ಮೇಲ್ಮನೆ ಫಲಿತಾಂಶ ಹೊಸ ದಿಕ್ಕಿಗೆ ಆಧಾರ
ರಾಜ್ಯದಲ್ಲಿ ಚುನಾವಣೆ ಕಾಲ ಆರಂಭಗೊಂಡಿದೆ. ಇತ್ತೀಚೆಗೆ ರಾಜ್ಯಸಭೆಯ ೪ ಸ್ಥಾನಗಳಿಗೆ ಚುನಾವಣೆ ನಡೆಯಿತು. ಈಗ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ನಡೆದ ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸಮವಾಗಿ ಸೀಟುಗಳನ್ನು ಹಂಚಿಕೊಂಡಿದೆ. ಶಿಕ್ಷಕರು ಮತು ಪದವೀಧರ ಕ್ಷೇತ್ರ ಎಂದರೆ ಸುಶಿಕ್ಷಿತರಿಗೆ ಸೇರಿದ್ದು. ಅಲ್ಲಿಯ ಮತದಾರರು ಜಾಗೃತರು. ಅವರಿಗೆ ಎಲ್ಲ ರಾಜಕೀಯ ಪಕ್ಷಗಳ ಆಗುಹೋಗುಗಳ ವಿವರ ತಿಳಿದಿರುತ್ತದೆ. ಅವರು ಯಾವುದೇ ರಾಜಕೀಯ ಪಕ್ಷಗಳ ಘೋಷಣೆಗೆ ಹಾಗೂ ಭರವಸೆಗಳಿಗೆ ಮತ್ತು ಓಲೈಕೆಗೆ ಒಳಗಾಗುವವರಲ್ಲ. ಅವರು ಮತಗಟ್ಟೆಗೆ ಹೋಗುವ ಮುನ್ನ ಸಾಕಷ್ಟು ಚಿಂತಿಸಿ ಮತ ಚಲಾಯಿಸುವ ಧೋರಣೆ ಹೊಂದಿದವರು. ಅವರು ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾತ್ರ ಬೆಂಬಲ ನೀಡಿದ್ದಾರೆ. ಜೆಡಿಎಸ್ ಹಿಂದಕ್ಕೆ ಸರಿದಿದೆ. ಹಿಂದಿನಿಂದಲೂ ಬಿಜೆಪಿಗೆ ಮೇಲ್ಮನೆ ಸೀಟುಗಳು ಸಿಗುತ್ತಿದ್ದವು. ಕಾಂಗ್ರೆಸ್ ಅಧಿಕಾರ ಅನುಭವಿಸಿದ್ದರೂ ಮೇಲ್ಮನೆ ಚುನಾವಣೆ ವಿಷಯ ಬಂದಾಗ ನಿರೀಕ್ಷಿಸಿದಷ್ಟು ಬೆಂಬಲ ಕಾಂಗ್ರೆಸ್ ಗೆ ಲಭಿಸುತ್ತಿರಲಿಲ್ಲ. ಈಗ ಈ ಸಂಗತಿ ಬದಲಾಗಿದೆ. ಸುಶಿಕ್ಷಿತರೂ ಕಾಂಗ್ರೆಸ್ ಕಡೆಗೆ ತಿರುಗಿದ್ದಾರೆ ಎಂಬುದನ್ನು ಫಲಿತಾಂಶ ಹೇಳುತ್ತಿದೆ. ಇದರಿಂದ ಕಾಂಗ್ರೆಸ್ ನಲ್ಲಿ ಹೊಸ ಉತ್ಸಾಹ ಮೂಡಿದೆ. ಇದುವರೆಗೆ ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಹೀಗಾಗಿ ಯಾವುದೇ ವಿಧೇಯಕವನ್ನು ತರಬೇಕಾದರೂ ಎರಡೂ ಬಾರಿ ಚಿಂತಿಸುವಂತಾಗಿತ್ತು. ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬರಬೇಕಾಯಿತು. ಆದರೆ ಇದು ೬ ತಿಂಗಳಲ್ಲಿ ಮೇಲ್ಮನೆಯ ಅನುಮೋದನೆ ಪಡೆಯಬೇಕು. ಆದರಿಂದ ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದ ಕೂಡಲೇ ನೋಡುವುದು ಬಹುಮತ. ಅದನ್ನು ಗಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತದೆ. ಮೇಲ್ಮನೆಯಲ್ಲಿ ಪ್ರತಿ ೨ ವರ್ಷಕ್ಕೊಮ್ಮೆ ಸೀಟುಗಳು ಖಾಲಿಯಾಗುತ್ತಿದ್ದಂತೆ ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸುವುದು ಸಹಜ. ಈಗ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಲಭಿಸಿದೆ. ಹೀಗಾಗಿ ಇನ್ನು ಮುಂದೆ ಶಾಸನಗಳನ್ನು ಮಂಡಿಸುವುದು ಕಷ್ಟವಾಗುವುದಿಲ್ಲ. ಮೇಲ್ಮನೆ ಹೆಸರಿಗೆ ತಕ್ಕಂತೆ ಹಿರಿಯರ ಮನೆಯಾಗಿರಬೇಕು. ಇಲ್ಲಿ ಪ್ರತಿ ಶಾಸನದ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು. ಅದು ರಾಜಕೀಯ ರಹಿತವಾಗಿರಬೇಕು. ಹಿರಿಯರ ಮನೆಯಲ್ಲಿ ವಿವಿಧ ಕ್ಷೇತ್ರಗಳ ಪರಿಣಿತರು ಇರುವುದರಿಂದ ಅವರ ಸಲಹೆ ಬಹಳ ಪ್ರಮುಖ. ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರಕಾರಕ್ಕೆ ಸಲಹೆ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಮೇಲ್ಮನೆ ಮತ್ತು ಕೆಳಮನೆ ಸಮಾನ ಅಧಿಕಾರ ಹೊಂದಿದೆ. ಇಬ್ಬರನ್ನೂ ಶಾಸಕರೆಂದು ಕರೆಯಲಾಗುವುದು. ಸರ್ಕಾರದ ಎಲ್ಲ ಚಟುವಟಿಕೆಗಳಲ್ಲೂ ಇಬ್ಬರೂ ಸಮಾನವಾಗಿ ಪಾಲ್ಗೊಳ್ಳುತ್ತಾರೆ. ಜನಪರ ಕೆಲಸಗಳಲ್ಲಿ ಇಬ್ಬರೂ ಸಮಾನವಾಗಿ ಪಾಲ್ಗೊಂಡಲ್ಲಿ ಉತ್ತಮಸೇವೆ ಸಲ್ಲಿಸಬಹುದು. ಸಾಮಾನ್ಯವಾಗಿ ವಿಧಾನ ಪರಿಷತ್ ಸದಸ್ಯರು ಎರಡು ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುತ್ತಾರೆ. ಅವರು ಆ ಜಿಲ್ಲೆಗಳ ವ್ಯಾಪ್ತಿಯಲ್ಲಾಗುವ ಪ್ರಗತಿಯನ್ನು ಪರಿಶೀಲಿಸಬಹುದು. ಜಿಲ್ಲಾ ಪಂಚಾಯ್ತಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಬದಲಾವಣೆ ಬಂದಿರುವುದು ಸ್ಪಷ್ಟ. ಜನಪ್ರತಿನಿಧಿಗಳು ಎಂದಾಗ ನಾವು ಮೇಲ್ಮನೆ ಸದಸ್ಯರನ್ನೂ ಸೇರ್ಪಡೆ ಮಾಡಿಕೊಂಡಿದ್ದೇವೆ. ಕೆಲವು ನಾಯಕರು ಮೇಲ್ಮನೆ ಮೂಲಕ ಜನಪ್ರಿಯರಾದವರೂ ಇದ್ದಾರೆ. ಅಲ್ಲದೆ ಅವರು ಸಚಿವರಾಗಿಯೂ ಸೇವೆ ಸಲ್ಲಿಸಲು ಅವಕಾಶವಿದೆ. ಇದರಿಂದ ಸಮಾಜದ ಎಲ್ಲ ವರ್ಗದವರ ಪ್ರತಿನಿಧಿಗಳೂ ಸರ್ಕಾರ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತಾಗಿದೆ. ಕೆಳಮನೆ ಶಾಸನ ರಚಿಸುವ ಹಕ್ಕು ಹೊಂದಿದ್ದರೆ ಅದನ್ನು ಕೂಲಂಕುಷವಾಗಿ ಪರಿಶೀಲಿಸುವ ಹಕ್ಕು ಮೇಲ್ಮನೆಗೆ ಇದೆ. ಇದರಿಂದ ಸರ್ಕಾರದ ಪ್ರತಿಯೊಂದು ನಿರ್ಣಯವೂ ಕೂಲಂಕುಷವಾಗಿ ಪರಿಶೀಲನೆಗೆ ಒಳಪಡಲು ಅವಕಾಶವಿದೆ. ಮೇಲ್ಮನೆಯಲ್ಲಿ ಪ್ರತಿ ೨ ವರ್ಷಗಳಿಗೊಮ್ಮೆ ಚುನಾವಣೆ ನಡೆಯುವುದರಿಂದ ಸರ್ಕಾರದ ತೀರ್ಮಾನ ಜನರ ವಿಮರ್ಶೆಗೆ ಒಳಪಡಲಿದೆ. ಈಗ ಮೇಲ್ಮನೆ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಈ ಫಲಿತಾಂಶದ ಪರಿಣಾಮ ರಾಜಕೀಯ ಶಕ್ತಿಗಳ ಪುನರ್ ಧ್ರುವೀಕರಣಕ್ಕೆ ನಾಂದಿಯಾಗಲಿದೆ. ಆದರೆ ಸುಶಿಕ್ಷಿತರ ಕ್ಷೇತ್ರಗಳಲ್ಲೂ ಕುಲಗೆಟ್ಟ ಮತಗಳ ಸಂಖ್ಯೆ ಅಧಿಕವಾಗಿರುವುದು ಆತಂಕದ ವಿಷಯ. ಇದರ ಬಗ್ಗೆ ಮತದಾರರು ಪುನರಾವಲೋಕನ ಮಾಡಿಕೊಳ್ಳುವುದು ಅಗತ್ಯ.
ಕೃಪೆ: ಸಂಯುಕ್ತ ಕರ್ನಾಟಕ, ಸಂಪಾದಕೀಯ, ದಿ: ೧೭-೦೬-೨೦೨೨