ಮೃಗಬೇಟೆ

ಮೃಗಬೇಟೆ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೧

ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿಮೂರನೇ ಪುಸ್ತಕವೇ “ಮೃಗ ಬೇಟೆ". ಈಗಾಗಲೇ ೧೨ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ. 

‘ಮೃಗಬೇಟೆ' ಬಗ್ಗೆ ಅವರೇ ಬೆನ್ನುಡಿಯಲ್ಲಿ ಹೇಳುವಂತೆ “ ಇವರು ದುಷ್ಟರು, ಇವರು ಶಿಷ್ಟರು ಎಂದೇನೂ ನೋಡದೆ ಪ್ರಕೃತಿ ಎಲ್ಲರಿಗೂ ಆಶ್ರಯ ಕೊಡುತ್ತದೆ. ಆದರೆ ದುಷ್ಟರು ಕೂಡಾ ಮಾಡಿದ್ದನ್ನು ಅನುಭವಿಸಲೇಬೇಕು ಎನ್ನುವುದು ಪ್ರಕೃತಿಯನ್ನೂ ದುಷ್ಟರನ್ನೂ ನಿರ್ಮಾಣ ಮಾಡಿದ ಭಗವಂತನ ನಿಯಮ. ಇದು ವೀರಪ್ಪನ್ ಕತೆಯಲ್ಲ. ಆದರೆ ಅದನ್ನೇ ಹೋಲುವ, ಕಾಡಿನ ಬದುಕನ್ನು ಹೊರಜಗತ್ತಿಗೆ ತೋರಿಸುವ ಪರೋಕ್ಷ ಪ್ರಯತ್ನ ಅಷ್ಟೆ. ಜ್ಞಾನದ ಕೊರತೆ ಇರುವ ಮನುಷ್ಯ ಹೇಗೆ ಮೃಗದಂತೆ ವರ್ತಿಸುತ್ತಾನೆ; ಅನಿವಾರ್ಯತೆ ಎಂತಹಾ ವಾತಾವರಣ ಸೃಷ್ಟಿಸುತ್ತದೆ; ಹುಟ್ಟುಗುಣದಂತೆ ಪರಿಸರ ಕೂಡಾ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಸೂಕ್ಸ್ಮವೂ ಇದರಲ್ಲಿ ಸಿಗಬಹುದು. ಇನ್ನೊಬ್ಬರ ಕಷ್ಟ ಅರ್ಥ ಮಾಡಿಕೊಳ್ಳದವರ ಬದುಕಿನ ಕತೆ-ವ್ಯಥೆಯೂ ಇದರಲ್ಲಿದೆ. ಒಬ್ಬ ವ್ಯಕ್ತಿ ದುಷ್ಟನಾಗಲು ಸಮಾಜದ ಕೊಡುಗೆಯೂ ಕಾರಣವಾಗುತ್ತದೆ ಎನ್ನುವುದನ್ನು ಕೂಡಾ ಮರೆಯುವಂತಿಲ್ಲ.

ಕತೆಯ ಜೊತೆಗೇ ಪಶ್ಚಿಮ ಘಟ್ಟದ ಚಳಿ, ಮಳೆ, ಬಿಸಿಲು, ಮಂಜು, ಕಷ್ಟ-ನಷ್ಟ, ಗುಡ್ಡ-ಬೆಟ್ಟ, ಪ್ರಾಣಿ - ಪಕ್ಷಿ, ಪರಿಸರಗಳ ಬಗ್ಗೆಯೂ ಒಂದಿಷ್ಟು ರೋಚಕ ಚಿತ್ರಣ ನೀಡುವ ಉದ್ದೇಶವೂ ಇದರಲ್ಲಿದೆ. ಮಲೆನಾಡಿನಲ್ಲೇ ಹುಟ್ಟಿ ಕಾಡಿನಲ್ಲಿ ಕಳೆದ ಅನುಭವಗಳು ಬೆನ್ನಿಗಿವೆ. ‘ಮಲೆನಾಡಿನ ರೋಚಕ ಕತೆ'ಗಳ ಸರಣಿಯಲ್ಲಿ ಎಲ್ಲವನ್ನೂ ಒಂದೊಂದಾಗಿ ಓದುಗರ ಮುಂದಿಡಲು ಯತ್ನಿಸುತ್ತಿದ್ದೇನೆ. ಇದು ಅದರ ಹದಿಮೂರನೆಯ ಕಂತು.” 

ಚಪ್ಪನ್ ಎಂಬ ತಮಿಳು ಯುವಕ ತನ್ನ ಊರಾದ ತಂಜಾವೂರನ್ನು ಬಿಟ್ಟು ಗಡಿಭಾಗದಲ್ಲಿರುವ ಕರ್ನಾಟಕದ ಕಾಡಿನೊಳಗೆ ನುಸುಳಲು ಕಾರಣ ಪೋಲೀಸ್ ಭಯ. ಪೋಲೀಸರು ಕಾರಣವಿಲ್ಲದೆ ಲಾಕಪ್ ಗೆ ಹಾಕಿ ಬಡಿದು ಬೆಂಡಾಗಿಸಿದ ಹಿಂದಿನ ದಿನಗಳ ನೆನಪುಗಳು ಚಪ್ಪನ್ ನನ್ನು ಭಯಬೀಳಿಸುತ್ತಿದ್ದವು. ಅದೇ ಕಾರಣದಿಂದ ತಾನು ಪ್ರೀತಿಸಿ, ಮದುವೆಯಾಗಬೇಕಿದ್ದ ಕೋಕಿಲ ಎಂಬ ಹುಡುಗಿಯನ್ನು ಬೇರೊಬ್ಬ ಮದುವೆಯಾಗಲು ಹೊರಟಾಗ ಆತನ ಕೊಲೆ ಮಾಡಿ, ಪೋಲೀಸರಿಂದ ತಪ್ಪಿಸಿಕೊಳ್ಳಲು ಕಾಡಿನೊಳಗೆ ಸೇರಿಕೊಳ್ಳುತ್ತಾನೆ. ಮತ್ತೆ ಶುರುವಾಗುತ್ತದೆ ಅಸಲೀ ಕತೆ. ಚಪ್ಪನ್ ನ ಸೋದರ ಮಾವ ಈಶನ್ ಇದೇ ಕಾಡಿನಲ್ಲಿ ಹಲವಾರು ವರ್ಷಗಳಿಂದ ತನ್ನದೇ ತಂಡವನ್ನು ಕಟ್ಟಿಕೊಂಡು ಅಲೆಯುತ್ತಿರುತ್ತಾನೆ. ಮಾವನನ್ನು ಭೇಟಿಯಾಗಿ ಆತನ ತಂಡವನ್ನು ಸೇರುವ ಆಸೆಯಿಂದ ಕಾಡಿಗೆ ಬಂದು ಬಿಡುತ್ತಾನೆ ಚಪ್ಪನ್. ಕಾಡು ಸೇರಿದ ದಿನ ಆತ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಮಳೆಗಾಲದ ಸಮಯ, ತಿನ್ನಲು ಏನೂ ಇಲ್ಲದೆ, ಕಾಡಿನಲ್ಲಿ ಬೆಳೆದ ಹಣ್ಣಾಗದ ಹಲಸಿನ ಕಾಯಿಗಳನ್ನೇ ತಿಂದು ಒಂದೆರಡು ದಿನಗಳನ್ನು ಕಳೆವ ಚಪ್ಪನ್ ಹಾಕಲು ಇನ್ನೊಂದು ಜೊತೆ ಬಟ್ಟೆಯೂ ಇಲ್ಲದೆ ನಗ್ನವಾಗಿ ಕಾಡಿನಲ್ಲಿ ತಿರುಗಾಡುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಹಸಿವಿನಿಂದ ಸಾಯಲು ಹೊರಟಿದ್ದ ಚಪ್ಪನ್ ಮಾವನ ಕಣ್ಣಿಗೆ ಬಿದ್ದು ಬದುಕಿಕೊಂಡು, ಕಾಡಿನ ಬದುಕಿನ ಸತ್ಯವನ್ನು ಆತನಿಂದ ತಿಳಿದುಕೊಂಡು, ಕಾಡಿನ ಮೃಗಗಳನ್ನು ಬೇಟೆಯಾಡಿ, ಗುಂಪಿನ ನಾಯಕನಾಗುವ ದುರಾಸೆಯಿಂದ ಆಸರೆ ಕೊಟ್ಟ ತನ್ನ ಮಾವನನ್ನೇ ಕೊಲೆ ಮಾಡುತ್ತಾನೆ. ನಂತರ ಚಪ್ಪನ್ ಆಡಿದ್ದೇ ಆಟ. ಹಿಂದೊಮ್ಮೆ ಹಾಕಲು ಬಟ್ಟೆಯಿಲ್ಲದೇ ಬೆತ್ತಲೆ ತಿರುಗಾಡಿದ್ದ ಚಪ್ಪನ್ ಕೆಲವೇ ವರ್ಷಗಳಲ್ಲಿ ಕೋಟಿಗಟ್ಟಲೆ ಸಂಪತ್ತಿನ ಮಾಲೀಕನಾಗುತ್ತಾನೆ. ಕಾಡಿನ ಸಂಪತ್ತು ನಾಶ ಮಾಡುತ್ತಾನೆ. ಕಾಡಿನಲ್ಲೇ ಕುಳಿತು ರಾಜಕೀಯ ಮಾಡುತ್ತಾನೆ. 

ಆದರೆ ಆತ ತನ್ನ ಪ್ರೇಯಸಿ ಕೋಕಿಲಳನ್ನು ಮರೆಯುವುದಿಲ್ಲ. ಆಕೆ ಏನಿದ್ದರೂ ತನ್ನದೇ ಸ್ವತ್ತು ಎಂದು ಭಾವಿಸುತ್ತಾನೆ. ಅವಳಿಗಾಗಿ ಮತ್ತೆರಡು ಕೊಲೆ ಮಾಡುತ್ತಾನೆ. ಚಪ್ಪನ್ ನಿಂದ ಎಲ್ಲವನ್ನೂ ಕಳೆದು ಬೀದಿಗೆ ಬಿದ್ದ ಕೋಕಿಲಳ ಬಾಳು ಏನಾಗುತ್ತದೆ? ಚಪ್ಪನ್ ಮತ್ತು ತಂಡದ ಕತೆ ಏನಾಗುತ್ತದೆ? ಈ ಮಲೆನಾಡಿನ ಕಾಡಿನ ಕತೆಗಳು ಬಹಳ ರಸವತ್ತಾಗಿದೆ. ಲೇಖಕರು ಎಲ್ಲಿಯೂ ಕತೆಯನ್ನು ದೀರ್ಘವಾಗಿ ಎಳೆಯಲು ಹೋಗುವುದಿಲ್ಲ. ಓದುತ್ತಾ ಓದುತ್ತಾ ಅನೇಕ ಪಾತ್ರಗಳು ಈ ಕತೆಯಲ್ಲಿ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಲೇ ಇರುತ್ತದೆ. ಕಾಡಿನ ನಡುವಿನ ಹಲವಾರು ಸತ್ಯಗಳನ್ನು ಗಿರಿಮನೆಯವರು ಹೇಳುತ್ತಾ ಹೋಗಿದ್ದಾರೆ. ಆನೆ ದಂತದ ಬೇಟೆ, ಹುಲಿ ಬೇಟೆ, ಗಂಧದ ಮರದ ತಿರುಳು ಕತೆ, ಕಾಡಿನಲ್ಲಿರುವ ಇತರ ಬೆಲೆಬಾಳುವ ಉತ್ಪತ್ತಿಗಳು ಎಲ್ಲವುದರ ಬಗ್ಗೆ ಸಮಗ್ರ ವಿವರಗಳನ್ನು ನೀಡುತ್ತಾರೆ. ಕತೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ೨೪೦ ಪುಟಗಳ ಈ ಪುಸ್ತಕವನ್ನು ಓದಿದಾಗ ನಮ್ಮ ಮುಂದೆ ಚಪ್ಪನ್ ಮತ್ತೊಬ್ಬ ವೀರಪ್ಪನ್ ನಂತೆ ಕಾಣಿಸದೇ ಹೋದರೆ ಅದು ಲೇಖಕರ ಬರವಣಿಗೆಯ ಶಕ್ತಿ ಎಂದರೆ ತಪ್ಪಾಗಲಾರದು.