ಮೆರುಗು
ಕವನ
ಕೋಗಿಲೆ ಹಾಡಿಗೆ ದನಿಯಾಗುತಿರೆ
ಬಾಗಿದೆ ಮಾಮರವಿಂದು|
ಮೇಘವು ಪಸರಿದೆ ಬೆಳ್ಳನೆ ಮುಗಿಲು
ರಾಗದಿ ತುಂಬಿದೆ ರಂಗು||
ಕತ್ತಲ ದೂಡುತ ಬಾನನು ಬೆಳಗಿದ
ಮೆತ್ತಗೆ ಭಾಸ್ಕರ ಬಂದು|
ಬೆತ್ತಲೆಯಾಯಿತು ಬುವಿ ಶೃಂಗಾರಕೆ
ಮೆತ್ತಿಹ ಮಂಜಿನ ಬಿಂದು||
ಕಾಣುವ ಕಣ್ಣಿಗೆ ಲೋಕವೆ ಬೆರಗು
ಸೋನೆಯ ಮಳೆಯಲಿ ಕರಗಿ|
ಜೇನಿನ ಗಾನಕೆ ಮನದಲಿ ಪುಳಕವು
ಕಾನನ ಕಾಮನ ಶರಧಿ||
ವನಸುಮ ಅರಳಿದೆ ಗಮವನು ಹರಡಿದೆ
ಬನದಲಿ ಚೆಲುವನು ಮೆರೆದು|
ಕನಸದು ಹರಿದಿದೆ ಸೃಷ್ಟಿಯ ಮೋಡಿಗೆ
ಮನಸಿನ ಭಾವವ ಕೊರೆದು||
-ಜನಾರ್ದನ ದುರ್ಗ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್