ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ

ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ

ಮಂಡ್ಯ ಜಿಲ್ಲೆಯಲ್ಲಿ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿರುವ ಊರು ಮೇಲುಕೋಟೆ, ಶತಮಾನಗಳ ಹಿಂದೆ ವಿಶಿಷ್ಟಾಂತ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆಮಾಡಿಕೊಂಡ ಪುಣ್ಯಭೂಮಿ. ಇದು ಶ್ರೀ ವೈಷ್ಣವ ಪಂಥದ ಪುಣ್ಯನೆಲ. ಈ ಸ್ಥಳಕ್ಕೆ ತಿರುನಾರಾಯಣಪುರ, ದಕ್ಷಿಣಬದರಿ, ಯಾದವಾದ್ರಿ, ನಾರಾಯಣಾದ್ರಿ, ವೇದಾದ್ರಿ, ಯದುಗಿರಿ ಎಂಬ ಹೆಸರುಗಳಿದ್ದವು. ದಕ್ಷಿಣ ಭಾರತದ ನಾಲ್ಕು ವೈಷ್ಣವ ಕ್ಷೇತ್ರಗಳಾದ ಕಂಚಿ, ತಿರುಪತಿ, ಶ್ರೀರಂಗಗಳ ಪೈಕಿ ಮೇಲುಕೋಟೆಯೂ ಒಂದು.                                     

ಚೆಲುವನಾರಾಯಣಸ್ವಾಮಿ, ಮತ್ತು ಬೆಟ್ಟದ ಮೇಲಿನ ಯೋಗಾನರಸಿಂಹಸ್ವಾಮಿ ಇಲ್ಲಿಯ ಪ್ರಮುಖ ದೇವಾಲಯಗಳು. ಇದರಲ್ಲಿ ಮೊದಲನೆಯದಾದ ಚೆಲುವನಾರಾಯಣಸ್ವಾಮಿಯನ್ನು ಸ್ಥಾಪಿಸಿದವರು ಶ್ರೀರಾಮಾನುಜಾಚಾರ್ಯರು. ಚಾರಿತ್ರಿಕವಾಗಿ ಈ ದೇವಾಲಯದ ಬೆಳವಣಿಗೆಗೆ ವಿಷ್ಣುವರ್ಧನನೇ ಕಾರಣ. ಈ ಸ್ವಾಮಿಗೆ ವೈರಮುಡಿ, ರಾಜಮುಡಿ, ಕೃಷ್ಣರಾಜಮುಡಿ ಎಂಬ ಕಿರೀಟಗಳಿವೆ. ಅವುಗಳನ್ನು ಆಯಾದಿನಗಳಲ್ಲಿ ತೊಡಿಸಿ ಭವ್ಯ ಉತ್ಸವಗಳನ್ನು ನೆರವೇರಿಸುತ್ತಾರೆ. ಅದರಲ್ಲಿ ವೈರಮುಡಿ ಉತ್ಸವ ಅತ್ಯಂತ ಅದ್ಭುತ, ವೈಭವ ಪೂರ್ಣವಾಗಿದೆ. ಇದನ್ನು ನೋಡಲು ಇಂದಿಗೂ ಹೊರ ದೇಶಗಳಿಂದ ಯಾತ್ರಿಕರು ಇಲ್ಲಿಗೆ ಬರುತ್ತಾರೆ. 

ಇಲ್ಲಿಯ ಪವಿತ್ರಕೊಳ ಕಲ್ಯಾಣಿ ತೀರ್ಥ. ನಾರಾಯಣನು ಭೂದೇವಿಯನ್ನು ಉದ್ಧರಿಸಿದ ಮೇಲೆ ಅವನ ಮೈ ಸ್ಪರ್ಶದಿಂದ ಉಂಟಾದ ತೀರ್ಥ ಎಂದು ಪುರಾಣಗಳು ಹೇಳುತ್ತವೆ. ಅದು ಏನೇ ಇರಲಿ ಇದೊಂದು ಸುಂದರ ಪರಿಸರ. ದೊಡ್ಡ ಕಲ್ಯಾಣಿ. ಇದನ್ನು ಮೀರಿಸುವ ಕಲ್ಯಾಣಿ ಇನ್ನೆಲ್ಲೂ ಇರಲಾರದು. ಇಲ್ಲಿನ ಮತ್ತೊಂದು ಬೆಟ್ಟದ (3590 ಅಡಿ) ಮೇಲಿರುವ ಯೋಗಾನರಸಿಂಹ ದೇವಾಲಯ. ಇದಕ್ಕೆ 365 ಮೆಟ್ಟಿಲುಗಳಿದ್ದು ಇದರ ಮುಖ್ಯದ್ವಾರದ ಗೋಪುರ 150 ಅಡಿ ಎತ್ತರವಿದೆ. ಇಲ್ಲಿನ ಬೆಟ್ಟಕ್ಕೆ ಹೋಗಲು ಮೆಟ್ಟಿಲುಗಳ ಹಾಗೂ ವಾಹನಗಳಿಗೆ ರಸ್ತೆ ಇದೆ. 

ಇತರ ಆಕರ್ಷಕ ಸ್ಥಳಗಳೆಂದರೆ ಕಲ್ಯಾಣತೀರ್ಥ, ಅಕ್ಕನ ಕೊಳ, ತಂಗಿಯ ಕೊಳಗಳು. ದೇವಸ್ಥಾನದಿಂದ ಸುಮಾರು ಒಂದು ಕಿಮೀ, ದೂರದಲ್ಲಿರುವ ಧನುಷ್ಕೋಟಿ ಇಲ್ಲಿನ ಮತ್ತೊಂದು ಆಕರ್ಷಣೆ. ವನವಾಸದ ಕಾಲದಲ್ಲಿ ಈ ಕ್ಷೇತ್ರಕ್ಕೆ ಬಂದಿದ್ದ ಶ್ರೀ ರಾಮನು ಸೀತೆಯ ಸ್ನಾನಕ್ಕಾಗಿ ಭೂಮಿಗೆ ಬಾಣಬಿಟ್ಟು, ನೀರು ತರಿಸಿದ ತಾಣವಿದು ಎಂಬುದು ನಂಬಿಕೆ. ಮತ್ತೊಂದು ಅರವತ್ತು ಅಡಿಯ ಏಕಶಿಲೆಯ ನಾಲ್ಕು ಕಂಬಗಳು. ಇವುಗಳು ಯಾವ ಆಧಾರವೂ ಇಲ್ಲದೆ ನಿಂತಿವೆ. ಈ ರಾಯಗೋಪುರ ದೊಡ್ಡ ಮೇಲುಕೋಟೆಯಲ್ಲಿರುವ ಸೋಜಿಗದ ಚಾರಿತ್ರಿಕ ಅವಶೇಷ.

ಸೇರುವ ಬಗೆ : ಮಂಡ್ಯದಿಂದ 39 ಕಿ.ಮೀ, ಮೈಸೂರಿನಿಂದ 54 ಕಿ.ಮೀ, ಪಾಂಡವಪುರದಿಂದ 29 ಕಿ.ಮೀಟರ್ ಇದೆ.

ರೈಲು ಸಂಪರ್ಕ : ಮಂಡ್ಯ , ಮೈಸೂರು, ಪಾಂಡವಪುರ ರೈಲು ನಿಲ್ದಾಣಗಳಿವೆ . 

ಬಸ್ಸಿನ ಸಂಪರ್ಕ : ಮಂಡ್ಯ , ಮೈಸೂರುಗಳಿಂದ ಬಸ್ಸು ಸಂಪರ್ಕ ಚೆನ್ನಾಗಿದೆ. 

ವಸತಿ : ಛತ್ರದಲ್ಲಿ ಇರಲು ಕೊಠಡಿಗಳಿವೆ. ಇಲ್ಲೊಂದು ಅರಣ್ಯ ಇಲಾಖೆಯ ಅತಿಥಿಗೃಹವಿದ್ದು, ಅದಕ್ಕಾಗಿ ಜಿಲ್ಲಾ ಅರಣ್ಯಾಧಿಕಾರಿಯರನ್ನು ಸಂಪರ್ಕಿಸಬಹುದು. "ಬೆಟ್ಟದ ಮೇಲಿನ ಚೆಲುವರಾಯಸ್ವಾಮಿ, ಯೋಗಾನರಸಿಂಹಸ್ವಾಮಿ, ರಾಯಗೋಪುರ, ದೊಡ್ಡ ಕಲ್ಯಾಣಿ ಎಲ್ಲವೂ ಅನನ್ಯ ಮತ್ತು ಐತಿಹಾಸಿಕ ವೈಚಿತ್ರದ ಸೂಜಿಗವಾಗಿದೆ" ಬನ್ನಿ ಪ್ರವಾಸ ಹೋಗೋಣ.

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು