ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ

ಬರಹ

ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವಾತ್ಮಕ ದೇಶ ಭಾಷೆಯೂ ಆಗಿಬಿಟ್ಟಿದೆ. ಈ ಪ್ರಕ್ರಿಯೆಗಳು ತೆರೆದಿಟ್ಟಿರುವ ಸಾಧ್ಯತೆಗಳ ಜತೆ ಜತೆಯಲ್ಲೇ ಕನ್ನಡ ಭಾಷೆ, ಅದರ ಅಕ್ಷರಗಳಿಗಿರುವ ಅನನ್ಯತೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ಚಾಲನೆಯಲ್ಲಿವೆ. ಇದಕ್ಕೆ ಉತ್ತಮ ಉದಾಹರಣೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಆಪರೇಟಿಂಗ್ ಸಿಸ್ಟಂಗಳಲ್ಲಿ ನೀಡುತ್ತಿರುವ ಕನ್ನಡ ಸವಲತ್ತಿನ ಕೊರತೆಗಳು. ಈ ಕುರಿತಂತೆ ಈಗಾಗಲೇ ಸಂಪದದಲ್ಲಿಯೇ ಸಾಕಷ್ಟು ಚರ್ಚೆಗಳು ನಡೆದಿರುವುದರಿಂದ ಅದನ್ನು ಮತ್ತೊಮ್ಮೆ ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

ಸದ್ಯ ಕರ್ನಾಟಕ ಸರಕಾರ ಮೈಕ್ರೋಸಾಫ್ಟ್ ನ ಜತೆ ಒಂದು ತಿಳಿವಳಿಕೆ ಪತ್ರ ಮಾಡಿಕೊಂಡಿದೆ. ಇದನ್ನು ವಿವರಿಸುವುದಕ್ಕೆ ಮೈಕ್ರೋಸಾಫ್ಟ್ ಮಾಮೂಲಿನ ಮೆಮರಾಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ (MOU)ಎಂಬ ಪದ ಬಳಸದೆ ಲೆಟರ್ ಆಫ್ ಇಂಟೆಂಟ್ ಎಂಬ ಪದ ಬಳಸಿತು. ಇದು ಉದ್ದೇಶಪೂರ್ವಕವಾದುದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಲೆಟರ್ ಆಫ್ ಇಂಟೆಂಟ್ ಎಂಬುದು ಸಾಮಾನ್ಯನಿಗೆ ಸ್ವಲ್ಪ ಹೊಸತಾತ ಪದ. ಯಾವುದೋ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಾರೆ ಎಂಬ ಭ್ರಮೆ ಹುಟ್ಟಿಸಬಲ್ಲ ಪದ. ಕಾನೂನಿನ ಪರಿಭಾಷೆಯಲ್ಲಿ ಇದಕ್ಕೂ MOUಗೂ ವ್ಯತ್ಯಾಸವಿಲ್ಲ. ಒಪ್ಪಂದವೊಂದರ ಪೂರ್ವ ಭಾವಿಯಾಗಿ ಮಾಡಿಕೊಳ್ಳುವ ಕರಾರು ಇದು.

ಈ ಕರಾರು ಹೇಳುವ ವಿಷಯಗಳೇನು ಎಂಬುದನ್ನು ಈ ವರದಿ ವಿವರಿಸುತ್ತಿದೆ. ಮೈಕ್ರೋಸಾಫ್ಟ್ ನ ಸಲಹೆಗಾರರನ್ನೂ ಉತ್ಪನ್ನಗಳನ್ನೂ ಖರೀದಿಸಿ ಮಾಡುವ ವಿದ್ಯುನ್ಮಾನ ಆಡಳಿತ ಮತ್ತು ಸೃಷ್ಟಿಸುವ ಕಾಗದ ರಹಿತ ಕಚೇರಿಗಳ ಪರಿಣಾಮ ಹೇಗಿರಬಹುದು?

ಮೈಕ್ರೋಸಾಫ್ಟ್ ನ ತುಂಗಾ ಫಾಂಟಿನ ದುರವಸ್ಥೆ, 'ರ್ಯಾಂಕ್' ಸಮಸ್ಯೆ ಮತ್ತು ಅದರ ಮೈಕ್ರೋಸಾಫ್ಟ್ ನೀಡುತ್ತಿರುವ ಕನ್ನಡ ಎಲ್ ಐಪಿಯಲ್ಲಿ ಇರುವ ಭೀಕರ ಕನ್ನಡಗಳ ಹಿನ್ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜತೆಗೆ ಇದನ್ನು ಸರಿಪಡಿಸಿಕೊಳ್ಳಲು ಮನಸ್ಸು ಮಾಡದೆಯೇ ಮುಂದುವರಿಯುತ್ತಿರುವ ಅದರ ಮನೋಭಾವವನ್ನೂ ಪರಿಗಣಿಸಿ ಸರಕಾರ ಮಾಡಿಕೊಂಡಿರುವ MOUನ ಪರಿಣಾಮಗಳನ್ನು ನೋಡಬೇಕಾಗಿದೆ.

ಮೈಕ್ರೋಸಾಫ್ಟ್ ಬಳಸುವ ಲಾಕ್ ಇನ್ ವ್ಯಾಪಾರ ತಂತ್ರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಸರಕಾರೀ ಆಡಳಿತ ಯಂತ್ರದ ಮೇಲೂ ಮೈಕ್ರೋಸಾಫ್ಟ್ ಏಕಸ್ವಾಮ್ಯವನ್ನು ಸಾಧಿಸಲು ಅವಕಾಶ ಒದಗಿಸುವುದು ದೂರಗಾಮಿಯಾದ ದುಷ್ಪರಿಣಾಮಗಳನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಕನ್ನಡವನ್ನು ತನ್ನ ಮೂಗಿನ ನೇರಕ್ಕೆ ಬೇಕಿರುವಂತೆ ಬಗ್ಗಿಸುವುದು ಒಂದು ಸಮಸ್ಯೆಯಾದರೆ ಅಪಾರದರ್ಶಕ ತಂತ್ರಜ್ಞಾನದ ಬಳಕೆ ಮತ್ತೊಂದು ಸಮಸ್ಯೆ. ಇದನ್ನು ಕನ್ನಡದ ಮೇಲೆ ಅಭಿಮಾನ ಹಾಗೂ ತಂತ್ರಜ್ಞಾನದ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ಎಲ್ಲರೂ ವಿರೋಧಿಸಬೇಕು. ಇದಕ್ಕೆ ಈಗಾಗಲೇ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಯು.ಆರ್. ಅನಂತಮೂರ್ತಿ ಮುಂತಾದವರು ಈಗಾಗಲೇ ಬೆಂಬಲ ನೀಡಿದ್ದಾರೆ. ಚಂದ್ರಶೇಖರ ಕಂಬಾರ ಅವರು ಸಮಾರಂಭವೊಂದರಲ್ಲಿ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಂತಮೂರ್ತಿಯವರಿಗೆ ಈ ವಿಷಯವನ್ನು ವಿವರಿಸಿದಾಗ ಅವರೂ ಮೈಕ್ರೋಸಾಫ್ಟ್ ನ ಅಪಾಯವನ್ನು ಅರ್ಥಮಾಡಿಕೊಂಡು ಅದನ್ನು ವಿರೋಧಿಸಬೇಕೆಂಬ ನಿಲುವನ್ನು ಬೆಂಬಲಿಸಿದ್ದಾರೆ. ಸಂಪದ ಬಳಗದ ಸದಸ್ಯರೂ ಈ ವಿರೋಧದಲ್ಲಿ ಸಕ್ರಿಯರಾಗಲು ಅನುಕೂಲವಾಗುವಂತೆ ಮಾದರಿ ಮನವಿಯೊಂದನ್ನು ಸಿದ್ಧಪಡಿಸಿದ್ದೇನೆ. ಹರಿಪ್ರಸಾದ್ ನಾಡಿಗ್, ಓಂ ಶಿವಪ್ರಕಾಶ್, ಅನುಪಮ ಈ ಮನವಿಯ ಅಂತಿಮ ಪ್ರತಿಯನ್ನು ತಯಾರಿಸುವಲ್ಲಿ ಸಹಕರಿಸಿದ್ದಾರೆ. ಇದನ್ನು ಈ ಕೆಳಗೆ ನೀಡಲಾಗಿರುವ ಅಂಚೆ ವಿಳಾಸ, ಫ್ಯಾಕ್ಸ್ ಸಂಖ್ಯೆ ಮತ್ತು ಇ-ಮೇಲ್ ಗಳಿಗೆ ಕಳುಹಿಸಿ ತಮ್ಮ ತಮ್ಮ ಪ್ರತಿಭಟನೆಗಳನ್ನು ದಾಖಲಿಸಬಹುದು. ಮಾದರಿ ಮನವಿಯ ಪಿಡಿಎಫ್ ಪ್ರತಿಯನ್ನು ಈ ಬರೆಹದ ಕೊನೆಯಲ್ಲಿ ಲಗತ್ತಿಸಲಾಗಿದೆ. ಅಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಸರಕಾರೀ ಕಚೇರಿಗಳು ಇ-ಮೇಲ್ ಗಳಿಗೆ ಸ್ಪಂದಿಸುವುದಿಲ್ಲವಾದುದರಿಂದ ಸಾಮಾನ್ಯ ಅಂಚೆ ಅಥವಾ ಫ್ಯಾಕ್ಸ್ ಜತೆಗೆ ದಾಖಲೆಗಾಗಿ ಒಂದು ಇ-ಮೇಲ್ ಕೂಡಾ ಕಳುಹಿಸುವುದು ಉತ್ತಮ. ಮುಖ್ಯಮಂತ್ರಿಗಳನ್ನು ಸಂಬೋಧಿಸಿ ಬರೆಯಲಾಗಿರುವ ಈ ಮನವಿಯ ಒಕ್ಕಣೆಯನ್ನು ಕಳುಹಿಸುವವರು ತಮಗೆ ಸರಿ ಎನ್ನಿಸುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸ್ವತಂತ್ರರು. ಹೀಗೆ ಮನವಿಯನ್ನು ಕಳುಹಿಸಿದವರು savekannada@gmail.com ವಿಳಾಸಕ್ಕೆ ಒಂದು ಮಾಹಿತಿ ಮೇಲ್ ಕಳುಹಿಸಿದರೆ ಅನುಕೂಲ. ಒಟ್ಟು ಪ್ರತಿಭಟನಾ ಪತ್ರಗಳ ಸಂಖ್ಯೆಯನ್ನು ಅರಿಯಲು ಸುಲಭವಾಗುತ್ತದೆ.

ಪತ್ರ ಕಳುಹಿಸಬೇಕಾದ ವಿಳಾಸಗಳು

ರಾಜ್ಯಪಾಲರು
Hon. Governor
Raj Bhavan
Raj Bhavan Road
Bangalore 560 001 INDIA
Voice: +91-80-2225 4102(General-epbax),
Special officer Rajbhavan :+91-80-2225 4106,
Fax: +91-80-2225 8150
Email: rbblr@vsnl.com

ಮುಖ್ಯಮಂತ್ರಿ
H D Kumaraswamy
Kumarakrupa Road,
Bangalore - 560 001,
Fax: 080-22259126, 22252574 (ಗೃಹ ಕಚೇರಿ), Email: cm@kar.nic.in

ಸರಕಾರದ ಕಾರ್ಯದರ್ಶಿ
Shri M.N. Vidyashankar
Secretary to Government
Dept.of Information Technology, Biotechnology and Science & Technology
Government of Karnataka
VI Floor, 5thStage
M.S.Building, Ambedkar Veedhi
Bangalore - 560 001
Fax: 91-80-22288340, 22262450
e-mail: itsec@bangaloreit.in
biosec@bangaloreit.in

ಹೆಚ್ಚಿನ ಮಾಹಿತಿಗೆ [:http://savekannada.googlepages.com/|ಈ ಗೂಗಲ್ ಪುಟ ನೋಡಿ].