದು, ಸಾಹಿತ್ಯಕವಾಗಿ ಮಹತ್ವ ಪಡೆದಿರುವುದು ಅವರ ಮೂಲ ಕೃತಿಗಳಿಗಾಗಿ ಮಾತ್ರ. ಆದ್ದರಿಂದ ಮೂಲ ಕೃತಿ ಮತ್ತು ಅನುವಾದದ ಪ್ರಾಮುಖ್ಯತೆ ಬಗ್ಗೆ ಮನಸ್ಸಿನಲ್ಲಿ ಮತ್ತೊಮ್ಮೆ ಪುನರ್ ವಿಮರ್ಶೆಗೊಳಪಡಿಸಿಕೊಳ್ಳಿ. ಇಲ್ಲಿ ನನ್ನ ಅಭಿಪ್ರಾಯವೇ ಅಂತಿಮವಲ್ಲ ಅದೇ ಸತ್ಯವೂ ಅಲ್ಲ....

ದೀಪಾ ಭಾಸ್ತಿ ಮತ್ತು ಬೂಕರ್ ಪ್ರಶಸ್ತಿಯ ಬಗ್ಗೆ ಮಾತ್ರ ಸೀಮಿತವಾಗಿ ಹೇಳುವುದಾದರೆ  ಈ ಅಂತರಾಷ್ಟ್ರೀಯ ಪ್ರಶಸ್ತಿ ಅನುವಾದಕರಿಗಾಗಿಯೇ ಸ್ಥಾಪಿಸಲಾಗಿದೆ. ವಿಶ್ವದ ಬೇರೆ ಬೇರೆ ಭಾಷೆಯ ಪುಸ್ತಕಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡುವ ಅನುವಾದಿತರ ಸಾಮರ್ಥ್ಯಕ್ಕೆ, ಅವರ ಭಾಷಾಜ್ಞಾನಕ್ಕೆ, ಅವರ ಮೂಲಕೃತಿಯ ಗ್ರಹಿಕೆಯ ಪ್ರತಿಭೆಗೆ ಈ ಪ್ರಶಸ್ತಿಯನ್ನು ಕೊಡುವುದರಿಂದ ಇದು ಬಹುತೇಕ ದೀಪಾ ಭಾಸ್ತಿಯವರ ಅನುವಾದ ಸಾಮರ್ಥ್ಯಕ್ಕೆ ನೀಡಿದ್ದಾರೆ. ಆದ್ದರಿಂದ ಈ ಬೂಕರ್ ಪ್ರಶಸ್ತಿಯ ವಿಷಯದಲ್ಲಿ ಮಾತ್ರ ಇದು ಸ್ವಲ್ಪಮಟ್ಟಿಗೆ ವಿರುದ್ಧ ಚಿಂತನೆಯಾಗಿದೆ. ಏಕೆಂದರೆ ಪ್ರಶಸ್ತಿಯೇ ಅನುವಾದಕರಿಗೆ ಇರುವುದರಿಂದ ಅದನ್ನು ಹೊರತುಪಡಿಸಿದರೆ ಮೂಲ ಕೃತಿಯ ಲೇಖಕರಿಗೆ ಯಾವಾಗಲೂ ಮಾನ್ಯತೆ ಸಿಗಬೇಕು.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ