ಮೂವರು ಹೆಂಗಸರು
ಸೆಕೆಗಾಲದಲ್ಲಿ ಪ್ರಯಾಣ ಮಾಡುವುದೆಂದರೆ ಕಾದ ಒಲೆ ಮೇಲೆ ಕುಳಿತ ಹಾಗೆ. ಚಳಿ ಮಳೆಗಾಲದಲ್ಲಿ ಕಷ್ಟವೋ ಸುಖವೋ ಎಮ್ಮೆ ಚರ್ಮದ ಸ್ವೆಟರ್, ಮಫ್ಲರ್ ಹಾಕಿಕೊಂಡು ದೂರದ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಬಂದುಬಿಡುತ್ತೇನೆ. ಬೇಸಿಗೆಯಲ್ಲಿ ಪ್ರಯಾಣಿಸಲು ನಾನು ಎಂದಿಗೂ ಇಷ್ಟಪಟ್ಟವನಲ್ಲ. ಆದರೂ ಒಮ್ಮೊಮ್ಮೆ ದಿಕ್ಕಿಲ್ಲದೇ ಈ ರೀತಿ ಅಂಡು ಅಲ್ಲಾಡಿಸಿಕೊಂಡು ಪ್ರಯಾಣ ಮಾಡಲೇಬೇಕು. ಅದೇನೇ ಇರಲಿ, ದೂರದ ನನ್ನ ಹಳ್ಳಿಗೆ ಹೆಜ್ಜೆ ಊರಿದೊಡನೆ ಎಲ್ಲಾ ಮರೆತು ಮನಸ್ಸು ತೇಲಿಬಿಡುತ್ತದೆ. ಅದು ಹುಟ್ಟಿದ ನೆಲದ ಹಸಿಮಣ್ಣಿನ ವಾಸನೆಯ ಸೆಳೆತ!
ಈ ರೀತಿಯಾಗಿ ಮನಭಾರವಾಗುವ ಕಾರಣಗಳನ್ನು ಹೊತ್ತುಕೊಂಡು ಬಸ್ಸಿನಲ್ಲಿ ಸಾಗುವಾಗ ಒಂದು ರೀತಿಯ ಜಿಗುಪ್ಸೆ ಹುಟ್ಟಿಕೊಳ್ಳುತ್ತದೆ. ಮೊನ್ನೆ ಮೊನ್ನೆ ನಮ್ಮ ಪಕ್ಕದ ಮನೆಯವಳಿಗೆ ನಾನು ಊರಿಗೆ ಹೋಗಬೇಕಾದ ಕಾರಣವನ್ನು ಹೇಳುತ್ತಿದ್ದೆ. ಅಷ್ಟಕ್ಕೆ ಆಕೆ ಕಣ್ಣೀರು ಕಚ್ಚಿಕೊಂಡಳು. ಆಕೆಯ ಮಂಡಿಯನ್ನು ತಬ್ಬಿಕೊಂಡ ಮಗುವೊಂದು ಉಯ್ಯಾಲೆ ಆಡುತ್ತಿತ್ತು. ಅದು ಆಕೆ ಹೆತ್ತಿದ್ದಲ್ಲ! ತಂಗಿಯದು! ತಂಗಿ ಬದುಕಿಲ್ಲ. ಅಪ್ಪ ಎರಡನೇ ಮದುವೆ ಮಾಡಿಕೊಂಡು ಬೆಚ್ಚಗಿದ್ದಾನೆ. ದೊಡ್ಡಮ್ಮನನ್ನೇ ಅಮ್ಮ ಎಂದುಕೊಂಡ ಈ ಕುಡಿ ತಾಯಿಗಿಂತಲೂ ಹೆಚ್ಚಾಗಿ ಆಕೆಯನ್ನು ಹಚ್ಚಿಕೊಂಡು, ಅಧಿಕಾರ ಚಲಾಯಿಸಿ ಹಠ ಮಾಡುತ್ತದೆ. ಆಕೆ ಹಠಕ್ಕೆ ಸೋಲುತ್ತಾಳೆ. ಹೆಚ್ಚೆಂದರೆ ಅಪರೂಪಕ್ಕೆ ಐದು ರುಪಾಯಿಯ ಚಾಕೋಲೇಟ್ ಕೊಡಿಸುತ್ತಾಳೆ. ಬೆನ್ನಿಗೆ ಅಂಟಿದ ಕೋತಿಮರಿಯಂತೆ ಆಕೆ ಎಲ್ಲಿಗೆ ಹೋದರೂ ಜೊತೆಯಲ್ಲಿಯೇ ಇರುತ್ತದೆ, ಎಲ್ಲಿಗೋ ಬೆಳಗ್ಗೆ ಹೋಗುತ್ತಾಳೆ, ಸಂಜೆ ಬರುತ್ತಾಳೆ, ಎಲ್ಲಿಗಿರಬಹುದು? ಬೇರೆಯವರ ಮನೆ, ಅಥವಾ ಹೊಟೇಲ್ನಲ್ಲಿ ಪಾತ್ರೆ ತೊಳೆಯಲು ಎಂದುಕೊಂಡಿದ್ದೇನೆ, ಆ ಡಿಗ್ರಿ ಈ ಡಿಗ್ರಿ ಎಂದುಕೊಂಡು ಐದಾರು ಡಿಗ್ರಿ ಪಡೆದವರಿಗೇ ಕೆಲಸವಿಲ್ಲದಿರುವಾಗ ಆಕೆಗೆ ಪಾತ್ರೆ ತೊಳೆಯುವುದು ಬಿಟ್ಟು ಇನ್ನೆಂಥ ಕೆಲಸ ತಾನೆ ಸಿಗುತ್ತದೆ. ಅದನ್ನೂ ಮೀರಿದ್ದೆಂದರೆ… ನನಗೆ ತಿಳಿದಿಲ್ಲ, ಇಂಥಹ ಪರಿಸ್ಥಿತಿಯಲ್ಲಿ ಸರಿತಪ್ಪನ್ನು ತೂಗಿನೋಡುವ ತಕ್ಕಡಿಯೇ ಮೊಳೆ ಕಳಚಿ ಬಿದ್ದುಕೊಳ್ಳುತ್ತದೆ, ಇಷ್ಟಬಂದಂತೆ ಮಾಡಿ ತೊಲಗು ಎಂದು ನ್ಯಾಯದೇವತೆ ಮುಖ ತಿರುಗಿಸಿಕೊಳ್ಳುತ್ತಾಳೆ. ಈ ಕೂಸಿನ ಜೊತೆಗೆ ಶಾಲೆಯ ಮೆಟ್ಟಿಲು ಹತ್ತಿರುವ ತನ್ನೆರಡು ಮಕ್ಕಳನ್ನು ಹೊಟ್ಟೆ ಬಟ್ಟೆಗಷ್ಟಷ್ಟು ಕಟ್ಟಿ ಸಾಕುತ್ತಿದ್ದಾಳೆ. ಏಕಾಂಗಿಯಂತೆ ಕಾಣುವ ಆಕೆಯನ್ನು ಆಗಾಗ ಹೆಚ್ಚು ಮಾತನಾಡಿಸಿದರೆ ಅದು ನಾನೇ.
‘ಅಯ್ಯೋ, ಆ ಸೀತೆಗೇ ಕಷ್ಟ ತಪ್ಪಿದ್ದಲ್ಲ, ಗಂಡ ಇದ್ದೂ, ಇನ್ನೂ ಗಂಡ ತೀರಿಕೊಂಡ ನನ್ನ ಕಥೆ? ಈ ಪಟ್ಟಣದಲ್ಲಿ ನನ್ನಂಥವಳನ್ನು ಕೇಳಲು ಪುರುಸೋತ್ತಿನ ಮನುಷ್ಯರು ಯಾರಿದ್ದಾರೆ ಹೇಳಿ?’
ಪ್ರತಿ ಮಾತನ್ನೂ ನುಂಗಿ ನುಂಗಿ ಆಡುವ ಆಕೆಯ ಕಣ್ಣು ಕಲ್ಲಂಗಡಿಯಂತೆ ಕೆಂಪಾಗಿ ನೀರು ಸುರಿಸುತ್ತದೆ.
‘ಅವನು ಒಳ್ಳೆಯವನೇ, ಆಟೋ ಓಡಿಸಿಕೊಂಡು ಇದ್ದವ, ದಿನಕ್ಕಷ್ಟು ದುಡಿದು ತಂದು ನನ್ನ ಮಡಿಲಿಗೆ ಹಾಕಿಬಿಡುತ್ತಿದ್ದ, ಒಂದು ಸಣ್ಣ ಚಟ ಇರಲಿಲ್ಲ, ಏನೋ ಹೇಳ್ತಾರಲ್ಲ, ಒಳ್ಳೆಯವರಿಗೆ ಆಯಸ್ಸು ಕಡಿಮೆ ಅಂತ, ಆ ರೀತಿ ಅವನು ಆಟೋ ಓಡಿಸುವಾಗ್ಲೇ ಬಸ್ಸಿನ ಕೆಳಗಡೆ ಸಿಕ್ಕಿಕೊಂಡು ಹೋಗಿಬಿಟ್ಟ’
‘ನಿಮ್ಮ ಗಂಡನ ಕಡೆಯವರು ಯಾರೂ ನಿಮ್ಮನ್ನು ಕೇಳುವುದಿಲ್ಲವೇ?’
‘ಅವರವರ ಸಂಸಾರ, ಮಕ್ಕಳು, ಮದುವೆ, ಒಡವೆ ಅನ್ನೋದೆ ಅವರಿಗೆ ಹೆಚ್ಚು, ಇನ್ನೂ ನನ್ನ ಬಗ್ಗೆ ಯೋಚಿಸೋಕೆ ಎಲ್ಲಿ ಬರುತ್ತೇ ಹೇಳಿ? ಅವರ ಮನೆವರೆವಿಗೂ ಹೋಗಿ ಬೇಡಿ ಆಡಿಸಿಕೊಂಡು ಬಂದದ್ದಾಯಿತು, ನಾವು ಪಡ್ಕೋಬಂದಿದ್ದು, ಹೇಗೋ ಈ ಮಕ್ಕಳನ್ನ ನನ್ನ ಹೊಟ್ಟೆಬಟ್ಟೆ ಕಟ್ಟಿ ಸಾಕ್ತಾ ಇದ್ದೀನಿ, ಅವುಗಳಿಗೋಸ್ಕರ ಕೈಗೆ ಹಗ್ಗ ತೆಗೆದುಕೊಳ್ಳಲಿಲ್ಲ, ಅವು ಒಳ್ಳೆಯ ದಾರಿ ಹಿಡಿಯಲಿ ಅನ್ನೋದೆ ನನ್ನ ಬೇಡಿಕೆ’
ಈ ರೀತಿಯಾಗಿ ಆಕೆ ಹೇಳುವಾಗ ಆಕೆಯ ಮಾತಿನಲ್ಲಿ ಅವ್ಯಕ್ತ ಸಂಕಟವಿರುತ್ತದೆ. ಓಶೋ ಹೇಳುವಂತೆ ಕೆಲವು ಭಾವನೆಗಳನ್ನು ಸರಿಯಾಗಿ ವಿವರಿಸಲು ಈ ಪ್ರಪಂಚದಲ್ಲಿ ಯಾರಿಗೂ ಸಾಧ್ಯವಿಲ್ಲವಂತೆ. ಆ ಭಾವನೆಗಳ ಏರಿಳಿತಗಳನ್ನು ಮುಂದಿನವರಿಗೆ ಒಪ್ಪಿಸಲು ಪದಗಳೇ ಇರುವುದಿಲ್ಲವಂತೆ! ಈಕೆ ಪಡುತ್ತಿರುವ ಪಾಡು ಹಾಗೆಯೇ, ಆಕೆಗೆ ಹೇಳಲಾಗುವುದಿಲ್ಲ, ಆದರೆ ನಾವು ಗ್ರಹಿಸಿಕೊಳ್ಳಬಹುದು. ಮನೆಯೊಳಗಿನ ಕೆಲಸವೇ ಮಣಭಾರವಿರುವಾಗ ಈ ಜೀವ ಮನೆಯ ಹೊರಗೂ ದುಡಿಯಬೇಕು, ದುಡ್ಡು ಕೂಡಿಸಬೇಕು, ಅಕ್ಕಿ ರಾಗಿ ತರಬೇಕು, ಮಕ್ಕಳಿಗೆ ಊಟ, ಪುಸ್ತಕ, ಫೀಜು ಕಟ್ಟಬೇಕು. ತನ್ನ ಮಕ್ಕಳ ಓದು ಆಟಗಳಿಗೆ ಎಂದೂ ಅಡಚಣೆಯಾಗದೇ, ಓಡೋಡಿ ಬಂದು ಮನೆಯನ್ನು ಸಾವರಿಸುತ್ತಾಳೆ. ರಾಶಿ ರಾಶಿ ಬಟ್ಟೆ ಒಗೆಯುತ್ತಾಳೆ, ಗುಡ್ಡೆ ಪಾತ್ರೆಗಳನ್ನು ಕರಗಿಸುತ್ತಾಳೆ, ಕಷ್ಟಪಟ್ಟು ಪಂಪ್ ಮಾಡಿ ಸ್ಟವ್ ಹಚ್ಚಿ ಏನನ್ನಾದರೂ ಬೇಯಿಸುತ್ತಾಳೆ. ಸಮಯ ಮೀರಿದ್ದನ್ನು ಅರಿತು ಮಲಗುತ್ತಾಳೆ, ಮುಂಜಾನೆ ಎದ್ದು ಓಡುತ್ತಾಳೆ. ಬಾಡಿಗೆ ಕೊಡುವ ದಿನ ಬಂದಂತೆ ಸ್ವಲ್ಪ ಕದ್ದಾಡುತ್ತಾಳೆ. ಆಗಾಗ ಮನೆಯ ಹೊರಗೆ ನಿಂತು ಒಣಗಿದ ಬಟ್ಟೆ ತೆಗೆದುಕೊಳ್ಳುವ ನೆಪದಲ್ಲಿ ಸುಮ್ಮನೇ ಕಣ್ಣೀರು ಸುರಿಸುತ್ತಿರುತ್ತಾಳೆ. ಕಾರಣವಿಲ್ಲದೇ ಬರುವ ಕಣ್ಣೀರು ಎನಿಸಿದರೂ, ಅದರ ಉಗಮ ಮಾತ್ರ ಘರ್ಷಣೆಗಳ ಸಂಗಮದಿಂದಾಗಿರುತ್ತದೆ. ‘ಏನಾಯಿತು?’ ಎಂದು ಯಾರಾದರೂ ಕೇಳಿದರೆ, ಕಣ್ಣೀರು ಅದ್ದಿದ್ದ ಮುಖದ ಮೇಲೆ ಖಳ್ಳ ನಗು ಮೂಡಿಕೊಂಡು ಕೈ ಬಟ್ಟೆಯಾಗುತ್ತದೆ. ಆ ನಗು ಗಾಢವಾದಂತಹ ಅನುಭವ ಮತ್ತು ಈ ಪ್ರಪಂಚದ ವ್ಯವಸ್ಥೆಗೆ ನಿಜ ತಾತ್ಸಾರವನ್ನು ಹೊತ್ತುಕೊಂಡು ಎಲ್ಲೋ ಒಂದು ಕಡೆ ‘ಎಲ್ಲಿಯವರೆವಿಗೂ ಇದು ಎಂದು ನೋಡೋಣ, ಅನುಭವಿಸಿಯೇ ತೀರೋಣ, ನಾನು ಪಡೆದುಕೊಂಡು ಬಂದಿದ್ದು’ ಎಂದು ಗಟ್ಟಿಮನಸ್ಸು ಮಾಡಿ ಹೇಳುತ್ತಿರುವಂತೆ ಭಾಸವಾಗುತ್ತದೆ.
ಇದನ್ನೆಲ್ಲಾ ನೆನಪಿಸಿಕೊಂಡು ಬೇರೆಯದೇ ಲೋಕದಲ್ಲಿದ್ದ ನನ್ನನ್ನು ಮತ್ತೆ ಬೆಚ್ಚಿಸಿ ಎಬ್ಬಿಸಿದ್ದು ನನ್ನ ಮೊಬೈಲ್!
‘ಮಗಾ, ಯಾಕೆ ಬರೋಕೆ ಹೋದೆ? ನಿಂಗೆ ಎಷ್ಟು ಸಾರಿ ಹೇಳಿದ್ದೀನಿ, ಅವಳ ಬಗ್ಗೆ ತಲೆ ಕೆಡಿಸ್ಕೋಬೇಡ ಅಂತ’
‘ಇರ್ಲಿ ಅಪ್ಪ, ಗಂಡ ಬಿಟ್ಟವಳಲ್ಲವೇ? ನಾವಾಗದೇ.. ?’
‘ನೀನು ಸದ್ಯಕ್ಕೆ ತಿದ್ಕೊಳ್ಳೋಲ್ಲ, ನಿನ್ನಿಷ್ಟದಂತೆ ಮಾಡು’
ಚೆ! ಕೃಷ್ಣತ್ತೆಗೆ ಈ ಗತಿ ಬರಬಾರದಾಗಿತ್ತು, ಮೂರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಆಕೆ ಪಡುತ್ತಿರುವ ಕಷ್ಟ ಯಾರಿಗೂ ಸಹ್ಯವಲ್ಲ.
ನಮ್ಮಪ್ಪನಂಥವರಿಗೆ?
ಪಾಪಕ್ಕೆ ಅವಳ ಸುತ್ತ ಅಂಥಹವರೇ ತುಂಬಿಕೊಂಡಿದ್ದಾರೆ. ಒಂದು, ಮೂರು, ಐದು ವರ್ಷದ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡು ಆಕೆ ಇನ್ನಿಲ್ಲದಂತೆ ದುಡಿಯುವಾಗ ಎಮ್ಮೆಚರ್ಮದ ಜನ ಬೀಡಿ ಸೇದಿಕೊಂಡು ಹೊಗೆಯಲ್ಲಿಯೇ ಆಕೆಯನ್ನು ಉರಿದುಬಿಡುತ್ತಾರೆ.
‘ವೋ ಸಾ, ನಮುಸ್ಕಾರ, ಚೆನ್ನಾಗಿದ್ದೀರಾ?’ – ಯಾವುದೋ ಪರಿಚಿತ ದನಿ. ಯಾರಿಗೆ? ನನಗೇ ಇರಬಹುದೇನೋ ಎಂದುಕೊಂಡು ತಿರುಗಿದೆ.
‘ಓಹೋ ನಮಸ್ತೆ ಬೋಳಣ್ಣ, ಚೆನ್ನಾಗಿದ್ದೀನಿ, ನೀವು?’
‘ಏನೋ ಶಿವ ಮಡುಗ್ದಂಗಿದ್ದೀನಿ ಸಾ’
‘ಶಿವ ಯಾರ್ನೂ ಮಡ್ಗೊಲ್ಲ, ಇಡೋಲ್ಲ ಕಣ್ರಿ, ಎಲ್ಲಾ ನೀವು ನೀವೇ ಮಾಡಿಕೊಳ್ಳೋದು, ಲಕ್ಷ್ಮಿದು ತಲೆಗಾಯ ವಾಸಿ ಆಯ್ತಾ?’
‘ಯಾವ್ದು ಸಾ?’ – ಗತಕಾಲದ್ದೇನಾದರೂ ಕೇಳಿಸಿಕೊಂಡಂತೆ ನುಡಿದ. ಆತನ ತುಟಿಮೇಲೆ ಕಳ್ಳಭಟ್ಟಿಯ ಜಿನುಗು ಇದೆ. ಅಲ್ಲಲ್ಲಿ ತನ್ನನ್ನು ತಾನು ಕಿತ್ತುಕೊಂಡಿರುವ ಶರ್ಟು ಪಂಚೆ. ತಲೆಗೆ ಸಿಂಬಿ ಸುತ್ತಿರುವ ಟವೆಲ್ ಬಣ್ಣ ಬಿಳಿ ಎನಿಸಿದರೂ, ಭೂಮಿತಾಯಿ ಧಾರಾಕಾರವಾಗಿ ಬಳಿದುಕೊಂಡಿದ್ದಾಳೆ. ಆತನ ಬಳಿಗೆ ನೀವು ದಿನದ ಇಪ್ಪತ್ತ ನಾಲ್ಕು ಘಂಟೆಯ ಯಾವ ಕ್ಷಣದಲ್ಲಾದರೂ ಹೋಗಿ, ಚೊಂಗೋ ಎಂದು ಹೆಂಡ ಮತ್ತು ಮೈ ಬಾಯಿ ದುರ್ವಾಸನೆ ಬರುತ್ತಿರುತ್ತದೆ. ತೂರಾಡುವ ಬಸ್ಸಿನಲ್ಲಿ ಆತ ನನ್ನನ್ನು ಗುರುತಿಸಿದ್ದೂ ಒಂದೈದು ಹತ್ತು ರುಪಾಯಿ ಕಿತ್ತುಕೊಂಡು ಮತ್ತೆ ತುಟಿ ಅದ್ದುಕೊಳ್ಳಲು.
ಕಳೆದಬಾರಿ ಬಂದಿದ್ದಾಗ, ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಯಾರೋ ಕೂಗಿಕೊಳ್ಳುವ ಶಬ್ದ ಕಿವಿಗೆ ಬಡಿದಿತ್ತು. ಮನೆ ಮಕ್ಕಳೆಲ್ಲಾ ‘ದೆವ್ವ ದೆವ್ವ’ ಎಂದುಕೊಂಡು ಮೂಲೆ ಸೇರಿದ್ದರು.
‘ಅಪ್ಪಾ, ಯಾರೋ ಹೆಂಗಸು ಕೂಗ್ತಾ ಇದ್ದಾಳೆ’
‘ಮಲ್ಕೋಪ್ಪ, ಅವರದು ದಿನ ಇದ್ದದ್ದೇ’
ಮನಸ್ಸು ತಡೆಯಲಿಲ್ಲ. ಬಾಗಿಲು ತೆರೆದು ಹೊರಗೆ ಬಂದೆ. ಧಾರಾಕಾರವಾಗಿ ಜಲಪಾತದಂತೆ ಬಿದ್ದ ಕತ್ತಲಿನ ನಡುವೆ ಎಲ್ಲಾ ಮನೆಗಳು ಸತ್ತುಬಿದ್ದಿವೆ. ಒಳಗಿರುವ ಯಾರಿಗೂ ಆ ಶಬ್ದ ಕೇಳಲಿಲ್ಲವೇ?
ಆ ಆರ್ತನಾದವನ್ನು ಹುಡುಕಿಕೊಂಡು ಹೊರಟಾಗ ನನ್ನ ಹೆಜ್ಜೆ ಈ ಬೋಳಣ್ಣನ ಮನೆ ತಲುಪಿತ್ತು.
‘ನೀನು ಒಂದ್ರುಪಾಯಿನೂ ಅಟ್ಟಿಗೆ ಕೊಡಲ್ಲ, ನಾನೇ ದುಡ್ದು ತಂದಾಕಿ ನಿನ್ನ ಜೀತ ಮಾಡ್ತೀನಲ್ಲ ಅದ್ಕೆ ದಿನ ನಿನ್ನ ಹತ್ರ ಹಿಂಗ್ ಒಡ್ಸ್ಕೋಬೇಕು’ – ಬೋಳನ ಹೆಂಡತಿ ರಂಗಿ.
‘ಆ ಸರ ಬಿಚ್ಕೊಡಮ್ಮಿ, ಅದನ್ನ ನಿನ್ ಮಿಂಡಂಗೆ ಅಂಥ ಇಟ್ಕೊಂಡಿದ್ಯಾ?, ಕೊಡಮ್ಮಿ’ – ಬೋಳಣ್ಣ
‘ಕೊಡಲ್ಲ ಕಣ ಹೋಗು, ಅದು ನಮ್ಮಪ್ಪ ಮಾಡ್ಸ್ಕೊಟ್ಟಿದ್ದು, ಹಿಂಗೆ ಮಾಡಿ ಕೈನಲ್ಲಿದ್ದ ಉಂಗ್ರ, ಆ ಕೂಸ್ ಕಿವಿಲಿದ್ದ ವಾಲೆ ಎಲ್ಲಾ ಮಾರ್ಕಂಡ್ ತಿಂದ್ಕಂಡೆ’
ಅಷ್ಟಕ್ಕೇ ಬೋಳಣ್ಣ ಹೆಂಡತಿಯ ಜುಟ್ಟು ಹಿಡಿದುಕೊಂಡು ಸರಕ್ಕೆ ಕೈ ಹಾಕಿದ. ಆತನ ಒಂದೇ ಕೂಸು ಲಕ್ಷ್ಮಿ ‘ಅವ್ವನ್ ಬಿಡಪ್ಪ’ ಅಂಥ ಕಾಲು ಹಿಡಿದುಕೊಂಡಿತ್ತು. ನಾನು ಹೋಗಿ ಬಿಡಿಸುವುದರಲ್ಲಿ ಸರ ಕಿತ್ತುಕೊಂಡು ಆ ಮಗುವನ್ನು ಜಾಡಿಸಿಬಿಟ್ಟ. ಗೋಡೆಗೆ ತಲೆ ಹೊಡೆದುಕೊಂಡ ಮಗು ರಕ್ತದ ಮಡುವಿನಲ್ಲಿ ಜ್ಞಾನ ತಪ್ಪಿ ಬಿದ್ದುಕೊಂಡಿತ್ತು. ‘ಕೂಸೇ…’ ಎಂದು ರಂಗಿ ತಬ್ಬಿಕೊಂಡಳು.
‘ಏನ್ ಬೋಳಣ್ಣ, ಗಂಡ್ಸಾಗಿ ಒಂದು ಹೆಣ್ಣಿನ ಮೇಲೆ ಈ ರೀತಿ ಕೈ ಮಾಡೋದೆ, ಆ ಮಗು ಏನ್ ಮಾಡಿತ್ತು? ಬಿಸಿಲಲ್ಲಿ ದುಡಿದು ಅವಳು ನಿನಗೆ ಉಣ್ಣೋಕೆ ಇಕ್ತಾಳಲ್ಲ ಅದಕ್ಕೆ ನಿನಗೆ ಈ ರೀತಿ ಸುಮಾನ ನೋಡು’ – ನಾನಂದೆ.
‘ನೀವ್ಯಾಕ್ ಬರೋಕೆ ಹೋದ್ರಿ ಸಾ, ಗಂಡಂಗೆ ಆಗ್ದೆ ಇರೋಳು ಹೆಡ್ತಿ ನಾ? ದಿನ ದುಡ್ಕಂಡ್ ಬರೋ ದುಡ್ಡನ್ನ ತನ್ನ ಮಿಂಡಂಗ್ ಕೊಡ್ತಾವ್ಳ ಇವ್ಳು?’ ಅದು ಇದು ಪೇಚಾಡಿಕೊಂಡು ಆತ ಅಷ್ಟು ಹೊತ್ತಿನಲ್ಲಿ ಅದೆಲ್ಲಿಗೋ ಹೊರಟುಬಿಟ್ಟ. ಹಣೆ ಹೊಡೆದುಕೊಂಡ ಮಗುವಿನೆಡೆಗೆ ತಿರುಗಿಯೂ ನೋಡಲಿಲ್ಲ. ಆ ಮಗುವಿನ ಹಣೆಗೆ ಕಾಫಿಪುಡಿ ಸವರಿ ರಕ್ತ ನಿಲ್ಲಿಸುವಷ್ಟರಲ್ಲಿ ಜ್ಞಾನ ಬಂದಿತ್ತು. ಮುಂಜಾನೆ ಆಸ್ಪತ್ರೆಗೆ ತೋರಿಸಿದ್ದೂ ಆಯಿತು.
‘ಶಾಂತಿ ಹಳ್ಳಿ ಶಾಂತಿ ಹಳ್ಳಿ!’ – ಕಂಡಕ್ಟರ್ ಕೂಗಿಕೊಂಡ. ನಮ್ಮ ಹಳ್ಳಿ ಕಂಡಂತೆ ನನಗೆ ಇನ್ನಿಲ್ಲದ ಖುಷಿಯಾಯಿತು. ಎಷ್ಟು? ಅದೇ ಹೇಳೋಕೆ ಪದಗಳಿಲ್ಲ!
‘ಅವಳಿಗೋಸ್ಕರ ಇಷ್ಟು ದೂರ ಯಾಕೆ ಬರೋಕೆ ಹೋದೆ? ಅವಳ ಗಂಡಾನೆ ಬಿಟ್ಟಿರೋವಾಗ ನಿನಗೆಂಥ ಉಸಾಬರಿ’ – ಅಮ್ಮ
‘ಹೇಳೇಳ ಬಡ್ಡಿ ಹೆಣ್ಣೇ ಹೆತ್ಲು, ಅನ್ನೋವಂಗೆ ಅವಳು ಮೂರು ಹೆಣ್ಣನ್ನೇ ಹೆತ್ರೆ ಯಾವ ಗಂಡ್ಸು ತಾನೇ ಜೊತೆಯಲ್ಲಿರ್ತಾನೆ’ – ಅಪ್ಪ
‘ಅವಳು ದುಡ್ಡು ಕಿತ್ಕೊಳ್ಳೋಕೆ ನಿನಗೆ ಫೋನ್ ಮಾಡಿರೋದು, ಕೇಳಿದ್ರೆ ದುಡ್ಡಿಲ್ಲ ಅನ್ನು, ನಾವೇನು ಲಕ್ಪತಿ ಮಕ್ಕಳಲ್ಲ’ – ಅಕ್ಕ
ಆಕೆ ನಮ್ಮಪ್ಪನ ಕೂಡ ಹುಟ್ಟದಿದ್ದರೂ ತಂಗಿಯಾಗಬೇಕು, ಅಪ್ಪನ ಚಿಕ್ಕಮ್ಮನ ಮಗಳು. ನನಗೆ ಆಕೆ ಒಬ್ಬಳು ಮನುಷ್ಯಳು ಅಷ್ಟೇ! ಕೃಷ್ಣತ್ತೆ ಒಂದು ಸಣ್ಣ ‘ಚಿಲ್ಲರೆ ಅಂಗಡಿ’ ಇಟ್ಟುಕೊಂಡಿದ್ದಾಳೆ. ಅಂಗಡಿಯ ಮನೆ ಬಾಡಿಗೆಯದು. ಆಕೆ ಪ್ರತಿದಿನ ಮುಂಜಾನೆ ಆರರಿಂದ ರಾತ್ರಿ ಹತ್ತರವರೆವಿಗೂ ದುಡಿದರೆ ಇನ್ನೂರರಿಂದ ಮುನ್ನೂರರವರೆವಿಗೆ ಲಾಭ ದೊರೆಯಬಹುದು, ಅದರಲ್ಲಿ ಆಕೆ ದಿನಕ್ಕೆ ನೂರು ರೂ ಬಾಡಿಗೆಗೆ ಎಂದು ಎತ್ತಿಟ್ಟುಬಿಟ್ಟರೆ, ಉಳಿದ ದುಡ್ಡಿನಲ್ಲಿಯೇ ಬೆಲೆ ಏರಿಕೆಯ ಈ ಕಾಲದಲ್ಲಿ ಎಲ್ಲವನ್ನೂ ತೂಗಿಸಬೇಕು. ಗಂಡ ಇದ್ದಾನೆ, ಎಲ್ಲೋ ದೂರದ ಆತನ ಹಳ್ಳಿಯಲ್ಲಿ. ಮೂರು ಮಕ್ಕಳ ಹುಟ್ಟಿಸಿ ವರ್ಷದ ಹಿಂದೆ ಇವಳನ್ನು ತಂದು ಇಲ್ಲಿ ಹೊಗೆದು ಹೊರಟುಹೋದವನು. ಯಾವ ಸಂಧಾನಕ್ಕೂ ಬಗ್ಗದ ಸೋಂಬೇರಿ. ಮೂರು ಹೊತ್ತು ತಿಂದುಕೊಂಡು ಉಂಡಾಡುವ ಉಂಡಾಡಿ ದಾಸನಾತ. ತೊಡೆಯ ಮೇಲೆ ಒಂದು ಕೂಸು ಕೂರಿಸಿಕೊಂಡು, ಬೆನ್ನಿನಲ್ಲಿ ಒಂದು ಕಟ್ಟಿಕೊಂಡು ಹೇಗೋ ಪಾಪ ಜೀವನ ಸಾಗಿಸುತ್ತಾಳೆ. ಆ ಮಕ್ಕಳು ಹುಟ್ಟಲು ತಾನೊಬ್ಬಳೇ ಕಾರಣವೆಂಬಂತೆ! ಮೊದಲನೆ ಮಗು ಚೂರುಪಾರು ಕೆಲಸ ಮಾಡಿಕೊಡುತ್ತದೆ.
ಇವರ ಯಾವ ಮಾತನ್ನೂ ತಲೆಗೆ ನೆಟ್ಟುಕೊಳ್ಳದೇ ಕೃಷ್ಣತ್ತೆಯ ಮನೆಗೆ ಬಂದೆ. ನನ್ನನ್ನು ನೋಡಿದ್ದೇ ಕೃಷ್ಣತ್ತೆ ಕಣ್ಣೀರಾದಳು
‘ರಿಪೋರ್ಟ್ ಕೊಡಿ ನೋಡ್ತೇನೆ’ – ಎಂದೊಡನೆ ಒಂದಷ್ಟು ಹಾಳೆ ತಂದು ಸುರಿದಳು.
‘ಕ್ಯಾನ್ಸರ್ ಇರಬಹುದು ಕೃಷ್ಣತ್ತೆ, ಡಾಕ್ಟ್ರು ಇನ್ನೊಂದು ಟೆಸ್ಟಿಗೆ ಬರೆದಿದ್ದಾರೆ, ಅದನ್ನ ಮಾಡಿಸಿ’
‘ಅವೊತ್ತೇ ಡಾಕ್ಟ್ರು ಹೇಳಿದ್ರು ಕಣಪ್ಪಾ, ಆ ಟೆಸ್ಟ್ ಮಾಡಿಸೋಕೆ ಹತ್ತು ಸಾವಿರ ಆಗುತ್ತಂತೆ, ರೋಗ ಇರೋದು ನಿಜ ಆದ್ರೆ ಲಕ್ಷ ಲಕ್ಷ ಖರ್ಚ್ ಮಾಡಬೇಕಂತೆ, ಈ ಮೂರ್ ಮಕ್ಳನ್ನ ಕಟ್ಕೊಂಡು ನಾನೆಲ್ಲಿಗೆ ಹೋಗ್ಲಪ್ಪ?’ – ಕೃಷ್ಣತ್ತೆ ಒಂದೇ ಸಮನೆ ಅತ್ತಳು.
‘ಈಗ ಈ ಹತ್ತು ಸಾವಿರ ನಾನ್ ಕೊಡ್ತೇನೆ, ಮೊದಲು ಟೆಸ್ಟ್ ಮಾಡಿಸಿ, ನಂತರ ನೋಡೋಣ, ಕೆಲವು ಸಂಘ ಸಂಸ್ಥೆಗಳು ದಾನ ಧರ್ಮ ಮಾಡ್ತವೆ, ಅವರ ಕೈಕಾಲು ಹಿಡಿಯೋಣ’
ಯಾಕೋ ಕೃಷ್ಣತ್ತೆ ಮನೆಯಲ್ಲಿ ಹೆಚ್ಚು ಹೊತ್ತು ಕೂರಲಾಗಲಿಲ್ಲ. ಟೀ ಕುಡಿದು ತೋಟದ ಕಡೆಗೆ ಹೊರಟುಬಿಟ್ಟೆ. ಯಾವುದೋ ಹೊಲದ ಮಧ್ಯೆ ಬೆವರು ಸುರಿಸಿ ದುಡಿಯುತ್ತಿದ್ದ ರಂಗಿ ನನ್ನನ್ನು ನೋಡಿದ್ದೇ
‘ಚೆನ್ನಾಗಿದ್ಯರ ಸಾ, ದೇವ್ರು ನಿಮ್ಮನ್ನ ತಣ್ಣಗಿಟ್ಟಿರ್ಲಿ’ ಎಂದಳು.
ಕೃಶವಾಗಿದ್ದ ಹರಿದ ಬಟ್ಟೆಯ ಅವಳ ದೇಹ ಅಲ್ಲೆಲ್ಲೋ ಪಟ್ಟಣಗಳಲ್ಲಿ ಸುಖದ ಸುಪ್ಪತ್ತಿಗೆ ಮೇಲೆ ಹೊರಳಾಡುವ ಜನಗಳನ್ನು ಅಣಕಿಸಿತ್ತು. ನಂತರ ನನ್ನ ಮನಸ್ಸು ನನ್ನನ್ನೇ ಸಮಾಧಾನ ಪಡಿಸಿ ‘ಕಷ್ಟವೆಂಬುದು ಎಲ್ಲೆಲ್ಲಿಯೂ ಇದೆ, ಸ್ವರೂಪ ಬೇರೆ ಬೇರೆ ಅಷ್ಟೇ, ಬೆಂಗಳೂರಿನ ನೆರೆಮನೆಯವಳಿಗೆ ಗಂಡನಿಲ್ಲದೇ ಕಷ್ಟ, ರಂಗಿಗೇ ಗಂಡನಿರುವುದೇ ಕಷ್ಟ, ಕೃಷ್ಣತ್ತೆಗೆ ಗಂಡನಿದ್ದೂ ಇಲ್ಲದಂತ ಕಷ್ಟ’ ಎಂದಿತು.