ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
ಇದು ಕನ್ನಡಿಗರಿಗೆಲ್ಲಾ ಬೇಳೆ ಹೋಳಿಗೆ, ಪಾಯಸ ತಿಂದಷ್ಟು ಸಂತಸದ ಸುದ್ದಿಯಲ್ಲವೇ ? ಸುನಿಲ್ ಮಲ್ಲೇನ ಹಳ್ಳಿಯವರ ದನಿಗೆ ಜೊತೆಗೂಡಿಸೋಣ ! ಅಂದಿನಿಂದ ಮೊದಲಿನಂತೆ ವಿಮಾನಗಳೆಲ್ಲಾ ಮುಂಬೈನಗರಕ್ಕೆ ಬಂದು ಅಲ್ಲಿಂದ ಮತ್ತೆ ಡೊಮೆಸ್ಟಿಕ್ ವಿಮಾನಯಾನವನ್ನು ಮುಂದುವರೆಸದೆ, ನೇರವಾಗಿ ಬೆಂಗಳೂರಿನಲ್ಲಿ ಬಂದಿಳಿಯುವ ಸನ್ನಿವೇಷವನ್ನು ಊಹಿಸಲೂ ಅಸಾಧ್ಯ !
ಮೇ 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ. ಅಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಕೂಗಿಗೆ ಇನ್ನೂ ಪ್ರತಿಧ್ವನಿ ಬಂದಿಲ್ಲ. ಇದಕ್ಕೆ ಉತ್ತರವೂ ಭವಿಷ್ಯದಲ್ಲಿ ಸಿಗಲಿದೆ. ಈ ನಡುವೆ, ಇಲ್ಲಿಂದ ಹಾರಾಡುವ ವಿಮಾನಗಳಲ್ಲಿಯೂ ಕನ್ನಡದ ಇಂಪು, ಕಂಪು ಬೀರಲಿ ಎಂಬುದು ಈ ಲೇಖನದ ಲೇಖಕರ ಆಶಯ.
* ಸುನಿಲ್ ಮಲ್ಲೇನಹಳ್ಳಿ
ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ. ಆದರೆ ದಿನನಿತ್ಯ ಹಾರಾಡುವ ಈ ವಿಮಾನಗಳಲ್ಲಿ ಕನ್ನಡದವರ ಆಚಾರ-ವಿಚಾರಗಳಿಗೆ, ಕನ್ನಡ ಭಾಷೆಗೆ ಯಾವ ರೀತಿಯ ಸ್ಥಾನಮಾನ ಕೊಟ್ಟು ಗೌರವಿಸುತ್ತಾರೆಂಬುದು ನಮ್ಮ ಎದುರಿಗಿರುವ ಬೆಲೆ ಕಟ್ಟಲಾರದ ಪ್ರಶ್ನೆ! "ಗಿಡವಾಗಿ ಬಗ್ಗದ್ದು..ಮರವಾಗಿ ಬಗ್ಗೀತೇ"ಎನ್ನುವಂತೆ ಈ ಆರಂಭದ ದಿನಗಳಲ್ಲೇ ಕೆಲವೊಂದು ನಿರ್ಣಯದ ವಿಚಾರಗಳನ್ನು BIAL(ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಆಡಳಿತ ಮಂಡಳಿಯವರೊಂದಿಗೆ ಹಾಗೂ ವಿಮಾನಗಳ ಸಂಸ್ಥೆಗಳೊಂದಿಗೆ (ಉದಾ: ಏರ್ ಇಂಡಿಯಾ, ಬ್ರಿಟಿಷ್ ಏರವೇಸ್, ಸಿಂಗಾಪೂರ್ ಏರಲೈನ್ಸ್, ಇತ್ಯಾದಿ) ನೀತಿ ನಿಯಮಗಳ ಚೌಕಟ್ಟಿನಲ್ಲಿ ಕುಳಿತು ಪ್ರಸ್ತಾವನೆಯನ್ನು ನಾವುಗಳು ಮಾಡಲೇಬೇಕಿದೆ, ಆಗಸದಂಚಿನಲ್ಲಿ ಕನ್ನಡ ಪದಗಳ ಲಹರಿ ಹರಿಸಲೇಬೇಕಿದೆ.
ನಮಗೆ ತಿಳಿದ ಹಾಗೆ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವ ಬಹುತೇಕ ವಿಮಾನಗಳಲ್ಲಿ ತಮಿಳು ಸಿನಿಮಾಗಳನ್ನು ಹಾಕುವುದು ಸರ್ವೇಸಾಮಾನ್ಯದ ಸಂಗತಿ. ಈಗ ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವ ವಿಮಾನಗಳಲ್ಲಿ ಕರುನಾಡಿನ ಕಲೆ, ಸಾಹಿತ್ಯ, ಆಚಾರ ವಿಚಾರಗಳನ್ನು ಹಾಗೂ ಕನ್ನಡದ ಸಿನಿಮಾಗಳನ್ನು ಮನಃಪೂರ್ವಕವಾಗಿ ಒಪ್ಪಿ ಹಾಕುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟ ವಿಚಾರ. ಆದರೆ ಹಾಕುವಂತೆ ನ್ಯಾಯ ಸಮ್ಮತವಾದ ಒತ್ತಡ ತರುವುದು ನಮಗೆ ಬಿಟ್ಟ ವಿಚಾರ.
ಈಗ ಮೈ ಮರೆತು ಅನಂತರ ಕನ್ನಡಕ್ಕೆ ಹೀಗಾಗೋಯಿತು..ಹಾಗಾಗೋಯಿತು ಎಂದು ಪರಿತಪಿಸುವುದರಲ್ಲಿ ಎಳ್ಳಷ್ಟೂ ಅರ್ಥವಿರುವುದಿಲ್ಲ. ಅದಕ್ಕೇ ಎಲ್ಲರೂ ಚರ್ಚೆಮಾಡಿ ಕನ್ನಡ ಭಾಷೆಗೆ ಬೆಲೆತರುವ ಒಂದು ನಿರ್ಧಾರವನ್ನು ಕೈಗೊಳ್ಳೋಣ.
ವಿಮಾನಗಳಲ್ಲಿ ಊಟೋಪಚಾರಕ್ಕೆ ಸಂಬಂಧಿಸಿದಂತೆ, ನಮ್ಮ ಕರ್ನಾಟಕದ ಊಟಗಳೆಂದು ಪ್ರಸಿದ್ಧಿ ಪಡೆದಿರುವ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ ಹಾಗೂ ನಾನಾ ವಿಧದ ಪಲ್ಯ..ಇತ್ಯಾದಿಗಳ ಊಟ ಸಿಗುವ ಹಾಗೆ ಮತ್ತು ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮೆನುವಿನಲ್ಲಿ ಕನ್ನಡದಲ್ಲಿ ಮುದ್ರಿಸುವಂತೆ ವಿಮಾನಗಳ ಸಂಸ್ಥೆಯವರಿಗೆ (ಉದಾ: ಏರ್ ಇಂಡಿಯಾ, ಬ್ರಿಟಿಷ್ ಏರವೇಸ್, ಸಿಂಗಾಪೂರ್ ಏರಲೈನ್ಸ್, ಇತ್ಯಾದಿ)ಮನದಟ್ಟು ಮಾಡಿಕೊಡಬೇಕು.
ಗಗನ ಸಖಿಯೊಬ್ಬಳು ನಿಮ್ಮ ಬಳಿಬಂದು, ಸಾರ್ ನಿಮಗೆ ಕುಡಿಯುವುದಕ್ಕೆ ಲಿಂಬೆಹಣ್ಣಿನ ಪಾನಕ ಬೇಕೋ..? ಅಥವಾ ಮಸಾಲ ಮಜ್ಜಿಗೆ ಬೇಕೋ..? ಹಾಗೂ ಊಟಕ್ಕೆ ಸೊಪ್ಪಿನ ಸಾರು ಮುದ್ದೆ ಬೇಕೋ..? ಅಥವಾ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ಬೇಕೋ..? ಎಂದೂ ಅಚ್ಚಕನ್ನಡ ಭಾಷೆಯಲ್ಲಿ ಆಕೆ ನಿಮ್ಮನ್ನು ಕೇಳಿದಾಗ, ನಿಮ್ಮ ಮನದಲ್ಲಿ ಉದಯಿಸುವ ಮುಗಿಲೆತ್ತರದ ಸಂತಸದ ಅಲೆಗಳಿಗೆ ಅಣ್ಣೆಕಟ್ಟು ಕಟ್ಟಲಾದಿತೇ..? ಎಲ್ಲಾ ಕನ್ನಡಮಯವಾಗಿದ್ದರೆ ಏಷ್ಟು ಸೊಗಸು ಅಲ್ಲವೇ ?
ನಾ ಇವರೆಗೂ ಹೇಳಿದ್ದು ಕನಸಿನ ವಿಚಾರವೆಂದು ತಿಳಿಯದಿರಿ, ಏಕೆಂದರೆ ನಾವು ಕನ್ನಡಿಗರು ಐದು ಕೋಟಿ ಜನರಿದ್ದೇವೆ. ಬದಲಾವಣೆ ತರಲೇಬೇಕೆಂದು ಒಂದು ಅತಿಸಣ್ಣ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಈಗಾಲೇ ಸಿದ್ಧರಾಗಿ ಜನ್ಮಭೂಮಿಗೆ..ಮಾತೃ ಭಾಷೆಗೆ ಅಲ್ಪವಾದರೂ ಒಳಿತು ಮಾಡೋಣ.
-ದಟ್ಸ್ ಕನ್ನಡ ಇ-ಪತ್ರಿಕೆಯ ಕ್ಷಮೆಬೇಡಿ. ಅದರಲ್ಲಿ ಹೇಗಿದೆಯೋ ಹಾಗೆ ಪ್ರತಿಮಾಡಿದ್ದೇನೆ.