ಮೈಕ್ರೋಪ್ಲಾಸ್ಟಿಕ್ ಎಂಬ ಪೆಡಂಭೂತ

ಮೈಕ್ರೋಪ್ಲಾಸ್ಟಿಕ್ ಎಂಬ ಪೆಡಂಭೂತ

ಪ್ಲಾಸ್ಟಿಕ್ ನ ಉಪಯೋಗ ಈ ಆಧುನಿಕ ಜಗತ್ತಿನಲ್ಲಿ ಮಿತಿ ಮೀರಿದ ವಿಚಾರ ಹೆಚ್ಚಿನವರಿಗೆಲ್ಲ ತಿಳಿದಿದೆ. ವಾತಾವರಣದ ಬಗ್ಗೆ ಆಸಕ್ತ ವಿಜ್ಞಾನಿಗಳ ಪ್ರಕಾರ ಮಾನವ ತನ್ನ ವೈಯಕ್ತಿಕ ಸುಖಕ್ಕಾಗಿ ಈ ಪೆಡಂಭೂತವನ್ನು ಅತಿಯಾಗಿ ಬೆಳೆಸಿದ್ದಾನೆ. ಪ್ರತೀವರ್ಷ 400 ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ ಎನ್ನಲಾಗಿದೆ. ಹಲವು ಉದ್ಯಮಗಳಲ್ಲಿ ಇದು ಬೇಕೇ ಬೇಕು. ಉದಾ: ಗೆ ಅಲಂಕಾರಕ್ಕೆ ಉಪಯೋಗಿಸುವ ಪ್ರಸಾಧನಗಳು, ಆಹಾರ ವಸ್ತುಗಳ ಪ್ಯಾಕಿಂಗ್ ಗೆ, ಹಲವು ರೀತಿಯ ಗೃಹೋಪಯೋಗಿ ವಸ್ತುಗಳಲ್ಲಿ ಹೀಗೆ ಹಲವೆಡೆ. ಹೆಚ್ಚಾದ ಪ್ಲಾಸ್ಟಿಕ್ ಎಲ್ಲೆಲ್ಲೋ ಬಿಸಾಡಲ್ಪಡುತ್ತದೆ. ಹಾಗೆಯೇ ನೀರಿನ ವಿವಿಧ ಆಕರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಮುದ್ರದ ಇಕೋ ವ್ಯವಸ್ಥೆಯ ಮೇಲೆ ಪ್ಲಾಸ್ಟಿಕ್ ಬೀರುವ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಅಲ್ಲಿನ ಪ್ರಾಣಿಗಳಾದ ಮೀನು, ಆಮೆ ಮುಂತಾದ ಪ್ರಾಣಿಗಳ ದೇಹಗಳಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುತ್ತದೆ. ಅವುಗಳ ಮೂಲಕ ಪ್ಲಾಸ್ಟಿಕ್ ಉತ್ಪಾದನೆಗೆ ಕಾತಣೀಕತೃನಾದ ಮನುಷ್ಯನ ದೇಹವನ್ನು ಸೇರಿ ಒಂದು ಸರ್ಕಲ್ ಪೂರ್ಣಗೊಳ್ಳುತ್ತದೆ. 

ಮ್ಯಾಕ್ರೋಪ್ಲಾಸ್ಟಿಕ್ ಎಂದರೆ ಕಣ್ಣಿಗೆ ಕಾಣುವ ಪ್ಲಾಸ್ಟಿಕ್ ನ ಪರಿಣಾಮಗಳು ಗೋಚರವಾದರೆ ಮೈಕ್ರೋಪ್ಲಾಸ್ಟಿಕ್ ಮತ್ತು ನ್ಯಾನೋ ಪ್ಲಾಸ್ಟಿಕ್‌ ಗಳು ಮಾನವ ದೇಹದಲ್ಲಿ ಗಂಭೀರ ರೀತಿಯ ಆರೋಗ್ಯ ಪರಿಣಾಮಗಳನ್ನು ಬೀರುತ್ತವೆ. ದೈಹಿಕ, ರಾಸಾಯನಿಕ ಮತ್ತು ಬಯಲಾಜಿಕಲ್ ಕ್ರಿಯೆಗಳ ಮೂಲಕ ಈ ಮೈಕ್ರೋ ಮತ್ತು ನ್ಯಾನೋ ಪ್ಲಾಸ್ಟಿಕ್ ಗಳು ಹುಟ್ಟಿಕೊಳ್ಳುತ್ತವೆ. ಮೈಕ್ರೋ ಪ್ಲಾಸ್ಟಿಕ್ ಗಳೆಂದರೆ 5 ಮಿ ಮೀ ಗಿಂತ ಸಣ್ಣ ಪ್ರಮಾಣದ್ದು, ನ್ಯಾನೋ ಪ್ಲಾಸ್ಟಿಕ್ ಗಳೆಂದರೆ 1u m ಗಿಂತ ಸಣ್ಣದು. ಅವು ಕಣ್ಣಿಗೆ ಗೋಚರವಾಗದೆ ಇರುವುದರಿಂದ ಅವು ಮೈ ತಿಕ್ಕುವ ಸ್ಕ್ರಬ್ಸ್ , ಕಣ್ಣಿಗೆ ಉಪಯೋಗಿಸುವ ಕಾಡಿಗೆ, ಶಾಂಪೂಗಳು ಮತ್ತು ಸಮುದ್ರ ಪ್ರಾಣಿಗಳನ್ನು ಆಹಾರವಾಗಿ ಸೇವಿಸುವುದು - ಈ ರೀತಿಯಲ್ಲಿ ಮಾನವ ದೇಹವನ್ನು ಪ್ರವೇಶಿಸುತ್ತವೆ. ಇತ್ತೀಚಿನ ಕೆಲವು ಅಧ್ಯಯನಗಳು ನಲ್ಲಿ ಮತ್ತು ಬಾಟಲಿ ನೀರಿನಲ್ಲಿ ಸಹಿತ ಮೈಕ್ರೋ ಪ್ಲಾಸ್ಟಿಕ್ ಇರುವುದನ್ನು ದೃಢೀಕರಿಸಿವೆ. ಬಟ್ಟೆ ಮತ್ತು ಪಿ ವಿ ಸಿ ಉದ್ಯಮದ ಕೆಲಸಗಾರರು  ಅವರಿಗೆ ಗೊತ್ತಿಲ್ಲದೆಯೇ ನ್ಯಾನೋ ಪ್ಲಾಸ್ಟಿಕ್ ನ್ನು ಅಪಾರ ಪ್ರಮಾಣದಲ್ಲಿ ಸೇವಿಸುತ್ತಾರೆ ಎನ್ನಲಾಗಿದೆ. 

ಒಂದು ಅಂದಾಜಿನ ಪ್ರಕಾರ ಪ್ರತಿಯೊಬ್ಬ ಭಾರತೀಯನು ಪ್ರತೀ ವರ್ಷ 11 ಕೆ ಜಿ ಯಷ್ಟು ಪ್ಲಾಸ್ಟಿಕ್ ನ್ನು ವಿವಿಧ ರೀತಿಯಲ್ಲಿ ಸೇವಿಸುತ್ತಾನೆ. ಆದರೆ ಅದೇ ಅಮೆರಿಕದ ಮತ್ತು ಚೀನಾದ ನಾಗರಿಕ ಇದಕ್ಕಿಂತ ಎಷ್ಟೋ ಜಾಸ್ತಿ ಪ್ಲಾಸ್ಟಿಕ್ ಸೇವಿಸುತ್ತಾನೆ ಎನ್ನಲಾಗಿದೆ. ಜಠರವನ್ನು ಸೇರಿದ ಪ್ಲಾಸ್ಟಿಕ್ ಅವುಗಳ ಗಾತ್ರದ ಪ್ರಕಾರ ಅಲ್ಲಿಂದ ಹೊರಗೆ ತಳ್ಳಲ್ಪಡುತ್ತವೆ ಅಥವಾ ಅಲ್ಲಿಯೇ ಸಿಕ್ಕಿಕೊಳ್ಳುತ್ತವೆ ಜೊತೆಗೆ ಕರುಳಿನ ಒಳಭಾಗದಲ್ಲಿಯೂ ಸಿಕ್ಕಿ ಲೇಪಿಸಲ್ಪಡುತ್ತವೆ. ಮತ್ತೆ ಕೆಲವೊಮ್ಮೆ ರಕ್ತವನ್ನು ಸೇರಿ ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಮಾನವನ ನರವ್ಯೂಹ ವ್ಯವಸ್ಥೆ, ಹಾರ್ಮೋನುಗಳು, ಪ್ರತಿರೋಧ ವ್ಯವಸ್ಥೆಯ ಮೇಲೆ ಹಲವು ಕೆಟ್ಟ ರೀತಿಯ ಪರಿಣಾಮಗಳನ್ನು ಬೀರುವುದೇ ಅಲ್ಲದೆ ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆಗೂ ಕಾರಣವಾಗಬಹುದು.

ಇತ್ತೀಚಿನ ಒಂದು ಅಧ್ಯಯನ ತುಂಬಾ ಕುತೂಹಲಕಾರಿಯಾಗಿದೆ. ಹಾಗೆಯೇ ಅದು ಇದುವರೆಗೆ ಗೊತ್ತಿಲ್ಲದ ಒಂದು ವಿಷಯದ ಬಗೆಗೆ ಬೆಳಕು ಚೆಲ್ಲುತ್ತದೆ. ಇದು ಮೈಕ್ರೋಪ್ಲಾಸ್ಟಿಕ್ ಹೇಗೆ ಆಂಟಿ  ಬ್ಯಾಕ್ಟೀರಿಯಲ್ ರೆಸಿಸ್ಟನ್ಸ್ ಉಂಟು ಮಾಡುತ್ತದೆ ಎಂಬುದರ ಬಗೆಗಿನ ಅಧ್ಯಯನ. ಈ ಬಗೆಗೆ ಪ್ರೊ|ಜುಲ್ಕರ್ ನೈನ್ ಬಾಲೋಚ್ ಮತ್ತು ಅವರ ಸಹೋದ್ಯೋಗಿಗಳು ಇನ್ ಫೆಕ್ಷನ್ ಅಂಡ್ ಡ್ರಗ್ ರೆಸಿಸ್ಟನ್ಸ್ ಜರ್ನಲ್ ನಲ್ಲಿ ಇತ್ತೀಚೆಗೆ ಈ ಅಧ್ಯಯನದ ಬಗೆಗಿನ ಲೇಖನ ಪ್ರಕಟಿಸಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಆಂಟಿಬಯೋಟಿಕ್ ಗಳ ಬೆಳವಣಿಗೆ ಮತ್ತು ಉಪಯೋಗ 1930 ಮತ್ತು 1960 ರ ನಡುವೆ ವಿಪರೀತ ರೀತಿಯಲ್ಲಿ ಬೆಳಕಿಗೆ ಬಂದಿತು. ಹೌದು ಅವು ಜಗತ್ತಿನಾದ್ಯಂತ ಕೋಟ್ಯಾಂತರ ಜನರನ್ನು ಬದುಕಿಸಿವೆ. ಹಾಗೆಯೇ ಇಂದಿನ ಆರೋಗ್ಯ ವ್ಯವಸ್ಥೆಯಲ್ಲಿ ಅವು ತೀರಾ ಅನಿವಾರ್ಯ. ಆದರೆ ವಿವಿಧ ಕಾಯಿಲೆಗೆ ಕಾರಣವಾಗುವ ಸೂಕ್ಷ್ಮಾಣುಗಳು ವಿವಿಧ ಆಂಟಿಬಯೋಟಿಕ್ ಗಳಿಗೆ ನಿರೋಧಕ ಶಕ್ತಿ ಬೆಳೆಸಿ ಆಂಟಿಬಯೋಟಿಕ್ ಗಳು ಕಡಿಮೆ ಪರಿಣಾಮಕಾರಿಯೋ ಅಥವಾ ಏನೂ ಪರಿಣಾಮಕಾರಿಯಾಗದಿರುವುದೋ ಹೀಗೆ ಆಗುತ್ತದೆ. ಈಗೀಗ ಒಂದು ರೀತಿಯ ಆಂಟಿಬಯೋಟಿಕ್ ರೆಸಿಸ್ಟನ್ಸ್ ಅನಿವಾರ್ಯ ಎನ್ನುವುದಾದರೂ ಅದರಲ್ಲಿ ಕೆಲವು ಮಾನವನಿಗೆ ಸಂಬಂಧಪಟ್ಟ ಕಾರಣಗಳೂ ಇವೆ ಎನ್ನುತ್ತಾರೆ ಪ್ರೊ| ಬಾಲೋಚ್. ಅವುಗಳೆಂದರೆ - ಜನಸಂಖ್ಯೆಯ ವಿಪರೀತ ಏರಿಕೆ, ಜನರ ಹೆಚ್ಚಿನ ಓಡಾಟ, ಪ್ರವಾಸ , ಮೈಗ್ರೇಷನ್ ( ವಾಸ್ತವ್ಯ ಬದಲಿಸುವುದು) ಇತ್ಯಾದಿ. ವೈದ್ಯರುಗಳಿಂದ ವಿಪರೀತ ಪ್ರಮಾಣದ ಉಪಯೋಗ, ಹಾಗೆಯೇ ಪ್ರಾಣಿಗಳ ಉತ್ಪಾದನೆಯಲ್ಲೂ ಆಂಟಿಬಯೋಟಿಕ್ ಉಪಯೋಗಿಸುತ್ತಿರುವುದು, ಸ್ವಚ್ಚತೆಯನ್ನು ಸರಿಯಾಗಿ ಪಾಲಿಸದೆ ಇರುವುದು, ಕಾಡಿನಲ್ಲಿ ಮಾನವನ ವಿಪರೀತ ಹಸ್ತಕ್ಷೇಪ ಮತ್ತು ಮನುಷ್ಯನ ಹಾಗೂ ಪ್ರಾಣಿಗಳ ಮಲ ಮೂತ್ರಗಳನ್ನು ಸೂಕ್ತವಾಗಿ ನಿರ್ವಹಿಸದೆ ಇರುವುದು. ಈ ಅಧ್ಯಯನದಲ್ಲಿ ಮೇಲಿನ ವಿಜ್ಞಾನಿಗಳು ಕಲುಷಿತ ನೀರನ್ನು ಶುಧ್ದೀಕರಿಸುವ ಪ್ಲಾಂಟ್ ಗಳು ಹೇಗೆ ಆಂಟಿಬಯೋಟಿಕ್ ರೆಸಿಸ್ಟನ್ಸ್ ಬರಲು ಕಾರಣವಾಗುತ್ತವೆ ಎಂಬುದನ್ನು ತೋರಿಸಿದ್ದಾರೆ. 

ಇದೇ ರೀತಿಯ ಇನ್ನೊಂದು ಅಧ್ಯಯನದಲ್ಲಿ ನ್ಯೂಜರ್ಸಿಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎನ್ ವಿರೋನ್ ಮೆಂಟ್ ವಿಜ್ಞಾನದ ಪ್ರೊಫೆಸರ್ ಡಾ ಮೆನ್ ಗ್ಯಾನ್ ಲೀ ಅವರ ಪ್ರಕಾರ "ಶುದ್ಧ ನೀರು ಮತ್ತು ಸಮುದ್ರದ ನೀರು - ಇಲ್ಲಿನ ಮೈಕ್ರೋಪ್ಲಾಸ್ಟಿಕ್ ಗಳು ಉಂಟು ಮಾಡುವ ಹಾನಿಗಳ ಬಗೆಗೆ ಹಲವಾರು ಅಧ್ಯಯನಗಳು ತಮ್ಮ ಗಮನವನ್ನು ಕೇಂದ್ರೀಕರಿಸಿವೆ. ಆದರೆ ಪಟ್ಟಣ ಮತ್ತು ನಗರಗಳ ಕಲುಷಿತ ನೀರಿನ ಪ್ಲಾಂಟ್ ಗಳ ಉಪಯೋಗವಾದ ನೀರಿನ ಬಗೆಗಿನ ಅಧ್ಯಯನ ಇದು ಹೊಸದೇ ಸರಿ " ಎಂದು ಅಭಿಪ್ರಾಯ ಪಡುತ್ತಾರೆ. ಈ ಕಲುಷಿತ ನೀರಿನ ಪ್ಲಾಂಟ್ ಗಳಲ್ಲಿ ಹಲವಾರು ರಾಸಾಯನಿಕಗಳು, ಆಂಟಿಬಯೋಟಿಕ್ ಗೆ ಬಗ್ಗದ ಬ್ಯಾಕ್ಟೀರಿಯಾಗಳು ಹಾಗೂ ಇನ್ನಿತರ ಸೂಕ್ಷ್ಮಾಣುಗಳು ಕಂಡು ಬರುತ್ತವೆ. ಮೈಕ್ರೋಪ್ಲಾಸ್ಟಿಕ್ ಗಳು ಇವುಗಳನ್ನು ಹೊತ್ತೊಯ್ಯುವ ಕ್ಯಾರಿಯರ್ ಗಳು. ಹಾಗಾಗಿ ಅವು ನೀರಿಗೂ ಹಾಗೂ ಮನುಷ್ಯನ ಆರೋಗ್ಯಕ್ಕೆ - ಎರಡಕ್ಕೂ ಅಪಾಯಕಾರಿ. 

ಮೇಲಿನ ಸಂಶೋಧನೆಯ ಮುಖ್ಯ ಸಂಶೋಧಕ ಡಂಗ್ ಗೋರ್ ಪ್ಯಾಮ್ " ಹೆಚ್ಚಿನ ಕಲುಷಿತ ನೀರಿನ ಪ್ಲಾಂಟ್ ಗಳು ಮೈಕ್ರೋಪ್ಲಾಸ್ಟಿಕ್ ನ್ನು ಬೇರ್ಪಡಿಸುವ ತಂತ್ರಜ್ಞಾನ ಹೊಂದಿಲ್ಲ. ಪರಿಣಾಮ ಎಂದರೆ ಅವು ಶುದ್ಧೀಕರಿಸಿದ ನೀರಿನಲ್ಲೂ ಉಳಿದುಕೊಳ್ಳುತ್ತವೆ. ನಾವು ಈ ಮೈಕ್ರೋಪ್ಲಾಸ್ಟಿಕ್ ವಸ್ತುಗಳು ಮುನಿಸಿಪಲ್ ಕಲುಷಿತ ನೀರಿನ ಸ್ಲಡ್ಜ್ ಗಳಲ್ಲಿ ವಿಕಸನ ಹೊಂದಿ ಹೇಗೆ ಆಂಟಿಬಯೋಟಿಕ್ ರೆಸಿಸ್ಟನ್ಸ್ ಜಾಸ್ತಿ ಮಾಡುತ್ತವೆ ಹಾಗೂ ಯಾವ್ಯಾವ ಸೂಕ್ಷ್ಮಾಣುಗಳು ಈ ಪ್ಲಾಂಟ್ ನ ನೀರಿನಲ್ಲಿವೆ ಎಂಬುದನ್ನು ವಿವರವಾಗಿ ತಿಳಿಯುವುದೇ ನಮ್ಮ ಅಧ್ಯಯನದ ಗುರಿ " ಎನ್ನುತ್ತಾರೆ. ಇದನ್ನು ಅಧ್ಯಯನ ಮಾಡಲು ಅವರು ನ್ಯೂಜರ್ಸಿಯ ಖಾಸಗಿ ಮನೆಗಳ ಕಲುಷಿತ ನೀರಿನ ಪ್ಲಾಂಟ್ ಗಳಿಂದ ಸ್ಲಡ್ಜ್ ಗಳ ಸ್ಯಾಂಪಲ್ ಗಳನ್ನು ತೆಗೆದುಕೊಂಡರು. ಪ್ರಯೋಗಾಲಯದಲ್ಲಿ ಅವರು ಹೆಚ್ಚಾಗಿ ಕಂಡುಬರುವ ಮೈಕ್ರೋ ಪ್ಲಾಸ್ಟಿಕ್ ಗಳಾದ ಪಾಲಿ ಎಥಿಲೀನ್ ಮತ್ತು ಪಾಲಿಸ್ಟರೀನ್ ಗಳನ್ನು ಆ ಸ್ಲಡ್ಜ್ ಗಳ ಸ್ಯಾಂಪಲ್ ಗೆ ಸೇರಿಸಿದರು. ಉದ್ದೇಶ ಎಂದರೆ ಬ್ಯಾಕ್ಟೀರಿಯಾ ಗಳು ಈ ಪ್ಲಾಸ್ಟಿಕ್ ಗಳಿಗೆ ತಳಕು ಹಾಕಿ ಬಯೋಫಿಲ್ಮ್ ನ್ನು ಉಂಟು ಮಾಡುವುದು. ಮರಳನ್ನು ಕಂಟ್ರೋಲ್ ವಸ್ತುವಾಗಿ ಉಪಯೋಗಿಸಿದರು. ಆ ನಂತರ ಅವರು ಅದನ್ನು ಕ್ವಾಂಟಿಟೇಟಿವ್ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್ ಮತ್ತು ನೆಕ್ಸ್ಟ್ ಜನರೇಷನ್ ಸೀಕ್ವೆನ್ನಿಂಗ್ ಮೂಲಕ ಮಾಹಿತಿ ಕಲೆ ಹಾಕಿದರು. ಆಗ ಅವರು ಮೈಕ್ರೋ ಪ್ಲಾಸ್ಟಿಕ್ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ಗಮನಿಸಿದರು. ಅಲ್ಲದೆ ಬ್ಯಾಕ್ಟೀರಿಯಾಗಳ ಜೆನೆಟಿಕ್ ಮೇಕ್ ಅಪ್ ಸಹಿತ ಬದಲಾಗುತ್ತಾ ಹೋಯಿತು.

ಆಂಟಿಬ್ಯಾಕ್ಟೀರಿಯಲ್ ರೆಸಿಸ್ಟನ್ಸ್ ಗೆ ಸಂಬಂಧಪಟ್ಟ ಹಾಗೆ ಮುಖ್ಯವಾಗಿ 3 ಜೀನ್ ಗಳಿವೆ. ಎಸ್ ಯು ಎಲ್ 1, ಎಸ್ ಯು ಎಲ್ 2, ಐ ಎನ್ ಟಿ ಎಲ್ 1. ಈ ಮೂರು ಜೀನ್ ಗಳ ಬಗೆಗೆ ಬೇರೆ ಬೇರೆ ರೀತಿಯಲ್ಲಿ ಆಂಟಿಬಯೋಟಿಕ್ ರೆಸಿಸ್ಟನ್ಸ್ ಇರುವುದನ್ನು ಸಂಶೋಧಕರು ಕಂಡುಕೊಂಡರು. ಇದು ಪಾಲಿಎಥಿಲೀನ್ ಮತ್ತು ಪಾಲಿಸ್ಟೀರೀನ್ - ಇವುಗಳಲ್ಲಿ ಯಾವ ಮೈಕ್ರೋ ಪ್ಲಾಸ್ಟಿಕ್ ಉಪಯೋಗಿಸಲಾಗಿದೆ, ಹಾಗೆಯೇ ಎಲ್ಲಿಯ ಕಲುಷಿತ ನೀರಿನ ಪ್ಲಾಂಟ್ ನಿಂದ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ . ಈ ಎಲ್ಲಾ ಅಂಶಗಳನ್ನು ಒಳಗೊಂಡು ಆಂಟಿಬಯೋಟಿಕ್ ರೆಸಿಸ್ಟನ್ಸ್ ಬದಲಾಗುತ್ತಿರುತ್ತದೆ. ಗಮನಾರ್ಹ ವ್ಯತ್ಯಾಸ ಎಂದರೆ ಪಾಲಿಎಥಿಲೀನ್ ಒಳಗೊಂಡ ಬಯೋಫಿಲ್ಮ್ ಗಳಲ್ಲಿ ಎಲ್ಲಾ ಮೂರೂ ಬಗೆಯ ರೆಸಿಸ್ಟನ್ಸ್ ಜೀನ್ ಗಳು ಜಾಸ್ತಿಯಾಗಿದ್ದವು. ಆದರೆ ಪಾಲಿಸ್ಟೀರಿನ್ ಒಳಗೊಂಡ ಬಯೋಫಿಲ್ಮ್ ಗಳಲ್ಲಿ ಗಮನಾರ್ಹವಾದ ರೆಸಿಸ್ಟನ್ಸ್ ಜೀನ್ ಗಳ ಹೆಚ್ಚಳ ಕಂಡು ಬರಲಿಲ್ಲ. ಆ ನಂತರ ಸಂಶೋಧಕರು ಇದಕ್ಕೆ ಸಲ್ಫಾಮಿಥಾಕ್ಸಜೋಲ್ ಆಂಟಿಬಯೋಟಿಕ್ ಔಷಧಿಯನ್ನು ಸೇರಿಸಿದರು. ಪರಿಣಾಮ ಎಂದರೆ ಆಂಟಿಬ್ಯಾಕ್ಟೀರಿಯಲ್ ರೆಸಿಸ್ಟನ್ಸ್ ಜೀನ್ ಗಳು 4.5 ಪಟ್ಟು ಜಾಸ್ತಿಯಾದವು. ಇದರ ಸಂಶೋಧಕ ಪಾಮ್ ಅವರು "ಮೊದಲು ನಾವು ಈ ಮೈಕ್ರೋ ಪ್ಲಾಸ್ಟಿಕ್ ನ ಬ್ಯಾಕ್ಟೀರಿಯಾಗಳ ಆಂಟಿಬಯೋಟಿಕ್ ರೆಸಿಸ್ಟನ್ಸ್ ಹೆಚ್ಚಿಸಲು ಆಂಟಿಬಯೋಟಿಕ್ ಔಷಧಗಳ ಅವಶ್ಯಕತೆ ಇದೆ ಎಂದು ಭಾವಿಸಿದ್ದೆವು. ಆದರೆ ಈ ಮೈಕ್ರೋ ಪ್ಲಾಸ್ಟಿಕ್ ಗಳು ಈ  ರೆಸಿಸ್ಟನ್ಸ್ ಜೀನ್ ಗಳನ್ನು ತಾವೇ ವೃದ್ಧಿಸಬಲ್ಲವು ಎಂದು ಈಗ ನಮಗೆ ಗೊತ್ತಾಗಿದೆ. ಅಲ್ಲದೆ ಆಂಟಿಬಯೋಟಿಕ್ ಸೇರಿಸುವುದರಿಂದ ರೆಸಿಸ್ಟನ್ಸ್ ವೃದ್ಧಿಸುವ ಶಕ್ತಿ ಗಮನಾರ್ಹವಾಗಿ ಹೆಚ್ಚಾಗುವುದಂತೂ ಖಂಡಿತ. 

ಈ ಮೈಕ್ರೋ ಪ್ಲಾಸ್ಟಿಕ್ ಗಳ ಬಯೋಫಿಲ್ಮ್ ಗಳ ಮೇಲೆ 8 ರೀತಿಯ ಬ್ಯಾಕ್ಟೀರಿಯಾಗಳು ವೃದ್ಧಿಯಾಗಿರುವುದು ಕಂಡು ಬಂದಿತು. ರಾವುಲ್ ಟೆಲ್ಲಾ ಆರ್ನಿಥಿನೋಲೈಟಿಕಾ ಮತ್ತು ಸ್ಟೆನೋಟೋಫೊಮೊನಾಸ್ ಮಾಲ್ಟೋಫೀಲಿಯ - ಈ ಬ್ಯಾಕ್ಟೀರಿಯಾಗಳು ಮನುಷ್ಯರಲ್ಲಿ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತವೆ. ಎಲ್ಲಾ ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚಾಗಿ ಕಂಡುಬಂದ ನೋವೊಸ್ಫಿಂಗೋಬಿಯಮ್ ಪೊಕ್ಕಾಲೈ ಬ್ಯಾಕ್ಟೀರಿಯಾವು ಮೈಕ್ರೋ ಪ್ಲಾಸ್ಟಿಕ್ ನ ಬಯೋಫಿಲ್ಮ್ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಇನ್ನೊಂದು ಅಂಶ ಎಂದರೆ ಆಂಟಿಬ್ಯಾಕ್ಟೀರಿಯಾದ ರೆಸಿಸ್ಟನ್ಸ್ ಹೆಚ್ಚಿಸುವಲ್ಲಿ ಮತ್ತು ಬೇರೆ ಬ್ಯಾಕ್ಟೀರಿಯಾಗಳ ರೆಸಿಸ್ಟನ್ಸ್ ಬದಲಿಸಿಕೊಳ್ಳುವಲ್ಲಿ ಐ ಎನ್ ಟಿ ಎಲ್ 1 ಜೀನ್ ಮುಖ್ಯ ಪಾತ್ರ ವಹಿಸುತ್ತದೆ ಎನ್ನಲಾಗಿದೆ. 

"ಮೈಕ್ರೋ ಪ್ಲಾಸ್ಟಿಕ್ ಒಂದು ಸಣ್ಣ ತುಣುಕು ಎಂದು ನಾವು ಭಾವಿಸಬಹುದು. ಆದರೆ ಅವು ಈ ಬ್ಯಾಕ್ಟೀರಿಯಾಗಳು ಇರಲು ಬಹಳಷ್ಟು ಪ್ರಮಾಣದ ಸ್ಥಳಾವಕಾಶವನ್ನು ಒದಗಿಸುತ್ತದೆ. ಈ ಮೈಕ್ರೋ ಪ್ಲಾಸ್ಟಿಕ್ ಕಲುಷಿತ ನೀರಿನ ಪ್ಲಾಂಟನ್ನು ಪ್ರವೇಶಿಸಿ ಸ್ಲಡ್ಜ್ ಜೊತೆ ಸೇರಿಕೊಂಡಾಗ ನೊವೊಸ್ಫಿಂಗೋಬಿಯಮ್ ಬ್ಯಾಕ್ಟೀರಿಯಾವು ಅಕಸ್ಮಾತ್ತಾಗಿ ಅವುಗಳ ಮೇಲ್ಮೈ ಗೆ ಸೇರಿಕೊಳ್ಳುತ್ತವೆ ಹಾಗೂ ಗ್ಲೂ ರೀತಿಯ ಎಕ್ಸ್ ಸ್ಟ್ರಾ ಸೆಲ್ಯುಲರ್ ವಸ್ತುವನ್ನು ಸ್ರವಿಸುತ್ತವೆ." ಎಂದು ಡಾ ಲೀ ವಿವರಿಸುತ್ತಾರೆ. ಆನಂತರ ಇನ್ನಿತರ ಬ್ಯಾಕ್ಟೀರಿಯಾ ಗಳು ತಮ್ಮ ಡಿ ಎನ್ ಎ ಅನ್ನು ಅದಲು ಬದಲು ( swap) ಮಾಡಿಕೊಳ್ಳುತ್ತವೆ. ಇದು ಒಂದು ಜನಾಂಗದಲ್ಲಿ ಆಂಟಿಬಯೋಟಿಕ್ ರೆಸಿಸ್ಟನ್ಸ್ ಹರಡಿಕೊಳ್ಳುವ ಬಗೆ. 

ಈ ಅಧ್ಯಯನವು ಮೈಕ್ರೋ ಪ್ಲಾಸ್ಟಿಕ್ ಹೇಗೆ ಕಲುಷಿತ ನೀರಿನ ಪ್ಲಾಂಟ್ ಗಳಲ್ಲಿ ವೃದ್ಧಿ ಹೊಂದಿ ನಂತರ ಬ್ಯಾಕ್ಟೀರಿಯಾ ಗಳ ನಡುವೆ ಡಿ ಎನ್ ಎ ಗಳ ಅದಲಿ ಬದಲಿ ಕ್ರಿಯೆ ನಡೆಸಿ ಇಡೀ ಜನಾಂಗದಲ್ಲಿ ಆಂಟಿಬಯೋಟಿಕ್ ರೆಸಿಸ್ಟನ್ಸ್ ಹರಡುವಲ್ಲಿ ಎಂತಹಾ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ವಿಷದೀಕರಿಸುತ್ತದೆ.

ಸ್ವಲ್ಪ ಮೊದಲು ಭಾರತದಲ್ಲಿ ನಡೆದ ಇನ್ನೊಂದು ಅಧ್ಯಯನದಲ್ಲಿ ಚಂದ್ರಶೇಖರನ್ ಮತ್ತು ಆತನ ಸಹೋದ್ಯೋಗಿಗಳು ನ್ಯಾನೋ ಪ್ಲಾಸ್ಟಿಕ್ ಗಳು ರಕ್ತದ ಪ್ರೋಟೀನ್ ಗಳು ಮತ್ತು ಜೀವಕೋಶಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ, ಅದರ ಪರಿಣಾಮವಾಗಿ ಮಾನವನ ಆರೋಗ್ಯದ ಮೇಲೆ ಏನು ಪರಿಣಾಮಗಳಾಗುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದರು. ಅಧ್ಯಯನದಲ್ಲಿ ಗೊತ್ತಾದ ಅಂಶ - ನ್ಯಾನೋ ಪ್ಲಾಸ್ಟಿಕ್ ಗಳು ರಕ್ತದಲ್ಲಿ ಒಟ್ಟುಗೂಡುತ್ತವೆ. ಪರಿಣಾಮ ಎಂದರೆ ದೇಹದಲ್ಲಿನ ರಕ್ತದ ಚಲನೆ ವ್ಯತ್ಯಯಗೊಳ್ಳುತ್ತದೆ. ನಂತರದ ಪರಿಣಾಮ ಎಂದರೆ ರಕ್ತದ ಪ್ರೋಟೀನ್ ಗಳು ಕೆಲಸ ಮಾಡದಂತಾಗುತ್ತವೆ. 

ಈ ಅಧ್ಯಯನದಲ್ಲಿ ಅವರು 5 ಆರೋಗ್ಯವಂತ ವ್ಯಕ್ತಿಗಳಿಂದ ರಕ್ತ ತೆಗೆದುಕೊಂಡು ಅದನ್ನು ಪ್ಲಾಸ್ಮಾ, ಬಿಳಿ ರಕ್ತಕಣಗಳು, ಕೆಂಪು ರಕ್ತ ಕಣಗಳು ಎಂದು ವರ್ಗೀಕರಿಸಿದರು. ನಂತರ ನ್ಯಾನೋ ಪ್ಲಾಸ್ಟಿಕ್ ಗೂ ಪ್ಲಾಸ್ಮಾ ಕ್ಕೂ ಇರುವ ಸಂಬಂಧವನ್ನು ಅಧ್ಯಯನ ನಡೆಸಿದರು. ಆಲ್ಬುಮಿನ್, ಗ್ಲೋಬುಲಿನ್, ಫೈಬ್ರಿನೋಜೆನ್ ರಕ್ತದ ಈ ಪ್ರೋಟೀನ್ ಗಳು ದೇಹದಲ್ಲಿ ಆಸ್ಮಾಟಿಕ್ ಒತ್ತಡ, ಮಾಲಿಕ್ಯುಲಾರ್ ಸಾಗಾಣಿಕೆ, ರಕ್ತ ಹೆಪ್ಪುಗಟ್ಟುವಿಕೆ, ಪ್ರತಿರೋಧ ಪ್ರತಿಕ್ರಿಯೆ - ಈ ರೀತಿಯ ಕ್ರಿಯೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ಪ್ರೋಟೀನ್ ಗಳು ನ್ಯಾನೋ ಪ್ಲಾಸ್ಟಿಕ್ ಗಳ ಹೊರ ಭಾಗದಲ್ಲಿ ಹೀರಲ್ಪಟ್ಟು 13 ರಿಂದ 600 ನ್ಯಾನೋ ಮೀಟರ್ ನಷ್ಟಿರುವ ಪ್ಲಾಸ್ಟಿಕ್ - ಪ್ರೋಟೀನ್ ಸಂಕೀರ್ಣವನ್ನು ಉಂಟು ಮಾಡುತ್ತವೆ. ಪ್ಲಾಸ್ಟಿಕ್ ತುಣುಕುಗಳು ಪ್ರೋಟೀನ್ ಗಳಿಂದ ಸುತ್ತುವರಿಯಲ್ಪಟ್ಟಾಗ ಹಲವಾರು ಪ್ಲಾಸ್ಟಿಕ್ - ಪ್ರೋಟೀನ್ ಸಂಕೀರ್ಣಗಳು ಉಂಟಾಗಿ ಅವು ಒಂದಕ್ಕೊಂದು ಕೂಡಿಕೊಂಡು ದೊಡ್ಡದಾದ ಘಟಕಗಳು ನಿರ್ಮಾಣವಾಗುತ್ತವೆ. ಇವು ದೇಹದ ದ್ರವದ ಅಂಶಗಳ ಸಾಗಾಟವನ್ನು ತಡೆಯುತ್ತವೆ, ಹಾಗೆಯೇ ರಕ್ತದ ಪ್ರೋಟೀನ್ ಗಳಲ್ಲಿಯೂ ಬದಲಾವಣೆ ತಂದು ಆ ಪ್ರೋಟೀನ್ ಗಳು ಉಪಯೋಗರಹಿತವಾಗುವಂತೆ ಮಾಡುತ್ತವೆ. 

-ಡಾ ಎಚ್ ಎಸ್ ಮೋಹನ್.

ಕೃಪೆ: ವಿಶ್ವವಾಣಿ ದೈನಿಕ