ಮೆಡಿಟೆರೇನಿಯನ್ ಸಮುದ್ರ
ಮೆಡಿಟೆರೇನಿಯನ್ ಸಮುದ್ರ
----------------------
ವಿಶಾಲ ವಿಸ್ತಾರ ವಿಪುಲ ಮನೋಹರ ಮೆಡಿಟೆರೇನಿಯನ್ ಸಮುದ್ರವು,
ನನ್ನೆದುರಿಗೆ ತನ್ನಗಾಧತೆಯ ಗಾಂಭೀರ್ಯದಿಂದ, ನಿರಂತರ ಶಾಂತಿಯನ್ನು
ಹೊರಸೂಸಿ, ತರಂಗ ನಿಸ್ವನ ಭೂಷಿತವಾಗಿ ಪವಡಿಸಿದೆ.
ವಿಶ್ವಶಾಂತಿಯೆಲ್ಲಾ ಒಂದೆಡೆ ಸಂಸರ್ಗವಾದಂತೆ, ದೃಷ್ಟಿಸಮಕ್ಷಮದಲಿ
ಶಾಂತಶರಧಿಯು ನಿರುದ್ವಿಗ್ನ ಸೌಂದರ್ಯದಿಂದ ಕಂಗೊಳಿಸಿದೆ.
ಮೃದುಗತಿಯಲಿ ಚಲಿಸುತ್ತಿದ್ದ ಮೇಘಪಂಕ್ತಿಗಳು ಸಮುದ್ರ ಶಾಂತಿಗೆ,
ಮನಸೋತು, ಅಲ್ಲಿಯೇ ಧನ್ಯ ತಟಸ್ಥತೆಯಿಂದ ನಿಂತು ನೋಡುತಿವೆ.
ಚಾಂಚಲ್ಯದಲೆಗಳು, ದಿವ್ಯ ಶಾಂತತೆಯ ಸಾನಿಧ್ಯ ಸಾಮಿಪ್ಯದಿಂದ
ಅಡಗಿ, ಹೃದಯಾಂತರಂಗವು ಬಾಹ್ಯ ಶಾಂತಿಯನ್ನು ಆಹ್ವಾನಿಸಿದೆ.
ದೃಷ್ಟಿಸೌಂದರ್ಯ ಕುಸುಮದಂತರಂಗಕ್ಕಿಳಿದ ಹೃದಯ ಭೃಂಗವು
ಸರ್ವವನು ಮರೆತು ತಲ್ಲೀನುನ್ಮಾದದಿಂದ ಶಾಂತರಸವನೀರಿದೆ.
ಪ್ರಶಾಂತರೂಢ ಚೈತನ್ಯವು ದಿವ್ಯಾನುಭವದಿಂದ ದೇಹಭಾರವ
ಮರೆತು, ಜಗದ ಇರವನೆ ಮರೆತು, ಚಿತ್ತಸ್ವಾಸ್ಥ್ಯದಿ ತೇಲುತಿದೆ.
ಸಲಿಲರೂಪಿ ಅಮೃತಸಮ ಶಾಂತತೀರ್ಥವನ್ನು ಅಶಾಂತಿಯಿಂದೊಣಗಿ
ಬಾಯಾರಿದ ಹೃದಯಜಿಹ್ವೆಗಳಿಗುಣಿಸಬೇಕೆನೆಸಿದೆ.
ಜಗದ ದುರ್ಭಾವ ಕಲ್ಮಷಗಳೆಡೆ ಈ ಪುಣ್ಯಜಲತೀರ್ಥವ ಚಿಮುಕಿಸಿ,
ಶಾಂತಿ, ಸೌಹಾರ್ದತೆ, ಜೀವನ ಸಂಪೂರ್ಣತೆ ಕಾಣಬೇಕೆನಿಸಿದೆ.
- ಚಂದ್ರಹಾಸ ( ೫ - ಜನವರಿ - ೨೦೧೩)