ಮೇಲ್ಮಣ್ಣು ಎಂಬ ಬಂಗಾರ (ರೈತರೇ ಬದುಕಲು ಕಲಿಯಿರಿ-೬)

ಮೇಲ್ಮಣ್ಣು ಎಂಬ ಬಂಗಾರ (ರೈತರೇ ಬದುಕಲು ಕಲಿಯಿರಿ-೬)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಹೊಲದಲ್ಲಿರುವ ಮೇಲ್ಮಣ್ಣು ನಿಜಕ್ಕೂ ಅಮೂಲ್ಯ ಸಂಪತ್ತು. ಹಾಲಿನ ಸತ್ವ ಕೆನೆಯಲ್ಲಿರುವಂತೆ ಭೂಮಿಯ ಸತ್ವ ಮೇಲ್ಪದರದ ಮಣ್ಣಿನಲ್ಲಿರುತ್ತದೆ.

ಸುಭಾಷ ಪಾಳೇಕರ ಪ್ರಕಾರ ಭೂಮಿಯ ಮೇಲ್ಪದರದ ೪ರಿಂದ ೫ ಇಂಚು ಮಣ್ಣು ಭೂಮಿಯ ಕೆನೆ ಇದ್ದಂತೆ. ಅತ್ಯಂತ ಸತ್ವಯುತವಾಗಿರುವ ಈ ಮಣ್ಣು ಸೂಕ್ಷ್ಮಜೀವಿಗಳ ಆವಾಸಸ್ಥಾನ. ಕೃಷಿ ತ್ಯಾಜ್ಯಗಳು ಪೋಷಕಾಂಶಗಳಾಗಿ ಪರಿವರ್ತನೆಯಾಗುವುದು ಇಲ್ಲಿಯೇ. ಈ ೪ರಿಂದ ೫ ಇಂಚು ಆಳದ ಮಣ್ಣೇ ನೀರನ್ನು ಹೀರಿಕೊಂಡು ಆಳಕ್ಕೆ ಕಳಿಸುವುದು. ಎರೆಹುಳು ತನ್ನ ಹಿಕ್ಕೆ ಬಿಡುವುದು ಈ ಮಣ್ಣಿನಲ್ಲಿಯೇ. ಬೀಜ ಮೊಳಕೆಯೊಡೆಯಲು ಬಳಸುವುದು ಈ ಮಣ್ಣನ್ನೇ. ಕೃಷಿಯ ಶೇ.೯೦ರಷ್ಟು ಜೀವಜಾಲ ತನ್ನ ಅಸ್ತಿತ್ವಕ್ಕೆ ಮೇಲ್ಪದರದ ಈ ಮಣ್ಣನ್ನೇ ಅವಲಂಬಿಸಿದೆ.

ಹೀಗಿರುವಾಗ ಈ ಭಾಗಕ್ಕೆ ಎರಚುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಸೂಕ್ಷ್ಮಜೀವಿಗಳನ್ನು ಕೊಂದುಬಿಡುವುದರಿಂದ ಮಣ್ಣಿನ ಸತ್ವ ಕಡಿಮೆಯಾಗುತ್ತದೆ. ಅಲ್ಲದೇ ಆಳವಾದ ಉಳುಮೆ ಮಾಡುವುದರಿಂದ ಅಮೂಲ್ಯ ಮೇಲ್ಮಣ್ಣು ಭೂಮಿಯ ಕೆಳಕ್ಕೆ ಹೋಗಿ ವ್ಯರ್ಥವಾಗುತ್ತದೆ. ಮಳೆ ನೀರಿಗೆ ತಡೆ ಒಡ್ಡುವ ಕೃಷಿ ತ್ಯಾಜ್ಯಗಳು ಹಾಗೂ ಮುಚ್ಚುಗೆ ಹೊಲದಲ್ಲಿ ಇಲ್ಲದಿದ್ದರೆ ನೀರಿನೊಂದಿಗೆ ಮೇಲ್ಮಣ್ಣೂ ಹರಿದುಹೋಗಿ ರೈತನಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ.

ಆದ್ದರಿಂದ ಮೇಲ್ಮಣ್ಣನ್ನು ಜತನದಿಂದ ರಕ್ಷಿಸಬೇಕು. ಇದು ನಮ್ಮ ಭೂಮಿಗೆ ಇರುವ ಮೊದಲ ಹೊದಿಕೆ. ಕೃಷಿ ತ್ಯಾಜ್ಯ ವಸ್ತುಗಳಿಂದ ಭೂಮಿಯನ್ನು ಮುಚ್ಚುವ ಮೂಲಕ ಸೂಕ್ಷ್ಮಜೀವಿಗಳು ಬದುಕುವ ವಾತಾವರಣ ಸೃಷ್ಟಿಸಬೇಕು. ಈ ರೀತಿಯ ಹೊದಿಕೆ ಇರುವಾಗ ಸೂರ್ಯನ ಬಿಸಿಲು ನೇರವಾಗಿ ಮಣ್ಣಿನ ಮೇಲೆ ಬೀಳುವುದಿಲ್ಲ. ಮಳೆ ಬಿದ್ದಾಗ ಅದನ್ನು ಹೀರಿಕೊಳ್ಳುವ ಕೃಷಿ ತ್ಯಾಜ್ಯ ನೀರು ಇಂಗಲು ಅವಕಾಶ ಮಾಡಿಕೊಡುತ್ತದೆ. ಮಳೆ ನೇರವಾಗಿ ಮಣ್ಣಿನ ಮೇಲೆ ಬೀಳದಂತೆ ಕಾಪಾಡುತ್ತದೆ. ಎಲ್ಲಕ್ಕಿಂತ ಮುಖ್ಯ: ಅದು ನೀರನ್ನು ಬೇಗ ಆವಿಯಾಗಲು ಬಿಡುವುದಿಲ್ಲ. ಮುಚ್ಚುಗೆ ಎಂಬುದು ಮೇಲ್ಮಣ್ಣು ಹಾಗೂ ವಾತಾವರಣದ ನಡುವೆ ಪೊರೆಯಂತೆ, ಅಮ್ಮನ ಸೆರಗಿನಂತೆ ಕೆಲಸ ಮಾಡುವ ಮೂಲಕ ಸಸ್ಯಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ.

ಇವೆರಡು ಹೊದಿಕೆಗಳ ಜತೆಗೆ, ವಿವಿಧ ಎತ್ತರದ, ಅವಧಿಯ ಅಂತರ ಬೆಳೆ ಹಾಗೂ ಮಿಶ್ರ ಬೆಳೆಗಳನ್ನು ಹಾಕುವ ಮೂಲಕ ನಾವು ಭೂಮಿಗೆ ಜೀವಂತ ಹೊದಿಕೆಯನ್ನು ಒದಗಿಸಬಹುದು. ಹಬ್ಬುತ್ತ ಹೋಗುವ ಬಳ್ಳಿಯಂತಹ ಬೆಳೆಗಳ ಜತೆಗೆ ಶೇಂಗಾ, ಕಡಲೆಯಂತಹ ನೆಲಮಟ್ಟದ ಬೆಳಗಳನ್ನು, ಅವಕ್ಕಿಂತ ಎತ್ತರವಾದ ಭತ್ತ, ಗೋದಿ, ಅಲಸಂದೆ, ಮೆಣಸಿನಕಾಯಿ, ಟೊಮ್ಯಾಟೋ ಬೆಳೆಗಳನ್ನು ಬೆಳೆಯಬಹುದು. ಒಂದು ವೇಳೆ ಹತ್ತಿ, ರಾಗಿ, ತೊಗರಿಯಂತಹ ಬೆಳೆಗಳನ್ನು ಹಾಕಿದ್ದರೆ ಜತೆಗೆ ಜೋಳ, ಬಾಳೆ, ಕಬ್ಬು ಮುಂತಾದವನ್ನು ಬೆಳೆಯುವ ಮೂಲಕ ಭೂಮಿಗೆ ಸಹಜ ಮುಚ್ಚುಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇವುಗಳ ಜತೆಗೆ ನುಗ್ಗೆಯಂತಹ ಬಲೆಬಲೆಯಾಗಿರುವ ಮರಗಳನ್ನು ಬೆಳೆಸುವುದರಿಂದ ವರ್ಷದ ಎಲ್ಲ ಕಾಲದಲ್ಲಿಯೂ ಸಹಜ ಮುಚ್ಚುಗೆ ಭೂಮಿಗೆ ಲಭ್ಯವಾಗುತ್ತದೆ.

ದುರಂತವೆಂದರೆ, ಭೂಮಿಯನ್ನು ಉಳುಮೆ ಮಾಡಿ, ಮಣ್ಣನ್ನು ಜಾಲಾಡುವ ಮೂಲಕ ಎರೆಹುಳುವಿಗೆ ನಾವು ಬದುಕುವ ಅವಕಾಶವನ್ನೇ ಕೊಟ್ಟಿಲ್ಲ. ಎಲ್ಲಿಯವರೆಗೆ ಬಿಸಿಲಿನ ಪ್ರಖರತೆ ನೇರವಾಗಿ ಹೊಲದ ಮಣ್ಣಿನ ಮೇಲೆ ಬೀಳುತ್ತಿರುತ್ತದೋ ಅಲ್ಲಿಯವರೆಗೆ ಎರೆಹುಳು ಹೊರಗೆ ಬರದೇ ಭೂಮಿಯಾಳದ ತಂಪಿನಲ್ಲಿ ಕೂತುಬಿಡುತ್ತದೆ. ಒಂದು ವೇಳೆ ಹೊಲದಲ್ಲಿ ರಾಸಾಯನಿಕ ಗೊಬ್ಬರ ಹಾಕಿದ್ದರೆ, ಕೀಟನಾಶಕ ಸಿಂಪಡಿಸಿದರೆ, ಮೇಲ್ಮೈಯಲ್ಲಿರುವ ಎರೆಹುಳುಗಳು ಸತ್ತು ಹೋಗುತ್ತವೆ. ಆಹಾರದ ಕೊರತೆಯಿಂದಾಗಿ, ಒಳಗಿರುವ ಎರೆಹುಳುಗಳು ನಿಧಾನವಾಗಿ ಸಾಯುತ್ತವೆ, ಇಲ್ಲವೇ ಪಕ್ಕದ ಹೊಲಗಳಿಗೆ ವಲಸೆ ಹೋಗುತ್ತವೆ.

ಆದ್ದರಿಂದ ನಿಮ್ಮ ಹೊಲದಲ್ಲಿ ಮುಚ್ಚುಗೆ ಇರಲಿ. ಇದು ನೀರನ್ನು ಹೀರಿಕೊಳ್ಳುತ್ತದೆ. ಬಿಸಿಲನ್ನು ತಡೆಯುತ್ತದೆ. ಕೋಟ್ಯಂತರ ಸೂಕ್ಷ್ಮಜೀವಿಗಳ ವಾಸಿಸುವ ತಾಣವಾಗಿ ಮಾರ್ಪಡುತ್ತದೆ. ಭೂಮಿಯಲ್ಲಿ ರಾಸಾಯನಿಕಗಳನ್ನು ಹಾಕಬೇಡಿ. ಆಗ ನೈಸರ್ಗಿಕ ವಾತಾವರಣ ಏರ್ಪಡುವುದರಿಂದ ಭೂಮಿಯಾಳದಲ್ಲಿರುವ ಎರೆಹುಳು ತಾನಾಗಿಯೇ ಮೇಲೆ ಬರುತ್ತದೆ. ಪ್ರತಿ ಬಾರಿ ಹೊಸ ರಂಧ್ರ ಕೊರೆಯುತ್ತದೆ. ಮಣ್ಣಿನಲ್ಲಿರುವ ಕೃಷಿ ತ್ಯಾಜ್ಯವನ್ನು ತಿಂದು ಅದನ್ನು ಗೊಬ್ಬರವಾಗಿ ಮಾರ್ಪಡಿಸುತ್ತದೆ.

ಎರೆಹುಳು ಕೊರೆದ ರಂಧ್ರಗಳ ಗೋಡೆಗಳಿಗೆ ಅದರ ಮೈಯಿಂದ ಸ್ರವಿಸುವ ದ್ರವ ಲೇಪನಗೊಳ್ಳುವುದರಿಂದ ರಂಧ್ರದ ಒಳಮೈ ಒಂದಿಷ್ಟು ಗಟ್ಟಿಯಾಗುತ್ತದೆ. ಇದರಿಂದ ಮಣ್ಣು ಕುಸಿಯುವುದಿಲ್ಲ. ಅಲ್ಲದೇ ಮಳೆ ನೀರು ಈ ರಂಧ್ರದ ಮೂಲಕ ಭೂಮಿಯೊಳಗೆ ಇಳಿಯುವುದು ಸುಲಭವಾಗಿ ಮಳೆ ನೀರು ಸಂಗ್ರಹ ತನಗೆ ತಾನೇ ನಡೆಯುತ್ತದೆ. ಇದಕ್ಕಾಗಿ ನೀವು ಪ್ರತ್ಯೇಕ ಖರ್ಚು ಮಾಡಬೇಕಿಲ್ಲ.

ಎರೆಹುಳುವಿನ ಸ್ರಾವಕದಲ್ಲಿ ಗಿಡಗಳ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಪ್ರಚೋದಕಗಳು, ಅಮಿನೋ ಆಸಿಡ್‌ಗಳು ಹಾಗೂ ಲಘುಪೋಷಕಾಂಶಗಳು ಇವೆ. ಸಸ್ಯ ದೊಡ್ಡದಾಗಿ ಅದರ ಬೇರುಗಳು ಭೂಮಿಯಾಳಕ್ಕೆ ಇಳಿಯುವಾಗ, ಈ ರಂಧ್ರದ ಗೋಡೆಯಲ್ಲಿರುವ ಮಿತ್ರ ರಾಸಾಯನಿಕಗಳನ್ನು ಹೀರಿಕೊಂಡು ಚೆನ್ನಾಗಿ ಬೆಳೆಯುತ್ತವೆ. ಈ ರಂಧ್ರದ ಮೂಲಕ ಗಾಳಿಯಾಡುವುದರಿಂದ ಮಣ್ಣು ಉಸಿರಾಡಬಲ್ಲದು, ನೀರು ಕುಡಿಯಬಲ್ಲದು, ಕೃಷಿತ್ಯಾಜ್ಯಗಳ ಆಹಾರ ಸೇವಿಸಿ ಸಮೃದ್ಧವಾಗಬಲ್ಲುದು.

ಇಂತಹ ಮಣ್ಣು ಸಹಜವಾಗಿ ಹೆಚ್ಚು ನೀರನ್ನು ಹಿಡಿದಿಡುತ್ತದೆ. ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಕೋಟಿಕೋಟಿ ಸೂಕ್ಷ್ಮಜೀವಿಗಳು ವಾಸಿಸಲು ಬೇಕಾದ ವಾತಾವರಣ ನಿರ್ಮಾಣವಾಗುತ್ತದೆ. ಇವೆಲ್ಲ ನೈಸರ್ಗಿಕ ಚಟುವಟಿಕೆಯಿಂದಾಗಿ ಮಣ್ಣು ಪುಷ್ಠಿಕರವಾಗಿ, ಜೀವಂತಿಕೆಯಿಂದ ನಳನಳಿಸುತ್ತದೆ. ಮೃದುವಾಗುತ್ತದೆ. ಯಾವ ರಾಸಾಯನಿಕವೂ ಕೊಡದ ಫಲವತ್ತತೆಯನ್ನು ಪಡೆದುಕೊಳ್ಳುತ್ತದೆ. ಬಿದ್ದ ಮಳೆಯನ್ನು ಹೀರಿಕೊಳ್ಳುವ, ಹಿಡಿದಿಟ್ಟುಕೊಳ್ಳುವ, ಅದನ್ನು ನೆಲದಾಳಕ್ಕೆ ಕಳಿಸುವ ಮೂಲಕ ಜೀವ ಚಟುವಟಿಕೆಯನ್ನು ಪೋಷಿಸುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ.

ಎರೆಹುಳುವಿನ ಇನ್ನೊಂದು ಪ್ರಮುಖ ಅನುಕೂಲತೆ ಅದರ ನಿರಂತರ ಚಟುವಟಿಕೆ. ಎರೆಹುಳು ವಿಶ್ರಾಂತಿ ತೆಗೆದುಕೊಳ್ಳದೇ ನಿರಂತರವಾಗಿ ಚಲಿಸುತ್ತಿರುತ್ತದೆ. ಇದು ಭೂಮಿಯೊಳಗೆ ದಬ್ಬಣ (ಸಾಧಾರಣ ಗಾತ್ರದ ಮೊಳೆ) ಗಾತ್ರದ ನೇಗಿಲಿನಿಂದ ನಿರಂತರವಾಗಿ ಉಳುಮೆ ಮಾಡುವುದಕ್ಕೆ ಸಮ. ಎರೆಹುಳು ವರ್ಷದ ಎಲ್ಲ ದಿನಗಳಲ್ಲಿಯೂ ಸ್ವಯಂಚಾಲಿತ ನೇಗಿಲಿನಂತೆ ಭೂಮಿಯೊಳಗೆ ಕೆಲಸ ಮಾಡುತ್ತಲೇ ಇರುವುದರಿಂದ ಅದು ಇರುವಲ್ಲಿ ಉಳುಮೆಯ ಅವಶ್ಯಕತೆ ಬಾರದು.

ಇನ್ನು ಅದರ ವಿಸರ್ಜನೆ(ಹಿಕ್ಕೆ)ಯಂತೂ ಅದ್ಭುತ ಗೊಬ್ಬರ. ಏಕೆಂದರೆ ಎರೆಹುಳು ತಿನ್ನುವುದು ನಮ್ಮ ಹೊಲದಲ್ಲಿಯ ಕೃಷಿ ತ್ಯಾಜ್ಯವನ್ನೇ. ಹೀಗಾಗಿ ನಮ್ಮ ಹೊಲದ ಸತ್ವ ನಮ್ಮಲ್ಲಿಯೇ ಉಳಿದಂತಾಗುತ್ತದೆ. ಅದರ ಗೊಬ್ಬರದಲ್ಲಿ ಸಾಮಾನ್ಯ ರಸಾಯನಿಕ ಗೊಬ್ಬರದಲ್ಲಿರುವುದಕ್ಕಿಂತ ೧೧ ಪಟ್ಟು ಹೆಚ್ಚು ಪೊಟ್ಯಾಷ್, ೭ ಪಟ್ಟು ಹೆಚ್ಚು ಸಾರಜನಕ (ನೈಟ್ರೋಜನ್), ೯ ಪಟ್ಟು ಹೆಚ್ಚು ರಂಜಕ, ೧೦ ಪಟ್ಟು ಹೆಚ್ಚು ಮ್ಯಾಗ್ನೀಷಿಯಂ, ೯ ಪಟ್ಟು ಹೆಚ್ಚು ಗಂಧಕ (ಸಲ್ಫರ್), ೮ ಪಟ್ಟು ಹೆಚ್ಚು ಸುಣ್ಣ ಹಾಗೂ ಇತರ ಪೋಷಕಾಂಶಗಳು ಕನಿಷ್ಠ ೧೦ ಪಟ್ಟು ಹೆಚ್ಚಾಗಿರುತ್ತವೆ. ಇಷ್ಟೊಂದು ಸತ್ವಯುತ ಗೊಬ್ಬರವನ್ನು ಯಾವ ರಸಾಯನಿಕ ಗೊಬ್ಬರವೂ ನೀಡದು. ಅದೂ ಉಚಿತವಾಗಿ!

ಹೀಗಿರುವಾಗ, ಆಳದ ಉಳುಮೆ ಮಾಡುವುದು, ಹೊಲದ ಕೃಷಿ ತ್ಯಾಜ್ಯಗಳನ್ನೆಲ್ಲ ಸಂಗ್ರಹಿಸಿ ಸುಡುವುದು, ಇಲ್ಲವೇ ಸಾಗಿಸುವುದು, ರಾಸಾಯನಿಕಗಳ ಸಿಂಪರಣೆ, ಗೊಬ್ಬರ ಹಾಕುವುದು ಏತಕ್ಕೆ? ಭೂಮಿತಾಯಿಯನ್ನು ಅದರ ಪಾಡಿಗೆ ಬಿಟ್ಟರೆ, ಖರ್ಚೇ ಮಾಡದೇ ಭೂಮಿ ಫಲವತ್ತಾಗುತ್ತದೆ. ಯಾವುದೂ ಅತಿಯಾಗದಂತೆ, ಒಂದು ವ್ಯವಸ್ಥೆ ಇನ್ನೊಂದು ವ್ಯವಸ್ಥೆಯನ್ನು ನಿಯಂತ್ರಿಸುತ್ತ ಹೋಗುತ್ತದೆ.

(ಮುಂದುವರಿಯುವುದು)

- ಚಾಮರಾಜ ಸವಡಿ