ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಹೊರಟವ ಚಲನಚಿತ್ರ ನಟನಾದ !
ಹೌದು, ಬದುಕು ಕೆಲವರ ಬಾಳಿನಲ್ಲಿ ಹೇಗೆ ತಿರುವುಗಳನ್ನು ತೆಗೆದುಕೊಳ್ಳುತ್ತದೆ ಎಂದು ಆಲೋಚನೆ ಮಾಡಲೇ ಸಾಧ್ಯವಿಲ್ಲ. ಪದವಿ ಮುಗಿಸಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಮುಂಬಯಿಗೆ ಒಂದು ಸಂದರ್ಶನ ನೀಡಲು ಹೋದ ಕುಮಾರ್ ಎಂಬ ಯುವಕನಿಗೆ ಕೆಲಸ ಸಿಗದೇ ಹೋದರೂ ಅಲ್ಲಿದ್ದ ಆಯ್ಕೆ ಸಮಿತಿಯ ಸದಸ್ಯರಿಂದ ‘ನೋಡಲು ಹೀರೋ ತರಹ ಇದ್ದೀಯಾ...ನೀನ್ಯಾಕೆ ಸಿನೆಮಾದಲ್ಲಿ ಪ್ರಯತ್ನಿಸಬಾರದು” ಎಂಬ ಪುಕ್ಕಟೆ ಸಲಹೆಯಂತೂ ಸಿಕ್ಕೇ ಬಿಟ್ಟಿತು.
ಸಿನೆಮಾ ನಟನಾಗುವ ಯಾವುದೇ ಇಚ್ಛೆ ಇಲ್ಲದೇ ಇದ್ದ ಕುಮಾರ್ ಕೆಲಸದ ಹುಡುಕಾಟದಲ್ಲಿ ರಾಜಸ್ತಾನಕ್ಕೆ ತನ್ನ ಅಕ್ಕನ ಮನೆಗೆ ಹೋಗುತ್ತಾನೆ. ಸಿಕ್ಕರೆ ಕೆಲಸ, ಇಲ್ಲದೇ ಹೋದರೆ ಉತ್ತರ ಭಾರತದ ಜಾಲಿ ಪ್ರವಾಸ ಎಂದುಕೊಂಡು ಕುಮಾರ್. ಅಕ್ಕನ ಮನೆಯ ಹತ್ತಿರ ಕೆಲವು ರಾಜಸ್ತಾನಿಗಳು ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದರು. ಯವ್ವನದ ಹುಚ್ಚು ಕುದುರೆಯ ಮೇಲೆ ಸವಾರಿ ಹೊರಟಿದ್ದ ಕುಮಾರ್ ನಿಗೆ ಈ ರಾಜಸ್ತಾನಿಗಳ ಚಟುವಟಿಕೆಗಳು ಬಹಳ ಆಕರ್ಷಣೀಯವಾಗಿ ಕಂಡವು. ವ್ಯವಸ್ಥೆಯ ವಿರುದ್ಧ ಹೋರಾಡುವ ಆ ಜೀವನ ಶೈಲಿಗೆ ಮಾರು ಹೋದರು. ಆದರೆ ಆ ರಾಜಸ್ತಾನಿಗಳು ಮಾಡುವ ಕೆಲಸ ಡಕಾಯಿತಿ ಎಂಬ ವಿಷಯ ಅವರ ಗಮನಕ್ಕೆ ಬರಲಿಲ್ಲ. ಆದರೆ ಕುಮಾರ್ ಅವರ ಅಕ್ಕ ತನ್ನ ತಮ್ಮನ ನಡವಳಿಕೆಯಿಂದ ಸಂಶಯಗೊಂಡು ಇನ್ನು ಇಲ್ಲೇ ಇದ್ದರೆ ಹಾಳಾಗಿ ಹೋಗುತ್ತಾನೆ ಎಂದು ಕೂಡಲೇ ಏನೋ ಕಾರಣ ನೀಡಿ ಬೆಂಗಳೂರಿಗೆ ಕಳುಹಿಸಿಬಿಟ್ಟಳು. ಇಲ್ಲವಾದರೆ ನಮ್ಮ ಚಿತ್ರರಂಗದ ಹೀರೋ ರಾಜಸ್ತಾನದಲ್ಲಿ ಡಕಾಯಿತನಾಗುತ್ತಿದ್ದನೋ ಏನೋ?
ಬೆಂಗಳೂರಿಗೆ ಬಂದ ಕುಮಾರ್ ‘ವಂಶವೃಕ್ಷ' ಎಂಬ ಚಲನ ಚಿತ್ರದಲ್ಲಿ ಪುಟ್ಟದಾದ ಒಂದು ಪಾತ್ರ ಮಾಡಿದರು. ಆ ಸಮಯದಲ್ಲಿ ಖ್ಯಾತ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರು ತಮ್ಮ ಹೊಸ ಚಿತ್ರವೊಂದಕ್ಕೆ ನಾಯಕನ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುತ್ತಿದ್ದರು. ಈ ವಿಚಾರವು ಕುಮಾರ್ ಅವರಿಗೆ ತಮ್ಮ ತಂದೆಯ ಮುಖಾಂತರ ತಿಳಿಯಿತು. ಕುಮಾರ್ ಅವರ ತಂದೆಗೆ ಪುಟ್ಟಣ್ಣ ಕಣಗಾಲ್ ಪರಿಚಿತರಾಗಿದ್ದರು ಮತ್ತು ಅವರೇ ಕುಮಾರ್ ನನ್ನು ಏರ್ ಲೈನ್ಸ್ ಹೋಟೇಲ್ ಗೆ ಕಳುಹಿಸಲು ಹೇಳಿದ್ದರು. ನಟಿಸುವ ಆಸಕ್ತಿ ಅಷ್ಟಾಗಿ ಇಲ್ಲದಿದ್ದರೂ ತಂದೆಯವರ ಮಾತು ಮೀರಬಾರದೆಂದು ಕುಮಾರ್ ಹೋಟೇಲ್ ಗೆ ಹೋಗಿ ಪುಟ್ಟಣ್ಣನವರಿಗೆ ನಮಸ್ಕಾರ ಮಾಡಿದರು. ಅವರು ಗಾಂಧೀನಗರದಲ್ಲಿರುವ ನಿರ್ಮಾಪಕ ವೀರಾಸ್ವಾಮಿಯವರ ಕಚೇರಿಗೆ ಹೋಗಲು ಹೇಳಿದರು. ಏಕೆಂದರೆ ಆ ಚಿತ್ರಕ್ಕೆ ವೀರಾಸ್ವಾಮಿಯವರೇ ನಿರ್ಮಾಪಕರು. ಮರುದಿನ ಮೈಸೂರಿನ ದಾಸ್ ಪ್ರಕಾಶ್ ಹೋಟೇಲಿನಲ್ಲಿ ಸ್ಕ್ರೀನ್ ಟೆಸ್ಟ್. ಮರುದಿನದ ಸಂದರ್ಶನದಲ್ಲಿ ಕುಮಾರ್ ನಿರ್ಭೀತಿಯಿಂದ ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಅವರ ಮೆಚ್ಚಿನ ನಟರಾದ ಹಿಂದಿಯ ರಾಜ್ ಕುಮಾರ್ ಮತ್ತು ಶಮ್ಮಿ ಕಪೂರ್ ಅವರ ಕೆಲವೊಂದು ಡೈಲಾಗ್ ಗಳನ್ನು ಹೇಳಿ ಸಂದರ್ಶಕರ ಮನಗೆದ್ದರು.
ಸಂದರ್ಶನ ಮುಗಿಯಿತು. ಅಚ್ಚರಿಯೆಂಬಂತೆ ಕುಮಾರ್ ಪುಟ್ಟಣ್ಣ ಕಣಗಾಲ್ ಅವರ ಹೊಸ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು. ಆ ಚಿತ್ರ ಯಾವುದು ಎಂದರೆ ನಿಮಗೆ ಕುಮಾರ್ ಯಾರು ಎಂದು ಖಂಡಿತವಾಗಿಯೂ ತಿಳಿಯುತ್ತದೆ. ಆ ಚಿತ್ರ ‘ನಾಗರಹಾವು'. ಹೌದು, ನಿಮ್ಮ ಊಹೆ ನಿಜ, ನೀವು ಇಷ್ಟರವರೆಗೆ ಓದಿದ್ದು ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸ ಸಿಂಹ ಎಂದೇ ಖ್ಯಾತರಾದ ವಿಷ್ಣುವರ್ಧನ್ ಅವರ ನಿಜ ಜೀವನದ ಕೆಲವು ಘಟನೆಗಳು. ಸಂದರ್ಶನಕ್ಕೆ ಹೋದಾಗ ಕುಮಾರ್ ಆಗಿದ್ದವರನ್ನು ಚಿತ್ರಕ್ಕೆ ಆಯ್ಕೆಯಾದಾಗ ಪುಟ್ಟಣ್ಣನವರೇ ‘ವಿಷ್ಣುವರ್ಧನ್' ಎಂದು ಹೊಸ ನಾಮಕರಣ ಮಾಡಿ ಶುಭಹಾರೈಸಿದರು. ಈ ಚಿತ್ರವು ಖ್ಯಾತ ಸಾಹಿತಿ ತ ರಾ ಸು ಅವರ ಕಾದಂಬರಿಯ ಮೇಲೆ ಆಧಾರಿತವಾಗಿತ್ತು.
ಚಿತ್ರೀಕರಣ ಸಲೀಸಾಗಿ ನಡೆಯಿತು. ವಿಷ್ಣುವರ್ಧನ್ ಅವರಿಗೆ ‘ರಾಮಾಚಾರಿ’ಯ ಪಾತ್ರ. ಇದೇ ಚಿತ್ರದ ಮೂಲಕ ಅಂಬರೀಷ್ ಮತ್ತು ಧೀರೇಂದ್ರ ಗೋಪಾಲ್ ಅವರೂ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಚಿತ್ರವು ಬಿಡುಗಡೆಯಾಗಿ ತೆರೆಕಂಡ ಮರುದಿನದ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ ಆ ಚಿತ್ರ ತಂಡದವರ ನಿದ್ದೆಯನ್ನೇ ಕೆಡಿಸಿಬಿಟ್ಟಿತು. ‘ಇದು ನಾಗರಹಾವಲ್ಲ, ಕೇರೆ ಹಾವು’ ಎಂದು ಸಂದರ್ಶನವೊಂದರಲ್ಲಿ ಖ್ಯಾತ ಸಾಹಿತಿಯೊಬ್ಬರು ಹೇಳಿದುದಾಗಿ ಬರೆದಿದ್ದರು. ಇದನ್ನು ಹೇಳಿದ್ದು ಬೇರೆ ಯಾರೂ ಅಲ್ಲ ಖುದ್ದು ಈ ಚಿತ್ರದ ಮೂಲ ಕಾದಂಬರಿಯನ್ನು ಬರೆದ ತ ರಾ ಸು ಅವರು. ಇದರಿಂದ ಪುಟ್ಟಣ್ಣನವರಿಗೆ ಬಹಳ ಬೇಸರವಾಯಿತು. ವಿಷ್ಣುವರ್ಧನ್ ಅವರಂತೂ ಭೂಮಿಯ ಆಳಕ್ಕೆ ಕುಸಿದೇ ಹೋಗಿಬಿಟ್ಟರು. ತಾಳ್ಮೆ ವಹಿಸಿಕೊಂಡ ಪುಟ್ಟಣ್ಣನವರು ಯಾವುದಕ್ಕೂ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ. ಜನರೇ ಚಿತ್ರವನ್ನು ನೋಡಿ ತೀರ್ಮಾನಿಸುತ್ತಾರೆ ಯಾವುದು ನಾಗರಹಾವು, ಯಾವುದು ಕೇರೆ ಹಾವು ಎಂದು ಮೌನವಾಗಿಬಿಟ್ಟರು. ಅವರ ಅನಿಸಿಕೆಯನ್ನು ಜನರು ಸುಳ್ಳು ಮಾಡಲಿಲ್ಲ. ಕೆಲವೇ ದಿನಗಳಲ್ಲಿ ಸಿನೆಮಾ ಸೂಪರ್ ಹಿಟ್ ಆಯಿತು.
ಅಂದಿನ ಚಿತ್ರರಂಗದ ಇತಿಹಾಸದಲ್ಲೇ ಹೊಸದೊಂದು ಅಧ್ಯಾಯವನ್ನು ಬರೆಯಿತು. ೧೯೭೨-೭೩ರ ಸಾಲಿನ ರಾಜ್ಯ ಪ್ರಶಸ್ತಿಯೂ ಈ ಚಿತ್ರದ ಪಾಲಾಯಿತು. ವಿಷ್ಣುವರ್ಧನ್ ತಾವು ನಟಿಸಿದ (ಪೂರ್ಣ ಪ್ರಮಾಣದ ನಾಯಕರಾಗಿ) ಮೊದಲ ಚಿತ್ರದಲ್ಲೇ ‘ಅತ್ಯುತ್ತಮ ನಟ' ಪ್ರಶಸ್ತಿಗೆ ಪಾತ್ರರಾದರು. ಈ ಪ್ರಶಸ್ತಿಯ ಜೊತೆಗೆ ಉತ್ತಮ ನಿರ್ದೇಶಕ (ಪುಟ್ಟಣ್ಣ ಕಣಗಾಲ್), ಉತ್ತಮ ಪೋಷಕ ನಟ (ಅಶ್ವಥ್), ಉತ್ತಮ ನಟಿ (ಆರತಿ), ಉತ್ತಮ ಪೋಷಕ ನಟಿ (ಶುಭಾ), ಉತ್ತಮ ಸಂಭಾಷಣೆ (ಚಿ. ಉದಯಶಂಕರ್) ಗೌರವಗಳೂ ಸಂದವು. ಯಾವ ಚಿತ್ರವನ್ನು ಕೇರೆಹಾವು ಎಂದು ಲೇವಡಿ ಮಾಡಿದ್ದರೋ ಅವರಿಗೆ (ತರಾಸು) ಉತ್ತಮ ಕಥಾ ಲೇಖಕ ಪ್ರಶಸ್ತಿಯು ಸಂದಿತು. ತರಾಸು ಅವರೂ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಬಂದು ಗೌರವವನ್ನು ಸ್ವೀಕರಿಸಿದ್ದು ವಿಶೇಷ.
ಹೀಗೆ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಹೊರಟ ಕುಮಾರ್ ಎಂಬ ಯುವಕ ‘ವಿಷ್ಣುವರ್ಧನ್’ ಆಗಿ ಹಲವಾರು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿ, ಮರೆಯಲಾರದ ಛಾಪನ್ನು ಮೂಡಿಸಿದ್ದು ಈಗ ಇತಿಹಾಸ. ನಾಗರಹಾವಿನಿಂದ ಆಪ್ತ ರಕ್ಷಕದವರೆಗಿನ ವಿಷ್ಣುವರ್ಧನ್ ಅವರ ಸಿನೆಮಾ ಪ್ರಯಾಣ ಅತ್ಯದ್ಭುತ ಮತ್ತು ಐತಿಹಾಸಿಕ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ.
(ಮಾಹಿತಿ ಕೃಪೆ: ‘ಬೆಳ್ಳಿ ತೆರೆಯ ಬಂಗಾರದ ಗೆರೆ’ ಕೃತಿ)
ಚಿತ್ರ ಕೃಪೆ: ಅಂತರ್ಜಾಲ ತಾಣ